ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಕಲ್ಯಾಣೋತ್ಸವಕ್ಕೆ ವರ್ಷ; ಹಾಲಿವುಡ್ ತಾರೆಯರಿಂದ ಜಗಮಗಿಸಿದ್ದ ಮಹೋತ್ಸವ
ಬಾಲ್ಯದ ಗೆಳೆಯರಾಗಿದ್ದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಬಳಿಕ ಪ್ರೀತಿಸಿ, ಸರಿಯಾಗಿ ವರ್ಷದ ಹಿಂದೆ (ಜುಲೈ 12), ಮುಂಬೈನಲ್ಲಿ ಹೊಸಜೀವನ ಪ್ರಾರಂಭಿಸಿದ್ದರು. ಇದು ಜಗತ್ತನ್ನೇ ಬೆರಗುಗೊಳಿಸಿದ ಸಮಾಗಮವಾಗಿತ್ತು. ಇವರ ವಿವಾಹದ ಸ್ಟೋರಿ ಬುಕ್ ಹೂವಿನ ಮಂಟಪ, ರಂಗೇರಿದ ಕಾರ್ಯಕ್ರಮಗಳಿಂದ ಹಿಡಿದು ಗಣ್ಯರ ಆಶೀರ್ವಾದಗಳು ಹಾಗೂ ಸಂತೋಷದ ವಿದಾಯಗಳವರೆಗೆ, ಪ್ರತಿ ಕ್ಷಣವೂ ವೈಭವವನ್ನು ಮೀರಿ ನಿಜವಾದ ಪ್ರೀತಿ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಧ್ವನಿಸುತ್ತಾ ಸೊಬಗಿನಿಂದ ರಂಗೇರಿತ್ತು. ಅದು ಕಲ್ಯಾಣೋತ್ಸವಕ್ಕಿಂತ ಮಿಗಿಲಾಗಿತ್ತು ಎಂದರೆ ನಂಬಲೇಬೇಕು. ಇವರ ಮದುವೆ ಸಾಂಸ್ಕೃತಿಕ ಹೆಗ್ಗುರುತಾಗಿತ್ತು. ಮುಂಬೈ ಪ್ರೀತಿ, ಗ್ಲಾಮರ್ ಮತ್ತು ಪರಂಪರೆಯ ಜಾಗತಿಕ ರಾಜಧಾನಿಯಾಗಿ ಬದಲಾದ ಕ್ಷಣ ಅದು. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಸಮ್ಮಿಲನ ಕೇವಲ ಎರಡು ಹೃದಯಗಳನ್ನು ಒಟ್ಟುಗೂಡಿಸಿದ್ದು ಮಾತ್ರವಲ್ಲ ಇದು ವಿಶ್ವದ ಅತ್ಯಂತ ಪ್ರತಿಭಾನ್ವಿತ ವ್ಯಕ್ತಿಗಳ ಕಣ್ಣು ಮತ್ತು ಹೆಜ್ಜೆಗಳನ್ನು ಸೆಳೆದ ಸಂಭ್ರಮವಾಗಿತ್ತು.
ಜಾಮ್‌ನಗರದಲ್ಲಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ 3 ದಿನಗಳ ವಿವಾಹ ಪೂರ್ವ ಆಚರಣೆಗಳಿಂದ ಹಿಡಿದು, ಅಂತಿಮವಾಗಿ ಮುಂಬೈನ ಬಿಕೆಸಿಯಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅದ್ದೂರಿಯಾಗಿ ನಡೆದ ಶುಭ ವಿವಾಹದವರೆಗೆ, ಆಚರಣೆಗಳು ಕನಸಿನಂತೆ ಇದ್ದವು. ಅನಂತ್-ರಾಧಿಕಾ ಅವರ ವಿವಾಹ ಪೂರ್ವ ಆಚರಣೆಗಳು ಸೇರಿದಂತೆ ಅವರ ಅದ್ಧೂರಿ ವಿವಾಹದ ಪ್ರಮುಖ ಹೈಲೈಟ್ ಏನು ಗೊತ್ತಾ? ನಿಸ್ಸಂದೇಹವಾಗಿ ಈ ದುಬಾರಿ ಮದುವೆಯಲ್ಲಿ ಬಾಲಿವುಡ್ ಹಾಗೂ ಹಾಲಿವುಡ್ ಒಂದಾಗಿ ಮ್ಯಾಜಿಕ್ ಕ್ರಿಯೇಟ್ ಆಗಿತ್ತು. ಇಂಟರ್ನೆಟ್ ಅನ್ನು ಶೇಕ್ ಮಾಡಿತ್ತು.

