Eid 2026 ; ಇಸ್ಲಾಂ ಧರ್ಮಕ್ಕೆ ಮತಾಂತರ ? ಸೈಫ್ ಅಲಿ ಖಾನ್‌ಗಾಗಿ ರಂಜಾನ್ ಉಪವಾಸ - ಹೇಳಿದ್ದೇನು ಕರೀನಾ ಕಪೂರ್ ?
ಭಾರತ ಹಲವು ಧರ್ಮ.. ಜಾತಿ.. ಮತ್ತು ಸಂಸ್ಕ್ರತಿಯ ತೊಟ್ಟಿಲು. ಇಲ್ಲಿ ಎಲ್ಲಾ ಧರ್ಮದವರು ತಮ್ಮದೇ ಆದ ಸಂಪ್ರದಾಯಗಳನ್ನು ಪಾಲಿಸುತ್ತಾರೆ. ತಮ್ಮ ತಮ್ಮ ಧರ್ಮಕ್ಕೆ ಅನುಗುಣವಾಗಿ ತಲತಲಮಾರುಗಳಿಂದ ರೂಢಿಸಿಕೊಂಡು ಬಂದ ಪದ್ದತಿಯ ಪ್ರಕಾರ ಮದುವೆಯನ್ನು .. ನಾಮಕರಣವನ್ನು.. ಸೀಮಂತ ಶಾಸ್ತ್ರವನ್ನು ಅಥವಾ ಹಬ್ಬ ಹರಿದಿನಗಳನ್ನು.. ಬೇರೆ ಬೇರೆ ಆಚರಣೆಗಳನ್ನು ಮಾಡುತ್ತಾರೆ.
ಇಂತಹ ಭಾರತ ದೇಶದಲ್ಲಿ ಹಲವರಿಗೆ ಚಿತ್ರರಂಗದವರ ಧಾರ್ಮಿಕ ನಂಬಿಕೆಯ ಕುರಿತು ಅನುಮಾನ ಇದೆ. ಅದರಲ್ಲಿಯೂ ಅಂತರಧರ್ಮೀಯ ಮದುವೆ ಆಗಿದ್ದರಂತೂ ಮುಗೀತು. ಇವರಾಚರಿಸುವ ಪ್ರತಿಯೊಂದು ಹಬ್ಬದ ಮೇಲೂ ಒಂದು ವರ್ಗ ನಿಗಾ ವಹಿಸಿರುತ್ತೆ.

ಯಾಕೆಂದರೆ.. ಪ್ರೀತಿಗಾಗಿ ತಮ್ಮ ಧರ್ಮವನ್ನೇ ಇವರು ತ್ಯಾಗ ಮಾಡಿರುತ್ತಾರೆ ಎನ್ನುವ ನಂಬಿಕೆ ಬಹುತೇಕ ಜನಸಾಮಾನ್ಯರಲ್ಲಿರುತ್ತೆ. ಉದಾಹರಣೆಗೆ ಇಸ್ಲಾಂ ಧರ್ಮದ ಪವಿತ್ರ ಮಾಸ ಆದ ರಂಜಾನ್ ಅಥವಾ ರಮದಾನ್ ಶುರುವಾದಾಗ ಕರೀನಾ ಕಪೂರ್ ಸುತ್ತ ಮುತ್ತ ನಡೆಯುವ ಚರ್ಚೆಗಳನ್ನೇ ತೆಗೆದುಕೊಳ್ಳಿ.
ಹೌದು, ಸೈಫ್ ಅಲಿ ಖಾನ್ ಜೊತೆ ಕರೀನಾ ಕಪೂರ್ ಮದುವೆಯಾಗಿ 14 ವರ್ಷಗಳಾಗಿವೆ. ಇವರ ಪ್ರೇಮ ಸಂಕೇತಕ್ಕೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ, ಇವತ್ತು ಕೂಡ ಕರೀನಾ ಕಪೂರ್ ಧರ್ಮದ ಕುರಿತು ಪ್ರಶ್ನೆ ಎದುರಾಗುತ್ತವೆ. ರಂಜಾನ್ ಹಬ್ಬದಂದು ಆಚರಣೆಯ ಕುರಿತು ಚರ್ಚೆ ಮಾಡಲಾಗುತ್ತೆ.
ಇದಕ್ಕೆ ಪುರಾವೆ ಎನ್ನುವಂತೆ ಕರೀನಾ ಕಪೂರ್ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ಧಾರೆ ಎನ್ನುವ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ತೇಲಿ ಬಿಡುವ ಕೆಲಸವನ್ನು ಹಲವರು ನಿಯತ್ತಾಗಿ ಮಾಡುತ್ತಾ ಬಂದಿದ್ದಾರೆ. ಕರೀನಾ ಕಪೂರ್ ಕೂಡ ರಂಜಾನ್ ಮಾಸದಂದು ಉಪವಾಸ (ರೋಜಾ) ಮಾಡುತ್ತಾರೆ ಎಂಬ ವಾದವನ್ನು ಮಾಡುತ್ತಾ ಬಂದಿದ್ದಾರೆ.
