'ಪ್ಲಾಸ್ಟಿಕ್'ನಿಂದ ಐಶ್ವರ್ಯ ರೈ ಸಹಜ ಸೌಂದರ್ಯವೇ ಹಾಳಾಗಿ ಹೋಯಿತು; ಕಸ್ತೂರಿ ಶಂಕರ್ ...!
ಸೆಲೆಬ್ರೆಟಿಗಳಿಗೆ ತಮ್ಮ ಸೌಂದರ್ಯ ಕೊಂಚ ಡಲ್ ಹೊಡೀತಿದೆ ಅಂತ ಗೊತ್ತಾದ ತಕ್ಷಣವೇ ಸರ್ಜರಿಗಳ ಮೊರೆ ಹೋಗುತ್ತಾರೆ. ಲಕ್ಷಾಂತರ ರೂಪಾಯಿಗಳನ್ನು ನೀರಿನಂತೆ ಖರ್ಚು ಮಾಡಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಅಮಿತಾಭ್ ಬಚ್ಚನ್ ಸೊಸೆ ಐಶ್ವರ್ಯ ರೈ ಕೂಡ ಇದೇ ತರಹದ ಪ್ರಯತ್ನವನ್ನ ಏನಾದರೂ ಮಾಡಿದ್ದಾರಾ ಅನ್ನುವ ಅನುಮಾನ ಸದ್ಯಕ್ಕೆ ಅನೇಕರನ್ನ ಕಾಡ್ತಿದೆ.
ಹೌದು, ಮೊನ್ನೆ .. ಕಾನ್ ಫಿಲ್ಮ್ ಫೆಸ್ಟಿವಲ್‌ನ ಅಂಗಳದಿಂದ ಐಶ್ವರ್ಯ ರೈ ಅವರ ವಯ್ಯಾರದ ನಡಿಗೆಯ ನಡುವೆ ಎರಡು ಮೂರು ಫೋಟೋಗಳು ತೇಲಿ ಬಂದಿದ್ದವು. ನಿಜಕ್ಕೂ ಇದು ಐಶ್ವರ್ಯ ರೈ ಅವ್ರೇನಾ ಅನ್ನುವಷ್ಟರ ಮಟ್ಟಿಗೆ ಅನುಮಾನ ಮೂಡುವಂತಹ ಫೋಟೋಗಳವು.

ನೋಡ..ನೋಡ್ತಾ.. ವೈರಲ್ ಆದ ಈ ಫೋಟೋಗಳಿಗೆ ಅನೇಕ ಅಭಿಪ್ರಾಯ ವ್ಯಕ್ತವಾಗಿದ್ದವು. ಐಶ್ವರ್ಯ ಅವರ ಮುಖ ಊದಿಕೊಂಡಿದ್ದೇಕೆ ಎನ್ನುವ ಚರ್ಚೆಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ನಡೆದಿದ್ದವು. ಈಗ ಈ ಚರ್ಚೆಯನ್ನ ಒಂದ್ಕಾಲದ ನಾಯಕಿ ಕಸ್ತೂರಿ ಶಂಕರ್ ಮುಂದುವರೆಸಿದ್ದಾರೆ. ಪ್ಲಾಸ್ಟಿಕ್ ಸರ್ಜರಿಯಿಂದ ಐಶ್ವರ್ಯ ರೈ ಅವರ ಸೌಂದರ್ಯವೆಲ್ಲ ಹಾಳಾಗಿ ಹೋಯಿತು ಎಂಬ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.
ಹೌದು, ಐಶ್ವರ್ಯ ರೈ ಅವರ ಫೋಟೋಗಳು ವೈರಲ್ ಆದ ಬೆನ್ನಲ್ಲಿಯೇ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿರುವ ಕಸ್ತೂರಿ ಶಂಕರ್, ಸಮಯ.. ವಿಶ್ವದ ಅತ್ಯಂತ ಸುಂದರ ಮಹಿಳೆಯನ್ನೂ ಕೂಡ ಸಮಯ ಬಿಡುವುದಿಲ್ಲ. ಐಶ್ವರ್ಯಾ ರೈ ಗಡಿಯಾರವನ್ನು ಹಿಂತಿರುಗಿಸುವ ಅಗತ್ಯವಿಲ್ಲ. ಆದರೆ ಅವರು ಸಹಜವಾಗಿಯೇ ಇದ್ದಿದ್ದರೆ ಸುಂದರವಾಗಿಯೇ ಉಳಿಯುತ್ತಿದ್ದರು. ಆದರೆ ಪ್ಲಾಸ್ಟಿಕ್ ಅವರ ಸಹಜ ಸೌಂದರ್ಯವನ್ನು ಹಾಳುಮಾಡಿದೆ ಎಂದಿದ್ದಾರೆ.
ಕಸ್ತೂರಿ ಶಂಕರ್ ಅವರ ಈ ಅಭಿಪ್ರಾಯ ಸದ್ಯಕ್ಕೆ ಹೊಸದೊಂದು ಕಿಡಿಯನ್ನ ಹೊತ್ತಿಸಿದೆ. ಇದಕ್ಕೆ ಪೂರಕವಾಗಿ ಒಂದು ದಶಕದ ಹಿಂದೆ ಇಮ್ರಾನ್ ಹಶ್ಮಿ ಮಾತನಾಡಿದ್ದ ಮಾತು ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದೆ. ಕರಣ್ ಜೋಹರ್‌ಗೆ ಇಮ್ರಾನ್ ಹಶ್ಮಿ ನೀಡಿದ್ದ ಸಂದರ್ಶನದ ತುಣುಕು ಕೂಡ ವೈರಲ್ ಆಗ್ತಿದೆ.

