ಡ್ರಗ್ಸ್ ಪ್ರಕರಣ: ವೈರಲ್ ಆಗಿರುವ ಪಾರ್ಟಿ ವಿಡಿಯೋ ಬಗ್ಗೆ ಕರಣ್ ಜೋಹರ್ ಸ್ಪಷ್ಟನೆ
ಬಾಲಿವುಡ್ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ಡ್ರಗ್ಸ್ ಸೇವನೆ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿದ್ದಾರೆ ಎನ್ನುವ ವಿಡಿಯೋವೊಂದು ಇತ್ತೀಚಿಗೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಬಗ್ಗೆ ಮೊದಲ ಬಾರಿಗೆ ಕರಣ್ ಜೋಹರ್ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
2019ರಲ್ಲಿ ಬಾಲಿವುಡ್ ನ ಕೆಲವು ಸ್ಟಾರ್ ನಟ-ನಟಿಯರ ಜೊತೆ ಕರಣ್ ಜೋಹರ್ ಪಾರ್ಟಿ ಮಾಡಿದ್ದ ವೀಡಿಯೋ ಇತ್ತೀಚಿಗೆ ವೈರಲ್ ಆಗಿತ್ತು. ಈ ಪಾರ್ಟಿಯಲ್ಲಿ ಡ್ರಗ್ಸ್ ಬಳಕೆ ಮಾಡಿದ್ದರು ಎನ್ನುವ ಆರೋಪ ಕರಣ್ ವಿರುದ್ಧ ಕೇಳಿ ಬರುತ್ತಿದೆ. ಈ ಬಗ್ಗೆ ಕರಣ್ ತನ್ನ ವಿರುದ್ಧ ಕೇಳಿ ಬರುತ್ತಿರುವ ಎಲ್ಲಾ ಆರೋಪಗಳು ಸುಳ್ಳು, ಪಾರ್ಟಿಯಲ್ಲಿ ಯಾವುದೇ ರೀತಿಯ ಡ್ರಗ್ಸ್ ಬಳಸಿಲ್ಲ ಮತ್ತು ನಾನು ಡ್ರಗ್ಸ್ ಸೇವಿಸುವುದಿಲ್ಲ ಎಂದು ಹೇಳಿದ್ದಾರೆ.
ಇನ್ನೂ ಇತ್ತೀಚಿಗೆ ಡ್ರಗ್ಸ್ ಪ್ರಕರಣ ಸಂಬಂಧ ಅರೆಸ್ಟ್ ಆಗಿರುವ ಕ್ಷಿಜಿತ್ ಪ್ರಸಾದ್ ಮತ್ತು ಅನುಭವ್ ಚೋಪ್ರಾ ಧರ್ಮ ಪ್ರೊಡಕ್ಷನ್ ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ಬಗ್ಗೆಯೂ ಕರಣ್ ಸ್ಪಷ್ಟನೆ ನೀಡಿದ್ದಾರೆ. ಅವರು ಯಾವುದೇ ರೀತಿಯಲ್ಲಿ ನನಗೆ ವೈಯಕ್ತಿಕ ಸಹಾಯಕರಲ್ಲ ಎಂದಿದ್ದಾರೆ. ಧರ್ಮ ಪ್ರೊಡಕ್ಷನ್ ಹೌಸ್ ನಲ್ಲಿ ಕೆಲಸ ಮಾಡುವವರ ವೈಯಕ್ತಿಕ ಜೀವನದಲ್ಲಿ ಏನು ಮಾಡುತ್ತಿರುತ್ತಾರೆ ಎಂಬುದಕ್ಕೆ ನಾವು ಜವಾಬ್ದಾರರಾಗಿರುವುದಿಲ್ಲ. ಈ ಇಬ್ಬರು ಆರೋಪಿಗಳಿಗೂ ಧರ್ಮ ಪ್ರೊಡಕ್ಷನ್ ಹೌಸ್ ಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ವಿವರವಾದ ಪತ್ರ ಬರೆದು ಕರಣ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. "2019ರಲ್ಲಿ ಕರಣ್ ಜೋಹರ್ ಆಯೋಜಿಸಿದ್ದ ಪಾರ್ಟಿಯಲ್ಲಿ ಡ್ರಗ್ಸ್ ಬಳಕೆಯಾಗಿತ್ತು ಎನ್ನುವ ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿದೆ. ಇದು ಸುಳ್ಳು ಸುದ್ದಿ. ಆಧಾರ ರಹಿತವಾದ ಆರೋಪವಾಗಿದೆ. ಪಾರ್ಟಿಯಲ್ಲಿ ಯಾವುದೇ ಡ್ರಗ್ಸ್ ಬಳಕೆಯಾಗಿಲ್ಲ, ಡ್ರಗ್ಸ್ ಬಗ್ಗೆ ಪ್ರಚಾರ ಮಾಡಿಲ್ಲ, ಡ್ರಗ್ಸ್ ತೆಗೆದುಕೊಳ್ಳುವಂತೆ ಪ್ರಚೋದನೆಯನ್ನು ಮಾಡಿಲ್ಲ."
