ವಿವಾದ ಎಬ್ಬಿಸಿದ ಮಕ್ಕಳ ಹೆಸರು: ಕರೀನಾ ಕಪೂರ್ ಮಾತು
ನಟಿ ಕರೀನಾ ಕಪೂರ್ ಕೆಲವು ದಿನಗಳ ಹಿಂದೆ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ಜಹಾಂಗೀರ್ ಎಂದು ಹೆಸರಿಟ್ಟಿದ್ದಾರೆ.
ಕರೀನಾ ಕಪೂರ್, ಸೈಫ್ ಅಲಿ ಖಾನ್ ಅನ್ನು ಮದುವೆ ಆದಾಗಿನಿಂದಲೂ ಅವರ ದಾಂಪತ್ಯದ ಬಗ್ಗೆ ಟೀಕೆಗಳು ಮೂದಲಿಕೆಗಳು ಕೇಳಿಬರುತ್ತಲೇ ಇವೆ. ಕರೀನಾ-ಸೈಫ್‌ರ ಮಕ್ಕಳ ವಿಷಯದಲ್ಲಂತೂ ದೊಡ್ಡ ಮಟ್ಟದ ವಿವಾದವೇ ಎದ್ದಿತು.
ಕರೀನಾ, ಸೈಫ್ ಅಲಿ ಖಾನ್ ಅನ್ನು ಮದುವೆಯಾದಾಗ ಇದು 'ಲವ್ ಜಿಹಾದ್' ಎಂದು ಕೆಲವರು ಹೇಳಿದ್ದರು. ಅರ್ಧ ಕರೀನಾ ಇನ್ನರ್ಧ ಬುರ್ಖಾ ತೊಟ್ಟಿರುವ ಮಹಿಳೆಯ ಮುಖ ಸೇರಿಸಿ ಮುಖ್ಯ ಪತ್ರಿಕೆಯೊಂದು ದೊಡ್ಡ ಲೇಖನವನ್ನೇ ಬರೆದು ಅಚ್ಚು ಹಾಕಿದ್ದು ಇದು ದೊಡ್ಡ ಚರ್ಚೆಯನ್ನು ಆ ಸಮಯದಲ್ಲಿ ಎಬ್ಬಿಸಿತ್ತು.
ಕರೀನಾ-ಸೈಫ್‌ಗೆ ಮೊದಲ ಮಗು ಆದಾಗ ಮಗುವಿಗೆ ತೈಮೂರ್ ಎಂದು ಹೆಸರಿಡಲಾಯಿತು. ಈ ಹೆಸರಿನ ಬಗ್ಗೆ ನೆಟ್ಟಿಗರು ಯಾವ ಬಗೆಗೆ ಆಕ್ರೋಶ ವ್ಯಕ್ತಪಡಿಸಿದರೆಂದರೆ ಮಗು ಸತ್ತೇ ಹೋಗಲಿ ಎಂದು ಕೂಡ ಶಾಪಗಳನ್ನು ಹಾಕಿದ್ದರು. ತೈಮೂರ್ ಎಂಬುದು ಒಬ್ಬ ವಿಸ್ತರಣಾವಾದಿ ಮುಸ್ಲಿಂ ರಾಜನ ಹೆಸರಾಗಿರುವುದೇ ನೆಟ್ಟಿಗರು ಸಿಟ್ಟಿಗೇಳಲು ಕಾರಣ. ಆದರೆ ನಂತರ ಸೈಫ್ ಮತ್ತು ಕರೀನಾ ತಾವು ಮಗನಿಗೆ ತೈಮೂರ್ ಎಂದು ಏಕೆ ಹೆಸರಿಟ್ಟೆವು ಎಂದು ಸ್ಪಷ್ಟನೆ ನೀಡಿದರಾದರೂ ಜನ ಸುಮ್ಮನಾಗಲಿಲ್ಲ.

