ರಾಜಮೌಳಿ ಯಶಸ್ವಿ ನಿರ್ದೇಶಕ ಏಕೆ? ಕಂಗನಾ ಕೊಟ್ಟರು ಕಾರಣ
ಎಲ್ಲೆಡೆ 'RRR' ಸಿನಿಮಾದ್ದೆ ಚರ್ಚೆ. ಸಿನಿಮಾದ ಕತೆ, ಮೇಕಿಂಗ್, ಆಕ್ಷನ್ ದೃಶ್ಯಗಳು ಸಿನಿಮಾಕ್ಕೆ ರಾಜಮೌಳಿ ನೀಡಿರುವ ಟಚ್ ಎಲ್ಲದರ ಬಗ್ಗೆ ಜೋರು ಚರ್ಚೆಗಳಾಗುತ್ತಿವೆ.
21 ವರ್ಷಗಳಿಂದ ಚಿತ್ರರಂಗದಲ್ಲಿರುವ ರಾಜಮೌಳಿ ಮತ್ತೆ ತಾವೊಬ್ಬ ಅತ್ಯುತ್ತಮ ಸಿನಿಮಾ ನಿರ್ದೇಶಕ ಎಂದು ತೋರಿಸಿಕೊಟ್ಟಿದ್ದಾರೆ. ಮೊದಲ ಸಿನಿಮಾ ಸ್ಟುಡೆಂಟ್ ನಂಬರ್ 1 ಮಾಡಿದಾಗಿನಿಂದಲೂ ರಾಜಮೌಳಿಗೆ ಸೋಲೆಂಬುದೇ ಇಲ್ಲ. ಅವರ ಒಂದೂ ಸಿನಿಮಾ ಫ್ಲಾಪ್ ಆದ ಉದಾಹರಣೆ ಇಲ್ಲ.
ರಾಜಮೌಳಿ ಹೀಗೆ ಹಿಟ್ ಮೇಲೆ ಹಿಟ್ ನೀಡಲು ಹೇಗೆ ಸಾಧ್ಯ ಎಂದು ಸಿನಿ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ. ಪ್ರತಿ ಸಿನಿಮಾ ಹಿಟ್ ಆಗುವಂತೆ ರಾಜಮೌಳಿ ಅದ್ಯಾವ ಸೂತ್ರ ಕಂಡು ಹಿಡಿದುಕೊಂಡಿದ್ದಾರೆ ಎಂದು ಯೋಚಿಸುತ್ತಿದ್ದಾರೆ. ಆದರೆ ನಟಿ ಕಂಗನಾ, ರಾಜಮೌಳಿ ಏಕೆ ಪ್ರತಿ ಸಿನಿಮಾದಲ್ಲಿ ಯಶಸ್ಸು ಗಳಿಸುತ್ತಾರೆ ಎಂಬುದಕ್ಕೇ ತಮ್ಮದೇ ಮಾದರಿಯ ಉತ್ತರ ನೀಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ಕಂಗನಾ, ''ರಾಜಮೌಳಿ ಮತ್ತೆ ಪ್ರೂವ್ ಮಾಡಿದ್ದಾರೆ, ತಾವು ಭಾರತದ ಅತ್ಯುತ್ತಮ ನಿರ್ದೇಶಕ ಎಂದು. ಈವರೆಗೆ ಅವರ ಸಿನಿಮಾಗಳು ಸೋತಿಲ್ಲ. ಆದರೆ ಅವರ ಬಗ್ಗೆ ಅತ್ಯುತ್ತಮ ವಿಷಯವೆಂದರೆ ಅವರ ಈ ಅದ್ಧೂರಿ ಯಶಸ್ಸಲ್ಲ ಬದಲಿಗೆ ಅವರ ಕಲೆಗಾರನಾಗಿ ಅವರಿಗೆ ಇರುವ ಮಾನವೀಯತೆ. ಅವರಲ್ಲಿರುವ ಸರಳತೆ ಮತ್ತು ದೇಶದ ಬಗ್ಗೆ ಹಾಗೂ ತಮ್ಮ ಧರ್ಮದ ಬಗ್ಗೆ ಇರುವ ಅಪಾರ ಪ್ರೇಮ. ನಿಮ್ಮಂಥಹಾ ವ್ಯಕ್ತಿಯನ್ನು ಆದರ್ಶವಾಗಿಟ್ಟುಕೊಳ್ಳುವುದು ನಮ್ಮ ಹೆಮ್ಮೆ. ನಿಜವಾಗಿಯೂ ನಿಮ್ಮ ಅಭಿಮಾನಿ ನಾನು'' ಎಂದಿದ್ದಾರೆ ಕಂಗನಾ.
ತಮ್ಮ ಇಡೀ ಕುಟುಂಬದೊಂದಿಗೆ 'RRR' ಸಿನಿಮಾವನ್ನು ವೀಕ್ಷಿಸುವುದಾಗಿ ಇನ್‌ಸ್ಟಾಗ್ರಾಂನಲ್ಲಿ ಕಂಗನಾ ಹೇಳಿಕೊಂಡಿದ್ದಾರೆ. ಈ ಹಿಂದೆ ಕಂಗನಾ, ಹಿಂದಿಯ 'ಎ ತರ್ಸ್‌ಡೇ', ಅನುಪಮ್ ಖೇರ್ ನಟಿಸಿ, ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ಹೊಗಳಿದ್ದರು.

'RRR' ಸಿನಿಮಾ ಕಳೆದ ವಾರ ಬಿಡುಗಡೆ ಆಗಿದ್ದು, ಕೇವಲ ಐದೇ ದಿನದಲ್ಲಿ ವಿಶ್ವದಾದ್ಯಂತ ಸುಮಾರು 600 ಕೋಟಿ ಕಲೆಕ್ಷನ್ ಮಾಡಿ ಭರ್ಜರಿ ಹಿಟ್ ಎನಿಸಿಕೊಂಡಿದೆ. ಜೂ ಎನ್‌ಟಿಆರ್, ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್, ಒಲಿವಿಯಾ ಮೋರಿಸ್ ಇನ್ನೂ ಹಲವರು ನಟಿಸಿರುವ ಈ ಸಿನಿಮಾ ಸ್ನೇಹ, ದೇಶಪ್ರೇಮದ ಕುರಿತಾದ ಸಿನಿಮಾ ಆಗಿದೆ.
Recommended Video



Click it and Unblock the Notifications










