Jawan: ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಅತಿಹೆಚ್ಚು ಗಳಿಸಿರುವ ಹಿಂದಿ ಚಿತ್ರಗಳು; ಜವಾನ್ ನಂ 1 ಆಗುತ್ತಾ?
ಬಾಲಿವುಡ್ ಕಿಂಗ್ ಶಾರುಖ್ ಖಾನ್ ನಟನೆಯ ಮುಂದಿನ ಚಿತ್ರ ಜವಾನ್‌ನ ಟ್ರೈಲರ್ ಅನ್ನು ಪ್ರಿವ್ಯೂ ಹೆಸರಿನ ಅಡಿಯಲ್ಲಿ ಬಿಡುಗಡೆ ಮಾಡಿ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿತ್ತು. ಇದೇ ಮೊದಲ ಬಾರಿಗೆ ತಮಿಳು ನಿರ್ದೇಶಕ ಅಟ್ಲಿ ಹಿಂದಿ ಚಿತ್ರವೊಂದಕ್ಕೆ ಆಕ್ಷನ್ ಕಟ್ ಹೇಳಿದ್ದು, ಬಾಲಿವುಡ್ ಪ್ರವೇಶ ಮಾಡಿದ್ದು, ಅತ್ತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಸಹ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ.
ಈ ವರ್ಷದ ಆರಂಭದಲ್ಲಿ ಪಠಾಣ್ ಚಿತ್ರದ ಮೂಲಕ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ಕೊಳ್ಳೆ ಹೊಡೆದ ಶಾರುಖ್ ಖಾನ್ ನಟನೆಯ ಮುಂದಿನ ಚಿತ್ರ ಇದಾಗಿದ್ದು, ಚಿತ್ರದಲ್ಲಿ ನಯನತಾರಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ ಹಾಗೂ ವಿಜಯ್ ಸೇತುಪತಿ ಖಳನಾಯಕನಾಗಿ ನಟಿಸಿದ್ದಾರೆ. ಉಳಿದಂತೆ ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದು, ಪ್ರಿಯಾಮಣಿ ಸಹ ಚಿತ್ರದ ತಾರಾಗಣದಲ್ಲಿದ್ದಾರೆ.

ಹೀಗೆ ಮೊದಲ ಟ್ರೈಲರ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹವಾ ಎಬ್ಬಿಸಿದ್ದ ಜವಾನ್ ಚಿತ್ರದ ಎರಡನೇ ಟ್ರೈಲರ್ ನಾಳೆ ( ಆಗಸ್ಟ್ 31 ) ಬಿಡುಗಡೆಯಾಗಲಿದೆ. ಹೀಗೆ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಕ್ರೇಜ್ ಹೆಚ್ಚಿಸುವ ಯೋಜನೆಯಲ್ಲಿರುವ ಜವಾನ್ ಚಿತ್ರತಂಡ ಮೊದಲ ದಿನವೇ ದಾಖಲೆಯ ಗಳಿಕೆ ಮಾಡಬೇಕು ಎಂಬ ಗುರಿಯನ್ನು ಹೊಂದಿದೆ.
ಇನ್ನು ಜವಾನ್ ಹಿಂದಿ ಮಾತ್ರವಲ್ಲದೇ ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದ್ದು, ಕನ್ನಡ ಭಾಷೆಗೆ ಮಾತ್ರ ಡಬ್ ಆಗುತ್ತಿಲ್ಲ. ಈ ಕುರಿತು ಕನ್ನಡ ಡಬಿಂಗ್ ಪ್ರಿಯರು ಅಸಮಾಧಾನವನ್ನೂ ಸಹ ಹೊರಹಾಕಿದ್ದರು. ಹೀಗಿದ್ದರೂ ಸಹ ಜವಾನ್ ಹಿಂದಿ ವರ್ಷನ್‌ಗೆ ಕರ್ನಾಟಕದಲ್ಲಿ ದೊಡ್ಡ ಮಟ್ಟದ ಬೇಡಿಕೆ ಹುಟ್ಟಿಕೊಂಡಿದೆ. ಹೌದು, ಜವಾನ್ ಕರ್ನಾಟಕ ವಿತರಣೆಯ ಹಕ್ಕನ್ನು ಖರೀದಿಸಲು ವಿತರಕರು ಮುಗಿಬಿದ್ದಿದ್ದಾರೆ.
