ಈ ವರ್ಷ 'ಟಾಕ್ಸಿಕ್' ಸಿನಿಮಾ ರಿಲೀಸ್ ಆಗಲ್ವಾ? ನಾಯಕಿ ಕಿಯಾರಾ ಅದ್ವಾನಿ ಹೇಳಿದ್ದಿಷ್ಟು
ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ 'ಟಾಕ್ಸಿಕ್' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಸಿನಿಮಾ ಬಿಡುಗಡೆ ಆಗಬೇಕಿತ್ತು. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗೆ ತರುವ ಪ್ರಯತ್ನದಲ್ಲಿ ಕೊಂಚ ತಡವಾಗುತ್ತಿದೆ. ಹಾಲಿವುಡ್‌ನಲ್ಲಿ ಕೂಡ ಏಕಕಾಲಕ್ಕೆ ಸಿನಿಮಾ ರಿಲೀಸ್ ಪ್ರಯತ್ನ ನಡೀತಿದೆ.
'ಟಾಕ್ಸಿಕ್' ರಿಲೀಸ್ ತಡವಾಗುತ್ತಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಇನ್ನು ಎಷ್ಟು ದಿನ ಕಾಯಬೇಕು ಎಂದು ಬೇಸರಿಸಿಕೊಂಡಿದ್ದಾರೆ. ಯಾವುದೇ ಅಪ್‌ಡೇಟ್ ಸಿಗದೇ ಇರುವುದು ನೋಡಿ ಈ ವರ್ಷ ಸಿನಿಮಾ ತೆರೆಗೆ ಬರಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿದೆ. ಜನವರಿಯಲ್ಲಿ ಯಶ್ ಹುಟ್ಟುಹಬ್ಬಕ್ಕೆ ಸಿನಿಮಾ ಬಿಡುಗಡೆ ಆಗಬಹುದು ಎನ್ನುವ ಊಹಾಪೋಹ ಶುರುವಾಗಿದೆ. ಸಿನಿಮಾ ರಿಲೀಸ್ ಡೇಟ್ ಬಗ್ಗೆ ಈಗ ನಾಯಕಿ ಕಿಯಾರಾ ಅದ್ವಾನಿ ಮಾತನಾಡಿದ್ದಾರೆ.

ಅಭಿಮಾನಿಗಳ ಜೊತೆ ವೀಡಿಯೋ ಕಾಲ್ ಚಾಟ್ ವೇಳೆ ಕಿಯಾರಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅದು ಸಖತ್ ವೈರಲ್ ಆಗ್ತಿದೆ. ಕಿಯಾರಾ ಮಾತು ಕೇಳಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಯಾವಾಗ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಆಗುತ್ತದೆ ಎನ್ನುವ ಅಭಿಮಾನಿಯ ಪ್ರಶ್ನೆಗೆ "ಫಿಂಗರ್ ಕ್ರಾಸ್ಡ್(ಬಲವಾದ ಭರವಸೆಯಿದೆ).. ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ" ಎಂದು ಪ್ರತಿಕ್ರಿಯಿಸಿದ್ದಾರೆ. ಅದು ಸಖತ್ ವೈರಲ್ ಆಗುತ್ತಿದೆ. ಅಂದ್ರೆ ಶೀಘ್ರದಲ್ಲೇ ಅಪ್‌ಡೇಟ್ ಬರುವ ನಿರೀಕ್ಷೆಯಿದೆ. ಮತ್ತೊಂದು ಕಡೆ ಸಂಕ್ರಾಂತಿಗೆ ಸಿನಿಮಾ ಬಿಡುಗಡೆ ಆಗಬಹುದು ಎನ್ನುವ ಗುಸುಗುಸು ಶುರುವಾಗಿದೆ.
