ಹಿಂದಿ ಬಿಗ್‌ಬಾಸ್ ಕಿರೀಟ ಮುಡಿಗೇರಿಸಿಕೊಂಡ ಕರಣ್ ಮೆಹ್ರಾ; ಸಿಕ್ಕ ಪ್ರೈಜ್ ಮನಿ ಎಷ್ಟು?
ಬಿಗ್‌ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆಗೆ ಇನ್ನೊಂದು ವಾರ ಬಾಕಿಯಿದೆ. ಅತ್ತ ಹಿಂದಿ ಬಿಗ್‌ಬಾಸ್ ಸೀಸನ್ 18 ಮುಕ್ತಾಯವಾಗಿದೆ. ಗ್ರ್ಯಾಂಡ್ ಫಿನಾಲೆಯಲ್ಲಿ ನಟ ಕರಣ್ ವೀರ್ ಮೆಹ್ರಾ ಗೆದ್ದು ಬೀಗಿದ್ದಾರೆ. ವಿವಿಯನ್ ಡಿಸೆನಾ ಮೊದಲ ರನ್ನರ್ ಅಪ್ ಆಗಿದ್ದಾರೆ. ಅಂತಿಮವಾಗಿ ಕರಣ್ ಎಡಗೈಯನ್ನು ಸಲ್ಮಾನ್ ಖಾನ್ ಮೇಲೆತ್ತಿ ವಿಜೇತ ಎಂದು ಘೋಷಿಸಿದರು.
ಕಳೆದ ವರ್ಷ ಅಕ್ಟೋಬರ್ 6ರಂದು ಶೋ ಆರಂಭವಾಗಿತ್ತು. ಒಟ್ಟು 23 ಜನ ಸ್ಪರ್ಧಿಗಳು ದೊಡ್ಮನೆ ಒಳಗೆ ಪ್ರವೇಶಿಸಿದ್ದರು. 6 ಜನ ಗ್ರ್ಯಾಂಡ್ ಫಿನಾಲೆ ವರೆಗೂ ಬಂದಿದ್ದರು. ರಜತ್ ಎರಡನೇ ರನ್ನರ್ ಅಪ್ ಎನಿಸಿಕೊಂಡರು. ಕ್ರಮವಾಗಿ ಅವಿನಾಶ್, ಚುಮ್, ಏಶಾ 4, 5, 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಈ 6 ಮಂದಿ 107 ದಿನಗಳ ಕಾಲ ಬಿಗ್‌ಬಾಸ್ ಮನೆಯಲ್ಲಿ ಇದ್ದರು. ವೀಕ್ಷಕರನ್ನು ರಂಜಿಸಿದರು.

'ಪವಿತ್ರ ರಿಷ್ಟಾ' ಧಾರಾವಾಹಿಯಲ್ಲಿ ನಟಿಸಿ ಕರಣ್ ಮೋಡಿ ಮಾಡಿದ್ದರು. 'ರಾಗಿಣಿ ಎಂಎಂಎಸ್-'2' ಚಿತ್ರದಲ್ಲಿ ಕೂಡ ಬಣ್ಣ ಹಚ್ಚಿದ್ದರು. ಬಿಗ್‌ಬಾಸ್‌ಗೂ ಮುನ್ನ ಕರಣ್ 'ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ 14' ಶೋ ವಿಜೇತರಾಗಿದ್ದರು. 'ಟೈಮ್ ಕಾ ತಾಂಡವ್' ಥೀಮ್‌ನಲ್ಲಿ ಈ ಬಾರಿ ಸೀಸನ್ ನಡೆಯಿತು.
ಕಳೆದ ಸೀಸನ್‌ನಲ್ಲಿ ಮುನಾವರ್ ಫರೂಕ್ ಬಿಗ್‌ಬಾಸ್ ಟ್ರೋಫಿ ಎತ್ತಿ ಹಿಡಿದಿದ್ದರು. ಅವರಿಗೆ 50 ಲಕ್ಷ ರೂ. ಪ್ರೈಜ್ ಮನಿ ಸಿಕ್ಕಿತ್ತು. 16ನೇ ಸೀನಸ್ ವಿಜೇತ ಎಂ. ಸಿ ಸ್ಟಾಲಿನ್ 31.8 ಲಕ್ಷ ರೂ. 15ನೇ ಸೀಸನ್ ವಿಜೇತೆ ತೇಜಸ್ವಿ ಪ್ರಕಾಶ್ 40 ಲಕ್ಷ ರೂ. 14ನೇ ಸೀಸನ್‌ನಲ್ಲಿ ಗೆದ್ದಿದ್ದ ರುಬಿನಾ ದಿಲೈಕ್ 36 ಲಕ್ಷ ರೂ. 13ನೇ ಸೀಸನ್ ವಿಜೇತ ಸಿದ್ದಾರ್ಥ್ ಶುಕ್ಲಾ 50 ಲಕ್ಷ ರೂ. ಅದಕ್ಕೂ ಹಿಂದಿನ ಸೀಸನ್‌ನಲ್ಲಿ ದೀಪಿಕಾ ಕಕ್ಕರ್ 30 ಲಕ್ಷ ರೂ. ಬಹುಮಾನವಾಗಿ ಪಡೆದಿದ್ದರು.