ಇನ್ನು ಚಿತ್ರ ಹುಟ್ಟುಹಾಕಿರುವ ಕ್ರೇಜ್‌ಗೆ ಜವಾನ್ ರಾಜ್ಯದಲ್ಲಿ ದೊಡ್ಡ ಕಲೆಕ್ಷನ್ ಮಾಡುವ ಎಲ್ಲಾ ನಿರೀಕ್ಷೆ ಇದ್ದು ಈ ಚಿತ್ರ ಜೈಲರ್ ರೀತಿ ಮೋಡಿ ಮಾಡಿ ಕರ್ನಾಟಕದಲ್ಲಿ ಈ ಹಿಂದೆ ಬಾಲಿವುಡ್‌ನ ಯಾವ ಚಿತ್ರವೂ ಮಾಡಿರದ ದಾಖಲೆ ಬರೆಯಲಿದೆಯಾ ಎಂಬ ಕುತೂಹಲ ಮೂಡಿದೆ. ಹಾಗಿದ್ದರೆ ಕರ್ನಾಟಕದಲ್ಲಿ ಅತಿಹೆಚ್ಚು ಗಳಿಕೆ ಮಾಡಿರುವ ಹಿಂದಿ ಚಿತ್ರ ಯಾವುದು ಜವಾನ್ ಈ ಪಟ್ಟಿಯಲ್ಲಿ ನಂಬರ್ 1 ಪಟ್ಟಕ್ಕೇರಲು ಯಾವ ಚಿತ್ರಗಳನ್ನು ಹಿಂದಿಕ್ಕಬೇಕು ಎಂಬ ಮಾಹಿತಿ ಈ ಕೆಳಕಂಡಂತಿದೆ..
ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಿತ್ರಗಳು
1. ಪಠಾಣ್ - ₹45 ಕೋಟಿ ಗ್ರಾಸ್ ಕಲೆಕ್ಷನ್
2. ದಂಗಲ್ - ₹34 ಕೋಟಿ ಗ್ರಾಸ್ ಕಲೆಕ್ಷನ್
3. ಪದ್ಮಾವತ್ - ₹29 ಕೋಟಿ ಗ್ರಾಸ್ ಕಲೆಕ್ಷನ್
4. ಪಿಕೆ - ₹27 ಕೋಟಿ ಗ್ರಾಸ್ ಕಲೆಕ್ಷನ್
5. ಸಂಜು - ₹25 ಕೋಟಿ ಗ್ರಾಸ್ ಕಲೆಕ್ಷನ್
6. ಟೈಗರ್ ಜಿಂದಾ ಹೈ - ₹20 ಕೋಟಿ ಗ್ರಾಸ್ ಕಲೆಕ್ಷನ್
7. ಉರಿ - ₹19 ಕೋಟಿ ಗ್ರಾಸ್ ಕಲೆಕ್ಷನ್
8. ಧೂಮ್ 3 - ₹18.5 ಕೋಟಿ ಗ್ರಾಸ್ ಕಲೆಕ್ಷನ್
9. ಭಜರಂಗಿ ಭಾಯಿಜಾನ್ - ₹18 ಕೋಟಿ ಗ್ರಾಸ್ ಕಲೆಕ್ಷನ್
10. ದ ಕಾಶ್ಮೀರ್ ಫೈಲ್ಸ್ - ₹16.5 ಕೋಟಿ ಗ್ರಾಸ್ ಕಲೆಕ್ಷನ್


Click it and Unblock the Notifications