"ಕ್ಷಿಜಿತ್ ಪ್ರಸಾದ್ ಮತ್ತು ಅನುಭವ್ ಚೋಪ್ರಾ ಇಬ್ಬರು ನನ್ನ ಸಹಾಯಕರು, ಆಪ್ತರು ಎಂದೆಲ್ಲ ಕೆಲವು ಸುದ್ದಿ ವಾಹಿನಿಗಳು ಪ್ರಸಾರ ಮಾಡುತ್ತಿವೆ. ಆದರೆ ಇವರಿಬ್ಬರು ನನಗೆ ವೈಯಕ್ತಿಕವಾಗಿ ಗೊತ್ತಿಲ್ಲ ಮತ್ತು ಇವರು ನನ್ನ ಸಹಾಯಕರು ಅಲ್ಲ. ಧರ್ಮ ಪ್ರೊಡಕ್ಷನ್ ನಲ್ಲಿ ಕೆಲಸ ಮಾಡುವವರು ಅವರ ವೈಯಕ್ತಿಕ ಜೀವನದಲ್ಲಿ ಏನು ಮಾಡುತ್ತಿರುತ್ತಾರೆ ಎನ್ನುವುದಕ್ಕೆ ಧರ್ಮ ಪ್ರೊಡಕ್ಷನ್ ಜವಾಬ್ದಾರರಲ್ಲ"
"ಅನುಭವ್ ಚೋಪ್ರಾ ಧರ್ಮ ಪ್ರೊಡಕ್ಷನ್ ನ ಉದ್ಯೋಗಿ ಅಲ್ಲ. 2011 ಮತ್ತು 2012 ಸಮಯದಲ್ಲಿ ಅನುಭವ್ ಕೇವಲ ಎರಡು ತಿಂಗಳು 2ನೇ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಇನ್ನೂ ಕ್ಷಿಜಿತ್ ರವಿ ಪ್ರಸಾದ್ 2019ರಲ್ಲಿ ಧರ್ಮ ಪ್ರೊಡಕ್ಷನ್ ಗೆ ಕಾಂಟ್ರಾಕ್ಟ್ ಬೇಸಿಸ್ ಮೇಲೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ."
Recommended Video
"ಕೆಲವು ದಿನಗಳಿಂದ ನನ್ನ ವಿರುದ್ಧ ಆಧಾರ ರಹಿತ, ಸುಳ್ಳ ಸುದ್ದಿಗಳನ್ನು ಬಿತ್ತರಿಸಲಾಗುತ್ತಿದೆ. ಹೀಗೆ ಮುಂದುವರೆದರೆ ಕಾನೂನು ಕ್ರಮಕ್ಕೆ ಮುಂದಾಗುತ್ತೇನೆ" ಎಂದು ಕರಣ್ ಜೋಹರ್ ದೀರ್ಘವಾಗಿ ಬರೆದುಕೊಂಡಿದ್ದಾರೆ.


Click it and Unblock the Notifications











