ಬಾಲಿವುಡ್‌ನಲ್ಲಿ ರವಿ ಬಸ್ರೂರ್‌ಗೆ ಭಾರೀ ಡಿಮ್ಯಾಂಡ್ ; ಸೂಪರ್ ಸ್ಟಾರ್ ಚಿತ್ರಕ್ಕೆ ಕನ್ನಡಿಗನ ಮ್ಯೂಸಿಕ್
ಪ್ರತಿಭಾ ಪಲಾಯನ ಅನ್ನುವುದು ಇಂದು ನಿನ್ನೆಯದಲ್ಲ. ಬಹಳ ಹಿಂದಿನಿಂದ್ಲೂ ಪ್ರತಿಭೆ ಇದ್ದೋರು ಒಂದ್ಕಡೆಯಿಂದ ಮತ್ತೊಂದ್ಕಡೆ ಹೋಗೋದು ನಡೀತಾನೆ ಇದೆ. ಅದರಲ್ಲಿಯೂ ಕನ್ನಡ ಚಿತ್ರರಂಗದಿಂದ ಇಲ್ಲಿಯವರೆಗೆ ಅನೇಕ ನಾಯಕಿಯರು ಪರಭಾಷೆಗೆ ವಲಸೆ ಹೋಗಿದ್ದಾರೆ. ಕೆಲವರು ಅಲ್ಲಿಯೇ ಬದುಕು ಕಟ್ಟಿಕೊಂಡರೆ ಇನ್ನು ಹಲವರು ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಮರಳಿ ಬಂದಿದ್ದಾರೆ.
ಇನ್ನೂ ಹೀಗೆ ಗುಳೆ ಹೋಗುವರಲ್ಲಿ ಕೆಲವರು ಚಿತ್ರ ಮತ್ತು ಪಾತ್ರ ಚೆನ್ನಾಗಿದೆ ಎಂದು ಹೋದರೆ, ಇನ್ನು ಕೆಲವರು ಇಲ್ಲಿ ಸಿಗುವ ಸಂಭಾವನೆಗಿಂತ ಹೆಚ್ಚು ಅಲ್ಲಿ ಸಿಗುತ್ತೆ ಎಂದು ಹೋಗುತ್ತಾರೆ. ಎಲ್ಲವೂ ಅವರವರ ನಿರ್ಧಾರ ಮತ್ತು ಬದುಕಾದರೂ ಕೂಡ ಕೇವಲ ನಾಯಕಿಯರು ಮಾತ್ರವಲ್ಲ, ಈಗೀಗ ನಿರ್ದೇಶಕರು ಮತ್ತು ಸಂಗೀತ ನಿರ್ದೇಶಕರು ಕೂಡ ಪರಭಾಷೆಯ ಪಾಲಾಗುತ್ತಿದ್ಧಾರೆ. ಬ್ಯುಸಿಯಾಗುತ್ತಿದ್ಧಾರೆ. ಆ ಪೈಕಿ ರವಿ ಬಸ್ರೂರ್ ಕೂಡ ಒಬ್ಬರು.

ಹೌದು, ರವಿ ಬಸ್ರೂರ್ .. ಕುಂದಾಪುರದ ಪ್ರತಿಭಾವಂತ. ಒಂದ್ಕಾಲದಲ್ಲಿ ಅವಕಾಶಕ್ಕೆ ಎದುರು ನೋಡುತ್ತಿದ್ದ ರವಿ ಬಸ್ರೂರ್ ಅವರ ಕೈಯಲ್ಲಿಗ ಭರಪೂರ ಅವಕಾಶಗಳಿವೆ. ''ಕೆಜಿಎಫ್'' ಎಂಬ ಒಂದೇ ಒಂದು ಚಿತ್ರ ರವಿ ಬಸ್ರೂರ್ ಅವರನ್ನು ಇಂದು ಎಲ್ಲಿಂದ ಎಲ್ಲಿಗೋ ಕರೆದೊಯ್ದು ನಿಲ್ಲಿಸಿದೆ.
ಇವತ್ತು ಕನ್ನಡ ಚಿತ್ರಕ್ಕೆ ಸಂಗೀತ ನೀಡಲು ರವಿ ಬಸ್ರೂರ್ ಅವರ ಬಳಿ ಸಮಯ ಇಲ್ಲ. ಅಷ್ಟರ ಮಟ್ಟಿಗೆ ಬೇರೆ ಭಾಷೆಗಳಲ್ಲಿ ಆಕ್ಯುಪೈಡ್ ಆಗಿದ್ಧಾರೆ ರವಿ ಬಸ್ರೂರ್. ಇದಕ್ಕೆ ಕೈಗನ್ನಡಿ ಎಂಬಂತೆ ಕನ್ನಡದಲ್ಲಿ ''ಭೈರತಿ ರಣಗಲ್'' ಚಿತ್ರವೇ ಕೊನೆ. ಆ ನಂತರ ಬೇರೆ ಯಾವ ಕನ್ನಡ ಚಿತ್ರಕ್ಕೂ ರವಿ ಬಸ್ರೂರ್ ಸಂಗೀತವನ್ನು ನೀಡಿಲ್ಲ.
ಹೀಗಿರುವಾಗ ಇದೀಗ ರವಿ ಬಸ್ರೂರ್ ಮತ್ತೊಂದು ಹಿಂದಿ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಆ ಚಿತ್ರ ಬೇರೆ ಯಾವುದು ಅಲ್ಲ. ಬದಲಿಗೆ ದೃಶ್ಯಂ 3 ಅನ್ನೋದೇ ವಿಶೇಷ. ಹೌದು. ಈಗಾಗಲೇ ಅನೇಕರಿಗೆ ತಿಳಿದಿರುವಂತೆ ಮಲಯಾಳಂನಲ್ಲಿ ''ದೃಶ್ಯಂ 3'' ಬಂದ ಬೆನ್ನಲ್ಲೇ ಹಿಂದಿಯಲ್ಲಿ ಕೂಡ ''ದೃಶ್ಯಂ 3'' ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ.
ಮೊನ್ನೆ ಮೊನ್ನೆಯಷ್ಟೇ ಈ ಚಿತ್ರದ ಚಿತ್ರೀಕರಣ ಕೂಡ ಪೂರ್ಣಗೊಂಡಿದೆ. ವಿಶೇಷ ಅಂದರೆ ಹಿಂದಿಯ ಹಿಂದಿನ ಎರಡು ''ದೃಶ್ಯಂ'' ಚಿತ್ರಗಳು ಮೋಹನ್ ಲಾಲ್ ''ದೃಶ್ಯಂ'' ನೆರಳಿನಾಚೆ ಬಂದಿರಲಿಲ್ಲ. ಆದರೆ ಈ ಬಾರಿ ಅಜಯ್ ದೇವಗನ್ ಅಭಿನಯದ ಈ ''ದೃಶ್ಯಂ 3'' ಚಿತ್ರಕ್ಕೂ ಮೋಹನ್ ಲಾಲ್ ಅಭಿನಯದ ''ದೃಶ್ಯಂ 3'' ಚಿತ್ರಕ್ಕೂ ಅಜಗಜಾಂತರ ವ್ಯತ್ಯಾಸ ಇರಲಿದೆ.

