ಕರಣ್ ಜೋಹರ್ ಧರ್ಮ ಸಂಸ್ಥೆಯಿಂದ ನಟ ಕಾರ್ತಿಕ್ ಆರ್ಯನ್ ಬ್ಯಾನ್: ಕಾರಣವೇನು?
ಬಾಲಿವುಡ್ ಸ್ಟಾರ್ ನಟರ ಸಾಲಿನಲ್ಲಿರುವ ನಟ ಕಾರ್ತಿ ಆರ್ಯನ್ ಸದ್ಯ ದೋಸ್ತಾನ-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಈ ಚಿತ್ರ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ ನಲ್ಲಿ ಮೂಡಿಬರುತ್ತಿದೆ.
ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಕಾರ್ತಿಕ್ ಆರ್ಯನ್ ದೋಸ್ತಾನ-2 ಸಿನಿಮಾದಿಂದ ಹೊರಬಂದಿದ್ದಾರಂತೆ. ಬಾಲಿವುಡ್ ಮೂಲಗಳ ಪ್ರಕಾರ ಕಾರ್ತಿಕ್ ನನ್ನು ಧರ್ಮ ಸಂಸ್ಥೆ ಹೊರಹಾಕಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಕಾರಣ ಕಾರ್ತಿಕ್ ಅವರಿಗೆ ವೃತ್ತಿಪರತೆ ಇಲ್ಲದಿರುವುದು ಎಂದು ಹೇಳಲಾಗುತ್ತಿದೆ.
ಕಾರ್ತಿಕ್ ಕೆಲಸದ ಬಗ್ಗೆ ಅಸಮಾಧಾನಗೊಂಡಿರುವ ನಿರ್ಮಾಣ ಸಂಸ್ಥೆ ಕಾರ್ತಿಕ್ ನನ್ನು ಸಿನಿಮಾದಿಂದ ಹೊರ ಹಾಕಿ, ಬೇರೆ ನಟನನ್ನು ಹುಡುಕುತ್ತಿದ್ದಾರಂತೆ. ದೋಸ್ತಾನಾ-2 ಚಿತ್ರೀಕರಣ ಪ್ರಾರಂಭವಾಗಿ ಎರಡು ವರ್ಷಗಳಾಗಿದೆ. ಈಗಾಗಲೇ ಸಾಕಷ್ಟು ಚಿತ್ರೀಕರಣ ಮಾಡಿ ಮುಗಿಸಿದೆ ಸಿನಿಮಾತಂಡ. ಆದರೀಗ ನಾಯಕನ ಬದಲಾವಣೆ ಮಾಡಲು ನಿರ್ಮಾಣ ಸಂಸ್ಥೆ ನಿರ್ಧರಿಸಿದ್ದು, ಮತ್ತೆ ಹೊಸದಾಗಿ ಚಿತ್ರೀಕರಣ ಮಾಡಲು ಪ್ಲಾನ್ ಮಾಡಿದೆ.
ಕಾರ್ತಿಕ್ ಆರ್ಯನ್ ವರ್ತನೆಯಿಂದ ಬೇಸತ್ತಿರುವ ಧರ್ಮ ಸಂಸ್ಥೆ ಇನ್ಮುಂದೆ ಕಾರ್ತಿಕ್ ಆರ್ಯನ್ ಜೊತೆ ಸಿನಿಮಾ ಮಾಡದೆ ಇರಲು ನಿರ್ಧರಿಸಿದ್ದಾರಂತೆ. ಧರ್ಮ ಸಂಸ್ಥೆಯಲ್ಲಿ ಈ ರೀತಿ ಆಗಿರುವುದು ಇದೇ ಮೊದಲು ಎನ್ನುವ ಮಾತುಗಳು ಕೇಳಿಬರುತ್ತಿದೆ.

ಸದ್ಯ ಬ್ಲಾಕ್ ಲಿಸ್ಟ್ ನಲ್ಲಿರುವ ಕಾರ್ತಿಕ್ ಆರ್ಯನ್ ಅವರ ಮುಂದಿನ ನಿರ್ಧಾರ ಏನಾಗಿರಲಿದೆ ಎನ್ನುವುದು ಅಭಿಮಾನಿಗಳ ಕುತೂಹಲ. ಅಂದಹಾಗೆ ಸುಶಾಂತ್ ಸಿಂಗ್ ಸಾವಿನ ಬಳಿಕ ಧರ್ಮ ಸಂಸ್ಥೆ ವಿರುದ್ಧ ಸಾಕಷ್ಟು ಆರೋಪಗಳು ಕೇಳಿಬಂದಿತ್ತು, ಅಲ್ಲದೆ ಕರಣ್ ಜೋಹರ್ ವಿರುದ್ಧ ನೆಟ್ಟಿಗರು ಮುಗಿಬಿದ್ದರು. ಈ ನಡುವೆಯೂ ಸಿನಿಮಾಗಳನ್ನು ಮಾಡುತ್ತಾ ಚೇತರಿಸಿಕೊಳ್ಳುತ್ತಿರುವ ಧರ್ಮ ಸಂಸ್ಥೆ ಈ ಸಮಯದಲ್ಲಿ ಕಾರ್ತಿಕ್ ಆರ್ಯನ್ ಅವರನ್ನು ಹೊರ ಹಾಕುತ್ತಾರಾ ಎಂದು ಕಾದುನೋಡಬೇಕು.
ದೋಸ್ತಾನ-2 2019ರಲ್ಲಿ ಸೆಟ್ಟೇರಿದೆ. ಚಿತ್ರದಲ್ಲಿ ಜಾಹ್ನವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಲಿನ್ ಡಿ ಕುನ್ಹಾ ಸಾರಥ್ಯದಲ್ಲಿ ಸಿನಿಮಾ ಮೂಡಿಬರುತ್ತಿದೆ. ದೋಸ್ತಾನ ಮೊದಲ ಭಾಗದಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ಮಿಂಚಿದ್ದರು. ಜಾನ್ ಅಬ್ರಹಾಂ ಮತ್ತು ಅಭಿಷೇಕ್ ಬಚ್ಚನ್ ಮುಖ್ಯ ಭೂಮಿಕೆಯಲ್ಲಿದ್ದರು. ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿದ್ದ ಈ ಸಿನಿಮಾದ 2ನೇ ಆವೃತ್ತಿ ತೆರೆಮೇಲೆ ಬರಲು ಸಜ್ಜಾಗಿತ್ತು. ಆದರೀಗ ನಾಯಕನ ಬದಲಾವಣೆಯಲ್ಲಿದೆ ಸಿನಿಮಾತಂಡ.


Click it and Unblock the Notifications











