ಪ್ರಭಾಸ್, ಅಲ್ಲು ಅರ್ಜುನ್, ಚರಣ್ ಬೇಡ ಯಶ್ ಬೇಕು ಎಂದ ಕರೀನಾ ಕಪೂರ್
'KGF' ಸರಣಿ ಸಿನಿಮಾಗಳು ಬಂದು ಹೋಗಿ ಒಂದೂವರೆ ವರ್ಷ ಕಳೆದರು ರಾಕಿಭಾಯ್ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ. ಅಭಿಮಾನಿಗಳು ಯಶ್19 ಅಪ್‌ಡೇಟ್‌ಗಾಗಿ ಕಾದು ಕಾದು ಸುಸ್ತಾಗಿದ್ದಾರೆ. ರಾಕಿಂಗ್ ಸ್ಟಾರ್ ಮಾತ್ರ ತಮ್ಮ ನೆಕ್ಸ್ಟ್ ಪ್ರಾಜೆಕ್ಟ್ ಬಗ್ಗೆ ಮೌನ ಮುಂದುವರೆಸಿದ್ದಾರೆ.
ಸದ್ಯ ಹೊಂಬಾಳೆ ಸಂಸ್ಥೆಯ 'ಸಲಾರ್' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಚಿತ್ರದಲ್ಲಿ ಯಶ್ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ. 'ಸಲಾರ್' ಹಾಗೂ 'KGF' ಸರಣಿಗೆ ಲಿಂಕ್ ಇದೆ. ಪ್ರಶಾಂತ್ ನೀಲ್ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ ಎರಡೂ ಸಿನಿಮಾಗಳು ಬರ್ತಾವೆ ಎನ್ನುವುದು ಕೆಲವರ ಲೆಕ್ಕಾಚಾರ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಮಾತ್ರ ಸಿಕ್ಕಿಲ್ಲ.

ಕನ್ನಡದ ಹೆಮ್ಮೆ 'KGF' ಚಿತ್ರವನ್ನು ಪರಭಾಷಾ ಪ್ರೇಕ್ಷಕರು ಮೆಚ್ಚಿ ಕೊಂಡಾಡಿದ್ದರು. ಅಷ್ಟೇ ಅಲ್ಲ ಪರಭಾಷಾ ಸ್ಟಾರ್ ಫಿಲ್ಮ್ ಮೇಕರ್ಸ್ ಕೂಡ ನೀಲ್ ಕತೆಗೆ ಫಿದಾ ಆಗೋಗಿದ್ದರು. ರಾಕಿಂಗ್ ಸ್ಟಾರ್ ರಾಕಿಂಗ್ ಪರ್ಫಾರ್ಮನ್ಸ್‌ಗೆ ಅಭಿಮಾನಿಗಳಾಗಿಬಿಟ್ಟಿದ್ದರು. ಶಾರುಖ್ ಖಾನ್, ಶಾಹಿದ್ ಕಪೂರ್ ಸೇರಿದಂತೆ ಬಾಲಿವುಡ್ ಮಂದಿ ಕೂಡ ಯಶ್ ನಟನೆಗೆ ಬಹುಪರಾಕ್ ಎಂದಿದ್ದರು. ಇದೀಗ ಕರೀನಾ ಕಪೂರ್ 'KGF' ಸಿನಿಮಾ ಹಾಗೂ ಯಶ್ ಬಗ್ಗೆ ಮಾತನಾಡಿದ್ದಾರೆ.
ಕಾಫಿ ವಿತ್ ಕರಣ್ ಟಾಕ್ ಶೋನಲ್ಲಿ ಕರೀನಾ ಕಪೂರ್ ಹಾಗೂ ಆಲಿಯಾ ಭಟ್ ಅತಿಥಿಗಳಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಜೊತೆಗೆ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ವಿಚಾರಗಳನ್ನು ಮಾತನಾಡಿದ್ದಾರೆ. ರ್ಯಾಪಿಡ್ ಫೈರ್ ರೌಂಡ್‌ನಲ್ಲಿ ಸೌತ್ ಸ್ಟಾರ್ ನಟರಲ್ಲಿ ಯಾರೊಟ್ಟಿಗೆ ನಟಿಸೋಕೆ ಇಷ್ಟ ಎನ್ನುವ ಪ್ರಶ್ನೆಗೆ ಬಾಲಿವುಡ್ ಬೆಬೊ, ಕನ್ನಡ ನಟ ಯಶ್ ಹೆಸರು ಹೇಳಿದ್ದಾರೆ. ಇದೇ ವಿಚಾರ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಹುಟ್ಟಾಕಿದೆ.
