KBC 17: ಕೌನ್ ಬನೇಗಾ ಕರೋಡ್‌ಪತಿಯಲ್ಲಿ ರಿಷಬ್ ಗೆದ್ದಿದ್ದೆಷ್ಟು? ಸುಲಭ ಪ್ರಶ್ನೆಗೆ ತಪ್ಪು ಉತ್ತರ ಕೊಟ್ಟಿದ್ಯಾಕೆ?
ಬೆಂಗಳೂರಿನಿಂದ ನ್ಯೂಯಾರ್ಕ್‌ವರೆಗೆ ಕನ್ನಡದ 'ಕಾಂತಾರ- 1' ಸಿನಿಮಾ ಸದ್ದು ಮಾಡ್ತಿದೆ. ಉತ್ತರ ಭಾರತದಲ್ಲಿ ಕೂಡ ಸಿನಿಮಾ ಕ್ರೇಜ್ ಜೋರಾಗಿದೆ. ಇತ್ತೀಚೆಗೆ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಭಾಗಿ ಆಗಿ ಅಮಿತಾಬ್ ಬಚ್ಚನ್ ಜೊತೆ ಮಾತನಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರೋಮೊಗಳು ವೈರಲ್ ಆಗಿದೆ.
ಶೋನಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸೆಲೆಬ್ರೆಟಿ ಸ್ಪರ್ಧಿಯಾಗಿ ಭಾಗಿ ಆಗಿದ್ದರು. ಬಿಗ್‌ಬಿ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಕಮಾಲ್ ಮಾಡಿದ್ದಾರೆ. ನಡು ನಡುವೆ ಇಬ್ಬರೂ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ರಿಷಬ್ ಶೆಟ್ಟಿ ತಮ್ಮ ಹಿನ್ನೆಲೆ, ಸಿನಿಮಾಗಳ ಬಗ್ಗೆ ಅಮಿತಾಬ್ ಬಚ್ಚನ್ ಜೊತೆ ಮಾತನಾಡಿದ್ದಾರೆ. ಬಿಗ್‌ಬಿ ಕೂಡ ಅಣ್ಣಾವ್ರ ಜೊತೆಗಿನ ಒಡನಾಟ ಸೇರಿದಂತೆ ಸಾಕಷ್ಟು ಸಂಗತಿಗಳನ್ನು ಮೆಲುಕು ಹಾಕಿದ್ದಾರೆ. 'ಕಾಂತಾರ- 1' ಚಿತ್ರಕ್ಕೆ ಶುಭ ಕೋರಿದ್ದಾರೆ. ಶೀಘ್ರದಲ್ಲೇ ಸಿನಿಮಾ ನೋಡಿ ಪತ್ರ ಬರೆಯುವುದಾಗಿ ಹೇಳಿದ್ದಾರೆ.

ಅಮಿತಾಬ್ ಎದುರು ಹಾಟ್ ಸೀಟ್‌ನಲ್ಲಿ ಕೂಡ ರಿಷಬ್ ಶೆಟ್ಟಿ ಖುಷಿಯಾಗಿದ್ದಾರೆ. 12 ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇನ್ನು ಶೋನಲ್ಲಿ ಗೆದ್ದ ಹಣವನ್ನು ತಮ್ಮ ಫೌಂಡೇಷನ್‌ಗೆ ಕೊಟ್ಟಿದ್ದಾರೆ. ಆರಂಭದಲ್ಲಿ ಸುಲಭದ ಪ್ರಶ್ನೆಗಳಿಗೆ ಉತ್ತರಿಸಿದ ರಿಷಬ್ ಬಳಿಕ ಕಷ್ಟದ ಪ್ರಶ್ನೆಗಳಿಗೂ ಸರಿಯಾದ ಉತ್ತರ ಕೊಟ್ಟರು. ಕೊನೆಗೆ ಕಷ್ಟದ ಪ್ರಶ್ನೆಗಳಿಗೆ ಲೈಫ್‌ಲೈನ್ ಸಹ ಬಳಸಿಕೊಂಡರು. ಆದರೆ 'ಸೂಪರ್ ಸಂಧೂಕ್' ರೌಂಡ್‌ನಲ್ಲಿ ಮಾತ್ರ ಒಂದು ಸುಲಭದ ಪ್ರಶ್ನೆಗೆ ತಪ್ಪು ಉತ್ತರ ಕೊಟ್ಟಿದ್ದಾರೆ. ಅದು ಕೂಡ ಭಾರತ ಕ್ರಿಕೆಟ್ ತಂಡದ ಬಗ್ಗೆ ಕೇಳಿದ ಪ್ರಶ್ನೆ.
ಕಳೆದ 3 ವರ್ಷಗಳಿಂದ ರಿಷಬ್ ಶೆಟ್ಟಿ 'ಕಾಂತಾರ- 1' ಸಿನಿಮಾ ಕೆಲಸಗಳಲ್ಲಿ ಮುಳುಗಿದ್ದಾರೆ. ಒಂದೂವರೆ ವರ್ಷ ಫ್ಯಾಮಿಲಿ ಸಮೇತ ತಮ್ಮ ಹುಟ್ಟೂರು ಸೇರಿಬಿಟ್ಟಿದ್ದರು. ಪ್ರತಿದಿನ ಪ್ರತಿಕ್ಷಣ ಸಿನಿಮಾ ಬಗ್ಗೆ ಯೋಚಿಸುತ್ತಿದ್ದರು. ಹೊರಗಿನ ಪ್ರಪಂಚದ ಬಗ್ಗೆ ಗಮನವೇ ಇರಲಿಲ್ಲ. ಈ ಬಗ್ಗೆ ಸಂದರ್ಶನಗಳಲ್ಲಿ ಕೂಡ ರಿಷಬ್ ಹೇಳಿದ್ದಾರೆ. ಹೊರ ಜಗತ್ತಿನಲ್ಲಿ ಏನಾದರೂ ಘಟನೆ ನಡೆದರೆ ಅದರ ಬಗ್ಗೆ ಗೊತ್ತಾಗಲು ಬಹಳ ಸಮಯ ಬೇಕಾಗುತ್ತಿತ್ತು ಎಂದಿದ್ದಾರೆ.

