ಸೆಕ್ಸ್ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದೆ: ಕರೀನಾ ಕಪೂರ್
ನಟಿ ಕರೀನಾ ಕಪೂರ್ ಎರಡನೇ ಮಗುವಿಗೆ ತಾಯಿಯಾಗಿ ಕೆಲವು ತಿಂಗಳಷ್ಟೆ ಆಗಿದೆ. ಗರ್ಭಿಣಿ ಆದಾಗಿನ ತಮ್ಮ ಅನುಭವಗಳನ್ನೆಲ್ಲ ಸೇರಿಸಿ ಪುಸ್ತಕವನ್ನೇ ರಚಿಸಿ ಬಿಡುಗಡೆ ಮಾಡಿದ್ದಾರೆ ಕರೀನಾ.
ಇದೀಗ ಗರ್ಭಿಣಿ ಆದಾಗಿನ ಅನುಭವಗಳ ಬಗ್ಗೆ ಮಾತನಾಡಿರುವ ಕರೀನಾ ಕಪೂರ್, ಎರಡನೇ ಬಾರಿ ಗರ್ಭಿಣಿ ಆದಾಗ ತಮಗೆ ಲೈಂಗಿಕತೆ ಮೇಲೆ ಆಸಕ್ತಿ ಹೊರಟು ಹೋಗಿತ್ತು ಎಂದು ಹೇಳಿಕೊಂಡಿದ್ದಾರೆ.
ಗರ್ಭಿಣಿ ಆದಾಗ ಮಹಿಳೆಯರಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ, ವರ್ತನೆಯಲ್ಲಿ ಬದಲಾವಣೆ, ಬೇಗ ಅಲರ್ಜಿ ಆಗುವುದು, ತಲೆ ನೋವು, ಅತಿಯಾದ ವಾಂತಿ, ಮೈ-ಕೈ ಊತ, ವಾಸನೆ ತಡೆಯಲಾಗದೇ ಇರುವುದು ಹೀಗೆ ಹಲವು ಬದಲಾವಣೆಗಳನ್ನು ಮಹಿಳೆ ಗರ್ಭಿಣಿ ಆದಾಗ ಎದುರಿಸಬೇಕಾಗುತ್ತದೆ. ಅದರಲ್ಲಿ ಲೈಂಗಿಕತೆ ಮೇಲೆ ಆಸಕ್ತಿ ಕಳೆದುಕೊಳ್ಳುವುದು ಸಹ ಒಂದು ಈ ವಿಷಯದ ಬಗ್ಗೆ ಹೆಚ್ಚು ಚರ್ಚೆ ನಡೆದಿಲ್ಲ ಅದರ ಬಗ್ಗೆ ನಟಿ ಕರೀನಾ ಧೈರ್ಯದಿಂದ ಮಾತನಾಡಿದ್ದಾರೆ.
ಎರಡನೇ ಮಗುವಿಗೆ ಗರ್ಭಿಣಿ ಆಗಿದ್ದಾಗ ನಾನು ಸಾಕಷ್ಟು ಮೂಡ್ ಸ್ವಿಂಗ್ಸ್ ಅನುಭವಿಸಿದೆ. ಲೈಂಗಿಕತೆ ಬಗ್ಗೆ ಆಸಕ್ತಿಯನ್ನೇ ಕಳೆದುಕೊಂಡಿದ್ದೆ. ಮೊದಲ ಮಗುವಿಗೆ ಗರ್ಭಿಣಿ ಆಗಿದ್ದಾಗಿಂತಲೂ ಭಿನ್ನ ಭಾವಗಳನ್ನು ಎರಡನೇ ಬಾರಿ ಗರ್ಭಿಣಿ ಆಗಿದ್ದಾಗ ಅನುಭವಿಸಿದೆ. ನನಗೆ ಎರಡೂ ಪ್ರೆಗ್ನೆಸ್ನಿಗಳು ಬಹಳ ಭಿನ್ನವಾಗಿದ್ದವು ಎಂದಿದ್ದಾರೆ ಕರೀನಾ ಕಪೂರ್. ನಿರ್ದೇಶಕ ಕರಣ್ ಜೋಹರ್ ಜೊತೆ ನಡೆಸಿದ ಆನ್‌ಲೈನ್ ಸಂವಾದದಲ್ಲಿ ಈ ವಿಷಯವನ್ನು ಕರೀನಾ ಬಿಚ್ಚಿಟ್ಟಿದ್ದಾರೆ.