ಕಾಫಿ ವಿತ್ ಕರಣ್ ಲೇಟೆಸ್ಟ್ ಎಪಿಸೋಡ್ ಪ್ರೋಮೊಗಳು ವೈರಲ್ ಆಗಿತ್ತು. ಕರೀನಾ, ಆಲಿಯಾ ಇಬ್ಬರೂ ನಿರೂಪಕ ಕರಣ್ ಜೋಹರ್‌ನ ಗೋಳು ಹೊಯ್ದುಕೊಂಡಿದ್ದರು. ಇದೀಗ ಎಪಿಸೋಡ್ ಸ್ಟ್ರೀಮಿಂಗ್ ಆಗಿದ್ದು ರ್ಯಾಪಿಡ್ ಫೈರ್ ರೌಂಡ್ ಸೀಕ್ವೆನ್ಸ್ ವೈರಲ್ ಆಗ್ತಿದೆ. ಪ್ರಭಾಸ್, ರಾಮ್‌ಚರಣ್, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ ಹಾಗೂ ಯಶ್ ಈ ಸೌತ್ ನಟರಲ್ಲಿ ಯಾರೊಟ್ಟಿಗೆ ನಟಿಸೋಕೆ ಇಷ್ಟ ಎನ್ನುವ ಪ್ರಶ್ನೆಗೆ ಕರೀನಾ, ಯಶ್ ಎಂದಿದ್ದಾರೆ.
"ಎಲ್ಲರೂ ಸೂಪರ್. ಆದರೆ ನಾನು 'KGF' ಹುಡುಗಿ(ನನಗೆ 'KGF' ಸಿನಿಮಾ ಅಂದ್ರೆ ಬಹಳ ಇಷ್ಟ). ಹಾಗಾಗಿ ಯಶ್ ಜೊತೆ ನಟಿಸೋಕೆ ಇಷ್ಟ" ಎಂದು ಕರೀನಾ ವಿವರಿಸಿದ್ದಾರೆ. ನೀವು 'KGF' ಸಿನಿಮಾ ನೋಡಿದ್ದೀರಾ ಎನ್ನುವ ಕರಣ್ ಪ್ರಶ್ನೆಗೆ ಹೌದು ಎಂದು ಕರೀನಾ ತಲೆ ಆಡಿಸಿದ್ದಾರೆ. ಅದಕ್ಕೆ ಆಲಿಯಾ, ಬರೀ ಬ್ಲಾಕ್ಸ್(ಸಣ್ಣ ಸಣ್ಣ ತುಣುಕು) ನೋಡ್ತಾರೆ ಎಂದಿದ್ದಾರೆ.
ಸದ್ಯ ಕರೀನಾ ಕಪೂರ್ 'KGF' ಹಾಗೂ ಯಶ್ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್ ಆಗ್ತಿದೆ. ಕೆಲವರು ಇದನ್ನು ನೋಡಿ ಬಾಲಿವುಡ್ ನಟಿಯರನ್ನು ನಂಬಬೇಡಿ. ಕರೀನಾ ಕೂಡ ಟ್ರೆಂಡ್ ಫಾಲೋ ಮಾಡ್ತಾರೆ ಅಷ್ಟೇ, ಅದನ್ನು ಗಂಭೀರವಾಗಿ ತಗೋಬೇಡಿ ಎನ್ನುತ್ತಿದ್ದಾರೆ. ಯಶ್ ಅಭಿಮಾನಿಗಳಂತೂ ಯಶ್19 ಚಿತ್ರದಲ್ಲಿ ಬೆಬೋ ನಟಿಸಿದರೆ ಚೆನ್ನಾಗಿರುತ್ತದೆ ಎನ್ನುತ್ತಿದ್ದಾರೆ.
ಗೀತು ಮೋಹನ್ ನಿರ್ದೇಶನದಲ್ಲಿ ಯಶ್19 ಸಿನಿಮಾ ಮೂಡಿ ಬರುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಮುಂದಿನ ಚಿತ್ರವನ್ನು ಹಾಲಿವುಡ್ ರೇಂಜ್‌ನಲ್ಲಿ ರಾಕಿಂಗ್ ಸ್ಟಾರ್ ಪ್ಲ್ಯಾನ್ ಮಾಡ್ತಿದ್ದಾರೆ. ಸದ್ಯ ಸಿನಿಮಾ ಕೆಲಸದ ನಿಮಿತ್ತ ಊರೂರು ಸುತ್ತಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಯಶ್ ಫ್ಯಾಮಿಲಿ ಸಮೇತ ಗೋವಾದಲ್ಲಿ ಬೀಡುಬಿಟ್ಟಿದ್ದರು. ಇನ್ನು ಯಶ್19 ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ.


Click it and Unblock the Notifications











