ಭಾರತದ ಕರಾಳ ಅಧ್ಯಾಯಕ್ಕೆ 50 ವರ್ಷ ; ಎಮರ್ಜೆನ್ಸಿ ಚಿತ್ರದ ರಿಲೀಸ್ ಡೇಟ್ ಘೋಷಿಸಿದ ಕಂಗನಾ ರಣಾವತ್...!
ರಾಜಕೀಯ ಕ್ಷೇತ್ರದಲ್ಲಿ ಕೂಡ ತನ್ನ ಎದುರಾಳಿಗಳನ್ನ 'ಮಂಡಿ'ಯೂರುವಂತೆ ಮಾಡಿದವರು ಕಂಗನಾ ರಣಾವತ್. ಎದ್ದು ಬಂದು ಎದೆಗೆ ಒದ್ದರೂ ಪರವಾಗಿಲ್ಲ ಇದ್ದದ್ದನ್ನ ಇದ್ದಂಗೆ ಹೇಳ್ತೀನಿ ಎನ್ನುವ ಈ ಗಟ್ಟಿಗಿತ್ತಿ ಸದ್ಯಕ್ಕೆ ತಮ್ಮ ಎಮರ್ಜೆನ್ಸಿ ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದಾರೆ.
ಹೌದು, ಅಸಲಿಗೆ ಕಂಗನಾ ಈಗ ಕೇವಲ ನಾಯಕಿ ಮಾತ್ರ ಅಲ್ಲ. ಬಿಜೆಪಿ ಸಂಸದೆಯೂ ಹೌದು. ಹೀಗಾಗಿ ಕಂಗನಾ ಅವರ ಕನಸಿನ ಕೂಸಿನ ಮುಖವನ್ನ ನೋಡುವ ಅವಕಾಶ ಸಿಗಲ್ಲ ಎಂದೇ ಬಹುತೇಕರು ಅಂದುಕೊಂಡಿದ್ದರು. ಇನ್ನೂ.. ಭಾರತದ ಇತಿಹಾಸದಲ್ಲಿಯೇ ಕಪ್ಪು ಚುಕ್ಕೆಯಾದ ತುರ್ತು ಪರಿಸ್ಥಿತಿಯನ್ನಾಧರಿಸಿದ ಚಿತ್ರದಲ್ಲಿ ಕಂಗನಾ ರಣಾವತ್ ಇಂದಿರಾ ಗಾಂಧಿ ಅವರನ್ನ ಕಂಗನಾ ನಾಯಕಿಯಂತೆ ತೋರಿಸಿದ್ದಾರಾ..? ಅಥವಾ ಖಳನಾಯಕಿಯಂತೆ ಬಿಂಬಿಸಿದ್ದಾರಾ..? ಗೊತ್ತಿಲ್ಲ.

ಹೀಗಾಗಿಯೇ ಬಿಜೆಪಿಯ ತತ್ವ ಸಿದ್ಧಾಂತಗಳಿಂದ ಪ್ರಭಾವಿತರಾದ ಕಂಗನಾ ವಿರುದ್ಧ ಎಮರ್ಜೆನ್ಸಿ ಚಿತ್ರದ ವಿಚಾರದಲ್ಲಿ ಕಾಂಗ್ರೆಸ್ ಸಮರ ಸಾರುತ್ತೆ ಎಂದು ಅನೇಕರು ಲೆಕ್ಕಾಚಾರ ಹಾಕಿದ್ದರು. ಮುಂದೊಂದು ದಿನ ಈ ಲೆಕ್ಕಾಚಾರ ಸರಿಯಾದರೂ ಆಗಬಹುದು. ಆದರೆ ಸದ್ಯಕ್ಕೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಹಣಬಲದ ಜೊತೆ ಅಧಿಕಾರದ ಬಲವನ್ನೂ ಹೊಂದಿರುವ ಕಂಗನಾ ತಮ್ಮ ಮಹತ್ವಕಾಂಕ್ಷೆಯ ಚಿತ್ರ ಈ ಸೆಪ್ಟೆಂಬರ್ 6ರಂದು ಬಿಡುಗಡೆಯಾಗಲಿದೆ ಎಂದಿದ್ದಾರೆ. ಭಾರತದ ಸಂವಿಧಾನದ ಬಹುದೊಡ್ಡ ವಿವಾದ ತೆರೆ ಮೇಲೆ ಅನಾವರಣಗೊಳ್ಳಲಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ಧಾರೆ.
ಅಂದ್ಹಾಗೇ ಕಂಗನಾ ರಣಾವತ್ ಈ ಚಿತ್ರದ ನಾಯಕಿಯೂ ಹೌದು ನಿರ್ದೇಶಕಿಯೂ ಹೌದು. ಎಲ್ಲವೂ ಅಂದುಕೊಂಡತೆ ಆಗಿದ್ದರೆ ಈ ಚಿತ್ರ ಕಳೆದ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಅದು ಆಗಲಿಲ್ಲ. ಇನ್ನೂ ಈ ವರ್ಷದ ಆರಂಭದಲ್ಲಿ ಜೂನ್ 14ಕ್ಕೆ ಚಿತ್ರ ಬಿಡುಗಡೆಯಾಗಲಿದೆ ಎಂದು ಕಂಗನಾ ಘೋಷಿಸಿದ್ದರು.ಆದರೆ ಆ ನಂತರ ಲೋಕಸಭಾ ಚುನಾವಣೆಯತ್ತ ಗಮನ ವಹಿಸಲು ಮತ್ತೆ ಕಂಗನಾ ಬಿಡುಗಡೆಯ ದಿನವನ್ನ ಮುಂದೂಡಿದರು.

