ಓದಿದ್ದು 12ನೇ ತರಗತಿ, ಗಳಿಸಿದ್ದೆಷ್ಟು ಕೋಟಿ ? ಎಲ್‌ಐಸಿ ಪಾಲಿಸಿಯಲ್ಲಿ ದಾಖಲೆ ಬರೆದ ಕಂಗನಾ..!
ಹಿಮಾಚಲದ ಮಂಡಿಯಿಂದ ಬಂದು ಬಾಲಿವುಡ್‌ನ ಕ್ವೀನ್ ಎಂಬ ಪಟ್ಟವನ್ನ ಅಲಂಕರಿಸುವುದು ಸುಲಭ ಅಲ್ಲ. ಈ ವಿಚಾರದಲ್ಲಿ ಕಂಗನಾ ರಣಾವತ್ ಅವರ ಸಾಧನೆ ನಿಜಕ್ಕೂ ಮೆಚ್ಚುವಂತಹದ್ದೇ. ಸ್ಕ್ಯಾರ್ಚ್ ಇಂದ ಸ್ಟಾರ್ಟ್ ಮಾಡಿ ಇವತ್ತು ತನ್ನದೇ ಸಾಮಾಜ್ರವನ್ನ ಕಟ್ಟಿಕೊಂಡಿರುವ ಕಂಗನಾ ರಣಾವತ್ ಸದ್ಯಕ್ಕೆ ರಾಜಕೀಯದಲ್ಲಿ ಕೂಡ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕಾಂಗ್ರೆಸ್‌ನ ವಿಕ್ರಮಾದಿತ್ಯ ಸಿಂಗ್ ವಿರುದ್ಧ ಮಂಡಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಈ ಹೋರಾಟದಲ್ಲಿ ವಿಜಯಲಕ್ಷ್ಮೀ ಯಾರಿಗೆ ಒಲಿಯಲಿದ್ದಾಳೆ ಅನ್ನುವುದು ಸದ್ಯದಲ್ಲಿಯೇ ಗೊತ್ತಾಗಲಿದೆಯಾದರೂ ಸದ್ಯ ಕಂಗನಾ ಅವರ ಮನೆಯಲ್ಲಿರುವ ಲಕ್ಷ್ಮೀಯ ಬಗ್ಗೆ ಚರ್ಚೆ ಶುರುವಾಗಿದೆ.
ಹೌದು, ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಕಂಗನಾ ರಣಾವತ್ ಮಂಡಿಯಲ್ಲಿ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ. ಆಸ್ತಿ-ಪಾಸ್ತಿಯ ವಿವರ ಹಂಚಿಕೊಂಡಿದ್ದಾರೆ. ಅದರಲ್ಲಿ ತಮ್ಮ ಬಳಿ 91 ಕೋಟಿ ರೂಪಾಯಿ ಮೌಲ್ಯದ ಆಸ್ತಿಇದೆ ಎಂದು ಉಲ್ಲೇಖಿಸಿದ್ದಾರೆ. ಈ 91 ಕೋಟಿಯಲ್ಲಿ ಸುಮಾರು 29 ಕೋಟಿ ರೂಪಾಯಿಗಳ ಚರಾಸ್ತಿಗಳು ಮತ್ತು ಅಂದಾಜು 63 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳು ಸೇರಿವೆ.

