ತಮ್ಮ ಅರಮನೆಯನ್ನೂ ಮಾರಲು ಮುಂದಾದ ಕಂಗನಾ, ಇಂತಹ ಸ್ಥಿತಿ ಸಂಸದೆಗೆ ಯಾಕೆ ಬಂತು...?
ಚಿತ್ರಕ್ಕೆ ಮತ್ತು ಪಾತ್ರಕ್ಕೆ ತನು-ಮನ ಅರ್ಪಿಸುವುದಲ್ಲದೇ ಪ್ರಬಲ ಶಕ್ತಿಗಳ ಮುಂದೆ ತನ್ನ ವ್ಯಕ್ತಿತ್ವಕ್ಕೆ ಮಸಿ ತಗುಲದಂತೆ ಬಾಲಿವುಡ್ ನಲ್ಲಿ ಸ್ಟಾರ್ ಪಟ್ಟವನ್ನು ಅಲಂಕರಿಸಿದವರು ಕಂಗನಾ ರಣಾವತ್. ಇಂಥ ಕಂಗನಾ ರಣಾವತ್ ಈಗ ಕೇವಲ ನಾಯಕಿ ನಿರ್ದೇಶಕಿ ಮಾತ್ರ ಅಲ್ಲ ಬಿಜೆಪಿ ಸಂಸದೆಯೂ ಹೌದು. ಸದ್ಯಕ್ಕೆ ಹಣಬಲದ ಜೊತೆ ಅಧಿಕಾರದ ಬಲವನ್ನೂ ಹೊಂದಿರುವ ಕಂಗನಾ ತಮ್ಮ ಆಸ್ತಿಯನ್ನೂ ಮಾರಾಟಕ್ಕಿಟ್ಟಿದ್ದಾರೆ. ಅದು.. 10..20.. ಅಲ್ಲ ಬರೋಬ್ಬರಿ 40 ಕೋಟಿಗೆ ಅನ್ನುವುದು ಈ ಕ್ಷಣದ ಬ್ರೇಕಿಂಗ್ ನ್ಯೂಸು.
ಹೌದು, ನಿಮಗೆ ನೆನಪಿದ್ದರೆ, 2020ರಲ್ಲಿ ಕಂಗನಾ ರಣಾವತ್ ಮತ್ತು ಶಿವಸೇನೆ ನಡುವೆ ರಣರಂಪ ನಡೆದಿತ್ತು. ಅಕ್ರಮ ನಿರ್ಮಾಣ ಆರೋಪದಡಿ ಕಂಗನಾ ಅವರ ಮನೆಯ ಒಂದು ಭಾಗವನ್ನೂ ಕೆಡವಲಾಗಿತ್ತು. ಇದರಿಂದ ಕೆರಳಿ ಕೆಂಡವಾಗಿದ್ದ ಕಂಗನಾ, ಮುಂಬೈ ನಗರ 'ಪಾಕ್ ಆಕ್ರಮಿತ ಕಾಶ್ಮೀರ'ದಂತೆ ಕಾಣುತ್ತಿದೆ ಎಂದು ಹೇಳಿದ್ದರು. ಉದ್ಭವ್ ಠಾಕ್ರೆ ಇವತ್ತು ನನ್ನ ಮನೆ ಮುರಿದಿದೆ. ನಾಳೆ ನಿನ್ನ ಅಂಹಕಾರ ಮುರಿಯುತ್ತೆ ಎಂದು ಹೇಳಿದ್ದರು. ಕಂಗನಾ ಅವರ ಈ ಹೇಳಿಕೆಯನ್ನೂ ಖಂಡಿಸಿ ಶಿವಸೇನೆ ಮುಖ್ಯಸ್ಥ ಸಂಜಯ್ ರಾವತ್ ಆಗ ಇಡೀ ಬಾಲಿವುಡ್ ಮೌನವನ್ನು ಪ್ರಶ್ನಿಸಿದ್ದರು. ಆ ನಂತರ ಕಂಗನಾಗೆ ವೈ + ಭದ್ರತೆಯನ್ನೂ ನೀಡಲಾಗಿತ್ತು.