ಉಳಿದಂತೆ ಎಮರ್ಜೆನ್ಸಿಯಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ವಿಶಾಕ್ ನಾಯರ್ ಮತ್ತು ದಿವಂಗತ ಸತೀಶ್ ಕೌಶಿಕ್ ಕೂಡ ಕಾಣಿಸಿಕೊಂಡಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಪಾತ್ರವನ್ನು ಶ್ರೇಯಸ್ ತಲ್ಪಡೆ ನಿರ್ವಹಿಸಿದ್ದಾರೆ. ಸಿನಿಮಾದಲ್ಲಿ ಇಂದಿರಾ ಗಾಂಧಿಯ ಗಟ್ಟಿ ವ್ಯಕ್ತಿತ್ವದ ಅನಾವರಣ ಮಾಡಲಾಗಿದೆ ಎಂಬ ಮಾತು ಬಾಲಿವುಡ್‌ನಲ್ಲಿ ಕೇಳಿ ಬರುತ್ತಿದೆ. ಈ ಕಾರಣಕ್ಕೆ ಈ ಚಿತ್ರ ಕುತೂಹಲವನ್ನೂ ಕೆರಳಿಸಿದೆ.
ಇನ್ನೂ ಕಂಗನಾ ರಣಾವತ್ ಅಭಿನಯದ ಯಾವ ಚಿತ್ರ ಕೂಡ ಇತ್ತೀಚಿನ ದಿನಗಳಲ್ಲಿ ಗೆದ್ದಿಲ್ಲ. ಕಂಗನಾ ಅಭಿನಯಕ್ಕೆ ಪ್ರೇಕ್ಷಕರು, ವೀಕ್ಷಕರು ಮೆಚ್ಚುಗೆ ಸೂಚಿಸಿದ್ದರೂ ಚಿತ್ರಗಳು ಪವಾಡವನ್ನ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಜಕೀಯದಲ್ಲಿಯೂ ಗೆದ್ದ ಕಂಗನಾಗೆ ಎಮರ್ಜೆನ್ಸಿ ಗೆಲ್ಲಲೇಬೇಕಿದೆ. ಚಿತ್ರ ಕಂಗನಾ ಕೈ ಹಿಡಿಯಬೇಕಿದೆ.ಉಳಿದಂತೆ ನಾನು ಗೆದ್ದರೆ ಚಿತ್ರರಂಗಕ್ಕೆ ವಿದಾಯ ಹೇಳುವುದಾಗಿ ಕಂಗನಾ ಈ ಹಿಂದೆ ಘೋಷಿಸಿದ್ದರು. ಆದರೆ ಆ ಘೋಷಣೆ ಕಾರ್ಯರೂಪಕ್ಕೆ ಬರುತ್ತಾ ಅನ್ನುವ ಅನುಮಾನ ಅನೇಕರಲ್ಲಿದೆ. ಇದರ ನಡುವೆ ಎಮರ್ಜೆನ್ಸಿ ಬಿಡುಗಡೆಯಾಗಲಿದೆ. ಎಮರ್ಜೆನ್ಸಿಯ ಗೆಲುವು-ಸೋಲು ಕಂಗನಾ ಅವರ ಮುಂದಿನ ಭವಿಷ್ಯವನ್ನೂ ನಿರ್ಧಾರ ಮಾಡಲಿದೆ.


Click it and Unblock the Notifications










