ಮದುವೆ ಬಳಿಕ ಇಂತಹ ದೃಶ್ಯಗಳಲ್ಲಿ ನಟಿಸ್ತೀರಾ? 'ಟಾಕ್ಸಿಕ್' ಟ್ರೋಲ್ ಬೆನ್ನಲ್ಲೇ ಕಿಯಾರಾ ಹೇಳಿಕೆ ವೈರಲ್
'ಟಾಕ್ಸಿಕ್' ಚಿತ್ರದ ಹಸಿಬಿಸಿ ದೃಶ್ಯಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹೆಚ್ಚುತ್ತಲೇ ಇದೆ. ಚಿತ್ರತಂಡ ಮಾತ್ರ ಪ್ರತಿಕ್ರಿಯಿಸುವ ಗೋಜಿಗೆ ಹೋಗಿಲ್ಲ. ಇತ್ತೀಚೆಗೆ ಬಂದ 'ಲೇಡಿಸ್ & ಲೇಡಿಸ್' ಟೀಸರ್‌ನಲ್ಲಿ ಕೂಡ ಅಂತಹ ಕೆಲ ದೃಶ್ಯಗಳಿವೆ. ನಾಯಕಿ ಕಿಯಾರಾ ಅದ್ವಾನಿ ಕೂಡ ಬಿಂದಾಸ್ ಆಗಿ ನಟಿಸಿದ್ದಾರೆ. ಟೀಸರ್ ನೋಡ್ತಿದ್ರೆ ಚಿತ್ರದಲ್ಲಿ ಯಶ್ ಹಾಗೂ ಕಿಯಾರಾ ನಡುವೆ ಹಸಿಬಿಸಿ ದೃಶ್ಯಗಳಿರುವುದು ಗೊತ್ತಾಗುತ್ತಿದೆ.
ಕಿಯಾರಾ ಇಂತಹ ದೃಶ್ಯಗಳಲ್ಲಿ ನಟಿಸಿರುವ ಬಗ್ಗೆ ಟೀಕೆ ವ್ಯಕ್ತವಾಗುತ್ತಿದೆ. ಮದುವೆ ಬಳಿಕ ಇಂತಹ ದೃಶ್ಯಗಳಲ್ಲಿ ನಟಿಸ್ಬೋದಾ? ಇದಕ್ಕೆ ಪತಿ ಸಿದ್ದಾರ್ಥ್ ಮಲ್ಹೋತ್ರಾ ಏನು ಹೇಳಲ್ವಾ ಎಂದು ಕೆಲವರು ಚಕಾರ ಎತ್ತಿದ್ದಾರೆ. ಮುಂಬೈ ಬೆಡಗಿ ಮೈಚಳಿ ಬಿಟ್ಟು ನಟಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಇಂತಹ ದೃಶ್ಯಗಳಲ್ಲಿ ನಟಿಸಿದ್ದಾರೆ. ಕೆಲವೊಮ್ಮೆ ಇಂತಹ ಟೀಕೆಗಳು ನೋವು ತರುತ್ತದೆ. ಆದರೆ ಪತಿ ಸಿದ್ದಾರ್ಥ್ ಬೆಂಬಲಕ್ಕೆ ನಿಲ್ಲುತ್ತಾರೆ. ಹಾಗಾಗಿ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಕಿಯಾರಾ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು. 'ಟಾಕ್ಸಿಕ್' ಟೀಸರ್ ಬಗ್ಗೆ ಚರ್ಚೆ ಆಗುತ್ತಿದ್ದಂತೆ ಈ ವೀಡಿಯೋವನ್ನು ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ.