'ಕೆಜಿಎಫ್'-2 ಸಿನಿಮಾ ಬಿಡುಗಡೆಯಾದ ಬಳಿಕ 'ಟಾಕ್ಸಿಕ್' ಸಿನಿಮಾ ಘೋಷಣೆಗೆ ಯಶ್ ಹೆಚ್ಚು ಕಮ್ಮಿ 2 ವರ್ಷ ಸಮಯ ತೆಗೆದುಕೊಂಡಿದ್ದರು. ಕಳೆದ ವರ್ಷ ಏಪ್ರಿಲ್ 10ರಂದು ಸಿನಿಮಾ ತೆರೆಗೆ ತರುವುದಾಗಿ ಮೊದಲು ಹೇಳಿದ್ದರು. ಬಳಿಕ ಈ ವರ್ಷ ಮಾರ್ಚ್ 19ಕ್ಕೆ ಸಿನಿಮಾ ರಿಲೀಸ್ ಎಂದು ಡೇಟ್ ಮುಂದೂಡಿದ್ದರು. ಮಾರ್ಚ್ 19ಕ್ಕೆ ಹತ್ತಿರವಾಗುತ್ತಿದ್ದಂತೆ ಇರಾನ್-ಇಸ್ರೇಲ್ ಯುದ್ಧದ ನೆಪವೊಡ್ಡಿ ಜೂನ್ 4ಕ್ಕೆ ಡೇಟ್ ಬದಲಾಯಿಸಿದ್ದರು. ಬಳಿಕ ಪ್ಯಾನ್ ವರ್ಲ್ಡ್ ರಿಲೀಸ್ ಎಂದು ಹೇಳಿ ರಿಲೀಸ್ ಡೇಟ್ ಮಗದೊಮ್ಮೆ ಮುಂದೂಡಿದ್ದಾರೆ.
ಈ ಬಾರಿ 'ಟಾಕ್ಸಿಕ್' ಸಿನಿಮಾ ರಿಲೀಸ್ ಡೇಟ್ ಕೂಡ ಹೇಳಿಲ್ಲ. ಅದೇ ಕಾರಣಕ್ಕೆ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ಆದರೂ ಯಶ್ ಮೇಲೆ ನಂಬಿಕೆ ಇಟ್ಟು ಕಾಯುತ್ತಿದ್ದಾರೆ. ಚಿತ್ರದ ಫಸ್ಟ್ ಕಾಪಿ ಕೈಗೆ ಸಿಕ್ಕ ಬಳಿಕ ಪಾಶ್ಚಿಮಾತ್ಯ ದೇಶಗಳಲ್ಲಿ ಸಿನಿಮಾ ವಿತರಣೆ ಹಕ್ಕು ಡೀಲ್ ಕುದುರಿಸಲು ಯಶ್ ಮುಂದಾಗಿದ್ದಾರೆ. ಅದೇ ಕಾರಣಕ್ಕೆ ಸ್ವಲ್ಪ ಸಮಯಾವಕಾಶ ತೆಗೆದುಕೊಂಡಿದ್ದಾರೆ. ಚಿತ್ರದ ಒಂದಷ್ಟು ಫುಟೇಜ್ ನೋಡಿ ಹಾಲಿವುಡ್ ಮಂದಿ ಕೂಡ ಮೆಚ್ಚಿಕೊಂಡಿದ್ದಾರೆ. ಹಾಗಾಗಿ ತಡವಾದರೂ ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗೆ ತರುವ ಲೆಕ್ಕಾಚಾರ ನಡೀತಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಭರದಿಂದ ಸಾಗುತ್ತಿದೆ.
ಇತ್ತೀಚೆಗೆ ನಿರ್ದೇಶಕಿ ಗೀತು ಮೋಹನ್ ದಾಸ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಮೇಕಿಂಗ್ ವೀಡಿಯೋ ರಿಲೀಸ್ ಆಗಿತ್ತು. 'ಟಾಕ್ಸಿಕ್' ಪ್ರಪಂಚ ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದರು. ಯಾವಾಗ ರಾಯ ಹಾಗೂ ಟಿಕೆಟ್ ನಡುವಿನ ಕಾದಾಟ ನೋಡ್ತಿವೋ ಎಂದು ಕಾಯುತ್ತಿದ್ದಾರೆ. 'ಕೆಜಿಎಫ್- 2' ಸಿನಿಮಾ ಬಂದೋಗಿ 4 ವರ್ಷ ಕಳೆದಿದೆ. ಹಾಗಾಗಿ ಯಶ್ ನಟನೆಯ ಸಿನಿಮಾ ನೋಡಲು ಬಹಳ ಕಾತರದಿಂದ ಕಾಯುತ್ತಿದ್ದಾರೆ.
ಚಿತ್ರದಲ್ಲಿ ಕಿಯಾರಾ ಅದ್ವಾನಿ ಕಣ್ಣು ಕಾಣದ ವಿಶೇಷ ಚೇತನ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣವಾಗ್ತಿದೆ. ವಿದೇಶದ ಭಾಷೆಗಳಿಗೆ ಸಿನಿಮಾ ಡಬ್ ಮಾಡಿ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ.


Click it and Unblock the Notifications