'ಟಾಕ್ಸಿಕ್' ಚಿತ್ರದಲ್ಲಿ ಯಶ್ ಜೊತೆ ನಟನೆ? ಕೊನೆಗೂ ಪ್ರತಿಕ್ರಿಯಿಸಿದ ಕರೀನಾ ಕಪೂರ್
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಬಗ್ಗೆ ದಿನಕ್ಕೊಂದು ಸುದ್ದಿ ವೈರಲ್ ಆಗುತ್ತಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಈ ಪ್ಯಾನ್ ಇಂಡಿಯಾ ಚಿತ್ರದ ಸ್ಟಾರ್‌ಕಾಸ್ಟ್ ಬಗ್ಗೆ ಇಂಟ್ರೆಸ್ಟಿಂಗ್ ನ್ಯೂಸ್ ಹರಿದಾಡುತ್ತಿದೆ.
ಬಾಲಿವುಡ್ ಚೆಲುವೆ ಕರೀನಾ ಕಪೂರ್ 'ಟಾಕ್ಸಿಕ್' ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಾರೆ ಎನ್ನುವ ಗುಸುಗುಸು ಇತ್ತೀಚೆಗೆ ಕೇಳಿ ಬಂದಿತ್ತು. ಕೆಲವೇ ದಿನಗಳ ಹಿಂದೆ ನನಗೆ ನನಗೆ ಯಶ್ ಅಂದ್ರೆ ಇಷ್ಟ ಎಂದು ಬೇಬೊ ಹೇಳಿದ್ದರು. ಅದರ ಬೆನ್ನಲ್ಲೇ ಆಕೆ 'ಟಾಕ್ಸಿಕ್' ಚಿತ್ರಕ್ಕೆ ನಾಯಕಿ ಎನ್ನುವ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿಬಂದಿತ್ತು. ಈ ಬಗ್ಗೆ ನಟಿಯ ಕಡೆಯಿಂದಲೇ ಪ್ರತಿಕ್ರಿಯೆ ಬಂದಿದೆ.