ಎರಡನೇ ಮಗನಿಗೆ ಜಹಾಂಗೀರ್ ಎಂದು ಹೆಸರು
ಇದೀಗ ಕರೀನಾ-ಸೈಫ್‌ರ ಎರಡನೇ ಮಗನಿಗೆ ಜಹಾಂಗೀರ್ ಎಂದು ಹೆಸರಿಡಲಾಗಿದೆ. ಇದರ ಬಗ್ಗೆಯೂ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧರ್ಮಾಂಧನ ಹೆಸರನ್ನು ಮಗನಿಗೆ ಇಟ್ಟಿದ್ದೀರ. ಹಿಂದುಗಳ ಮಾರಣ ಹೋಮ ಮಾಡಿದವನ ಹೆಸರನ್ನು ಇಟ್ಟಿದ್ದೀರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೈಫ್ ಮತ್ತು ಕರೀನಾ ಈ ಬಾರಿ ಎಚ್ಚರಿಕೆಯಿಂದ ಹೆಸರು ಆಯ್ಕೆ ಮಾಡುತ್ತೇವೆ ಎಂದು ಮೊದಲೇ ಹೇಳಿದ್ದರು ಆದರೆ ಈ ಬಾರಿಯೂ ಅವರು ನೆಟ್ಟಿಗರ ಸಿಟ್ಟಿಗೆ ಕಾರಣರಾಗಿದ್ದಾರೆ. ಮಕ್ಕಳ ಹೆಸರು ಮತ್ತು ವಿವಾದದ ಬಗ್ಗೆ ನಟಿ ಕರೀನಾ ನೇಹಾ ಧೂಫಿಯಾಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಒತ್ತಡ ಕಡಿಮೆ ಮಾಡಿಕೊಳ್ಳಲು ಧ್ಯಾನ: ಕರೀನಾ
''ತೈಮೂರ್ ಎಂದರೆ ಕಬ್ಬಿಣ, ಗಟ್ಟಿಯಾದವನು ಎಂದರ್ಥ ಹಾಗಾಗಿ ನಾವು ನಮ್ಮ ಮಗನಿಗೆ ತೈಮೂರ್ ಎಂದು ಹೆಸರಿಟ್ಟಿದ್ದೆವು'' ಎಂದಿದ್ದಾರೆ. ನಾವು ಸ್ಪಷ್ಟನೆ ಕೊಟ್ಟರು ಜನ, ಮಾಧ್ಯಮಗಳು ನಮ್ಮನ್ನು ಉಸಿರುಗಟ್ಟುವಂತೆ ಮಾಡಿದರು. ಈ ಬಾರಿ ಜಹಾಂಗೀರ್ ಎಂದು ಹೆಸರಿಟ್ಟಾಗಲೂ ಇದೇ ಪರಿಸ್ಥಿತಿ ಎದುರಿಸುತ್ತಿದ್ದೇವೆ'' ಎಂದಿದ್ದಾರೆ ಕರೀನಾ. ಮಾನಸಿಕ ಒತ್ತಡ ತಾಳಲಾರದೆ ಧ್ಯಾನದ ಮೊರೆ ಹೋಗಿದ್ದಾರಂತೆ ನಟಿ ಕರೀನಾ ಕಪೂರ್. ಟ್ರೋಲ್ ಮಾಡುವವರಿಗೆ, ಕೆಟ್ಟದಾಗಿ ಮಾತನಾಡುತ್ತಿರುವವರಿಗೆ ನಾವು ಇಬ್ಬರು ಸಣ್ಣ ಮಕ್ಕಳ ಬಗ್ಗೆ ಮಾತನಾಡುತ್ತಿದ್ದೇವೆ ಎಂಬ ಕನಿಷ್ಟ ಮಾನವೀಯತೆಯೂ ಇಲ್ಲ ಎಂದು ಸಹ ಕರೀನಾ ಬೇಸರ ವ್ಯಕ್ತಪಡಿಸಿದ್ದಾರೆ.

