'ಟಾಕ್ಸಿಕ್' ಚಿತ್ರದಲ್ಲಿ ನಟಿಸೋಕೆ 'ಕಾಂತಾರ-1' ನಟ ಗುಲ್ಷನ್ ದೇವಯ್ಯ ಒಲ್ಲೆ ಎಂದಿದ್ದೇಕೆ?
ಬೆಂಗಳೂರು ಮೂಲದ ಬಾಲಿವುಡ್ ನಟ ಗುಲ್ಷನ್ ದೇವಯ್ಯ 'ಕಾಂತಾರ'- 1 ಚಿತ್ರದಲ್ಲಿ ನಟಿಸಿದ್ದರು. ವಿಲನ್ ಕುಲಶೇಖರನ ಪಾತ್ರದಲ್ಲಿ ಮಿಂಚಿದ್ದರು. ಅವರ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಗುಲ್ಷನ್ ಕರ್ನಾಟಕದವರು ಎಂದು ಗೊತ್ತಾಗಿ ಸಾಕಷ್ಟು ಜನ ಅಚ್ಚರಿಗೊಂಡಿದ್ದರು.
'ಕಾಂತಾರ'-1 ಬಳಿಕ ಯಶ್ ನಟನೆಯ 'ಟಾಕ್ಸಿಕ್' ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಆದರೆ ನಾನೇ ಒಪ್ಪಿಕೊಳ್ಳಲಿಲ್ಲ ಎಂದು ಗುಲ್ಷನ್ ಹೇಳಿದ್ದಾರೆ. ಸ್ಕ್ರೀನ್ ಅವಾರ್ಡ್ಸ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆದರೆ ಅವರ ಹೇಳಿಕೆಯನ್ನು ಕೆಲವರು ತಪ್ಪಾಗಿ ಅರ್ಥೈಸಿ ಸುದ್ದಿ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಗುಲ್ಷನ್ ಬೇಸರ ಹೊರ ಹಾಕಿದ್ದಾರೆ.

ಗುಲ್ಷನ್ ಮಾತನಾಡಿ "ಬಹಳ ಹಿಂದೆಯೇ ನನಗೆ 'ಟಾಕ್ಸಿಕ್' ಚಿತ್ರದಲ್ಲಿ ನಟಿಸುವಂತೆ ಅವಕಾಶ ಸಿಕ್ಕಿತ್ತು. 'ಕಾಂತಾರ- 1' ಬಳಿಕ ಯಾವ ಸಿನಿಮಾ ಆಯ್ಕೆ ಮಾಡಿಕೊಳ್ಳುವುದು ಎನ್ನುವುದು ಅಷ್ಟು ಸುಲಭವಾಗಿರಲಿಲ್ಲ. ಬಹಳ ಕನ್‌ಫ್ಯೂಸ್ ಆಗಿದ್ದೆ. ನಿರ್ದೇಶಕಿ ಗೀತು ಮೋಹನ್ ದಾಸ್ ಜೊತೆ ಈ ಬಗ್ಗೆ ಬಹಳ ಚಾಟ್ ಮಾಡಿದ್ದೆ. ನಾನು ನಟಿಸಬೇಕು ಎನ್ನುವುದು ಆಕೆಯ ಆಸೆ ಆಗಿತ್ತು. ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ದೊಡ್ಡ ಸಿನಿಮಾ, ಭಾರೀ ಶೆಡ್ಯೂಲ್ ಇತ್ತು. ಬೇರೆ ಬೇರೆ ಕಡೆಗಳಲ್ಲಿ ಚಿತ್ರೀಕರಣ ನಡೀತಿತ್ತು. ಹಾಗಾಗಿ ಬೇಡ ಎಂದು ಬಿಟ್ಟಿದ್ದಾಗಿ" ವಿವರಿಸಿದ್ದಾರೆ.
ಅದೇ ಸಂದರ್ಶನದಲ್ಲಿ ಬೇರೊಂದು ಚಿತ್ರದಲ್ಲಿ ನನಗೆ ಸಂಭಾವನೆ ಸರಿಯಾಗಿ ಕೊಡಲಿಲ್ಲ. ನನ್ನ ಮ್ಯಾನೇಜರ್ ಜೊತೆ ಚಿತ್ರತಂಡಕ್ಕೆ ಕಿರಿಕ್ ಆಗಿತ್ತು. ಹಾಗಾಗಿ ಆ ಸಿನಿಮಾ ಬಿಟ್ಟುಬಿಟ್ಟೆ ಎಂದಿದ್ದಾರೆ. ಆದರೆ ಎರಡನ್ನು ಲಿಂಕ್ ಮಾಡಿ ಸಂಭಾವನೆ ವಿಚಾರಕ್ಕೆ ಗುಲ್ಷನ್ 'ಟಾಕ್ಸಿಕ್' ಚಿತ್ರದಲ್ಲಿ ನಟಿಸಲಿಲ್ಲ ಎಂದು ಕೆಲವರು ತಪ್ಪಾಗಿ ಸುದ್ದಿ ತೇಲಿಬಿಟ್ಟಿದ್ದಾರೆ. ಈ ಬಗ್ಗೆ ಗುಲ್ಷನ್ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.
