ಕನ್ನಡ ಚಿತ್ರರಂಗದಲ್ಲೇ ಹೊಸ ದಾಖಲೆ; 'ಟಾಕ್ಸಿಕ್' ಚಿತ್ರಕ್ಕೆ ಕಿಯಾರ ಸಂಭಾವನೆ ಎಷ್ಟು ಗೊತ್ತಾ?
ಕನ್ನಡ ಫಿಲ್ಮ್ ಮೇಕರ್ಸ್ ಕೂಡ ದೊಡ್ಡ ದೊಡ್ಡ ಕನಸುಗಳು ಕಾಣುತ್ತಿದ್ದಾರೆ. ಪ್ಯಾನ್ ಇಂಡಿಯಾ ಟ್ರೆಂಡ್ ಅದಕ್ಕೆ ಬಲ ತಂದಿದೆ. ನೂರಾರು ಕೋಟಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಸಿನಿಮಾ ಸ್ಕೇಲ್, ಮೇಕಿಂಗ್ ಸ್ಟೈಲ್, ಕಲಾವಿದರು, ತಂತ್ರಜ್ಞರ ಸಂಭಾವನೆ ಕೂಡ ಹೆಚ್ಚುತ್ತಿದೆ.
ನಟಿಯರಿಗೆ ಸಂಭಾವನೆ ವಿಚಾರದಲ್ಲಿ ತಾರತಮ್ಯ ಇದೆ. ನಾವು ಎಷ್ಟೇ ಶ್ರಮಪಟ್ಟರೂ ನಮ್ಮ ಗುರ್ತಿಸಲ್ಲ, ಹೆಚ್ಚು ಸಂಭಾವನೆ ಕೊಡಲ್ಲ ಎನ್ನುವ ಆರೋಪವನ್ನು ನಟಿಯರು ಮಾಡುತ್ತಿರುತ್ತಾರೆ. ಆದರೆ ಇತ್ತೀಚೆಗೆ ಬೇಡಿಕೆಗೆ ತಕ್ಕಂತೆ ಸಂಭಾವನೆ ಕೊಡಲಾಗುತ್ತಿದೆ. ಸ್ಟಾರ್ ನಟರಿಗೆ ಹೋಲಿಸಿದರೆ ಕಮ್ಮಿ ಇರಬಹುದು. ಆದರೆ ವೈಯಕ್ತಿಕವಾಗಿ ನಟಿಯರು ಕೋಟಿ ಕೋಟಿ ತಮ್ಮ ಬ್ಯಾಗಿಗೆ ಇಳಿಸುತ್ತಿದ್ದಾರೆ.

ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಟಾಕ್ ಆಫ್ ದ ಟೌನ್ ಆಗಿದೆ. ಈಗಾಗಲೇ 3 ಶೆಡ್ಯೂಲ್ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರದಲ್ಲಿ ಕಿಯಾರಾ ಅದ್ವಾನಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಸಿಗದೇ ಇದ್ದರೂ ಆಕೆ ನಟಿಸುತ್ತಿರುವುದು ಖಚಿತವಾಗಿದೆ. ಸದ್ಯ ಚಿತ್ರಕ್ಕಾಗಿ ಆಕೆ ಪಡೆಯುತ್ತಿರುವ ಸಂಭಾವನೆ ವಿಚಾರ ಬಾಲಿವುಡ್‌ನಲ್ಲಿ ಕೂಡ ದೊಡ್ಡದಾಗಿ ಸದ್ದು ಮಾಡ್ತಿದೆ. ಕನ್ನಡ ಚಿತ್ರಕ್ಕಾಗಿ ಈ ಹಿಂದೆ ಯಾವುದೇ ನಟಿಗೆ ಸಿಗದಷ್ಟು ಸಂಭಾವನೆ ಕಿಯಾರಾ ಪಡೆಯುತ್ತಿದ್ದಾರೆ.
ಕನ್ನಡದಲ್ಲಿ ಹಿಂದೆ ರಮ್ಯಾ ಅತಿಹೆಚ್ಚು ಸಂಭಾವನೆ ಪಡೆದ ನಟಿ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ರಚಿತಾ ರಾಮ್ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಆದರೆ ಅವರೆಲ್ಲರಿಗಿಂತ ಹಲವು ಪಟ್ಟು ಹೆಚ್ಚು ಸಂಭಾವನೆ ಕಿಯಾರಾ ಅದ್ವಾನಿಗೆ ಸಿಕ್ಕಿದೆ. ಆಕೆ ಬಾಲಿವುಡ್ ನಟಿಯೇ ಇರಬಹುದು. ಆದರೆ ನಟಿಸುತ್ತಿರುವುದು ಕನ್ನಡ ಸಿನಿಮಾ. ಈ ಹಿಂದೆ ಕೂಡ ಕೆಲ ಪರಭಾಷಾ ನಟಿಯರು ಕನ್ನಡ ನಟಿಯರಿಗಿಂತ ಹೆಚ್ಚು ಸಂಭಾವನೆ ಪಡೆದಿರುವ ಉದಾಹರಣೆಯಿದೆ.
ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ನಟ ಯಶ್ 'ಟಾಕ್ಸಿಕ್' ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ 'ಟಾಕ್ಸಿಕ್' ಚಿತ್ರಕ್ಕಾಗಿ ಕಿಯಾರಾ ಅದ್ವಾನಿ ಬರೋಬ್ಬರಿ 15 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂದು ಬಾಲಿವುಡ್ ಮಾಧ್ಯಮಗಳು ವರದಿ ಮಾಡಿತ್ತು.
15 ಕೋಟಿ ರೂ. ಬಜೆಟ್‌ನಲ್ಲಿ ಕನ್ನಡದಲ್ಲಿ 3 ದೊಡ್ಡ ಸಿನಿಮಾಗಳನ್ನೇ ನಿರ್ಮಾಣ ಮಾಡಬಹುದು. ಅಷ್ಟು ಹಣವನ್ನು ಚಿತ್ರದ ನಾಯಕಿ ಕಿಯಾರಾ ಅದ್ವಾನಿಗೆ ಕೊಡಲಾಗುತ್ತಿದೆ. ಯಶ್ ಅಂಡ್ ಟೀಂ 'ಟಾಕ್ಸಿಕ್' ಸಿನಿಮಾ ಬಗ್ಗೆ ಬಹಳ ಭರವಸೆಯಿಂದ ಇದೆ. ಸಿನಿಮಾ ಬಜೆಟ್ 200 ಕೋಟಿ ದಾಟುತ್ತದೆ ಎನ್ನಲಾಗ್ತಿದೆ. ಈ ಬಾರಿ 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಅಲ್ಲ ಅದಕ್ಕಿಂತ ಹೆಚ್ಚು ಭಾಷೆಗಳಲ್ಲಿ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ.
ಯಶ್ ಈ ಬಾರಿ ಬರೀ ಇಂಡಿಯನ್ ಬಾಕ್ಸಾಫೀಸ್ ಮಾತ್ರವಲ್ಲ ಹಾಲಿವುಡ್ ಹಾಗೂ ಯೂರೋಪ್ ಬಾಕ್ಸಾಫೀಸ್ ಮೇಲೆ ಕಣ್ಣಿಟ್ಟಿದ್ದಾರೆ. ಆ ಲೆಕ್ಕಾಚಾರದಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಏಕಕಾಲಕ್ಕೆ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಅಂದರೆ ಕಲಾವಿದರು ಒಂದೇ ಸನ್ನಿವೇಶದಲ್ಲಿ ಎರಡು ಬಾರಿ ನಟಿಸಬೇಕಿದೆ. ಅದೇ ಕಾರಣಕ್ಕೆ ಕಲಾವಿದರು, ತಂತ್ರಜ್ಞರು ಹೆಚ್ಚು ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ. ಸಿನಿಮಾ ಗೆದ್ದೇ ಗೆಲ್ಲುತ್ತದೆ ಎನ್ನುವ ನಂಬಿಕೆಯಿಂದ ನಿರ್ಮಾಪಕರು ನೀರಿನಂತೆ ಹಣ ಸುರಿಯುತ್ತಿದ್ದಾರೆ.
ನಯನತಾರಾ 'ಟಾಕ್ಸಿಕ್' ಚಿತ್ರದಲ್ಲಿ ಯಶ್ ಸಹೋದರಿ ಪಾತ್ರದಲ್ಲಿ ನಟಿಸ್ತಿದ್ದಾರೆ ಎನ್ನಲಾಗ್ತಿದೆ. ಇನ್ನು ಹುಮಾ ಖುರೇಷಿ, ತಾರಾ ಸುತಾರಿಯ, ಅಕ್ಷಯ್ ಒಬೆರಾಯ್, ಡರೆಲ್ ಡಿಸಿಲ್ವಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ನಯನತಾರಾಗೆ ಕೂಡ ಕೋಟಿ ಕೋಟಿ ಸಂಭಾವನೆ ಸಿಕ್ಕಿದೆ. ಹಾಲಿವುಡ್ ಸ್ಟಂಟ್ ಮಾಸ್ಟರ್ ಜೆಜೆ ಪೆರ್ರಿ ಚಿತ್ರಕ್ಕಾಗಿ ಸ್ಟಂಟ್ಸ್ ಕಂಪೋಸ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಹಾಲಿವುಡ್‌ನ ಸ್ಟೀವನ್ ಗ್ರಿಫಿನ್ ಸ್ಟೀವನ್ ಗ್ರಿಫಿನ್ ಸೆಕೆಂಡ್ ಯೂನಿಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಯಶ್ ಹುಟ್ಟುಹಬ್ಬಕ್ಕೆ ಬಂದಿದ್ದ 'ಟಾಕ್ಸಿಕ್' ಟೀಸರ್ ಸೂಪರ್ ಹಿಟ್ ಆಗಿದೆ. ಚಿತ್ರದಲ್ಲಿ ಕೆಲಸ ಮಾಡುತ್ತಿರುವ ಹಾಲಿವುಡ್ ಕಲಾವಿದರು, ತಂತ್ರಜ್ಞರು ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದಾರೆ. ಇದೆಲ್ಲಾ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚುವಂತೆ ಮಾಡ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ 10ಕ್ಕೆ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ತಡವಾಗುತ್ತಿದೆ.

