ಕುಕ್ಕೆ ಸುಬ್ರಹ್ಮಣ್ಯ ದರ್ಶನ ಪಡೆದ ಕತ್ರಿನಾ ಕೈಫ್, ಸಂತಾನ ಪ್ರಾಪ್ತಿಗಾಗಿ ಸರ್ಪ ಸಂಸ್ಕಾರ ಪೂಜೆ ?
ನಮ್ಮ ಜನ ಹೇಗೆ ಅಂದರೆ ವಯಸ್ಸಿಗೆ ಬಂದ ಹುಡುಗ ಇರಲಿ ಅಥವಾ ಹುಡುಗಿಯಾಗಿರಲಿ ಮದುವೆ ಆಗುವವರೆಗೆ ಇನ್ನೂ ಮದುವೆ ಆಗಿಲ್ವಾ ಎಂಬ ಪ್ರಶ್ನೆಯನ್ನು ಕೇಳಿ ಪಿತ್ತ ನೆತ್ತಿಗೇರುವಂತೆ ಮಾಡುತ್ತಾರೆ. ಇನ್ನು, ಮದುವೆಯಾದ ನಂತರ ಇನ್ನೂ ಮೂರು ತಿಂಗಳಾಗಿರುವುದಿಲ್ಲ ಆಗಲೇ ಸಂತೋಷದ ಸುದ್ದಿ ಯಾವುದು ಇಲ್ವಾ ಎಂದು ಅದಾಗಲೇ ಮಗು ಬಗ್ಗೆ ಪ್ರಶ್ನೆ ಕೇಳಲು ಶುರು ಮಾಡುತ್ತಾರೆ. ಈಗೀಗ ಇದು ಕಾಮನ್ನು ಕೂಡ.
ಇದು ಸಾಮಾನ್ಯರ ಕಥೆಯಾದರೆ ಸೆಲೆಬ್ರೆಟಿಗಳ ವ್ಯಥೆ ಭಿನ್ನವೇನು ಇಲ್ಲ. ಇರುಸು ಮುರುಸಿನ ಈ ಪ್ರಶ್ನೆಗಳು ಇವರಿಗೆ ಪಬ್ಲಿಕ್ಕಿನಲ್ಲಿಯೇ ಎದುರಾಗುತ್ತಾವೆ. ಹೀಗಾಗಿ ಈ ವ್ಯೆಯಕ್ತಿಕ ವಿಚಾರವನ್ನು ಕೇಳಿ ಕೇಳಿ ಸದ್ಯಕ್ಕೆ ಮಗು ಬೇಡ ಎಂದು ನಿರ್ಧಾರಕ್ಕೆ ಬಂದವರು ಕೂಡ ಈ ಟಾರ್ಚರ್‌ನಿಂದ ಹೊರ ಬರಲು ರೆಡಿಯಾಗುತ್ತಾರೆ. ಕತ್ರೀನಾ ಕೈಫ್ ಕೂಡ ಇಂತಹದ್ದೇ ನಿರ್ಧಾರವನ್ನು ಮಾಡಿದ್ದಾರಾ ಗೊತ್ತಿಲ್ಲ. ಆದರೆ, ನಮ್ಮ ರಾಜ್ಯದ ಪ್ರಸಿದ್ಧ ತೀರ್ಥ ಕ್ಷೇತ್ರ ಶ್ರೀಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕತ್ರಿನಾ ಕೈಫ್ ಬಂದಿರುವ ಹಿನ್ನೆಲೆ ಇಂತಹದ್ದೊಂದು ಚರ್ಚೆ ಸದ್ಯ ನಡೆಯುತ್ತಿದೆ.

ಹೌದು, ಕತ್ರಿನಾ ಕೈಫ್ ನಿನ್ನೆ ತಡರಾತ್ರಿ ತಮ್ಮ ಸ್ನೇಹಿತೆಯರ ಜೊತೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ಧಾರೆ. ಇಂದು ಮತ್ತು ನಾಳೆ ಕ್ಷೇತ್ರದಲ್ಲಿಯೇ ಇದ್ದುಕೊಂಡು ಸೇವೆಯಲ್ಲಿ ಭಾಗಿಯಾಗಲಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಸರ್ಪ ಸಂಸ್ಕಾರ ಪೂಜೆಯಲ್ಲಿ ಭಾಗಿಯಾಗಿದ್ದಾರೆ.