ಮದುವೆ ಬಳಿಕ ಕೂಡ ಬಿಂದಾಸ್ ಆಗಿ ನಟಿಸುವ ಬಗ್ಗೆ ಕಿಯಾರಾ ಅದ್ವಾನಿ ಅಭಿಪ್ರಾಯ ಕೇಳಿ ಎನ್ನುತ್ತಿದ್ದಾರೆ. 3 ವರ್ಷಗಳ ಹಿಂದೆ Film Companion Studios ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಕಿಯಾರಾ ಭಾಗಿ ಆಗಿದ್ದರು. ಆಗ ಸೋಶಿಯಲ್ ಮೀಡಿಯಾ ಟ್ರೋಲ್ ಬಗ್ಗೆ ಮಾತನಾಡಿದ್ದರು. ನಾನು ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾದಲ್ಲಿ ನೋಡಲ್ಲ. ಆದರೆ ಸಿನಿಮಾ ಬಿಡುಗಡೆ ಸಮಯದಲ್ಲಿ ಪ್ರೇಕ್ಷಕರ ರೆಸ್ಪಾನ್ಸ್ ಹೇಗಿರುತ್ತೆ ಎಂದು ತಿಳಿದುಕೊಳ್ಳಲು ಓದುತ್ತೀನಿ. ಒಳ್ಳೆ ಕಾಮೆಂಟ್ಸ್ ಕೂಡ ಇರುತ್ತೆ. ಆದ್ರೆ ಕೆಲವೊಮ್ಮೆ ನೆಗೆಟಿವ್ ಜಾಸ್ತಿ ಇರುವುದು ನೋಡಿದಾಗ ಬೇಸರವಾಗುತ್ತದೆ ಎಂದಿದ್ದರು.
"ಮದುವೆ ಬಳಿಕ ನಾನು ನಟಿಸಿದ 'ಸತ್ಯಪ್ರೇಮ್ ಕಿ ಕಥಾ' ಸಿನಿಮಾ ಬಿಡುಗಡೆಯಾಗಿತ್ತು. ಸೋಶಿಯಲ್ ಮೀಡಿಯಾ ನನ್ನ ಮೇಲೆ ಬಹಳ ಪ್ರಭಾವ ಬೀರುತ್ತಿದೆ ಎನಿಸಿತ್ತು. ಏಕೆಂದರೆ ನಾನು ಆಗಷ್ಟೇ ಮದುವೆಯಾಗಿದ್ದೆ... ಓ ಇಸ್ನೇ ಯೇ ಕಿಯು ಕಿಯಾ ಹೈ, ವೋ ಕಿಯು ಕಿಯಾ ಹೈ(ಅವಳು ಈಗ ಯಾಕೆ ಇಂತಹ ದೃಶ್ಯಗಳಲ್ಲಿ ನಟಿಸುತ್ತಿದ್ದಾಳೆ) ಎನ್ನುವ ಕಾಮೆಂಟ್ಸ್ ಬಂದಿತ್ತು. ಅಂದ್ರೆ ಮದುವೆ ಬಳಿಕ ಇದೆಲ್ಲಾ ಬೇಕಾ ಎನ್ನುವ ಅರ್ಥದಲ್ಲಿ ಬರೆದಿದ್ದರು. "ಅರೇ, ಅಷ್ಟಕ್ಕೂ ಏನಾಯ್ತು? ಅನಿಸಿತು. ಕಾರಣ ಅದು ಹೊಸ ಸಂಗತಿಯಾಗಿತ್ತು. ಒಂದ್ಕಡೆ ಮನಸ್ಸಿಗೆ ಬಂದಂತೆ ಟ್ರೋಲ್ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಮದುವೆ ಆಗಿದ್ದೇವೆ ಎನ್ನುವ ಕಾರಣಕ್ಕೆ ನೀವು ಕೆಲ ವಿಷಯ ಹೇಳಬೇಕು ಅಥವಾ ಮಾಡಬೇಕೆಂದು ನಿರೀಕ್ಷಿಸುತ್ತಿದ್ದಾರೆ. ಇಂತಹ ಮಾತುಗಳು ನನ್ನ ಮೇಲೆ ಪರಿಣಾಮ ಬೀರಿದ್ದು ನಿಜ ಎಂದು ಕಿಯಾರಾ ಒಪ್ಪಿಕೊಂಡಿದ್ದಾರೆ.
