ಸಲ್ಲು 'ಈದ್' ಸೆಂಟಿಮೆಂಟ್: IPL ಭರಾಟೆ ಮಧ್ಯೆ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಫಸ್ಟ್ ಡೇ ಕಲೆಕ್ಷನ್ ಎಷ್ಟಾಗಬಹುದು?
ಸಲ್ಮಾನ್ ಖಾನ್ ನಟನೆಯ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾ ಈದ್ ಸಂಭ್ರಮದಲ್ಲೇ ಈ ವಾರ ರಿಲೀಸ್ ಆಗ್ತಿದೆ. ಈಗಾಗಲೇ ಟ್ರೈಲರ್, ಸಾಂಗ್ಸ್ ಸಖತ್ ಸದ್ದು ಮಾಡ್ತಿದ್ದು ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿದ್ದು ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಸಿನಿಮಾ ಫಸ್ಟ್ ಡೇ ಕಲೆಕ್ಷನ್ ಬಗ್ಗೆ ಲೆಕ್ಕಾಚಾರ ಶುರುವಾಗಿದೆ.
ಫರ್ಹಾದ್ ಸಮ್ಜಿ ಈ ಫ್ಯಾಮಿಲಿ ಆಕ್ಷನ್ ಎಂಟರ್‌ಟೈನರ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ತಮಿಳಿನ 'ವೀರಂ' ಸಿನಿಮಾ ರೀಮೆಕ್ ಇದ್ದಾಗಿದ್ದು ಪೂಜಾ ಹೆಗ್ಡೆ ನಾಯಕಿಯಾಗಿ ಮಿಂಚಿದ್ದಾರೆ. ಸ್ವತಃ ಸಲ್ಮಾನ್ ಖಾನ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ ಹಾಡೊಂದಕ್ಕೆ ರವಿಬಸ್ರೂರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಜೊತೆಗೆ ಚಿತ್ರದ ಹಿನ್ನಲೆ ಸಂಗೀತದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸದ್ಯ ಸಿನಿಮಾ ಪ್ರಮೋಷನ್‌ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.

