ಕಂಗನಾಗೆ ಕರೆಂಟ್ ಶಾಕ್, ಮನೆಯ ವಿದ್ಯುತ್ ಬಿಲ್ ನೋಡಿ ಕಂಗಾಲಾದ ಬಾಲಿವುಡ್ ಕ್ವೀನ್..!
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಕಂಗನಾ ಹೆಸರಿಗೆ ಚಿತ್ರರಂಗದಲ್ಲಿ ಚಿನ್ನದಂತಹ ಬೆಲೆ ಇತ್ತು. ಬಾಲಿವುಡ್ ಇವರನ್ನು 'ಕ್ವೀನ್' ಎಂದು ಕರೆಯುತ್ತಿತ್ತು. ಆದರೆ ಈಗ ಅಂದಕಾಲತ್ತಿಲ್‌ನ ಈ ಕ್ವೀನ್‌ನ ಕ್ಯಾರೇ ಎನ್ನುವವರು ಕೂಡ ಯಾರು ಇಲ್ಲ. ಇದಕ್ಕೆ ಪುರಾವೆ ಎಂಬಂತೆ ಒಂದಾದ ಮೇಲೊಂದರಂತೆ ಕಂಗನಾ ಅಭಿನಯದ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಸೋಲನ್ನು ಕಂಡಿವೆ.
ಈ ಸೋಲುಗಳಿಗೆ ಕಾರಣ ಹತ್ತು ಹಲವು ಇರಬಹುದಾದರು ಕಂಗನಾ ಅವರ ರಾಜಕೀಯ ನಡೆ ಮತ್ತು ನುಡಿ ಕೂಡ ಈ ಸೋಲುಗಳಿಗೆ ಪ್ರಮುಖವಾದ ಕಾರಣಗಳಲ್ಲಿ ಒಂದು. ರಾಜಕೀಯವಾಗಿ ಸೈದ್ಧಾಂತಿಕವಾಗಿ ಕಂಗನಾ ಅವರ ವಿರೋಧವನ್ನು ಹಲವರು ಕಳೆದ ಕೆಲ ವರ್ಷಗಳಿಂದ ಮಾಡುತ್ತಲೇ ಬರುತ್ತಿದ್ದಾರೆ. ಆದರೂ ಕೂಡ ಕಂಗನಾಗೆ ರಾಜಕೀಯದ ಮೇಲಿನ ಮೋಹ ಕಡಿಮೆಯಾಗಲಿಲ್ಲ.

ಬದಲಿಗೆ ಅವರಿವರಿಗೆ ಜೈ ಎನ್ನುವ ಬದಲು ತಾವೇ ಅಖಾಡಕ್ಕೆ ಇಳಿಯುವುದು ಉತ್ತಮವೆಂದುಕೊಂಡ ಕಂಗನಾ ತಾವೇ ರಾಜಕೀಯಕ್ಕೆ ಬಂದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿಯಲ್ಲಿ ನಿಂತುಕೊಂಡು ವಿರೋಧಿಗಳು ಮಂಡಿಯೂರುವಂತೆ ಮಾಡಿದರು. ತಮ್ಮೂರಿನಲ್ಲಿ ಗೆದ್ದು ಬಿಜೆಪಿಯ ಸಂಸದೆ ಕೂಡ ಆದರು.
ಇಂಥಾ ಕಂಗನಾ ಈಗ ತಮ್ಮ ಕನಸಿನ ಚಿತ್ರ ಎಮರ್ಜೆನ್ಸಿ ಚಿತ್ರದ ಸೋಲಿನ ನಂತರ ಮತ್ತೆ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಹಿಮಾಚಲ ಪ್ರದೇಶದಲ್ಲಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೆಂಡ ಕಾರಿದ್ದಾರೆ. ತಮ್ಮ ಮನೆಯ ವಿದ್ಯುತ್ ಬಿಲ್‌ನ್ನೂ ಕೂಡ ಪ್ರಸ್ತಾಪಿಸಿದ್ದಾರೆ. ಹೌದು, ಅಸಲಿಗೆ ಕಂಗನಾ ರಣಾವತ್ ಹಿಮಾಚಲ ಪ್ರದೇಶದ ಮಂಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು.