ಅವತ್ತು ಅಂದರೆ 2013ರಲ್ಲಿ 'ಕಾಫಿ ವಿತ್ ಕರಣ್ ಸೀಸನ್ 4'ರಲ್ಲಿ ಇಮ್ರಾನ್ ಹಶ್ಮಿ ಭಾಗಿಯಾದಾಗ, ರ‍್ಯಾಪಿಡ್ ಫೈರ್ ರೌಂಡ್‌ನಲ್ಲಿ ಕರಣ್ ಜೋಹರ್ ಪ್ರಶ್ನೆಯೊಂದನ್ನ ಕೇಳಿದ್ದರು. ಪ್ಲಾಸ್ಟಿಕ್ ಎಂದು ಕೇಳಿದಾಗ ನಿಮಗೆ ಯಾರು ನೆನಪಾಗ್ತಾರೆ ಅಂದಿದ್ದರು. ಆಗ ಅರೆ ಕ್ಷಣ ಕೂಡ ಯೋಚನೆ ಮಾಡದ ಇಮ್ರಾನ್ ಹಶ್ಮಿ ಐಶ್ವರ್ಯ ರೈ ಅವರ ಹೆಸರನ್ನ ಹೇಳಿದ್ದರು. ಇಮ್ರಾನ್ ಹಶ್ಮಿಯ ಈ ಹೇಳಿಕೆ ಆ ಕಾಲಕ್ಕೆ ಸಿಕ್ಕಾಪಟ್ಟೆ ವಿವಾದಕ್ಕೀಡಾಗಿತ್ತು.
ಈಗ ಪ್ಲಾಸ್ಟಿಕ್ ಐಶ್ವರ್ಯ ರೈ ಅವರ ಸೌಂದರ್ಯವನ್ನ ಹಾಳು ಮಾಡಿದೆ ಎಂದು ಹೇಳಿದ ಬೆನ್ನಲ್ಲಿ, ಇಮ್ರಾನ್ ಹಶ್ಮಿಯ ಹಳೆದ ವಿಡಿಯೋ ಮತ್ತೆ ಮುನ್ನೆಲೆಗೆ ಬಂದಿದೆ. ಕಸ್ತೂರಿ ಶಂಕರ್ ಮತ್ತು ಇಮ್ರಾನ್ ಹಶ್ಮಿ ಹೇಳಿರುವಂತೆ ಐಶ್ವರ್ಯ ರೈ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರಾ ಅನ್ನುವ ಅನುಮಾನ ಅನೇಕರಿಗೆ ಕಾಡ್ತಿದೆ. ಪ್ಲಾಸ್ಟಿಕ್ ಸರ್ಜರಿಯ ಅಡ್ಡ ಪರಿಣಾಮಗಳಿಂದನೇ ಐಶ್ವರ್ಯ ಮುಖ ಊದಿಕೊಂಡಿದೆ ಎಂಬ ಅಭಿಪ್ರಾಯ ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.


Click it and Unblock the Notifications











