ಕೇವಲ ಮೂರೇ ಚಿತ್ರಕ್ಕೆ ಸುಸ್ತಾದ ಕೆಎಲ್ ರಾಹುಲ್ ಪತ್ನಿ, ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ಅಥಿಯಾ ಶೆಟ್ಟಿ ..!
ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗೋದು ಹೇಗೆ ಕಾಮನ್ನೋ ಅದೇ ತರ ಸಿನಿಮಾರಂಗದಲ್ಲಿ ಸ್ಟಾರ್ ಗಳ ಮಕ್ಕಳು ಸ್ಟಾರ್ ಗಳಾಗೋದು ಕೂಡ ಕಾಮನ್ನೇ. ಆದರೆ, ಹೀಗೆ ಚಿತ್ರರಂಗಕ್ಕೆ ಬರುವ ಎಲ್ಲರಿಗೆ ಇಲ್ಲಿ ಗೆಲುವು ಸಿಗುವುದಿಲ್ಲ. ತೀರಾ ಅಪರೂಪಕ್ಕೆ ಎಂಬಂತೆ ಅಲ್ಲೊಬ್ಬರು.. ಇಲ್ಲೊಬ್ಬರು.. ಮಾತ್ರ ಗೆಲ್ಲುತ್ತಾರೆ. ಅಭಿಮಾನಿ ಬಳಗವನ್ನು ಸಂಪಾದಿಸುತ್ತಾರೆ. ತಮ್ಮ ತಂದೆ ಅಥವಾ ತಾಯಿಯ ನೆರಳಿನಾಚೆ ಬಂದು ತಮ್ಮ ಬದುಕು ರೂಪಿಸಿಕೊಳ್ಳುತ್ತಾರೆ.
ಮಿಕ್ಕಂತೆ ಎಷ್ಟೇ ಪ್ರಯತ್ನ ಮಾಡಿದರು ಹಲವರಿಗೆ ಗೆಲುವು ಎನ್ನುವುದು ಸಿಗುವುದೇ ಇಲ್ಲ. ಕೇವಲ ನಿರಾಸೆ ಮಾತ್ರ ದಕ್ಕುತ್ತೆ. ಇದಕ್ಕೆ ಎಲ್ಲಾ ಭಾಷೆಯಲ್ಲಿಯೂ ಅನೇಕ ಉದಾಹರಣೆಗಳಿವೆ. ಸ್ಟಾರ್ ಮಕ್ಕಳಾದರೂ ಕೂಡ ಗೆಲ್ಲಲು ವಿಫಲವಾಗಿ ಕೊನೆಗೆ ಪ್ರಯತ್ನವನ್ನು ಕೈ ಚೆಲ್ಲಿ ಬೇರೆ ಉದ್ಯಮದತ್ತ ಅನೇಕರು ಇಲ್ಲಿ ಹೊರಳಿದ್ದಾರೆ. ಚಿತ್ರರಂಗದಿಂದ ಸಂಪೂರ್ಣ ದೂರ ಸರಿದಿದ್ದಾರೆ. ಈ ಸಾಲಿಗೆ ಈಗ ಅಥಿಯಾ ಶೆಟ್ಟಿ ಅಧಿಕೃತವಾಗಿ ಸೇರ್ಪಡೆಯಾಗಿದ್ಧಾರೆ.

ಹೌದು.. ಅಥಿಯಾ ಶೆಟ್ಟಿ, ಬಾಲಿವುಡ್‌ನ ಅಣ್ಣ ಸುನೀಲ್ ಶೆಟ್ಟಿಯ ಮುದ್ದಿನ ಮಗಳು. ಭಾರತ ಕ್ರಿಕೆಟ್ ತಂಡದ ಸ್ಟಾರ್ ಪ್ಲೇಯರ್, ಕನ್ನಡಿಗ ಕೆ.ಎಲ್.ರಾಹುಲ್ ಪತ್ನಿ. 2023ರಲ್ಲಿ ಕೆ.ಎಲ್.ರಾಹುಲ್ ಜೊತೆ ಸಪ್ತಪದಿಯನ್ನು ತುಳಿದ ಅಥಿಯಾ ಕಳೆದ ವರ್ಷ ಮುದ್ದಾದ ಹೆಣ್ಣು ಮಗುವನ್ನು ಬರ ಮಾಡಿಕೊಂಡರು.
ಇಂಥಾ ಅಥಿಯಾ ಮುಂದೆ ಒಂದಲ್ಲೊಂದು ದಿನ ಮತ್ತೆ ಚಿತ್ರರಂಗಕ್ಕೆ ಮರಳಿ ಬರುತ್ತಾರೆ, ಚಿತ್ರಗಳಲ್ಲಿ ಅಭಿನಯಿಸುತ್ತಾರೆ ಎಂದೇ ಅನೇಕರು ಅಂದುಕೊಂಡಿದ್ದರು. ಆದರೆ.. ಅಥಿಯಾ ಇನ್ನೆಂದು ಮುಖಕ್ಕೆ ಬಣ್ಣ ಹಚ್ಚದಿರಲು ತೀರ್ಮಾನ ಮಾಡಿದ್ದಾರೆ. ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದಾರೆ. ಖುದ್ದು ಅಥಿಯಾ ತಂದೆ ಸುನೀಲ್ ಶೆಟ್ಟಿ ಈ ಮಾತನ್ನು ಹೇಳಿದ್ದಾರೆ. ನನ್ನ ಮಗಳು ಇನ್ನು ಮುಂದೆ ಚಿತ್ರಗಳಲ್ಲಿ ಅಭಿನಯಿಸುವುದಿಲ್ಲ ಎಂದಿದ್ದಾರೆ.
