ಆರ್‌ಸಿಬಿ ಎದುರು ಮುಂಬೈ ಇಂಡಿಯನ್ಸ್ ಸೋಲುತ್ತಿದ್ದಂತೆ ಜೆರ್ಸಿ ಬದಲಿಸಿದ್ರಾ ನಟಿ ಕರೀನಾ ಕಪೂರ್?
ಐಪಿಎಲ್ ಟೂರ್ನಿ ಆರ್ಭಟ ಜೋರಾಗಿದೆ. ಇನ್ನು ಒಂದೂವರೆ ತಿಂಗಳು ಚುಟುಕು ಕ್ರಿಕೆಟ್ ಆಟದ ವೈಭವ ಮುಂದುವರೆಯಲಿದೆ. ಹಾಲಿ ಚಾಂಪಿಯನ್ ಆರ್‌ಸಿಬಿ ತಂಡ ಆಡಿದ 4 ಪಂದ್ಯಗಳಲ್ಲಿ 3 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಮತ್ತೊಮ್ಮೆ ತಂಡ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಭಾನುವಾರ(ಏಪ್ರಿಲ್ 12) ವಾಂಕೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಎದುರು ಆರ್‌ಸಿಬಿ ಜಯಭೇರಿ ಬಾರಿಸಿತ್ತು. ಕರೀನಾ ಕಪೂರ್ ಫ್ಯಾಮಿಲಿ ಸಮೇತ ಪಂದ್ಯ ವೀಕ್ಷಿಸಿದರು.
ಮುಂಬೈನಲ್ಲೇ ನಡೆದ ಪಂದ್ಯವನ್ನು ವೀಕ್ಷಿಸಲು ಪತಿ ಸೈಫ್ ಅಲಿಖಾನ್, ಪುತ್ರರಾದ ತೈಮೂರ್ ಮತ್ತು ಜೆಹ್ ಜೊತೆ ಕರೀನಾ ಆಗಮಿಸಿದ್ದರು. ನಾಲ್ಕು ಮಂದಿ ಮುಂಬೈ ಇಂಡಿಯನ್ಸ್ ತಂಡದ ನೀಲಿ ಬಣ್ಣದ ಜರ್ಸಿ ಧರಿಸಿ ಬಂದಿದ್ದರು. ಮೈದಾನದ ಒಳಗೆ ಹೋಗುವಾಗ ಕರೀನಾ ಜೆರ್ಸಿಯಲ್ಲಿ ಕಂಡಿದ್ದರು. ಮೈದಾನದ ಸ್ಟ್ಯಾಂಡ್‌ನಲ್ಲಿ ಕುಳಿತಾಗಲೂ ಜೆರ್ಸಿ ಧರಿಸಿ ಕಾಣಿಸಿಕೊಂಡಿದ್ದರು. ಆದರೆ ಪಂದ್ಯ ಮುಗಿಸಿ ಹೊರ ಬರುವಾಗ ಜೆರ್ಸಿ ಟೀ-ಶರ್ಟ್ ತೆಗೆದು ಬಿಳಿ ಬಣ್ಣದ ಟೀ-ಶರ್ಟ್‌ನಲ್ಲಿ ಕಂಡಿದ್ದಾರೆ. ಮುಂಬೈ ಪಂದ್ಯ ಸೋಲುತ್ತಿದ್ದಂತೆ ಬೇಸರದಿಂದ ಬೆಬೊ ಜೆರ್ಸಿ ತೆಗೆದಿದ್ದಾರೆ ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ.

ಮುಂಬೈ ವಿರುದ್ಧದ ಜಿದ್ದಾಜಿದ್ದಿನ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ರತನ್ ಪಾಟಿದಾರ್ ನೇತೃತ್ವದ ತಂಡ 240 ರನ್‌ಗಳನ್ನು ಕಲೆ ಹಾಕಿತು. ಸಾಲ್ಟ್, ಕೊಹ್ಲಿ ಹಾಗೂ ರಜತ್ ಆಕರ್ಷಕ ಅರ್ಧ ಶತಕದ ನೆರವಿನಿಂದ ತಂಡ ಬೃಹತ್ ಗುರಿಯನ್ನು ಮುಂಬೈ ತಂಡದ ಮುಂದಿಟ್ಟಿತ್ತು. ಆರಂಭದಲ್ಲಿ ಸೊಗಸಾಗಿ ಬ್ಯಾಟ್ ಮಾಡಿದ ಮುಂಬೈ ತಂಡ ಬಳಿಕ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಂತಿಮವಾಗಿ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 222 ರನ್ ಗಳಿಸಿ ಸೋಲು ಒಪ್ಪಿಕೊಂಡಿತ್ತು. ಆರ್‌ಸಿಬಿ ತಂಡ 18 ರನ್‌ಗಳ ಅಂತರದಲ್ಲಿ ಗೆಲುವಿನ ತಡ ಸೇರಿತ್ತು.