ಬೆಂಬಲ ನೀಡುವ ಪತಿ ಇರಬೇಕು: ಕರೀನಾ
ಹಲವು ಮಹಿಳೆಯರಿಗೆ ಈ ಸಮಸ್ಯೆ ಬರುತ್ತದೆ. ನನಗೂ ಆಗಿತ್ತು, ಲೈಂಗಿಕತೆ ಮೇಲೆ ಪೂರ್ಣವಾಗಿ ಆಸಕ್ತಿ ಕಳೆದುಕೊಂಡಿದ್ದೆ. ಇದು ಸಾಮಾನ್ಯ ಸಹ. ಹಲವು ಮಹಿಳೆಯರಿಗೆ ಹೀಗೆ ಆಗುತ್ತದೆ. ಆದರೆ ಈ ಬಗ್ಗೆ ಪತಿಯೊಂದಿಗೆ ಚರ್ಚೆ ಮಾಡಿದರೆ ಉತ್ತಮ. ಈ ಸಮಯದಲ್ಲಿ ನನಗೆ ಸೈಫ್ ಬಹಳ ಬೆಂಬಲ ನೀಡಿದ. ಗರ್ಭಿಣಿ ಮಹಿಳೆಯರಿಗೆ ಚೆನ್ನಾಗಿ ಬೆಂಬಲ ನೀಡುವ, ಅವರ ಕಷ್ಟ-ಸುಖ ಅರಿತುಕೊಳ್ಳುವ ಪತಿ ಇರಲೇ ಬೇಕಾಗುತ್ತದೆ. ಇಲ್ಲವಾದರೆ ಸಮಸ್ಯೆ ಆಗಬಹುದು'' ಎಂದಿದ್ದಾರೆ ನಟಿ ಕರೀನಾ.

ಬಹಳ ತಪ್ಪು ಕಲ್ಪನೆಗಳು ಇವೆ: ಕರೀನಾ
''ಗರ್ಭಿಣಿ ಮಹಿಳೆಯರು ಲೈಂಗಿಕತೆಯಲ್ಲಿ ತೊಡಗಿಕೊಳ್ಳುವ ಬಗ್ಗೆ ಹಲವು ತಪ್ಪುಗ್ರಹಿಕೆಗಳು ಇವೆ. ಇವನ್ನು ಮೊದಲು ದೂರ ಮಾಡಿಕೊಳ್ಳಬೇಕು. ಗರ್ಭಿಣಿ ಮಹಿಳೆಯರು ಲೈಂಗಿಕತೆಯಲ್ಲಿ ತೊಡಗಿಕೊಳ್ಳುವುದು ಬಹಳ ಸಾಮಾನ್ಯ ಮತ್ತು ಸ್ವಾಭಾವಿಕ ಕ್ರಿಯೆ ಆದರೆ ಕೆಲವು ಮುನ್ನೆಚ್ಚರಿಕೆಗಳು ಬಹಳ ಅಗತ್ಯ'' ಎಂದು ಸಲಹೆ ನೀಡಿದ್ದಾರೆ ಕರೀನಾ ಕಪೂರ್. ಹಲವು ಗರ್ಭಿಣಿ ಮಹಿಳೆಯರಿಗೆ ಲೈಂಗಿಕತೆ ಮೇಲೆ ಆಸಕ್ತಿ ಕಡಿಮೆ ಆಗುತ್ತದೆ, ಹಾಗೆಯೇ ಕೆಲವರಿಗೆ ಲೈಂಗಿಕತೆ ಮೇಲೆ ಆಸಕ್ತಿ ಹೆಚ್ಚೂ ಸಹ ಆಗುತ್ತದೆ'' ಎಂದಿದ್ದಾರೆ ಕರೀನಾ.

