KGF 2 Ticket Price: ಬೆಂಗಳೂರಲ್ಲಿ ಮಾತ್ರ 'ಕೆಜಿಎಫ್ 2' ದುಬಾರಿ, ಮುಂಬೈ, ದೆಹಲಿ, ಚೆನ್ನೈನಲ್ಲಿ ಸಸ್ತಾ
'ಕೆಜಿಎಫ್ 2' ರಿಲೀಸ್ ಆಗಿ ಚಿತ್ರ ಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ದೇಶದಾದ್ಯಂತ ಚಿತ್ರದ ಘರ್ಜನೆ ಜೋರಾಗಿ ಇದೆ. ಸಿನಿಮಾ ನೋಡಿದ ಮಂದಿ ರಾಕಿ ಭಾಯ್‌ಗೆ ಜೈಕಾರ ಹಾಕುತ್ತಿದ್ದಾರೆ. ಸಿನಿಮಾಗೆ ಇರುವ ಕ್ರೇಜ್‌ನಿಂದಾಗಿ ಚಿತ್ರದ ಟಿಕೆಟ್ ಎಷ್ಟೇ ದುಬಾರಿ ಆದರೂ, ಜನ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುತ್ತಿದ್ದಾರೆ.
ದೇಶದದ್ಯಂತ 'ಕೆಜಿಎಫ್ 2' ಚಿತ್ರ ರಿಲೀಸ್ ಆಗಿದೆ. ಆದರೆ ಈ ಚಿತ್ರ ದುಡ್ಡು ಇರುವವರಿಗೆ ಮಾತ್ರ ಎನ್ನುವ ಪರಿಸ್ಥಿತಿ ಎದುರಾಗಿದೆ. ಚಿತ್ರದಲ್ಲಿ ಮನೋರಂಜನೆ ಬಿಟ್ಟರೆ ಮತ್ತೇನು ಸಿಗಲು ಸಾಧ್ಯವಿಲ್ಲ. ಇದೇ ಮನೋರಂಜನೆಗಾಗಿ ಚಿತ್ರ ತಂಡ ಕೋಟಿ, ಕೋಟಿ ಬಂಡವಾಳ ಹೂಡಿದೆ. ಆ ಬಂಡವಾಳದ ವಸೂಲಿಗಾಗಿ, ಲಾಭಕ್ಕಾಗಿ ಟಿಕೆಟ್ ದರವನ್ನು ಹೆಚ್ಚು ಮಾಡಲಾಗುತ್ತದೆ.
ಇದಕ್ಕೆ 'ಕೆಜಿಎಫ್ 2' ಚಿತ್ರ ಹೊರತಲ್ಲ. ಇಂಥಹ ದೊಡ್ಡ ಚಿತ್ರಗಳ ಟಿಕೆಟ್ ದರ ಹೆಚ್ಚಾಗಿಯೇ ಇರುತ್ತದೆ. ಈ ಹಿಂದೆ ಬಂದ RRR ಚಿತ್ರದ ಟಿಕೆಟ್ ದರ ಕೂಡ ಗಗನಕ್ಕೇರಿತ್ತು. ಈಗ 'ಕೆಜಿಎಫ್ 2' ಚಿತ್ರದ್ದು ಕೂಡ ಅದೇ ಕಥೆ. ಟಿಕೆಟ್ ದರ ಮಾತ್ರ ಸಿಕ್ಕಾಪಟ್ಟೆ ದುಬಾರಿ ಆಗಿದೆ. ಹಾಗಿದ್ದರೆ ಎಲ್ಲೆಲ್ಲಿ, ಎಷ್ಟು ದರ ಇದೆ ಎನ್ನುವುದನ್ನು ಮುಂದೆ ಓದಿ...

ಬೆಂಗಳೂರಿನಲ್ಲಿ 500 ರಿಂದ 2000 ರೂ. ಟಿಕೆಟ್ ದರ!
ಬೆಂಗಳೂರಿನಲ್ಲಿ 'ಕೆಜಿಎಫ್ 2' ಚಿತ್ರದ ಅಬ್ಬರ ಜೋರಾಗಿದೆ. ಚಿತ್ರದ ಮೊದಲ ದಿನದಿಂದ ಜನ ಮುಗಿ ಬಿದ್ದು ಚಿತ್ರವನ್ನು ನೋಡುತ್ತಿದ್ದಾರೆ. ಸಿನಿಮಾ ಬಗ್ಗೆ ಅತಿ ಹೆಚ್ಚು ಕ್ರೇಜ್ ಹೊಂದಿರುವವರು ಸದ್ಯ ಚಿತ್ರವನ್ನು ನೋಡುತ್ತಿದ್ದಾರೆ. ಚಿತ್ರದ ಟಿಕೆಟ್ ದರ ಬೆಂಗಳೂರಿನಲ್ಲಿ ಬಹುತೇಕ ಕಡೆ ಆರಂಭ ಆಗುವುದೆ 500 ರೂ. ಇಂದ. ಇದಕ್ಕಿಂತ ಕಡಿಮೆ ಇರೋದು ಅತಿ ವಿರಳ. ಇನ್ನು ಗರಿಷ್ಟ ಎಂದರೆ 1500 ರಿಂದ 2000 ರೂ ತನಕವೂ ಚಿತ್ರದ ಟಿಕೆಟ್ ಬೆಲೆ ಇದೆ.