ಹಾಲಿವುಡ್ ಖ್ಯಾತನಾಮರಿಗೆ ಕೋಟಿ ಕೋಟಿ ಸಂಭಾವನೆ ಕೊಟ್ಟು ಯಶ್ ಭಾರತಕ್ಕೆ ಕರೆಸುತ್ತಿದ್ದಾರೆ. ಯಾವುದೇ ವಿಚಾರದಲ್ಲೂ ರಾಜಿ ಆಗದೇ ತಾವು ಅಂದುಕೊಂಡಿದ್ದನ್ನು ಮಾಡಿ ತೋರಿಸಲು ರಾಕಿಂಗ್ ಸ್ಟಾರ್ ಮುಂದಾಗಿದ್ದಾರೆ. 'KGF'-2 ಬಳಿಕ ಮತ್ತೇನು ಎನ್ನುವವರಿಗೆ 'ಟಾಕ್ಸಿಕ್' ವೈಭವದ ಪ್ರಪಂಚ ತೋರಿಸಲು ಹೊರಟಿದ್ದಾರೆ. ದೊಡ್ಡಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ.
ಈಗಾಗಲೇ ಬಾಲಿವುಡ್, ಟಾಲಿವುಡ್, ಕಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನಲ್ಲಿ ಕೆಲವರು ಪ್ಯಾನ್ ವರ್ಲ್ಡ್ ಸಿನಿಮಾ ಎಂದು ತಮ್ಮ ಚಿತ್ರಗಳನ್ನು ಪ್ರಚಾರ ಮಾಡಿದ್ದರು. ಆದರೆ ಅಸಲಿ ಪ್ಯಾನ್ ವರ್ಲ್ಡ್ ಸಿನಿಮಾ ಹೇಗಿರುತ್ತೆ? ಯಾವ ರೀತಿ ಸದ್ದು ಮಾಡುತ್ತದೆ ಎನ್ನುವುದನ್ನು 'ಟಾಕ್ಸಿಕ್' ಮೂಲಕ ಸಾಬೀತು ಮಾಡಲು ಯಶ್ ಮುಂದಡಿ ಇಟ್ಟಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಈವರೆಗೆ ಯಾವುದೇ ಸಿನಿಮಾ ಮಾಡದ ಸಾಧನೆಯನ್ನು ಈ ಚಿತ್ರದಿಂದ ಮಾಡಲು ಸಜ್ಜಾಗಿದ್ದಾರೆ.
ಗೀತು ಮೋಹನ್ ದಾಸ್ ಪತಿ ರಾಜೀವ್ ರವಿ 'ಟಾಕ್ಸಿಕ್' ಚಿತ್ರದ ಛಾಯಾಗ್ರಾಹಕರಾಗಿದ್ದಾರೆ. ಈ ಹಿಂದೆ ರಾಷ್ಟ್ರಪ್ರಶಸ್ತಿಯನ್ನು ಅವರು ಪಡೆದಿದ್ದಾರೆ. ಇನ್ನು ಜೆರೆಮಿ ಸ್ಟಾಕ್ ಚಿತ್ರದ ಮೋಷನ್ ಪೋಸ್ಟರ್‌ಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದರು. ಆದರೆ ಯಶ್ ಬರ್ತ್‌ಡೇ ಸ್ಪೆಷಲ್ ಆಗಿ ಬಂದಿದ್ದ ಟೀಸರ್‌ಗೆ ರವಿ ಬಸ್ರೂರು ಬಿಜಿಎಂ ಮಾಡಿದ್ದಾರೆ ಎನ್ನಲಾಗಿತ್ತು. ಚಿತ್ರಕ್ಕೆ ಅವರೇ ಮ್ಯೂಸಿಕ್ ಡೈರೆಕ್ಟರ್ ಎನ್ನುವ ಊಹಾಪೋಹ ಶುರುವಾಗಿದೆ.