ಲವ್ಲಿ ಕಪಲ್ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ (ಜುಲೈ 12, 2025) ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ಭವ್ಯವಾಗಿ ಆಯೋಜಿಸಿದ್ದ ಆ ಮರೆಯಲಾಗದ ದಿನಗಳನ್ನು ಮೆಲುಕು ಹಾಕೋಣ. ಜಗತ್ತಿನ ಖ್ಯಾತನಾಮರು ಈ ವಿವಾಹ ಮಹೋತ್ಸವಕ್ಕೆ ಹಾಜರಾಗಲು ಬಂದಿಳಿದಿದ್ದರು. ಉತ್ತರ, ಪಶ್ಚಿಮ, ಪೂರ್ವ ಮತ್ತು ದಕ್ಷಿಣದ ಸಿನಿಮೀಯ ಕೂಟ ಎಂದು ಮಾತ್ರ ವಿವರಿಸಬಹುದಾದ ಒಂದು ಸಮಾರಂಭದಲ್ಲಿ, ಅಂಬಾನಿ-ಮರ್ಚೆಂಟ್ ಅದ್ಧೂರಿ ಬಾಲಿವುಡ್ ಹಾಗೂ ಹಾಲಿವುಡ್ ಒಂದಾಗಿತ್ತು. ಅದು ಪರದೆಯ ಮೇಲೆ ಅಲ್ಲ, ಬದಲಿಗೆ ಉತ್ಸಾಹ, ನೃತ್ಯ ಮತ್ತು ನಿಜವಾದ ಆಚರಣೆಯಲ್ಲಿ ಎನ್ನಬಹುದು.
ಸಂಗೀತ್ ವೇದಿಕೆಯಿಂದ ಮದುವೆ ಮಂಟಪದವರೆಗೆ, ಪ್ರತಿಯೊಂದು ಮೂಲೆಯೂ ಜಾಗತಿಕ ಗ್ಲಾಮರ್ ಹಾಗೂ ಸಾಂಸ್ಕೃತಿಕ ಸಮ್ಮಿಲನವಾಗಿತ್ತು. ಅವರ ವಿವಾಹವು ನಿಜಕ್ಕೂ ಒಂದು ಅದ್ದೂರಿ ಸಮಾರಂಭವಾಗಿತ್ತು. ಭಾರತ ಮತ್ತು ಯುರೋಪಿನಾದ್ಯಂತ ಹಲವಾರು ಅದ್ದೂರಿ ಕಾರ್ಯಕ್ರಮಗಳು, ಗ್ಲಾಮರಸ್ ಕಾಸ್ಟ್ಯೂಮ್ಸ್ ಮತ್ತು ಆಭರಣಗಳನ್ನು ಪ್ರದರ್ಶಿಸುವ ಐಷಾರಾಮಿ ಫ್ಯಾಷನ್ ಗಾಲಾ ಮತ್ತು ಜಸ್ಟಿನ್ ಬೈಬರ್, ಕೇಟಿ ಪೆರ್ರಿ ಮತ್ತು ರಿಹಾನ್ನಾ ಅವರಂತಹ ಅಂತರಾಷ್ಟ್ರೀಯ ಸೆಲೆಬ್ರಿಟಿಗಳ ಜೊತೆಗೆ ಭಾರತೀಯ ತಾರೆಯರ ಪರ್ಫಾರ್ಮನ್ಸ್‌ಗಳಿಂದ ರಂಜಿಸಿತ್ತು.
