ಶುಕ್ರವಾರ ಮುಗ್ಗರಿಸಿದ್ದ 'ಭಾಯ್', ಶನಿವಾರ- ಭಾನುವಾರ ಎದ್ದು ನಿಂತಿದ್ದೇಗೆ? ಇವತ್ತು ನಿಜವಾದ ಅಗ್ನಿ ಪರೀಕ್ಷೆ
ಸಲ್ಮಾನ್ ಖಾನ್ ನಟನೆಯ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾ ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣ್ತಿದೆ. ಈದ್ ಸಂಭ್ರಮದಲ್ಲಿ ಬಿಡುಗಡೆಯಾದ ಚಿತ್ರಕ್ಕೆ ಶುಕ್ರವಾರ ಒಳ್ಳೆ ಓಪನಿಂಗ್ ಏನು ಸಿಕ್ಕಿರಲಿಲ್ಲ. ಆದರೆ ಶನಿವಾರ, ಭಾನುವಾರ ಕಲೆಕ್ಷನ್ ಹೆಚ್ಚಾಗಿದೆ. ಇದು ಸಹಜವಾಗಿಯೇ ತಂಡಕ್ಕೆ ಖುಷಿ ತಂದಿದೆ. ಆದರೆ ಇಂದು(ಏಪ್ರಿಲ್ 24) ಚಿತ್ರದ ನಿಜವಾದ ಸಾಮರ್ಥ್ಯ ಗೊತ್ತಾಗಲಿದೆ.
ಈದ್ ಸಂಭ್ರಮದಲ್ಲಿ ಬಿಡುಗಡೆಯಾಗಿರುವ ಸಲ್ಮಾನ್ ಖಾನ್ ಸಿನಿಮಾಗಳು ಬಾಕ್ಸಾಫೀಸ್ ಶೇಕ್ ಮಾಡುತ್ತಾ ಬರ್ತಿವೆ. ಇದ್ದಿದ್ದರಲ್ಲಿ 'ಟ್ಯೂಬ್‌ಲೈಟ್' ಸಿನಿಮಾ ಮೊದಲ ದಿನ ಬಹಳ ಕಮ್ಮಿ ಕಲೆಕ್ಷನ್ ಮಾಡಿದ್ದ ಸಿನಿಮಾ ಎನಿಸಿಕೊಂಡಿತ್ತು. ಆದರೆ ಅದಕ್ಕಿಂತಲೂ ಹೀನಾಯವಾದ ಓಪನಿಂಗ್ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿಕ್ಕಿತ್ತು. ಶುಕ್ರವಾರಕ್ಕೆ ಹೋಲಿಸಿದರೆ ಶನಿವಾರ ಹಾಗೂ ಭಾನುವಾರ ಕಲೆಕ್ಷನ್ ವಿಚಾರದಲ್ಲಿ ಗಣೀಯ ಏರಿಕೆ ಕಂಡು ಬಂದಿತ್ತು. ಶನಿವಾರ ಈದ್ ಸಂಭ್ರಮದಲ್ಲಿ ಪ್ರೇಕ್ಷಕರು ಥಿಯೇಟರ್‌ಗಳಿಗೆ ಮುಗಿ ಬಿದ್ದಿದ್ದರು.