'ಟಾಕ್ಸಿಕ್' ಸಿನಿಮಾ ವಿತರಣೆಗಾಗಿ ಹಾಲಿವುಡ್ ಸಂಸ್ಥೆಗಳ ಜೊತೆ ಯಶ್ ಮಾತುಕತೆ ನಡೆಸುತ್ತಿದ್ದಾರೆ. 20th Century Fox ಸಂಸ್ಥೆಗೆ ಚಿತ್ರದ ಹಾಲಿವುಡ್ ರೈಟ್ಸ್ ಮಾರಲು ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಇದೇ ವರ್ಷ ಕ್ರಿಸ್‌ಮಸ್ ವೇಳೆಗೆ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ಸಾಮಾನ್ಯವಾಗಿ ಹಾಲಿವುಡ್, ಬಾಲಿವುಡ್ ದೊಡ್ಡ ಸಿನಿಮಾಗಳನ್ನು ವರ್ಷದ ಕೊನೆಗೆ ಕ್ರಿಸ್‌ಮಸ್ ರಜೆ ಅವಧಿಯಲ್ಲಿ ಬಿಡುಗಡೆ ಮಾಡುತ್ತಾರೆ. ಇದೇ ಲೆಕ್ಕಾಚಾರದಲ್ಲಿ 'ಟಾಕ್ಸಿಕ್' ಟೀಂ ಕೂಡ ಇದೆ.
ಅಚ್ಚರಿ ಅಂದರೆ ಬಾಲಿವುಡ್ ನಟಿಯರಿಗೆ ದಕ್ಷಿಣದ ಪ್ಯಾನ್ ಇಂಡಿಯಾ ಚಿತ್ರಕ್ಕಾಗಿ ಹೆಚ್ಚು ಸಂಭಾವನೆ ಸಿಗುತ್ತಿದೆ. ರಾಜಮೌಳಿ ನಿರ್ದೇಶನದ SSMB29 ಚಿತ್ರಕ್ಕಾಗಿ ದೀಪಿಕಾ ಪಡುಕೋಣೆ 30 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗ್ತಿದೆ. ಭಾರತೀಯ ಚಿತ್ರರಂಗದಲ್ಲಿ ನಟಿಯೊಬ್ಬರಿಗೆ ಸಿಗುತ್ತಿರುವ ಅತಿಹೆಚ್ಚು ಸಂಭಾವನೆ ಇದು ಎನ್ನುವ ಮಾತುಗಳು ಕೇಳಿಬರ್ತಿದೆ. ಇದಕ್ಕೂ ಮುನ್ನ ತೆಲುಗಿನ 'ಕಲ್ಕಿ 2898 AD' ಚಿತ್ರಕ್ಕಾಗಿ ದೀಪಿಕಾ ಪಡುಕೋಣೆ 20 ಕೋಟಿ ರೂ. ಪಡೆದಿದ್ದು ಅಧಿಕ ಎನ್ನಲಾಗ್ತಿತ್ತು. ಇದೀಗ ಕಿಯಾರಾ ಸಂಭಾವನೆ ವಿಚಾರ ಸುದ್ದಿ ಆಗುತ್ತಿದೆ.
ಇತ್ತೀಚೆಗೆ ಕಿಯಾರಾ ಅದ್ವಾನಿ ತಾವು ಗರ್ಭಿಣಿ ಆಗಿರುವ ವಿಚಾರವನ್ನು ಹಂಚಿಕೊಂಡಿದ್ದರು. ಹಾಗಾಗಿ 'ಟಾಕ್ಸಿಕ್' ಸಿನಿಮಾದಲ್ಲಿ ನಟಿಸೋ ಕಥೆಯೇನು? ಎಂದು ಕೆಲವರು ಅನುಮಾನಗೊಂಡಿದ್ದಾರೆ. ಈಗಾಗಲೇ ಆಕೆ ನಟನೆಯ ಸನ್ನಿವೇಶಗಳ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದ್ಯಾ? ಇನ್ನು ಬಾಕಿ ಇದ್ಯಾ? ಎನ್ನುವ ಬಗ್ಗೆ ಮಾಹಿತಿ ಇಲ್ಲ. ದೀಪಿಕಾ ಪಡುಕೋಣೆ ಗರ್ಭಿಣಿಯಾದ ಬಳಿಕ ಕೂಡ ಸಿನಿಮಾ ಚಿತ್ರೀಕರಣ ಹಾಗೂ ಪ್ರಚಾರದಲ್ಲಿ ಭಾಗಿ ಆಗಿದ್ದು ಗೊತ್ತೇಯಿದೆ. ಹಾಗಾಗಿ ಕಿಯಾರಾ ಕೂಡ 'ಟಾಕ್ಸಿಕ್' ಸಿನಿಮಾ ಕಂಪ್ಲೀಟ್ ಮಾಡಲಿದ್ದಾರೆ.


Click it and Unblock the Notifications