ಇದೇ ಸಮಯದಲ್ಲಿ ಮಾತನಾಡಲು ಶುರು ಮಾಡಿದ ಕಂಗನಾ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಗುಣಗಾನ ಮಾಡಲು ಶುರು ಮಾಡಿದರು. ಎಲ್ಲರನ್ನು ಉದ್ದೇಶಿಸಿ ಮೋದಿ ಅಲೆ ಭಾರದೆಲ್ಲೆಡೆ ಇದೆ, ಕೇಸರಿ ಧ್ವಜ ಎಲ್ಲೆಡೆ ಹಾರಾಡುತ್ತಿದೆ ಎಂದ ಕಂಗನಾ, ಹಿಮಾಚಲ ಪ್ರದೇಶದ ಈ ದುರ್ಗತಿಗೆ ಕಾಂಗ್ರೆಸ್‌ನವರೇ ಕಾರಣವೆಂದು ಹೇಳಿದ್ದಾರೆ.
ಮುಂದುವರೆದು ಕಾಂಗ್ರೆಸ್ ಸರ್ಕಾರವನ್ನು ಟೀಕಿಸುತ್ತಾ ಮಾತನಾಡಿರುವ ಕಂಗನಾ ನಾನು ಇಲ್ಲಿ ನಮ್ಮ ಮನೆಯಲ್ಲಿರುವುದೇ ಇಲ್ಲ ಆದರೂ ಕೂಡ ನನ್ನ ಮನೆಗೆ ಒಂದು ಲಕ್ಷ ರೂಪಾಯಿಯ ಕರೆಂಟ್ ಬಿಲ್ ಬಂದಿದೆ ಎಂದು ಹೇಳಿದ್ದಾರೆ. ಯಾರೂ ವಾಸವಾಗದ ಮನೆಗೆ ಒಂದು ಲಕ್ಷ ಕರೆಂಟ್ ಬಿಲ್ ನೀಡುವ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಹೇಳಿರುವ ಕಂಗನಾ ನಮ್ಮ ಪ್ರದೇಶವನ್ನು ಉನ್ನತಿಯತ್ತ ಕರೆದೊಯ್ಯಬೇಕು ಅಂದರೆ ಇವರ ಕಪಿಮುಷ್ಠಿಯಿಂದ ನಾವು ಪಾರಾಗಬೇಕು ಎಂದು ಹೇಳಿದ್ದಾರೆ. ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಸದ್ಯ ಕಂಗನಾ ಮಾತನಾಡಿರುವ ಈ ಕರೆಂಟ್ ಶಾಕ್ ಮಾತುಗಳ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಕಂಗನಾ ಭಾಷಣದ ವಿಡಿಯೋ ಕೂಡ ವೈರಲ್ ಆಗುತ್ತಿದೆ. ಇನ್ನುಳಿದಂತೆ ಕಳೆದ ಹತ್ತು ವರ್ಷಗಳಲ್ಲಿ ಹನ್ನೊಂದು ಫ್ಲಾಪ್ ಚಿತ್ರಗಳನ್ನು ನೀಡಿರುವ ಕಂಗನಾ ಸದ್ಯ ಭಾರತ ಭಾಗ್ಯ ವಿಧಾತಾ ಚಿತ್ರವನ್ನು ಮಾಡುತ್ತಿದ್ದಾರೆ. ಈ ಚಿತ್ರವಾದರೂ ಗೆಲ್ಲುತ್ತಾ ಎನ್ನುವ ಪ್ರಶ್ನೆಗೆ ಮುಂಬರುವ ದಿನಗಳಲ್ಲಿ ಉತ್ತರ ಸಿಗಲಿದೆಯಾದರೂ ಸದ್ಯ ಕಂಗನಾ ರಾಜಕಾರಣಿಯ ಜೊತೆ ಉದ್ಯಮಿ ಕೂಡ ಆಗಿದ್ಧಾರೆ. ತಮ್ಮ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಕಂಗನಾ ರಣಾವತ್ ''ದಿ ಮೌಂಟೇನ್ ಸ್ಟೋರಿ'' ಎಂಬ ಕೆಫೆಯನ್ನು ಶುರು ಮಾಡಿದ್ದಾರೆ.


Click it and Unblock the Notifications