ಭಾರೀ ಪೈಪೋಟಿ ನಡುವೆ ಕರಣ್ ವೀರ್ ಮೆಹ್ರಾ ಬಿಗ್‌ಬಾಸ್ ಟ್ರೋಫಿ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಆತನ ಗೆಲುವಿಗೆ ಅಭಿಮಾನಿಗಳು ಅಭಿನಂದನೆಯ ಮಹಾಪೂರವನ್ನೇ ಹರಿಸಿದ್ದಾರೆ. ಕರಣ್ ಕುಟುಂಬ ಸದಸ್ಯರು ಬಹಳ ಸಂತಸ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಸಾಕಷ್ಟು ಕಷ್ಟ, ಅವಮಾನ, ನೋವು ಎದುರಿಸಿ ಕರಣ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ.
2005ರಲ್ಲಿ ರೀಮಿಕ್ಸ್ ಡ್ರಾಮಾ ಶೋ ಮೂಲಕ ಕರಣ್ ನಟನೆ ಆರಂಭಿಸಿದ್ದರು. 'ಬೀವಿ ಔರ್ ಮೇ' ಕಾಮಿಡಿ ಸೀರಿಸ್‌ನಲ್ಲಿ ಕೂಡ ಮಿಂಚಿದ್ದರು. 'ರಾಗಿಣಿ ಎಂಎಂಎಸ್-2' ಜೊತೆಗೆ 'ದ್ರೋಣ', 'ಮೇರೆ ಡ್ಯಾಡಿ ಕಿ ಮಾರುತಿ', 'ಬ್ಲಡ್ ಮನಿ', 'ಬದ್ಮಾಶಿಯಾನ್' ಹಾಗೂ 'ಆಮೆನ್' ಸಿನಿಮಾಗಳಲ್ಲಿ ಕರಣ್ ವೀರ್ ಮೆಹ್ರಾ ನಟಿಸಿದ್ದಾರೆ.
ದೆಹಲಿಯಲ್ಲಿ ಹುಟ್ಟಿದ ಕರಣ್ ಮಸೂರಿಗೆ ಓದಿ ಬರೆದರು. ಬಳಿಕ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ದೆಹಲಿಗೆ ಮರಳಿದರು. ತಂದೆ ಉದ್ಯಮಿ ಆಗಿದ್ದರು. ಕಾಲೇಜಿನಲ್ಲಿ ರಂಗಭೂಮಿಯತ್ತ ಕರಣ್‌ಗೆ ಒಲವು ಮೂಡಿತ್ತು. ಪಾರ್ಟ್‌ಟೈಮ್ ಕೆಲಸ ಮಾಡಲು ಆರಂಭಿಸಿದರು. ದೇವಿಕಾ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. 2018ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು.
4 ವರ್ಷಗಳ ಹಿಂದೆ ನಿಧಿ ಶೇಠ್ ಎಂಬಾಕೆಯನ್ನು ಕರಣ್ 2ನೇ ಮದುವೆ ಆಗಿದ್ದರು. ಎರಡು ವರ್ಷಗಳ ಬಳಿಕ ಭಿನ್ನಾಭಿಪ್ರಾಯಗಳಿಂದ ಆಕೆಗೂ ಡಿವೋರ್ಸ್ ನೀಡಿ ದೂರಾಗಿದ್ದಾರೆ. 'ವಿರುದ್ಧ್', 'ಪರಿ ಹೂನ್ ಮೇನ್', 'ಬೆಹೆನಿಯೇನ್', 'ಅಮ್ರಿನ್ ಮಂಥನ್', 'ಕ್ಯಾರಿ ಆನ್ ಆಲಿಯಾ', 'ವೋ ತೋ ಹೈ ಅಲ್‌ಬೆಲಾ', 'ಜಿದ್ದಿ ದಿಲ್ ಮಾನೆನಾ' ಹೀಗೆ ಹಲವು ಹಿಂದಿ ಕಿರುತೆರೆ ಕಾರ್ಯಕ್ರಮಗಳಲ್ಲಿ ಕರಣ್ ನಟಿಸಿದ್ದಾರೆ.


Click it and Unblock the Notifications