ಇನ್ನು ಸಾಮಾನ್ಯವಾಗಿ ಕುಕ್ಕೆಗೆ ಮದುವೆ ಆಗದವರು, ಮಕ್ಕಳಾಗದವರು, ಚರ್ಮ ಸಮಸ್ಯೆಯಿಂದ ಬಳಲುತ್ತಿರುವವರು ಹೆಚ್ಚೆಚ್ಚು ಭೇಟಿ ನೀಡುತ್ಥಾರೆ ಎನ್ನುವ ಮಾತು ಇದೆ. ಸರ್ಪ ಸಂಸ್ಕಾರ ಪೂಜೆ ಮಾಡುವ ಮೂಲಕ ದೋಷ ನಿವಾರಣೆಯನ್ನು ಮಾಡಿಕೊಳ್ಳುತ್ತಾರೆ. ಕತ್ರಿನಾ ಕೈಫ್ ಕೂಡ ಸರ್ಪ ಸಂಸ್ಕಾರ ಪೂಜೆ ಮಾಡಿಸಿರುವ ಹಿನ್ನೆಲೆ ಸಂತಾನ ಪ್ರಾಪ್ತಿಗಾಗಿ ಕತ್ರಿನಾ ಪೂಜೆಯನ್ನು ಮಾಡಿಸಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಇನ್ನು ತಮ್ಮ ಕುಕ್ಕೆಯ ಭೇಟಿಯ ಹಿಂದಿನ ಉದ್ದೇಶವನ್ನು ಕತ್ರಿನಾ ಕೈಫ್ ಹೇಳದಿದ್ದರೂ ಮಾಸ್ಕ್ ಹಾಕಿ, ತಲೆಗೆ ದುಪ್ಪಟ್ಟ ಹಾಕಿಕೊಂಡು ಮಾಧ್ಯಮದವರ ಕ್ಯಾಮರಾ ಕಣ್ಣಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇನ್ನು ಇಂದು ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ ಪೂಜೆಯನ್ನು ನೆರವೇರಿಸಿದ ಕತ್ರಿನಾ ಕೈಫ್ ದೇವಸ್ಥಾನದಲ್ಲಿಯೇ ಅನ್ನಪ್ರಸಾದ ಸ್ವೀಕರಿಸಿ ಖಾಸಗಿ ಹೋಟೆಲ್‌ಗೆ ತೆರಳಿದ್ದಾರೆ. ನಾಳೆ ಮತ್ತೊಂದು ಪೂಜೆಯಲ್ಲಿ ಭಾಗಿಯಾಗಲಿದ್ದಾರೆ.
ಅಂದ್ಹಾಗೇ ಕುಕ್ಕೆ ಕುಮಾರಧಾರ ನದಿಯ ದಡದಲ್ಲಿರುವ ಬೆಟ್ಟಗಳ ನಡುವೆ ಇರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಸುಮಾರು 5,000 ವರ್ಷಗಳ ಇತಿಹಾಸ ಇದೆ.ಪುರಾಣದ ಪ್ರಕಾರ ಸರ್ಪರಾಜ ವಾಸುಕಿ ಮತ್ತು ಇತರೆ ಹಾವುಗಳಿಗೆ ಗರುಡ ಬೆದರಿಕೆ ಹಾಕಿದಾಗ ಸುಬ್ರಹ್ಮಣ್ಯ ಇಲ್ಲಿ ಸುರಕ್ಷಿತ ಸ್ಥಳ ನೀಡಿ ಕಾಪಾಡಿದ. ಇನ್ನು ದೇವಾಲಯ ಪ್ರವೇಶಿಸುದ್ದಂತೆ ಗರ್ಭಗುಡಿ ಮತ್ತು ಮುಖ್ಯದ್ವಾರದ ನಡುವೆ ಬೆಳ್ಳಿಯ ಗರುಡ ಗಂಬವನ್ನು ವಾಸುಕಿಯ ಉಸಿರಾಟದಿಂದ ಹೊಮ್ಮುವ ವಿಷಗಾಳಿಯಿಂದ ಭಕ್ತರನ್ನು ರಕ್ಷಿಸುವ ಸಲುವಾಗಿ ನಿಲ್ಲಿಸಲಾಗಿದೆ ಎನ್ನಲಾಗುತ್ತೆ. ಇನ್ನು ನಾಗ ದೋಷ ಸಂಬಂಧಿ ಪೂಜೆಗಳಿಗಾಗಿ ಅದರಲ್ಲಿಯೂ ಆಶ್ಲೇಷ ಬಳಿ ಹಾಗೂ ಸರ್ಪ ಸಂಸ್ಕಾರ ಇಲ್ಲಿ ನಡೆಸಿದಾಗ ಮಾತ್ರ ನಿಜವಾದ ಫಲ ಸಿಗುವ ನಂಬಿಕೆ ಇದೆ.
ಇನ್ನುಳಿದಂತೆ ಕತ್ರಿನಾ ಕೈಫ್ ಮಹಾಕುಂಭ ಮೇಳದಲ್ಲಿ ಭಾಗಿಯಾಗಿದ್ದರು. ಪುಣ್ಯ ಸ್ನಾನ ಮಾಡಿ ಪುನೀತರಾಗಿದ್ದರು. ಅದಕ್ಕೂ ಮೊದಲು ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಕೂಡ ತಮ್ಮ ಅತ್ತೆಯ ಜೊತೆ ತೆರಳಿ ದೇವರ ದರ್ಶನವನ್ನು ಕತ್ರಿನಾ ಕೈಫ್ ಮಾಡಿದ್ದರು. ಸದ್ಯ ಕತ್ರೀನಾ ಕೈಫ್ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.


Click it and Unblock the Notifications