'KGF' ಸರಣಿ ಬಳಿಕ ಯಶ್ ಯಾವ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಕುತೂಹಲ ಹಲವರಲ್ಲಿ ಇತ್ತು. ಕಳೆದ ತಿಂಗಳು ಆ ಕುತೂಹಲಕ್ಕೆ ರಾಕಿಂಗ್ ಸ್ಟಾರ್ ತೆರೆ ಎಳೆದಿದ್ದರು. ಸಣ್ಣ ಅಪ್‌ಡೇಟ್ ಕೇಳುತ್ತಿದ್ದವರಿಗೆ ಕ್ರೇಜಿ ನ್ಯೂಸ್ ಕೊಟ್ಟಿದ್ದರು. ನಿರ್ದೇಶಕಿ, ನಿರ್ಮಾಣ ಸಂಸ್ಥೆಯ ಜೊತೆಗೆ ಸಿನಿಮಾ ಟೈಟಲ್ ಕೂಡ ಘೋಷಿಸಿದ್ದರು. ಬಳಿಕ ಚಿತ್ರದಲ್ಲಿ ಮೂವರು ನಾಯಕಿಯರು ಎನ್ನುವ ಗುಸುಗುಸು ಶುರುವಾಯಿತು. ಅದರಲ್ಲಿ ಕರೀನಾ ಕಪೂರ್ ಒಬ್ಬರು ಎನ್ನಲಾಗಿತ್ತು.
'ಟಾಕ್ಸಿಕ್' ಚಿತ್ರದಲ್ಲಿ ಕರೀನಾ ಕಪೂರ್ ನಟಿಸುತ್ತಾರೆ ಎನ್ನುವ ಚರ್ಚೆಯ ನಡುವೆ ಆಕೆಯ ತಂಡ ಪ್ರತಿಕ್ರಿಯಿಸಿದೆ. "ಕರೀನಾ ಕಪೂರ್ ಖಾನ್ ಅವರ ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ಅಭಿಮಾನಿಗಳ ಉತ್ಸಾಹ ಮತ್ತು ಆಸೆಗಳನ್ನು ನಾವು ಅರ್ಥಮಾಡಿಕೊಂಡಿದ್ದರೂ, ನಟಿಯ ಮುಂದಿನ ಸಿನಿಮಾ ಮತ್ತು ಅದರ ತಾರಾ ಬಳಗದ ಮೇಲೆ ಕಾಯುವಂತೆ ಮಾಧ್ಯಮಗಳಿಗೆ ವಿನಂತಿಸುತ್ತೇವೆ. ಸುಖಾಸುಮ್ಮನೆ ಯಾವುದೇ ಊಹೆ ಊಹೆ ಮಾಡಬೇಡಿ. ಆದರೆ ಬಹಳ ಎಕ್ಸೈಟಿಂಗ್ ವಿಚಾರ ಕಾದಿದೆ. ಅಧಿಕೃತ ಮಾಹಿತಿಗಾಗಿ ಕಾಯಿರಿ ಎಂದು ವಿನಂತಿಸುತ್ತೇವೆ" ಎಂದಿದ್ದಾರೆ.
ಕೆಲ ದಿನಗಳ ಹಿಂದೆ ಕಾಫಿ ವಿತ್ ಕರಣ್ ಟಾಕ್ ಶೋನಲ್ಲಿ ಕರೀನಾ ಕಪೂರ್ ಹಾಗೂ ಆಲಿಯಾ ಭಟ್ ಅತಿಥಿಗಳಾಗಿ ಕಾಣಿಸಿಕೊಂಡಿದ್ದರು. ರ್ಯಾಪಿಡ್ ಫೈಯರ್ ರೌಂಡ್‌ನಲ್ಲಿ ಪ್ರಭಾಸ್, ರಾಮ್‌ಚರಣ್, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ ಹಾಗೂ ಯಶ್ ಈ ಸೌತ್ ನಟರಲ್ಲಿ ಯಾರೊಟ್ಟಿಗೆ ನಟಿಸೋಕೆ ಇಷ್ಟ ಎಂದು ಕರಣ್ ಜೋಹರ್ ಕೇಳಿದ್ದರು. ಈ ಪ್ರಶ್ನೆಗೆ ದಿಢೀರನೆ 'ಯಶ್' ಎಂದು ಬೆಬೋ ಹೇಳಿದ್ದು ವೈರಲ್ ಆಗಿತ್ತು.
"ಎಲ್ಲರೂ ಸೂಪರ್.. ಆದ್ರೆ ನಾನು 'KGF' ಹುಡುಗಿ(ನನಗೆ 'KGF' ಸಿನಿಮಾ ಅಂದ್ರೆ ಬಹಳ ಇಷ್ಟ). ಹಾಗಾಗಿ ಯಶ್ ಜೊತೆ ನಟಿಸೋಕೆ ಇಷ್ಟ" ಎಂದು ಕರೀನಾ ತಿಳಿಸಿದ್ದರು. ಬಳಿಕ ನೀವು 'KGF' ಸಿನಿಮಾ ನೋಡಿದ್ದೀರಾ? ಎಂದು ನಿರೂಪಕ ಕರಣ್ ಕೇಳಿದಾಗ ಹೌದು ಎಂದು ಕರೀನಾ ತಲೆ ಆಡಿಸಿದ್ದರು. ಅದಕ್ಕೆ ಆಲಿಯಾ, ಸಣ್ಣ ಸಣ್ಣ ತುಣುಕುಗಳಾಗಿ ನೋಡ್ತಾರೆ ಎಂದಿದ್ದರು.
ಕರೀನಾ ಅಂದು ಮಾತನಾಡಿದ್ದನ್ನು ಯಾರು ಅಷ್ಟು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಯಶ್ 'ಟಾಕ್ಸಿಕ್' ಚಿತ್ರದಲ್ಲಿ ಕರೀನಾ ಕಪೂರ್ ನಟಿಸುತ್ತಾರೆ ಎನ್ನುವ ಗುಸುಗುಸು ಕೇಳಿಬರೋಕೆ ಶುರುವಾಯಿತು. ಇದನ್ನು ನೋಡಿ ಅಂದು ಕರೀನಾ ಮಾತನಾಡಿದ್ದನ್ನು ಅಭಿಮಾನಿಗಳು ನೆನಪಿಸಿಕೊಂಡಿದ್ದರು. ಪರೋಕ್ಷವಾಗಿ ಬಾಲಿವುಡ್ ಬ್ಯೂಟಿ ಅಂದೇ ಸುಳಿವು ಕೊಟ್ಟಿದ್ದರು ಎನ್ನುವ ಚರ್ಚೆ ಶುರುವಾಯಿತು. ಇದೀಗ ಆಕೆಯ ತಂಡವೇ ಪ್ರತಿಕ್ರಿಯಿಸಿದೆ.

'ಟಾಕ್ಸಿಕ್' ಸಿನಿಮಾ ಬಹಳ ಕುತೂಹಲ ಮೂಡಿಸಿದೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮುಂದಿನ ವರ್ಷ ಏಪ್ರಿಲ್ 10ರಂದು ಸಿನಿಮಾ ಬಿಡುಗಡೆ ಮಾಡುವುದಾಗಿಯೂ ಹೇಳಿದ್ದಾರೆ. ಡ್ರಗ್ಸ್ ಮಾಫಿಯಾ ಸುತ್ತಾ ಈ ಸಿನಿಮಾ ಕಥೆ ಸುತ್ತುತ್ತದೆ ಎನ್ನುವ ಊಹಾಪೋಹ ಶುರುವಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗಲಿದೆ.


Click it and Unblock the Notifications