ಈ ವರ್ಷ ಕೂಡ ಇದರಿಂದ ಹೊರತಾಗಿಲ್ಲ. ರಂಜಾನ್ ಮಾಸ ಶುರುವಾದ ಬೆನ್ನಲ್ಲೇ ಹಲವರು ಇದೇ ವಿಚಾರವನ್ನು ಈಗ ಮತ್ತೆ ಚರ್ಚೆ ಮಾಡುತ್ತಿದ್ಧಾರೆ. ಇದಕ್ಕೆ ಪೂರಕವಾಗಿ ಕರೀನಾ ಕಪೂರ್ ತಮ್ಮ ಧರ್ಮ ಮತ್ತು ಆಚರಣೆಯ ಕುರಿತು ಹಿಂದೊಮ್ಮೆ ಮಾತನಾಡಿದ್ದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈರಲ್ ಆದ ಈ ವಿಡಿಯೋದಲ್ಲಿ ನೀವು ರೋಜಾ ಮಾಡುತ್ತೀರಾ ಎಂದು ಕೇಳಲಾದ ಪ್ರಶ್ನೆಗೆ ಕರೀನಾ ಕಪೂರ್, ನಾನು ಕಪೂರ್ ಕುಟುಂಬದವಳು, ನನಗೆ ತಿಂಡಿ-ಊಟ ಅಂದರೆ ಪಂಚ ಪ್ರಾಣ ಅಂದಿದ್ದಾರೆ. ನಾನು ದಿನದ 24 ಗಂಟೆ ಕೂಡ ತಿನ್ನುತ್ತಲೇ ಇರುತ್ತೇನೆ ಎಂದು ಹೇಳಿರುವ ಕರೀನಾ ಕಪೂರ್ ನಾನು ನನ್ನ ಜೀವನದಲ್ಲಿಯೇ ಯಾವತ್ತು ಉಪವಾಸ ಮಾಡಿಲ್ಲ, ಅದು ನನ್ನಿಂದ ಸಾಧ್ಯವೂ ಇಲ್ಲ ಎಂದು ಹೇಳಿದ್ಧಾರೆ.
ಸದ್ಯ ಕರೀನಾ ಕಪೂರ್ ಖಾನ್ ಅವರ ಈ ಹಳೆಯ ವಿಡಿಯೋ ಮತ್ತೆ ವೈರಲ್ ಆಗಿದ್ದು, ಹಲವರು ಕರೀನಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎನ್ನುವ ಚರ್ಚೆಯೇ ನಿರರ್ಥಕ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕರೀನಾ ಅಂದು ಮತ್ತು ಇಂದು ಅವರು ಹಿಂದೂ ಧರ್ಮವನ್ನೇ ಅನುಸರಿಸುತ್ತಿದ್ದಾರೆ ಆದರೂ ಯಾಕೆ ಅನುಮಾನ ಎಂದು ಚರ್ಚೆ ಮಾಡುತ್ತಿದ್ದಾರೆ.
ಇನ್ನುಳಿದಂತೆ ಕರೀನಾ ಕಪೂರ್ ಉಪವಾಸ ಮಾಡದಿದ್ದರೂ ಕೂಡ ರಂಜಾನ್ ಹಬ್ಬದ ಸಂಭ್ರಮದಲ್ಲಿ ಭಾಗವಹಿಸುತ್ತಾರೆ. ಪಟೌಡಿ ಮನೆಯಲ್ಲಿ ನಡೆಯುವ ಇಫ್ತಿಯಾರ್ ಕೂಟದಲ್ಲಿ ಸಕ್ರಿಯವಾಗಿರುತ್ತಾರೆ. ಹಿಂದೆ ಅವರೇ ಹೇಳಿದಂತೆ ರಂಜಾನ್ ಅವರ ಪಾಲಿಗೆ ಕೇವಲ ಹಬ್ಬವಲ್ಲ. ಬದಲಿಗೆ ಕುಟುಂಬದ ಎಲ್ಲ ಸದಸ್ಯರ ಜೊತೆ ಕಾಲ ಕಳೆಯಲು ಸಿಗುವ ಅಪರೂಪದ ಕ್ಷಣ. ಎಲ್ಲಕ್ಕಿಂತ ಹೆಚ್ಚಾಗಿ ಹಬ್ಬದ ಸಂಭ್ರಮದಲ್ಲಿ ಖಾನ್ ಮನೆಯಲ್ಲಿ ತಯಾರಾಗುವ ಭಕ್ಷ್ಯ ಭೋಜನ ಕರೀನಾ ಅವರಿಗೆ ತುಂಬಾ ಇಷ್ಟ. ಜವಾಬ್ದಾರಿಯುತ ಪತ್ನಿ ಮತ್ತು ತಾಯಿಯಾಗಿ ಕರೀನಾ ಕಪೂರ್ ಪ್ರತಿ ವರ್ಷ ಮನೆಯಲ್ಲಿ ಹಬ್ಬದ ವಾತಾವರಣವಿರುವಂತೆ ನೋಡಿಕೊಳ್ಳುತ್ತಾರೆ.
ಅಂದ್ಹಾಗೇ ''ಮೇಲ್ ಟುಡೇ'' ಪತ್ರಿಕೆಗೆ ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಸೈಫ್ ಅಲಿ ಖಾನ್ ತಮ್ಮ ಪ್ರೀತಿಗೆ ಯಾವತ್ತು ಧರ್ಮ ಅಡ್ಡಿಯಾಗಿಲ್ಲ ಎಂದು ಹೇಳಿದ್ದರು. ಮದುವೆಗಾಗಿ ಮತಾಂತರದಲ್ಲಿ ನನಗೆ ನಂಬಿಕೆ ಇಲ್ಲ ಎಂದು ಹೇಳಿದ್ದ ಸೈಫ್ ಅಲಿ ಖಾನ್ ಕರೀನಾ ಧರ್ಮ ಬದಲಿಸಬೇಕೆಂದು ನಾನು ಯಾವತ್ತು ಬಯಸಿಲ್ಲ, ಆ ಕುರಿತು ನಾವು ಚರ್ಚೆಯೂ ಮಾಡಿಲ್ಲ ಎಂದು ಹೇಳಿದ್ದರು.


Click it and Unblock the Notifications