ಈ ಹಿನ್ನೆಲೆ ಹಿಂದಿಯ ''ದೃಶ್ಯಂ 3'' ಚಿತ್ರವನ್ನು ನೋಡುವ ಉತ್ಸಾಹ ಮತ್ತು ಕುತೂಹಲ ಹಲವರಲ್ಲಿದೆ. ಈ ಕುತೂಹಲ ಈಗ ಇನ್ನೂ ಹೆಚ್ಚಾಗಿದ್ದು ರವಿ ಬಸ್ರೂರ್ ಅವರ ಹೆಗಲಿಗೆ ಚಿತ್ರದ ಸಂಗೀತ ನಿರ್ದೇಶನದ ಜವಾಬ್ಧಾರಿಯನ್ನು ವಹಿಸಲಾಗಿದೆ.
ಅಭಿಷೇಕ್ ಪಾಠಕ್ ನಿರ್ದೇಶನದ ಈ ಚಿತ್ರದಲ್ಲಿ ಅಜಯ್ ದೇವಗನ್, ಟಬು ಮತ್ತು ಶ್ರೀಯಾ ಸರನ್ ಜೊತೆ ಜೈದೀಪ್ ಅಹ್ಲಾವತ್ ಮತ್ತು ಪ್ರಕಾಶ್ ರಾಜ್ ಕೂಡ ಈ ಬಾರಿ ಇದ್ದಾರೆ. ಸ್ಟಾರ್ ಸ್ಟುಡಿಯೋ 18 ಮತ್ತು ಪನೋರಮಾ ಸ್ಟುಡಿಯೋಸ್ ಚಿತ್ರಕ್ಕೆ ಹಣ ಹೂಡಿವೆ. ಅಜಯ್ ದೇವಗನ್ ಅತ್ಯಾಪ್ತರಾದ
ಕುಮಾರ್ ಮಂಗತ್ ಪಾಠಕ್ ಮತ್ತು ಅಭಿಷೇಕ್ ಪಾಠಕ್ ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.
ಅಂದ್ಹಾಗೇ ''ದೃಶ್ಯಂ 3'' ಅಜಯ್ ದೇವಗನ್ ಮತ್ತು ರವಿ ಬಸ್ರೂರ್ ಕಾಂಬಿನೇಷನ್‌ನ ಮೂರನೇ ಸಿನಿಮಾ. ಈ ಹಿಂದೆ ಅಜಯ್ ದೇವಗನ್ ನಿರ್ದೇಶನದ ''ಭೋಲಾ'' ಮತ್ತು ರೋಹಿತ್ ಶೆಟ್ಟಿ ನಿರ್ದೇಶನದ ''ಸಿಂಘಂ ಅಗೇನ್'' ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನೀಡಿದ್ದರು. ಈಗ ''ದೃಶ್ಯಂ 3'' ಸರದಿ. ಅಕ್ಟೋಬರ್ 2, 2026 ರಂದು ಚಿತ್ರ ಬಿಡುಗಡೆಯಾಗಲಿದೆ.


Click it and Unblock the Notifications