ಮುಂಬೈನಲ್ಲಿ 110ಕ್ಕೆ 'ಕೆಜಿಎಫ್ 2' ಟಿಕೆಟ್ ದರ!
'ಕೆಜಿಎಫ್ 2' ಚಿತ್ರದ ಬಗ್ಗೆ ಉತ್ತರ ಭಾರತದಲ್ಲಿ ಹೆಚ್ಚಿನ ಕ್ರೇಜ್ ಇದೆ. ಅಂತೆಯೇ ಹಿಂದಿ ಅವತರಣಿಕೆಯ 'ಕೆಜಿಎಫ್ 2' ಚಿತ್ರ ಉತ್ತಮ ಕಲೆಕ್ಷನ್ ಮಾಡುತ್ತಾ ಇದೆ. ಅಲ್ಲಿ ಟಿಕೆಟ್ ದರ ದುಬಾರಿ ಏನು ಇಲ್ಲ. ಕಡಿಮೆ ಬೆಲೆಗೆ ಟಿಕೆಟ್ ಮಾರಾಟ ಮಾಡಲಾಗುತ್ತಾ ಇದೆ. 110 ರೂ. ಯಿಂದ ಮುಂಬೈ ಚಿತ್ರಮಂದಿರಗಳಲ್ಲಿ 'ಕೆಜಿಎಫ್ 2' ಚಿತ್ರದ ಟಿಕೆಟ್ ಬುಕ್ ಮಾಡಬಹುದಾಗಿದೆ.

ಹೈದ್ರಾಬಾದ್, ಚೆನ್ನೈನಲ್ಲೂ 'ಕೆಜಿಎಫ್ 2' ಟಿಕೆಟ್ ದರ ಕಡಿಮೆ!
ಇನ್ನು ಹೈದ್ರಾಬಾದ್ ಮತ್ತು ಚೆನ್ನೈನಲ್ಲೂ ಕೂಡ 'ಕೆಜಿಎಫ್ 2' ಚಿತ್ರದ ಟಿಕೆಟ್ ದರ ಕಡಿಮೆಯೇ ಇದೆ. ಚೆನ್ನೈನಲ್ಲಿ ಅತ್ಯಂತ ಕಡಿಮೆ ಬೆಲೆಗೆ 'ಕೆಜಿಎಫ್ 2' ಚಿತ್ರದ ಟಿಕೆಟ್ ಬೆಲೆ ಇದೆ. 90 ರೂಪಾಯಿಗೂ ಕೂಡ ಚೆನ್ನೈನಲ್ಲಿ ಟಿಕೆಟ್ ಬುಕ್ ಮಾಡ ಬಹುದಾಗಿದೆ. ಇನ್ನು ಹೈದ್ರಾಬಾದ್‌ನಲ್ಲಿ ಟಿಕೆಟ್ ದರ ಕೂಡ ಅಷ್ಟೇನು ದುಬಾರಿ ಇಲ್ಲ. ಅಲ್ಲಿಯೂ 150ರಿಂದ ಬುಕ್ಕಿಂಗ್ ಲಭ್ಯವಿದೆ. 250, 300 ರೂ.ಗೂ ಟಿಕೆಟ್ ಲಭ್ಯವಿದೆ.

ದುಬಾರಿ ಆದ ಮನೋರಂಜನೆ!
ಈ ಟಿಕೆಟ್ ದರದಿಂದಾಗಿ ಮಧ್ಯಮವರ್ಗದ ಜನರು ಚಿತ್ರವನ್ನು ನೋಡಲು ಸಾಧ್ಯವಾಗುದಿಲ್ಲ. ಒಂದು ಟಿಕೆಟ್‌ಗೆ ಸಾವಿರ ರೂಪಾಯಿ ಕೊಡಬೇಕು ಎಂದರೆ, ಮನೆ ಮಂದಿ ಜೊತೆಗೆ ಹೋದರೆ ಸಾವಿರಾರು ರೂ ಖರ್ಚು ಕಂಡಿತಾ. ಹಾಗಾಗಿ ಸಿನಿಮಾ ನೋಡಲು ಹಲವರಿಗೆ ಸಾಧ್ಯವಾಗುವುದಿಲ್ಲ. ಇದು 'ಕೆಜಿಎಫ್' ಚಿತ್ರಕ್ಕೆ ಮಾತ್ರ ಅನ್ವಯ ಆಗುವುದಿಲ್ಲ. ಇತ್ತೀಚೆಗೆ ಬಂದ RRR ಚಿತ್ರದ ದರ ಕೂಡ ಅಷ್ಟೇ ದುಬಾರಿಯಾಗಿ ಇತ್ತು.


Click it and Unblock the Notifications