ಕೇವಲ ಆಸ್ತಿಯಷ್ಟೇ ಅಲ್ಲ 17.38 ಕೋಟಿ ರೂಪಾಯಿ ಸಾಲ ಕೂಡ ನನ್ನ ಮೇಲಿದೆ ಎಂದಿರುವ ಕಂಗನಾ, 2021-22ರಲ್ಲಿ ತಮ್ಮ ವಾರ್ಷಿಕ ಆದಾಯ 12.30 ಕೋಟಿ ರೂ. ಎಂದು ಘೋಷಿಸಿರುವ ಕಂಗನಾ, 2022-23ರಲ್ಲಿ ಇದು 4.13 ಕೋಟಿ ರೂ.ಗೆ ಕುಸಿದಿದೆ ಎಂದು ತಿಳಿಸಿದ್ದಾರೆ. ಇನ್ನೂ ಹೆಚ್ಚು ಕಡಿಮೆ 93 ಲಕ್ಷದ ಬಿಎಂಡಬ್ಲ್ಯು , 58 ಲಕ್ಷ ಬೆಲೆ ಬಾಳುವ ಮರ್ಸಿಡಿಸ್ ಜಿಎಲ್‌ಇ 250 ಡಿ ಮತ್ತು3.91 ಕೋಟಿ ರೂ. ಮೌಲ್ಯದ ಮರ್ಸಿಡೆಸ್ ಬೆನ್ಜ್ ಮೇಬ್ಯಾಚ್ ಕಾರುಗಳು ಒಡತಿಯೂ ಹೌದು ಕಂಗನಾ ರಣಾವತ್.
ಇದಲ್ಲದೇ ತನ್ನ ಅಫಿಡವಿಟ್‌ನಲ್ಲಿ ತನ್ನ ಕೈಯಲ್ಲಿ ಕೇವಲ 2 ಲಕ್ಷ ರೂ ಇದೆ ಎಂದು ನಮೂದಿಸಿರುವ ಕಂಗನಾ ರಣಾವತ್, ಸುಮಾರು 5 ಕೋಟಿ ರೂ. ಮೌಲ್ಯದ 6.70 ಕೆಜಿ ಚಿನ್ನ, 50 ಲಕ್ಷ ರೂ ಮೌಲ್ಯದ 60 ಕೆಜಿ ಬೆಳ್ಳಿ ಹಾಗೂ 3 ಕೋಟಿ ರು. ಮೌಲ್ಯದ ವಜ್ರಗಳು ತಮ್ಮ ಬಳಿ ಇರುವುದಾಗಿ ಕಂಗನಾ ರಣಾವತ್ ತಿಳಿಸಿದ್ದಾರೆ.ಯಾವುದೇ ಕೃಷಿ ಅಥವಾ ಕೃಷಿಯೇತರ ಭೂಮಿ ಇಲ್ಲ ಎಂದಿರುವ ಕಂಗನಾ ರಣಾವತ್, 6 ವಾಣಿಜ್ಯ ಕಟ್ಟಡಗಳನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ಮುಂಬೈನಲ್ಲಿರುವ ಒಂದು ವಾಣಿಜ್ಯ ಕಟ್ಟಡದ ಮೌಲ್ಯವೇ ಸುಮಾರು 24 ಕೋಟಿ ರೂಪಾಯಿ ಅನ್ನುವುದು ವಿಶೇಷ.

ಇನ್ನೂ ಎಲ್‌ಐಸಿ ವಿಮೆಯಲ್ಲಿಯೂ ದಾಖಲೆ ಬರೆದಿರುವ ಕಂಗನಾ, ತನ್ನ ಬಳಿ 50 ಎಲ್‌ಐಸಿ ಪಾಲಿಸಿಗಳಿವೆ ಎಂದು ಉಲ್ಲೇಖಿಸಿದ್ದಾರೆ. ಆ ಪೈಕಿ ತಲಾ 10 ಲಕ್ಷ ರೂ.ನ 49 ಪಾಲಿಸಿಗಳಿದ್ದು 5 ಲಕ್ಷ ರೂ.ನ ಒಂದು ಪಾಲಿಸಿ ಸೇರಿದೆ. ಉಳಿದಂತೆ 11 ವ್ಯಕ್ತಿಗಳಿಗೆ ಕನಿಷ್ಠ 4 ಲಕ್ಷ ರೂ.ನಿಂದ 5.10 ಕೋಟಿ ರೂ.ವರೆಗೆ ಅವರು ಸಾಲವನ್ನೂ ನೀಡಿದ್ದಾರೆ ಬಾಲಿವುಡ್ ಕ್ವೀನ್ ಕಂಗನಾ ರಣಾವತ್. ಉಳಿದಂತೆ ವಿರೋಧ ಪಕ್ಷದವರಿಂದ ವಾಟ್ಸಾಫ್ ಯುನಿವರ್ಸಿಟಿಯ ಬ್ರೈಟ್ ಸ್ಟೂಡೆಂಟ್ ಎಂದು ಕರೆಯಲ್ಪಡುವ ಕಂಗನಾ ಓದಿದ್ದು ಎಲ್ಲಿಯವರೆಗೆ ಅನ್ನುವ ಪ್ರಶ್ನೆ ಯಾರಲ್ಲಿ ಆದರೂ ಇದ್ದರೆ ಅದಕ್ಕೂ ಕಂಗನಾ ಉತ್ತರವನ್ನ ಕೊಟ್ಟಿದ್ದಾರೆ. ತನ್ನ ಗರಿಷ್ಠ ವಿದ್ಯಾಭ್ಯಾಸ 12ನೇ ತರಗತಿ ಎಂದು ತಿಳಿಸಿದ್ದಾರೆ.


Click it and Unblock the Notifications