ಕರೀನಾ ಕಪೂರ್‌ಗೆ ಇಬ್ಬರು ಗಂಡು ಮಕ್ಕಳು
ಕರೀನಾ ಕಪೂರ್‌ಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮೊದಲ ಮಗುವಿಗೆ 2016ರಲ್ಲಿ ಜನ್ಮ ನೀಡಿದ ಕರೀನಾ ಕಪೂರ್, ಎರಡನೇ ಮಗುವಿಗೆ 2021ರಲ್ಲಿ ಜನ್ಮ ನೀಡಿದರು. ಮೊದಲ ಮಗುವಿಗೆ ತೈಮೂರ್ ಎಂದು ಹೆಸರಿಟ್ಟಿದ್ದ ಕರೀನಾ ಮತ್ತು ಸೈಫ್ ಎರಡನೇ ಮಗುವಿಗೆ ಜಹಾಂಗೀರ್ ಎಂದು ಹೆಸರಿಟ್ಟಿದ್ದಾರೆ. ಮಕ್ಕಳಿಗೆ ಹೆಸರಿಟ್ಟಾಗ ಕರೀನಾ ಹಾಗೂ ಸೈಫ್ ಜನರಿಂದ ಭಾರಿ ವಿರೋಧ ಎದುರಿಸಬೇಕಾಗಿ ಬಂತು. ತೈಮೂರ್ ಎಂಬುದು ವಿಸ್ತಾರವಾದಿ ಮುಸ್ಲಿಂ ರಾಜನ ಹೆಸರು ಅದನ್ನು ಮಗುವಿಗೆ ಇಟ್ಟಿದ್ದಾರೆ ಎಂದು ಜರಿದಿದ್ದರು ನೆಟ್ಟಿಗರು. ಜಹಾಂಗೀರ್ ಎಂದು ಹೆಸರಿಟ್ಟಾಗಲೂ ಹಲವಾರು ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ.

ಹಲವು ಸಿನಿಮಾಗಳು ಕರೀನಾ ಕೈಯಲ್ಲಿ
ಸಿನಿಮಾಗಳ ವಿಷಯಕ್ಕೆ ಮರಳುವುದಾದರೆ, ಕರೀನಾ ಕಪೂರ್, ಅಮೀರ್ ಖಾನ್ ಜೊತೆಗೆ 'ಲಾಲ್ ಸಿಂಗ್ ಛಡ್ಡಾ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕರೀನಾ ಗರ್ಭಿಣಿ ಆದ ಕಾರಣಕ್ಕೆ ಚಿತ್ರೀಕರಣ ತಡವಾಗಿದೆ. ಅದನ್ನು ಹೊರತುಪಡಿಸಿದರೆ, 'ವೀರ್ ದಿ ವೆಡ್ಡಿಂಗ್ 2', 'ಥಕ್ತ್' ಸಿನಿಮಾಗಳಲ್ಲಿಯೂ ಕರೀನಾ ನಟಿಸುತ್ತಿದ್ದಾರೆ. ಇದರ ನಡುವೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ನಿರ್ದೇಶಿಸಲಿರುವ ಸೀತೆ ಕುರಿತಾದ ಸಿನಿಮಾಕ್ಕೆ ಕರೀನಾ ಅವರನ್ನು ಕೇಳಲಾಗಿತ್ತು, ಆದರೆ ಕರೀನಾ ಭಾರಿ ದೊಡ್ಡ ಮೊತ್ತದ ಸಂಭಾವನೆ ಕೇಳಿದ ಕಾರಣ ಅವರನ್ನು ಕೈಬಿಟ್ಟು ಹೊಸಬರನ್ನು ಆಯ್ಕೆ ಮಾಡಲಾಗುತ್ತಿದೆ.


Click it and Unblock the Notifications