ಆನ್‌ಲೈನ್ ಕಾಮೆಂಟ್ಸ್ ಓದುವುದು ನನಗೆ ಕೆಟ್ಟ ಅಭ್ಯಾಸ ಆಗಿಬಿಟ್ಟಿದೆ. ಅದನ್ನು ಕಮ್ಮಿ ಮಾಡಬೇಕು ಎಂದು ಕಿಯಾರಾ ತಿಳಿಸಿದ್ದರು. "ಮದುವೆ ಬಳಿಕ ಇಂತಹ ನೆಗೆಟಿವಿಟಿ ನನಗೆ ನೋವು ತಂದಿದ್ದು ನಿಜ. ನಾನು ಇದನ್ನು ಪತಿ ಸಿದ್ದಾರ್ಥ್ ಜೊತೆ ಚರ್ಚಿಸಲಿಲ್ಲ. ಕಾರಣ ಅದರ ಬಗ್ಗೆ ಯೋಚಿಸಿದಷ್ಟು ಮಾತನಾಡಿದ್ದಷ್ಟು ನಾನು ಅದರ ಆಳಕ್ಕೆ ಇಳಿಯುತ್ತೇನೆ. ಸಿದ್ದಾರ್ಥ್ ಕೂಡ ಅಂತಹ ಟ್ರೋಲ್ ಎಲ್ಲಾ ಓದಿದ್ರು. ಅದನ್ನೆಲ್ಲಾ ದೊಡ್ಡದು ಮಾಡುವುದು ಬೇಡ ಎಂದು ಸುಮ್ಮನಿದ್ರು ಎಂದು ಕಿಯಾರಾ ವಿವರಿಸಿದ್ದರು.
ಕೊನೆಗೂ ಆ ವಿಚಾರದ ಬಗ್ಗೆ ಸಿದ್ದಾರ್ಥ್ ನನ್ನ ಬಳಿ ಮಾತನಾಡಿದ್ದರು. ಬೆಂಬಲಕ್ಕೆ ನಿಂತರು ಎಂದು ಕಿಯಾರಾ ಮೆಲುಕು ಹಾಕಿದ್ದರು. "ನೋಡು ಈ ನೆಗೆಟಿವ್ ಟ್ರೋಲರ್‌ಗಳು ಯಾವಾಗಲೂ ಇರ್ತಾರೆ.. ಅದಕ್ಕೆ ಅಷ್ಟೆಲ್ಲಾ ಪ್ರಾಮುಖ್ಯತೆ ಕೊಟ್ಟು ಮನೆಯಲ್ಲಿ ಅಳ್ತಾ ಕೂರುವುದರಲ್ಲಿ ಅರ್ಥವಿಲ್ಲ. ನಿನಗೆ ಏನಾಗಿದೆ? ಟ್ರೋಲ್ ಮಾಡುವವರು ಯಾರು ಅಂತ ನಿನಗೆ ಗೊತ್ತಿಲ್ಲ. ವೈಯಕ್ತಿಕವಾಗಿ ನಿನ್ನ ಪರಿಚಯ ಅವರಿಗಿಲ್ಲ. ನಾವು ಮದುವೆ ಆಗಿದ್ದು ಕೆಲ ಅಭಿಮಾನಿಗಳಿಗೆ ಇಷ್ಟವಿಲ್ಲದಿರಬಹುದು. ಹಾಗೆ ಇರಲಿ ಬಿಡಿ. ನೀನು ಯಾಕೆ ತಲೆ ಕೆಡಿಸಿಕೊಳ್ತೀಯಾ ಅಂದ್ರು.. ಸಿದ್ದಾರ್ಥ್ ಅಷ್ಟು ಪ್ರಬುದ್ಧರಾಗಿದ್ದರೆ, ನಾನು ಯಾಕೆ ಇಷ್ಟೆಲ್ಲಾ ತಲೆಕೆಡಿಸಿಕೊಂಡಿದ್ದೀನಿ ಅಂತ ಗೊತ್ತಾಯ್ತು. ದೇವ್ರೇ ಧನ್ಯವಾದ.. ನನಗೆ ಹೀಗೆ ಬೆಂಬಲವಾಗಿ ನಿಂತು ಧೈರ್ಯ ತುಂಬುವವರು ಇದ್ದಾರೆ" ಎಂದು ಕಿಯಾರಾ ಹೇಳಿದ್ದರು.


Click it and Unblock the Notifications