ರಿಹಾನ್ನಾ ರಾಕ್ಸ್: ಜಾಮ್‌ನಗರ ಪ್ರೀ-ವೆಡ್ಡಿಂಗ್ ಬ್ಯಾಷ್
2024ರ ಮಾರ್ಚ್‌ನಲ್ಲಿ ಅನಂತ್-ರಾಧಿಕಾ ಅವರ ಜಾಮ್‌ನಗರ ಪ್ರೀ-ವೆಡ್ಡಿಂಗ್ ಈವೆಂಟ್‌ನಲ್ಲಿ ರಿಹಾನ್ನಾ ಅಪರೂಪದ ಪರ್ಫಾರ್ಮನ್ಸ್‌ಗಳಿಂದ ಜಗತ್ತನ್ನು ಬೆರಗುಗೊಳಿಸಿದ್ದು ನೆನಪಿದೆಯೇ? ಹೊಳೆಯುವ ಮನೀಶ್ ಮಲ್ಹೋತ್ರಾ ಉಡುಪಿನಲ್ಲಿ, ಹಲವು ವರ್ಷಗಳಲ್ಲಿ ಮೊದಲ ಬಾರಿಗೆ ಅವರು ಆ ಪರ್ಫಾರ್ಮನ್ಸ್ ನೀಡಿದರು. ಬಾಲಿವುಡ್ ಸ್ಟೈಲ್ ಡ್ಯಾನ್ಸ್ ಮೂವ್ಸ್‌ನಿಂದ ಕಮಾಲ್ ಮಾಡಿದ್ದರು. ಇದು ಅವರ ಅಭಿಮಾನಿಗಳನ್ನು ಹುಚ್ಚೆಬ್ಬಿಸಿತ್ತು. "ಡೈಮಂಡ್ಸ್" ಹಾಗೂ "ವಿ ಫೌಂಡ್ ಲವ್" ರೀತಿಯ ಬೊಂಬಾಟ್ ಪರ್ಫಾರ್ಮನ್ಸ್‌ನಿಂದ ಅವರು ವೇದಿಕೆಯನ್ನು ರಂಗೇರಿಸಿದ್ದರು. ಅಂಬಾನಿ ಕುಟುಂಬದೊಂದಿಗೆ ಅವರ ಆತ್ಮೀಯ ಮಾತುಕತೆ, ನಮ್ಮ ಬಾಲಿವುಡ್ ತಾರೆಗಳೊಂದಿಗೆ ಅವರ ಸಹಕಾರ ಮತ್ತು ಭಾರತೀಯ ಆತಿಥ್ಯಕ್ಕಾಗಿ ಅವರ ಹೊಗಳಿಕೆ ಹೃದಯಗಳನ್ನು ಗೆದ್ದಿತು.

ಕ್ರೂಸ್ ಪಾರ್ಟಿಯಲ್ಲಿ ಕೇಟಿ ಪೆರ್ರಿ, ಬ್ಯಾಕ್‌ಸ್ಟ್ರೀಟ್ ಬಾಯ್ಸ್ ಮತ್ತು ಪಿಟ್‌ಬುಲ್
ಮುಂಬೈನಲ್ಲಿ ನಡೆದ ಅದ್ದೂರಿ ವಿವಾಹ ಸಮಾರಂಭಕ್ಕೂ ಮುನ್ನ ಅಂಬಾನಿ ದಂಪತಿಗಳು ಇಟಲಿ ಮತ್ತು ಫ್ರಾನ್ಸ್‌ನಾದ್ಯಂತ ಅತಿ-ಐಷಾರಾಮಿ ಕ್ರೂಸ್ ಪಾರ್ಟಿ ಅನ್ನು ಆಯೋಜಿಸಿದರು. ಕೇಟಿ ಪೆರ್ರಿ ಫ್ರೆಂಚ್ ರಿವೇರಿಯಾ ಸುಂದರ ರಾತ್ರಿಯನ್ನು ಮತ್ತಷ್ಟು ಆವರಿಸಿಕೊಂಡಿದ್ದರು. ಆದರೆ ಬ್ಯಾಕ್‌ಸ್ಟ್ರೀಟ್ ಬಾಯ್ಸ್ ಮೂರು ತಲೆಮಾರುಗಳನ್ನು ಒಳಗೊಂಡಂತೆ 90ರ ದಶಕದ ನೆನಪುಗಳನ್ನು ಅತಿಥಿಗಳಿಗಾಗಿ ಜೀವಂತಗೊಳಿಸಿದರು. ಕೊನೆಯದಾಗಿ ಅದರಲ್ಲೂ ಮುಖ್ಯವಾಗಿ, ಅಮೇರಿಕನ್ ರ‍್ಯಾಪರ್-ಗಾಯಕ ಪಿಟ್‌ಬುಲ್ ತಮ್ಮ ಅದ್ಭುತ ಪರ್ಫಾಮನ್ಸ್ ಮೂಲಕ ಡೆಕ್ ಅನ್ನು ತೇಲುವ ನೈಟ್‌ಕ್ಲಬ್ ಆಗಿ ಪರಿವರ್ತಿಸಿದರು.