ಹೀಗೆ ಅವತ್ತು ಉದ್ಭವ್ ಠಾಕ್ರೆಯ ಶಿವಸೇನೆಯನ್ನು ಮನೆಯ ಒಂದು ಭಾಗಕ್ಕೆ ಎದುರು ಹಾಕಿಕೊಂಡಿದ್ದ ಕಂಗನಾ ಈಗ ಅದೇ ತಮ್ಮ ಕನಸಿನ ಅರಮನೆಯನ್ನೂ ಮಾರಲು ಮುಂದಾಗಿದ್ದಾರೆ ಎನ್ನುವ ಸುದ್ದಿ ಸದ್ಯಕ್ಕೆ ಮುಂಬೈನೆಲ್ಲೆಡೆ ಕೇಳಿ ಬರುತ್ತಿದೆ. 40 ಕೋಟಿ ಹಣ ನೀಡಿದರೆ ಈ ಐಶಾರಾಮಿ ಬಂಗಲೆಯನ್ನು ನೀವು ನಿಮ್ಮದಾಗಿಸಿಕೊಳ್ಳಬಹುದು ಎಂದು ಕೋಡ್ ಎಸ್ಟೇಟ್ ಯೂಟ್ಯೂಬ್ ಚಾನೆಲ್ ಕಂಗನಾ ರಣಾವತ್ ಅವರ ಮನೆಯ ಪ್ರದಕ್ಷಣೆಯನ್ನೂ ಹಾಕಿದೆ. ಮನೆ ಹೇಗಿದೆ ಗೊತ್ತಾ ಎಂಬ ಪ್ರಶ್ನೆಯನ್ನು ಕೇಳಿ, ಮನೆಯ ಮೂಲೆ ಮೂಲೆಯನ್ನೂ ವಿಡಿಯೋದಲ್ಲಿ ತೋರಿಸಿದೆ.
ಆದರೆ.. ವಿಡಿಯೋದಲ್ಲಿ ಎಲ್ಲಿಯೂ ಕಂಗನಾ ಹೆಸರನ್ನು ಈ ಯೂಟ್ಯೂಬ್ ವಾಹಿನಿಯಲ್ಲಿ ಹೇಳಲಾಗಿಲ್ಲ. ಆದರೆ ಅಲ್ಲಿ ತೋರಿಸಲಾದ ಕಟ್ಟಡ ಕಂಗನಾ ಅವರದ್ದೇ ಅನ್ನುವುದು ಸುಲಭವಾಗಿ ಗೊತ್ತಾಗುತ್ತೆ. ಹೀಗಾಗಿಯೇ ವಿಡಿಯೋಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ಅನೇಕರು, ಇದು ಕಂಗನಾ ಅವರ ಭವ್ಯವಾದ ಬಂಗ್ಲೆ ಎಂದಿದ್ದಾರೆ. ರಾಜಕೀಯಕ್ಕೆ ಹೋದ ನಂತರ ಆಸ್ತಿ ಮಾರಿಕೊಳ್ಳುವ ಸ್ಥಿತಿ ಕಂಗನಾಗೆ ಬಂತಾ ಎಂಬ ಪ್ರಶ್ನೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಕಂಗನಾ ಕಷ್ಟವನ್ನು ನೆನೆದು ತಮ್ಮ ಬೇಸರವನ್ನೂ ಹೊರ ಹಾಕಿದ್ಧಾರೆ.

ಉಳಿದಂತೆ ಮನೆಯ ವಿಸ್ತೀರ್ಣ 285 ಚದರ ಮೀಟರ ಇದೆ. 3042 ಚದರ ಅಡಿ ನಿರ್ಮಾಣ ವಿಸ್ತೀರ್ಣ ಇದೆ ಎನ್ನುವುದನ್ನೂ ಈ ವಿಡಿಯೋದಲ್ಲಿ ಹೇಳಲಾಗಿದೆ. ಎರಡು ಮಹಡಿಗಳನ್ನು ಹೊಂದಿರುವ ಈ ಅರಮನೆಯಲ್ಲಿ 500 ಚದರ ಅಡಿ ಹೆಚ್ಚುವರಿ ಪಾರ್ಕಿಂಗ್ ಪ್ರದೇಶ ಕೂಡ ಇದೆ. ಇನ್ನೂ ಮನೆಯ ಮಾರಾಟ ಮಾಡುತ್ತಿರುವ ಸುದ್ದಿ ವ್ಯಾಪಕವಾಗಿ ಹಬ್ಬಿದರೂ ಕೂಡ ಕಂಗನಾ ಈ ವಿಚಾರದಲ್ಲಿ ಮೌನ ಮುರಿದಿಲ್ಲ. ಸ್ಪಷ್ಟೀಕರಣವನ್ನು ನೀಡಿಲ್ಲ.


Click it and Unblock the Notifications