'ಸೂಪರ್ ಸಂಧೂಕ್' ರೌಂಡ್‌ನಲ್ಲಿ ರಾಪಿಡ್ ಫೈಯರ್ ರೀತಿ ವೇಗವಾಗಿ ಬಿಗ್‌ಬಿ ಪ್ರಶ್ನೆಗಳನ್ನು ಕೇಳಿದ್ದಾರೆ. 90 ಸೆಕೆಂಡ್‌ಗಳಲ್ಲಿ ಎಷ್ಟು ಪ್ರಶ್ನೆಗಳಿಗೆ ರಿಷಬ್ ಉತ್ತರ ಕೊಡುತ್ತಾರೆ ಎನ್ನುವುದು ಟಾಸ್ಕ್ ಆಗಿತ್ತು. ಭಾರತ ಪುರುಷ ಕ್ರಿಕೆಟ್ ತಂಡ ಇದೇ ಸೆಪ್ಟೆಂಬರ್(2025)ನಲ್ಲಿ ಗೆದ್ದ ಟ್ರೋಫಿ ಯಾವುದು? ಎನ್ನುವ ಪ್ರಶ್ನೆ ಎದುರಾಗಿತ್ತು. A. ಏಷ್ಯಾ ಕಪ್ B. ವರ್ಲ್ಡ್ ಕಪ್ C. ಟಿ20 ವರ್ಲ್ಡ್ ಕಪ್ D. ಚಾಂಪಿಯನ್ಸ್ ಟ್ರೋಫಿ ಎಂಬ ಆಪ್ಷನ್‌ಗಳನ್ನು ಕೊಟ್ಟಿದ್ದರು. ರಿಷಬ್ ಶೆಟ್ಟಿ ವರ್ಲ್ಡ್ ಕಪ್ ಎಂದು ಗೆಸ್ ಮಾಡಿದ್ದರು. ಆದರೆ ಅದು ತಪ್ಪಾಗಿತ್ತು.
ಅರೇ ಇಷ್ಟು ಸುಲಭದ ಪ್ರಶ್ನೆಗೆ ರಿಷಬ್ ಶೆಟ್ಟಿ ತಪ್ಪು ಉತ್ತರ ಕೊಟ್ಟುಬಿಟ್ಟರಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಅಯ್ಯೋ 3 ವರ್ಷಗಳಿಂದ 'ಕಾಂತಾರ- 1' ಚಿತ್ರದಲ್ಲಿ ಅವರು ತಲ್ಲೀನರಾಗಿದ್ದಾರೆ. ಹಾಗಾಗಿ ಗೊತ್ತಾಗಲಿಲ್ಲ ಅಷ್ಟೆ. ಸಿನಿಮಾ ತೆರೆಕಂಡು 15 ದಿನ ಕಳೆದರೂ ಇನ್ನು ಪ್ರಚಾರದಲ್ಲೇ ಬ್ಯುಸಿಯಾಗಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಒಟ್ಟಾರೆ ಶೋನಲ್ಲಿ 12 ಪ್ರಶ್ನೆಗಳಿಗೆ ರಿಷಬ್ ಶೆಟ್ಟಿ ಉತ್ತರಿಸಿ 12.50 ಲಕ್ಷ ರೂ. ಬಹುಮಾನದ ಹಣವನ್ನು ಗಳಿಸಿದರು. ಅದನ್ನು ರಿಷಬ್ ಫೌಂಡೇಷನ್‌ಗೆ ಬಿಗ್‌ಬಿ ಕೊಟ್ಟಿದ್ದಾರೆ. ಕರ್ನಾಟಕಕ್ಕೆ ಸಂಬಂಧಿಸಿದ ಕೆಲ ಪ್ರಶ್ನೆಗಳು ರಿಷಬ್ ಶೆಟ್ಟಿಗೆ ಎದುರಾಗಿದ್ದು ವಿಶೇಷ.


Click it and Unblock the Notifications