ಈದ್ ಸ್ಪೆಷಲ್ ಆಗಿ ಬರುವ ಸಲ್ಮಾನ್ ಖಾನ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದೊಡ್ಡದಾಗಿ ಸದ್ದು ಮಾಡಿವೆ. ಅದೇ ಕಾರಣಕ್ಕೆ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರವನ್ನು ಕೂಡ ಈ ವಾರ ತೆರೆಗೆ ತರಲಾಗ್ತಿದೆ. ಆದರೆ ದೇಶದಲ್ಲಿ ಐಪಿಎಲ್ ಕ್ರಿಕೆಟ್ ಫೀವರ್ ಜೋರಾಗಿ ಇರುವುದರಿಂದ ಸಲ್ಮಾನ್ ಖಾನ್ ಚಿತ್ರಕ್ಕೆ ಹಿನ್ನಡೆ ಆಗುತ್ತೆ ಎನ್ನಲಾಗ್ತಿದೆ. ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್‌ಗೂ ಒಳ್ಳೆ ರೆಸ್ಪಾನ್ಸ್ ಸಿಕ್ತಿಲ್ಲ. ಹಾಗಾಗಿ ಸಹಜವಾಗಿಯೇ ಸಲ್ಲು ಅಭಿಮಾನಿಗಳಲ್ಲಿ ಆತಂಕ ಶುರುವಾಗಿದೆ.
ಸೆನ್ಸಾರ್ ಮಂಡಳಿಯಿಂದ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಸಿನಿಮಾ ರನ್‌ಟೈಮ್ 2 ಗಂಟೆ 24 ನಿಮಿಷ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಮೊದಲ ದಿನ ಸಿನಿಮಾ ಎಷ್ಟು ಕಲೆಕ್ಷನ್ ಮಾಡಬಹುದು ಎನ್ನುವ ಅಂದಾಜು ಈಗ ಶುರುವಾಗಿದೆ. ಬಝ್ ನೋಡಿದರೆ ಚಿತ್ರಕ್ಕೆ ಸಿನಿಮಾ ಮೊದಲ ದಿನ 15ರಿಂದ 20 ಕೋಟಿ ರೂ. ಗಳಿಸಿದರೆ ಹೆಚ್ಚು ಎನ್ನಲಾಗ್ತಿದೆ. ಆದರೆ ಶನಿವಾರ, ಭಾನುವಾರ ವೀಕೆಂಡ್, ಹಬ್ಬ ಇರುವ ಕಾರಣ ಕಲೆಕ್ಷನ್ ಹೆಚ್ಚಾಗುವ ಲೆಕ್ಕಾಚಾರ ನಡೀತಿದೆ.
ಹೇಳಿ ಕೇಳಿ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ರೀಮೆಕ್ ಸಿನಿಮಾ. ತಮಿಳಿನ ಈ ಚಿತ್ರವನ್ನು ಕನ್ನಡದಲ್ಲಿ ದರ್ಶನ್ 'ಒಡೆಯ' ಟೈಟಲ್‌ನಲ್ಲಿ ರೀಮೆಕ್ ಮಾಡಿದ್ದರು. ತೆಲುಗಿನಲ್ಲಿ 'ಕಾಟಮರಾಯುಡು' ಆಗಿ ಪವನ್ ಕಲ್ಯಾಣ್ ನಟಿಸಿದ್ದರು. ತಮಿಳು ಬಿಟ್ಟರೆ ಉಳಿದ 2 ಭಾಷೆಗಳಲ್ಲಿ ಸಿನಿಮಾ ಸೋತಿತ್ತು. ಹಾಗಾಗಿ ಸಲ್ಮಾನ್ ಖಾನ್ ಸಿನಿಮಾ ಬಗ್ಗೆಯೂ ಅಷ್ಟಾಗಿ ಕುತೂಹಲ ಪ್ರೇಕ್ಷಕರಲ್ಲಿ ಇಲ್ಲ. ಆದರೆ ಹಬ್ಬದ ವೀಕೆಂಡ್ ರಜೆಯಲ್ಲಿ ಪ್ರೇಕ್ಷಕರ ಸಿನಿಮಾ ನೋಡುವ ಸಾಧ್ಯತಯಿದೆ. ಆದರೂ ಐಪಿಎಲ್ ಕಂಟಕವಾಗಿ ಪರಿಣಮಿಸಿದೆ.

ತೆಲುಗಿನ ವಿಕ್ಟರಿ ವೆಂಕಟೇಶ್ ಹಾಗೂ ಜಗಪತಿ ಬಾಬು ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರದ ಅರ್ಧ ಕಥೆ ತೆಲಂಗಾಣದಲ್ಲಿ ನಡೆಯುವಂತೆ ಡಿಸೈನ್ ಮಾಡಲಾಗಿದೆ. ಆ ಮೂಲಕ ತೆಲುಗು ಪ್ರೇಕ್ಷಕರನ್ನು ಸೆಳೆಯುವ ತಂತ್ರ ನಡೆದಿದೆ. ಚಿತ್ರದ ಹಾಡೊಂದರಲ್ಲಿ ಮೆಗಾ ಪವರ್ ಸ್ಟಾರ್ ರಾಮ್‌ಚರಣ್ ತೇಜಾ ಕೂಡ ಸಲ್ಮಾನ್ ಖಾನ್ ಜೊತೆ ಬಿಂದಾಸ್ ಹೆಜ್ಜೆ ಹಾಕಿದ್ದಾರೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಬಾಲಿವುಡ್‌ಗೆ ಇತ್ತೀಚೆಗೆ 'ಪಠಾಣ್' ಆಗಿ ಶಾರುಕ್ ಖಾನ್ ಗೆಲುವಿನ ಟಾನಿಕ್ ನೀಡಿದ್ದರು. ಆ ಗೆಲುವನ್ನು ಮತ್ತಷ್ಟು ಹೆಚ್ಚಿಸಲು ಸಲ್ಲುಮಿಯಾ ಕಾಯ್ತಿದ್ದಾರೆ.


Click it and Unblock the Notifications