ಈ ಕುರಿತು 'ಜೂಮ್'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸುನೀಲ್ ಶೆಟ್ಟಿ ''ನನ್ನ ಮಗಳು ಅಥಿಯಾ ಚಿತ್ರರಂಗದಲ್ಲಿ ಇನ್ಮುಂದೆ ಮುಂದುವರೆಯುವುದಿಲ್ಲ, ಸಿನಿಮಾಗಳಲ್ಲಿ ಆಕೆಗೆ ಯಾವ ಆಸಕ್ತಿ ಕೂಡ ಇಲ್ಲ, ನಾನು ಇನ್ಮುಂದೆ ಸಿನಿಮಾ ಮಾಡಲು ಬಯಸುವುದಿಲ್ಲ, ನನಗೆ ನಟಿಸಲು ಇಷ್ಟ ಇಲ್ಲ ಎಂದು ನನ್ನ ಮುಂದೆ ಹೇಳಿದಳು. ಅವಳು ತೆಗೆದುಕೊಂಡ ಈ ನಿರ್ಧಾರವನ್ನು ನಾನು ಅಭಿನಂದಿಸುತ್ತೇನೆ'' ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿರುವ ಸುನೀಲ್ ಶೆಟ್ಟಿ ''2019ರಲ್ಲಿ 'ಮೋತಿಚೂರ್ ಚಕ್ನಾಚೂರ್' ಚಿತ್ರ ಬಂದ ನಂತರ ಆಕೆಗೆ ಹಲವಾರು ಅವಕಾಶಗಳು ಬಂದವು ಆದರೆ ಆಕೆ ಮಾತ್ರ ಯಾವ ಚಿತ್ರವನ್ನು ಕೂಡ ಒಪ್ಪಿಕೊಳ್ಳಲಿಲ್ಲ, ಅವಳ ಈ ನಿರ್ಧಾರದ ಬಗ್ಗೆ ನನಗೆ ಗೌರವ ಇದೆ'' ಎಂದಿದ್ದಾರೆ.
'' ಸದ್ಯ ನನ್ನ ಮಗಳು ಅಥಿಯಾ ತನ್ನ ಬದುಕಿನ ಬಹು ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತಿದ್ದಾಳೆ, ತಾಯಿಯಾಗಿ ಮಗುವಿನ ಲಾಲನೆ ಪಾಲನೆ ಮಾಡುತ್ತಿದ್ದಾಳೆ, ಖುಷಿಯಾಗಿದ್ದಾಳೆ, ಮುಂದೆಯೂ ಕೂಡ ಹೀಗೆ ಇರಲು ಬಯಸಿದ್ದಾಳೆ'' ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ. ಈ ಮೂಲಕ ಚಿತ್ರರಂಗದಿಂದ ತಮ್ಮ ಮಗಳು ದೂರ ಸರಿದಿರುವ ವಿಚಾರ ಹಂಚಿಕೊಂಡಿದ್ಧಾರೆ.
ಅಂದ್ಹಾಗೇ ಅಥಿಯಾ ಶೆಟ್ಟಿ ಸರಿಯಾಗಿ ಒಂದು ದಶಕದ ಹಿಂದೆ ಸೂರಜ್ ಪಾಂಚೋಲಿ ನಾಯಕನಾಗಿ ಅಭಿನಯಿಸಿದ್ದ 'ಹೀರೋ' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದಿದ್ದರು. ನಾಯಕಿಯಾಗಿ ಅದೃಷ್ಟ ಪರೀಕ್ಷೆಯನ್ನು ಮೊದಲ ಬಾರಿ ಮಾಡಿಕೊಂಡಿದ್ದರು. ಆದರೆ ಈ ಚಿತ್ರ ಅಥಿಯಾ ನಿರೀಕ್ಷೆಯನ್ನೆಲ್ಲ ಮಣ್ಣು ಪಾಲು ಮಾಡಿತು.
ಆ ನಂತರ 2017ರಲ್ಲಿ 'ಮುಬಾರಕನ್' ಚಿತ್ರವನ್ನು ಅಥಿಯಾ ಮಾಡಿದರು. ಆದರೆ ಇಲ್ಲಿಯೂ ಕೂಡ ಸಿಕ್ಕಿದ್ದು ನಿರಾಸೆ. ಮೂರನೇ ಬಾರಿ 2019ರಲ್ಲಿ 'ಮೋತಿ ಚೂರ್ ಚಕ್ನಾಚೂರ್' ಚಿತ್ರದಲ್ಲಿ ಕಾಣಿಸಿಕೊಂಡರು. ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ಇದ್ದರೂ ಕೂಡ ಈ ಚಿತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಯಿತು.
ಹೀಗೆ ಸತತ ಮೂರು ಸೋಲುಗಳಿಂದ ಬೇಸತ್ತು 2019ರಿಂದ ಚಿತ್ರರಂಗದಿಂದ ಅಂತರವನ್ನು ಕಾಪಾಡಿಕೊಂಡೇ ಬಂದ ಅಥಿಯಾ ಇದೀಗ ಚಿತ್ರರಂಗಕ್ಕೆ ಅಧಿಕೃತವಾಗಿ ಗುಡ್ ಬೈ ಹೇಳಿದ್ದಾರೆ.


Click it and Unblock the Notifications