ಉದ್ದೇಶಪೂರ್ವಕವಾಗಿ ನಾವು ಹೆಸರಿಡಲಿಲ್ಲ: ಕರೀನಾ
''ನಾನು ಹಾಗೂ ಸೈಫ್ ಎರಡು ಬಾರಿಯೂ ಉದ್ದೇಶಪೂರ್ವಕವಾಗಿ ಇದೇ ಹೆಸರಿಡಬೇಕೆಂದು ಇಡಲಿಲ್ಲ. ಅಥವಾ ಮಕ್ಕಳ ಹೆಸರನ್ನು ಲಿಸ್ಟ್ ಬರೆದು ಆಯ್ಕೆ ಮಾಡಲಿಲ್ಲ. ತೈಮೂರ್ ಹಾಗೂ ಜಹಾಂಗೀರ್ ಹೆಸರುಗಳು ನಮಗೆ ಕುಟುಂಬ ಸದಸ್ಯರಿಗೆ ಇಷ್ಟವಾದವು ಹಾಗಾಗಿ ಅವನ್ನು ಇಟ್ಟೆವು'' ಎಂದಿರುವ ಕರೀನಾ, ಮುಂದುವರೆದು ''ನಾನೊಬ್ಬ ಧನಾತ್ಮಕ ವ್ಯಕ್ತಿ. ಋಣಾತ್ಮಕತೆಗೆ ನನ್ನ ಜೀವನದಲ್ಲಿ ಸ್ಥಾನವಿಲ್ಲ. ನನಗೆ ಖುಷಿ ಹಂಚುವುದಷ್ಟೆ ಇಷ್ಟ. ನಾನು ಮಾತ್ರವೇ ಅಲ್ಲದೆ ನನ್ನ ಕುಟುಂಬದಲ್ಲಿ ಯಾರಿಗೂ ನೆಗೆಟಿವಿಟಿ ಇಲ್ಲ. ಕೋವಿಡ್‌ನ ಸಂಕಷ್ಟ ಪರಿಸ್ಥಿತಿ ಎಲ್ಲರನ್ನೂ ಹತ್ತಿರ ತಂದಿದೆ. ಅದು ಬಹಳ ಮುಖ್ಯ. ನಾವು ಅದರ ಬಗ್ಗೆ ಯೋಚನೆ ಮಾಡಬೇಕಿದೆ. ಸಾಮಾಜಿಕ ಜಾಲತಾಣದ ಟ್ರೋಲ್‌ಗಳು, ಮೂದಲಿಕೆಗಳ ಬಗ್ಗೆ ಚರ್ಚಿಸುತ್ತಾ ಕೂರುವ ಸಮಯ ಅಲ್ಲವಿದು'' ಎಂದಿದ್ದಾರೆ ಕರೀನಾ.

ಚಿತ್ರ ಹಂಚಿಕೊಂಡ ಸಾರಾ ಅಲಿ ಖಾನ್
ಕರೀನಾ ಕಪೂರ್ ತನ್ನ ಎರಡನೇ ಮಗನ ಚಿತ್ರವನ್ನು ಹಂಚಿಕೊಂಡಿದ್ದಾರಾದರೂ ಮುಖ ಕಾಣದಂತೆ ಎಚ್ಚರವಹಿಸಿದ್ದರು. ಆದರೆ ಕರೀನಾ ಕಪೂರ್‌ನ ಮೊದಲ ಹೆಂಡತಿ ಮಗಳು, ನಟಿ ಸಾರಾ ಖಾನ್ ಕರೀನಾಳ ಮಗನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸೈಫ್ ಅಲಿ ಖಾನ್, ಮಗು ಎತ್ತಿಕೊಂಡಿರುವ ಕರೀನಾ ಹಾಗೂ ತಾವು ಇರುವ ಚಿತ್ರವನ್ನು ಸಾರಾ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಸೈಫ್ ಅಲಿ ಖಾನ್ ಮೊದಲಿಗೆ ಅಮೃತಾ ಸಿಂಗ್ ಎಂಬುವರನ್ನು ವಿವಾಹವಾದರು, ಅವರೊಟ್ಟಿಗೆ ಸಾರಾ ಅಲಿ ಖಾನ್ ಹಾಗೂ ಇಬ್ರಾಹಿಂ ಅಲಿ ಖಾನ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ನಂತರ ಕರೀನಾ ಜೊತೆ ಮದುವೆಯಾಗಿ ಅವರೊಟ್ಟಿಗೆ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ ಸೈಫ್.


Click it and Unblock the Notifications