ಸಂಗೀತ್ ರಂಗೇರಿಸಿದ ಜಸ್ಟಿನ್ ಬೀಬರ್
ಪ್ರೀ-ವೆಡ್ಡಿಂಗ್‌ನಲ್ಲಿ ಕಾರ್ಯಕ್ರಮದಲ್ಲಿ ಸಂಗೀತ್ ಪಾರ್ಟಿಯಲ್ಲಿ ಜಸ್ಟಿನ್ ಬೀಬರ್ ಸರ್‌ಪ್ರೈಸ್ ಪರ್ಫಾರ್ಮನ್ಸ್ ಮೈಜುಮ್ ಎನಿಸುವಂತಿತ್ತು. ರಿಲ್ಯಾಕ್ಸ್ಡ್ ಸ್ಟ್ರೀಟ್‌ವೇರ್‌ನಲ್ಲಿ ಬೀಬರ್ 'ಬೇಬಿ' ಮತ್ತು 'ಪೀಚ್ಸ್'ನಂತಹ ಹಿಟ್ಸ್ ಮೂಲಕ ವೇದಿಕೆಯನ್ನು ಕನ್ಸರ್ಟ್ ಹಾಲ್ ಆಗಿ ಪರಿವರ್ತಿಸಿದ್ದರು. ಅವರು ಅತಿಥಿಗಳೊಂದಿಗೆ ನೃತ್ಯ ಮಾಡುತ್ತಿರುವ ವೀಡಿಯೊಗಳು ನಿಮಿಷಗಳಲ್ಲಿ ವೈರಲ್ ಆದವು. ಇದು ಬರೀ ಕ್ಯಾಮಿಯೋ ಆಗಿರಲಿಲ್ಲ. ಜಾಗತಿಕ ಪಾಪ್ ಅನ್ನು ಭಾರತೀಯ ಉತ್ಸವದೊಂದಿಗೆ ಬೆರೆಸುವ ಅದ್ಭುತ ಸಂಗೀತ ಅನುಭವವಾಗಿತ್ತು.

ಕಾರ್ದಶಿಯಾನ್ ಸಹೋದರಿಯರ ಫ್ಯಾಷನ್ ಪರೇಡ್
ಕಿಮ್ ಕಾರ್ಡಶಿಯಾನ್ ಮತ್ತು ಕ್ಲೋಯ್ ಕಾರ್ಡಶಿಯಾನ್ ಭಾರತಕ್ಕೆ ಬಂದಾಗ, ಮನೀಶ್ ಮಲ್ಹೋತ್ರಾ ಡಿಸೈನ್ ಮಾಡಿದ್ದ ಕೌಚರ್ ಲೆಹೆಂಗಾಗಳನ್ನು ಧರಿಸಿ, ಹೈ-ಫ್ಯಾಶನ್ ಫ್ಯಾಂಟಸಿಯಿಂದ ಹೊರಬಂದಂತೆ ಇತ್ತು. ಭಾರತೀಯ ಪಾರಂಪರೆಯ ಆಭರಣ ವ್ಯಾಪಾರಿಗಳಿಂದ ಪಚ್ಚೆ ಮತ್ತು ವಜ್ರದ ವಡವೆಗಳಿಂದ ಸಿಂಗಾರಗೊಂಡಿದ್ದ ಅವರು ಮೆಹೆಂದಿ ಮತ್ತು ರಿಸೆಪ್ಷನ್‌ಗೆ ರಂಗು ತುಂಬಿದ್ದರು. ಚಿನ್ನದ-ಕಸೂತಿ ಇರುವ ಸೀರೆ-ಶೈಲಿಯ ಗೌನ್‌ನಲ್ಲಿ ಕಿಮ್ ಅವರ ರಿಸೆಪ್ಷನ್ ಲುಕ್ ಬಗ್ಗೆ ಬಹಳ ಚರ್ಚೆಯಾಗಿದ್ದ ಲುಕ್‌ಗಳಲ್ಲಿ ಒಂದಾಗಿತ್ತು. ಪಾಶ್ಚಾತ್ಯ ಸುಂದರಿಯರನ್ನು ದೇಸಿ ಸಂಪ್ರದಾಯದೊಂದಿಗೆ ಸರಾಗವಾಗಿ ಬೆರೆಸಿದಂತಿತ್ತು.
ಒಮ್ಮೆ ಹಿಂತಿರುಗಿ ನೋಡಿದರೆ, ಅನಂತ್ ಮತ್ತು ರಾಧಿಕಾ ಅವರ ವಿವಾಹವು ಕೇವಲ ಇಬ್ಬರ ಆಚರಣೆಯಾಗಿರಲಿಲ್ಲ. ಭಾರತವು ತನ್ನ ಆತ್ಮವನ್ನು ಜಗತ್ತಿಗೆ ಪ್ರದರ್ಶಿಸಿದ ಕ್ಷಣವಾಗಿತ್ತು. ಜಗತ್ತು ವಿಸ್ಮಯ, ಗೌರವ ಮತ್ತು ಹೃದಯಪೂರ್ವಕವಾಗಿ ಪಾಲ್ಗೊಂಡು ಸಂಭ್ರಮಿಸಿತ್ತು.


Click it and Unblock the Notifications