ಬಾಲಿವುಡ್ ತಾರೆಯರೆಲ್ಲಾ ಮುಂಬೈನಲ್ಲೇ ನೆಲೆಸಿದ್ದಾರೆ. ಆರ್‌ಸಿಬಿ ತಂಡ ಆಡುವ ಪಂದ್ಯಗಳನ್ನು ವೀಕ್ಷಿಸಲು ನಟಿ ಅನುಷ್ಕಾ ಶರ್ಮಾ ಮೈದಾನದಲ್ಲಿ ಹಾಜರಿರುತ್ತಾರೆ. ಪತಿ ವಿರಾಟ್ ಕೊಹ್ಲಿ ಅವರನ್ನು ಹುರಿದುಂಬಿಸುತ್ತಾರೆ. ಇನ್ನು ಪೂಜಾ ಹೆಗ್ಡೆ ಕೂಡ ಮುಂಬೈ vs ಆರ್‌ಸಿಬಿ ಪಂದ್ಯ ನೋಡಲು ವಾಂಖೆಡೆ ಮೈದಾನಕ್ಕೆ ಬಂದಿದ್ದರು. ನಟ ವರುಣ್ ಧವನ್ ಕೂಡ ಹಾಜರಾಗಿದ್ದರು.
ಐಪಿಎಲ್ ಪಂದ್ಯವನ್ನು ನೇರವಾಗಿ ನೋಡಲು ಅಭಿಮಾನಿಗಳು ಹವಣಿಸುತ್ತಾರೆ. ಟಿಕೆಟ್ ಸಿಗದೇ ಪರದಾಡುತ್ತಾರೆ. ಟಿಕೆಟ್ ದರ ಜಾಸ್ತಿ ಆಯ್ತು ಎಂದು ಬೇಸರಪಟ್ಟುಕೊಳ್ಳುವವರು ಇದ್ದಾರೆ. ಆದರೆ ಕರೀನಾ ಕಪೂರ್ ಮಾತ್ರ ಪಂದ್ಯ ನೋಡದೇ ಮೊಬೈಲ್ ನೋಡುತ್ತಾ ಕಾಲ ಕಳೆದಿದ್ದಾರೆ. ಇದು ಕೆಲವರ ಬೇಸರಕ್ಕೆ ಕಾರಣವಾಗಿದೆ. ಎರಡು ಪ್ರಬಲ ತಂಡಗಳ ಐಪಿಎಲ್ ಮ್ಯಾಚ್ ನಡೆಯುವಾಗ ನೋಡಿ ಎಂಜಾಯ್ ಮಾಡುವುದು ಬಿಟ್ಟು ಮೊಬೈಲ್ ನೋಡುತ್ತಾ ಕುಳಿತರೆ ಹೆಂಗೆ ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಅವರ ಹಣ ಅವರ ಇಷ್ಟ, ನಿಮಗೆ ಯಾಕೆ ಕಷ್ಟ ಎಂದು ಕೆಲವರು ಕರೀನಾ ಪರ ಬ್ಯಾಟ್ ಬೀಸುತ್ತಿದ್ದಾರೆ.
ಕರೀನಾ ಕಪೂರ್ ಚಿತ್ರರಂಗದಲ್ಲಿ ಈಗ ಅಷ್ಟಾಗಿ ಆಕ್ಟೀವ್ ಆಗಿಲ್ಲ. ಕಳೆದ ವರ್ಷ ಆಕೆ ನಟಿಸಿದ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಇತ್ತೀಚೆಗೆ ಮಗ, ಫ್ಯಾಮಿಲಿ ಎಂದು ಹೆಚ್ಚಿನ ಸಮಯ ಬ್ಯುಸಿಯಾಗಿದ್ದಾರೆ. ಬೆಬೊ ನಟನೆಯ 'ದಾಯ್ರ' ಎಂಬ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ. ಇನ್ನುಳಿದಂತೆ ಯಾವುದೇ ಚಿತ್ರವನ್ನು ಆಕೆ ಒಪ್ಪಿಕೊಂಡಿಲ್ಲ. ಮತ್ತೊಂದು ಕಡೆ ಪತಿ ಸೈಫ್ ಅಲಿಖಾನ್ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ದಕ್ಷಿಣದ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











