ಬಾಲಿವುಡ್ ಸ್ಟಾರ್ ನಟನ ಸಿನಿಮಾದಲ್ಲಿ ಸೌತ್ ಸುಂದರಿ ಕೀರ್ತಿ ಸುರೇಶ್
ಕೀರ್ತಿ ಸುರೇಶ್ ದಕ್ಷಿಣ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿ. ಮಹಾನಟಿ ಚಿತ್ರದ ನಂತರ ಅಭಿಮಾನಿಗಳ ಹಾಟ್ ಫೆವರೆಟ್ ಎನಿಸಿಕೊಂಡಿರುವ ಕೀರ್ತಿ ಸುರೇಶ್ ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇದೀಗ, ಅಭಿಮಾನಿಗಳಿಗೆ ಸರ್ಪ್ರೈಸ್ ಸುದ್ದಿಯೊಂದನ್ನು ನೀಡಿದ್ದಾರೆ.
ಕೀರ್ತಿ ಸುರೇಶ್ ಬಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ವಿಚಾರ ಕೆಲವು ದಿನಗಳಿಂದ ಚರ್ಚೆಯಾಗ್ತಿತ್ತು. ಆದರೀಗ ಕೀರ್ತಿ ಸುರೇಶ್ ಬಾಲಿವುಡ್ ಗೆ ಹೋಗುವ ಸುದ್ದಿ ಅಧಿಕೃತವಾಗಿದೆ. ಹೌದು, ಮಹಾನಟಿ ಈಗ ಬಿ ಟೌನ್ ಅಂಗಳದಲ್ಲಿ ಮಿಂಚಲಿದ್ದಾರೆ. ಹಿಂದಿಯ ಸ್ಟಾರ್ ನಟನಿಗೆ ನಾಯಕಿಯಾಗಿ ಅಭಿನಯಿಸುವ ಮೂಲಕ ಬಿಗ್ ಇಂಡಸ್ಟ್ರಿಗೆ ಲಗ್ಗೆಯಿಡ್ತಿದ್ದಾರೆ.
ಮಲಯಾಳಂ ಚಿತ್ರರಂಗದಿಂದ ಬಾಲನಟಿಯಾಗಿ ಸಿನಿಜೀವನ ಪ್ರಾರಂಭಿಸಿರುವ ಕೀರ್ತಿ, ಮಹಾನಟಿ ಚಿತ್ರದ ಮೂಲಕ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದಾರೆ. ಸದ್ಯ ಸೌತ್ ಇಂಡಿಯಾದಲ್ಲಿ ಕಮಾಲ್ ಮಾಡ್ತಿರುವ ಕೀರ್ತಿ ಈಗ ಉತ್ತರ ಭಾರತದ ಕಡೆ ಮುಖ ಮಾಡಿದ್ದಾರೆ. ಮುಂದೆ ಓದಿ..

ಅಜಯ್ ದೇವಗನ್ ಗೆ ನಾಯಕಿಯಾಗಿ ಕೀರ್ತಿ
ಬಾಲಿವುಡ್ ನಲ್ಲಿ ಸ್ಟಾರ್ ನಟನಾಗಿ ಮೆರೆಯುತ್ತಿರುವ ಅಜಯ್ ದೇವಗನ್ ಜೊತೆ ಕೀರ್ತಿ ಸುರೇಶ್ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಗಂಗಾಜಲ್, ಮಸ್ತಿ, ಗೋಲ್ ಮಾಲ್ ರಿಟರ್ನ್ಸ್, ಗೋಲ್ ಮಾಲ್ -3, ಸಿಂಗಂ, ರೈಡ್ ಹೀಗೆ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿರುವ ಅಜಯ್ ಜೊತೆ ದಕ್ಷಿಣದ ಸುಂದರಿ ಕೀರ್ತಿ ಅಭಿನಯಿಸುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.

ಅಜಯ್ ಜೊತೆ ಬಯೋಪಿಕ್ ಸಿನಿಮಾದಲ್ಲಿ ಕೀರ್ತಿ
ಇನ್ನೂ ಹೆಸರಿಡದ ಈ ಚಿತ್ರ 50ರ ದಶಕದ ಖ್ಯಾತ ಫುಟ್ ಬಾಲ್ ಕೋಚ್ ಸೈಯದ್ ಅಬ್ದುಲ್ ರಹೀಮ್ ಅವರ ಜೀವನಾಧಾರಿತ ಚಿತ್ರವಾಗಿದೆ. ಈ ಚಿತ್ರದಲ್ಲಿ ಅಜಯ್ ದೇವಗನ್, ಸೈಯದ್ ಅಬ್ದುಲ್ ರಹೀಮ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, ಕೀರ್ತಿ, ಸೈಯದ್ ಪತ್ನಿಯ ಪಾತ್ರದಲ್ಲಿ ಮಿಂಚಲಿದ್ದಾರೆ. ಚಿತ್ರಕ್ಕೆ ಅಮಿತ್ ಶರ್ಮ ನಿರ್ದೇಶನ ಮಡುತ್ತಿದ್ದಾರೆ.

ದರ್ಶನ್ ಚಿತ್ರದಲ್ಲಿ ಮಹಾನಟಿ.!
ಈಗಾಗಲೇ ತಮಿಳು, ತೆಲುಗು, ಮಲಯಾಳಂ ಮತ್ತು ಈಗ ಬಾಲಿವುಡ್ ನಲ್ಲಿ ಅಭಿನಯಿಸುತ್ತಿರುವ ಕೀರ್ತಿ ಸ್ಯಾಂಡಲ್ ವುಡ್ ಗೂ ಎಂಟ್ರಿ ಕೊಡುವ ಸಾದ್ಯತೆ ಇದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಗಂಡುಗಲಿ ಮದಕರಿ ನಾಯಕ' ಚಿತ್ರದಲ್ಲಿ ಕೀರ್ತಿ ನಾಯಕಿಯಾಗಿ ಮಿಂಚಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಇನ್ನೂ ಇದೂ ಅಧಿಕೃತವಾಗಿಲ್ಲ.

ಕೀರ್ತಿ ಸುರೇಶ್ ಸಿನಿಮಾಗಳು
ನಿರ್ದೇಶಕರ ನೆಚ್ಚಿನ ನಟಿ ಕೀರ್ತಿ ಬಳಿ ಈಗಾಗಲೇ ತಮಿಳು, ತೆಲುಗು ಮತ್ತು ಮಲಯಾಳಂನ ಒಂದೊಂದು ಸಿನಿಮಾಗಳಿವೆ. ಇದರ ಜೊತೆಗೆ ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿದ್ದಾರೆ ಎನ್ನವ ಮಾತು ಕೇಳಿಬರುತ್ತಿದೆ.


Click it and Unblock the Notifications