ಭಾರತದಲ್ಲಿ ಶುಕ್ರವಾರ 15.81 ಕೋಟಿ ರೂ. ಗಳಿಸಿದ್ದ ಸಿನಿಮಾ ಶನಿವಾರ 25.75 ಕೋಟಿ ರೂ. ಗಳಿಸಿ ಎಲ್ಲರ ಹುಬ್ಬೇರಿಸಿತ್ತು. ರಜಾ ದಿನವಾದ ಭಾನುವಾರ 26.61 ಕೋಟಿ. ರೂ ಕಲೆಕ್ಷನ್ ಮಾಡಿ ಸದ್ದು ಮಾಡಿದೆ. ಫಸ್ಟ್ ವೀಕೆಂಡ್‌ನಲ್ಲಿ ಸಿನಿಮಾ ಒಟ್ಟು ಅಂದಾಜು 68.17 ಕೋಟಿ ರೂ. ಕೊಳ್ಳೆ ಹೊಡೆದಂತಾಗಿದೆ. ಆದರೆ ಸೋಮವಾರ ಚಿತ್ರಕ್ಕೆ ನಿಜಕ್ಕೂ ಅಗ್ನಿ ಪರೀಕ್ಷೆ ಶುರುವಾಗಿದೆ. ಯಾವುದೇ ಚಿತ್ರವೊಂದರ ಸೋಲು ಗೆಲುವು ನಿರ್ಧಾರವಾಗುವುದು ಸಿನಿಮಾ ರಿಲೀಸ್ ಆದ ಫಸ್ಟ್ ವೀಕೆಂಡ್ ನಂತರ ಬರುವ ಸೋಮವಾರ. ಇವತ್ತು 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಕಥೆ ಏನಾಗುತ್ತದೆ? ಎನ್ನುವ ಲೆಕ್ಕಾಚಾರ ಶುರುವಾಗಿದೆ.
ಸೂಪರ್ ಸ್ಟಾರ್ ಸಿನಿಮಾ ಅಂದ್ಮೇಲೆ ಫಸ್ಟ್ ವೀಕೆಂಡ್‌ನಲ್ಲಿ ಸಹಜವಾಗಿಯೇ ಅಭಿಮಾನಿಗಳು ಸಿನಿಮಾ ನೋಡಲು ಮುಗಿ ಬೀಳುತ್ತಾರೆ. ಅಭಿಮಾನಿಗಳ ನಂತರ ಉಳಿದ ಪ್ರೇಕ್ಷಕರು ಥಿಯೇಟರ್‌ಗೆ ಬರಬೇಕು. ಅದಕ್ಕೆ ಸಿನಿಮಾ ಚೆನ್ನಾಗಿ ಇರಬೇಕು. ಈದ್ ವೀಕೆಂಡ್‌ನಲ್ಲಿ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಕೊಂಚ ಮಟ್ಟಿಗೆ ಸದ್ದು ಮಾಡಿದೆ. ಚಿತ್ರದ ವರ್ಲ್ಡ್‌ವೈಡ್ ಕಲೆಕ್ಷನ್ ಈಗಾಗಲೇ 100 ಕೋಟಿ ರೂ. ದಾಟಿರುವ ಅಂದಾಜಿದೆ. ಇನ್ನುಮುಂದೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೇಗೆ ಸದ್ದು ಮಾಡುತ್ತದೆ ಎನ್ನುವ ಬಗ್ಗೆ ಬಾಲಿವುಡ್ ಬಾಕ್ಸಾಫೀಸ್ ಪಂಡಿತರು ಕಣ್ಣಿಟ್ಟಿದ್ದಾರೆ.

ವಾರದ ದಿನದಲ್ಲಿ ಸಿನಿಮಾ ಎಷ್ಟು ಕಲೆಕ್ಷನ್ ಮಾಡುತ್ತೆ ನೋಡಬೇಕಿದೆ. ಶುಕ್ರವಾರಕ್ಕೆ ಹೋಲಿಸಿದರೆ ಶನಿವಾರ ಕಲೆಕ್ಷನ್ ಶೇಕಡಾ 62.87 ರಷ್ಟು ಹೆಚ್ಚಾಗಿತ್ತು. ಭಾನುವಾರ ಅದಕ್ಕಿಂತ 3.40% ಅಷ್ಟು ಏರಿಕೆಯಾಗಿತ್ತು. ತಮಿಳಿನ 'ವೀರಂ ರೀಮೆಕ್' ಆಗಿರುವ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಫ್ಯಾಮಿಲಿ ಎಂಟರ್‌ಟೈನರ್ ಪ್ರೇಕ್ಷರನ್ನು ರಂಜಿಸಿದರೂ ಲಾಜಿಕ್ ಇಲ್ಲದ ದೃಶ್ಯಗಳು, ಕಾಮಿಡಿ ಹೆಸರಿನಲ್ಲಿ ಹುಚ್ಚಾಟ ಕೆಲವರಿಗೆ ಕಸಿವಿಸಿ ಎನ್ನಿಸಿದೆ. ರೀಮೆಕ್ ಆಗಿರುವುದರಿಂದಲೂ ಪ್ರೇಕ್ಷಕರಿಗೆ ಅಷ್ಟೇನು ನಿರೀಕ್ಷೆ ಇರಲಿಲ್ಲ.
ಫರ್ಹಾದ್ ಸಮ್ಜಿ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ತೆಲುಗಿನ ವಿಕ್ಟರಿ ವೆಂಕಟೇಶ್, ಜಗಪತಿ ಬಾಬು ತಾರಾಗಣದಲ್ಲಿ ಇದ್ದಾರೆ. ಶನಿವಾರ, ಭಾನುವಾರ ಸಿನಿಮಾ ಕಲೆಕ್ಷನ್ ಚೆನ್ನಾಗಿರೋದು ಚಿತ್ರತಂಡದ ಸಂತಸಕ್ಕೂ ಕಾರಣವಾಗಿದೆ. ಸಲ್ಲುಮಿಯಾ ಕೂಡ ಟ್ವೀಟ್ ಮಾಡಿ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಧನ್ಯವಾದ ತಿಳಿಸಿದ್ದಾರೆ. ಆದರೆ ಮೊದಲ ದಿನದ ಗಳಿಕೆ ನೋಡಿ 'ಭಾಯ್' ಮುಗ್ದೇ ಹೋಯ್ತು ಅಂದವರು ಈಗ ಸೋಮವಾರದ ಕಲೆಕ್ಷನ್ ನೋಡೋಣ ಎನ್ನುತ್ತಿದ್ದಾರೆ.


Click it and Unblock the Notifications