"ಟಾಕ್ಸಿಕ್ ವಿಚಾರದಲ್ಲಿ ಇದು ಸತ್ಯ" ಎಂದು ತಾವು ಮಾತನಾಡಿರುವ ವಿಡಿಯೋ ಹಂಚಿಕೊಂಡಿದ್ದಾರೆ. "ಬೇರೆ ಯಾವುದೇ ಕಟ್ಟುಕಥೆ, ತಪ್ಪು ನಿರೂಪಣೆಯನ್ನು ನಾನು ಸುಮ್ಮನ ಒಪ್ಪಿಕೊಳ್ಳುವುದಿಲ್ಲ. ನನ್ನ ಬಗ್ಗೆ ತಪ್ಪು ಮಾಹಿತಿ ಹರಡಿದ್ದಕ್ಕಾಗಿ ಕ್ರಮ ಕೈಗೊಳ್ಳುತ್ತೇನೆ" ಎಂದು ಗುಲ್ಷನ್ ಅಸಮಾಧಾನ ಹೊರ ಹಾಕಿದ್ದಾರೆ. ಅದನ್ನೆಲ್ಲಾ ಪಕ್ಕಕ್ಕಿಟ್ಟರೆ 'ಟಾಕ್ಸಿಕ್' ಚಿತ್ರದಲ್ಲಿ ಗುಲ್ಷನ್ ನಟಿಸಿದ್ದರೆ ಚೆನ್ನಾಗಿತ್ತು. ಒಳ್ಳೆ ಅವಕಾಶ ಮಿಸ್ ಮಾಡಿಕೊಂಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ರಂಗಭೂಮಿ ಹಿನ್ನೆಲೆಯ ನಟ ಗುಲ್ಷನ್ ದೇವಯ್ಯ 'ಸೈತಾನ್', 'ಹೇಟ್ ಸ್ಟೋರಿ', ಕಮಾಂಡೋ-3', 'ಮರ್ದ್ ಕೋ ದರ್ದ್ ನಹಿ ಹೋತಾ' ಸೇರಿದಂತೆ ಒಂದಷ್ಟು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿರುತೆರೆ ಕಾರ್ಯಕ್ರಮಗಳಲ್ಲಿ ಮಿಂಚಿದ್ದಾರೆ. ಪೋಷಕ ನಟನಾಗಿ ಅವರ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ಯವಾಗುತ್ತಿದೆ.
ಅಂದಹಾಗೆ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಈಗಾಗಲೇ ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಚಿತ್ರಕ್ಕೆ ಹಣ ಹೂಡಿದ್ದಾರೆ. ಮಾರಚ್ 19ರಂದು 'ಟಾಕ್ಸಿಕ್' ಸಿನಿಮಾ ತೆರೆಗೆ ಬರಲಿದೆ. ರಾಯ ಪಾತ್ರ ಪರಿಚಯಿಸೋ ಟೀಸರ್ ಇದೀಗ ಸೌಂಡ್ ಮಾಡ್ತಿದೆ. ಆಕ್ಷನ್ ಪ್ಯಾಕ್ಡ್ ಝಲಕ್ ಅಭಿಮಾನಿಗಳ ಮನಗೆದ್ದಿದೆ. ಕೆಲ ದೃಶ್ಯಗಳ ಬಗ್ಗೆ ಪ್ರೇಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಬಹುನಿರೀಕ್ಷಿತ 'ಧುರಂಧರ್'-2 ಸಿನಿಮಾ ಎದುರು 'ಟಾಕ್ಸಿಕ್' ಚಿತ್ರ ತೆರೆಗಪ್ಪಳಿಸಲಿದೆ. ಎರಡೂ ಸಿನಿಮಾಗಳ ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ಗ್ಯಾರಂಟಿ ಎನ್ನುವಂತಾಗಿದೆ. ಎರಡೂ ಚಿತ್ರತಂಡಗಳು ತಮ್ಮ ಸಿನಿಮಾ ಮೇಲೆ ನಿರೀಕ್ಷೆ ಇಟ್ಟುಕೊಂಡಿವೆ. ಹಾಗಾಗಿ ಒಂದೇ ದಿನ ಸಿನಿಮಾ ಬಿಡುಗಡೆಗೆ ಮನಸ್ಸು ಮಾಡಿದ್ದಾರೆ.


Click it and Unblock the Notifications











