"ಕನ್ನಡ ಸಿನ್ಮಾ ಶೂಟಿಂಗ್ ವೇಳೆ ನನ್ನ ಹೋಟೆಲ್ ರೂಮ್‌ನಲ್ಲಿ ಅವ್ನು ರಹಸ್ಯ ಕ್ಯಾಮರಾ ಇಟ್ಟಿದ್ದ": ಕೃತಿ ಕರಬಂಧ
ಬೆಂಗಳೂರಿನಲ್ಲಿ ಓದಿ ಬೆಳೆದ ಪಂಜಾಬಿ ಚೆಲುವೆ ಕೃತಿ ಕರಬಂಧ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ತಮ್ಮ ಸ್ನಿಗ್ಧ ಸೌಂದರ್ಯದಿಂದ ಮೋಡಿ ಮಾಡಿದ ಚೆಲುವೆಗೆ ಯಾಕೋ ದೊಡ್ಡ ಬ್ರೇಕ್ ಮಾತ್ರ ಸಿಗಲಿಲ್ಲ. ಯಶ್ ಜೋಡಿಯಾಗಿ 'ಗೂಗ್ಲಿ' ಚಿತ್ರದಲ್ಲಿ ಈಕೆ ಗಮನ ಸೆಳೆದಿದ್ದರು. ಕನ್ನಡ ಸಿನಿಮಾ ಚಿತ್ರೀಕರಣದ ವೇಳೆ ನಡೆದ ಘಟನೆಯನ್ನು ಚೆಲುವೆ ಇದೀಗ ನೆನಪಿಸಿಕೊಂಡಿದ್ದಾರೆ.
ಹೋಟೆಲ್ ರೂಮ್, ಟ್ರಯಲ್ ರೂಮ್, ಪಬ್ಲಿಕ್ ಟಾಯ್ಲೆಟ್, ಡ್ರೆಸ್ಸಿಂಗ್ ರೂಮ್, ಬಾತ್ ರೂಮ್‌ಗಳಲ್ಲಿ ರಹಸ್ಯ ಕ್ಯಾಮರಾ ಇಟ್ಟು ವಿಡಿಯೋಗಳನ್ನು ಚಿತ್ರೀಕರಿಸುವ ಕಿಡಿಗೇಡಿಗಳು ಇರುತ್ತಾರೆ. ಅಂತಹ ವೀಡಿಯೋಗಳನ್ನು ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡುವ ಘಟನೆಗಳು ನಡೆದಿವೆ. ಕೆಲ ನಟಿಯರಿಗೂ ಇಂತಹ ಕಹಿ ಅನುಭವ ಆಗಿರುವು ಉದಾಹರಣೆ ಇದೆ. ದಿಯಾ ಮಿರ್ಜಾ, ಕೆಲ ವರ್ಷಗಳ ಹಿಂದೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಬಟ್ಟೆ ಮಳಿಗೆಯ ಟ್ರಯಲ್ ರೂಮ್‌ನಲ್ಲಿ ಇಟ್ಟಿದ್ದ ರಹಸ್ಯ ಕ್ಯಾಮರಾ ಪತ್ತೆ ಹಚ್ಚಿದ್ದರು.

ಬಹುಭಾಷಾ ನಟಿ ಕೃತಿ ಕರಬಂಧ ಕನ್ನಡ ಸಿನಿಮಾವೊಂದರ ಚಿತ್ರೀಕರಣದ ವೇಳೆ ಇಂತದ್ದೇ ಘಟನೆ ನಡೆದಿತ್ತು ಎಂದು ನೆನಪಿಸಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. "ಕನ್ನಡ ಸಿನಿಮಾ ಚಿತ್ರೀಕರಣದ ವೇಳೆ ಹೋಟೆಲ್‌ನಲ್ಲಿ ಕೆಲಸ ಮಾಡುವ ಹುಡುಗ ರೂಮ್‌ನಲ್ಲಿ ಕ್ಯಾಮರಾ ಇಟ್ಟು ಹೋಗಿದ್ದ. ಯಾವುದೇ ಹೋಟೆಲ್‌ಗೆ ಹೋದರೂ ಇಂತದ್ದೇನಾದರೂ ಇರುತ್ತಾ? ಎಂದು ನಾನು, ನಮ್ಮ ಸಿಬ್ಬಂದಿ ಎಲ್ಲಾ ಕಡೆ ಹುಡುಕುವ ಅಭ್ಯಾಸ ಇತ್ತು. ಹಾಗಾಗಿ ಆ ಕ್ಯಾಮರಾ ಕಂಡುಬಂದಿತ್ತು"
"ಆತ ಅಂತಹ ಚಾಲಾಕಿ ಆಗಿರಲಿಲ್ಲ ಎನಿಸುತ್ತೆ. ಹಾಗಾಗಿ ಸರಿಯಾಗಿ ಇಟ್ಟಿರಲಿಲ್ಲ. ನನಗೆ ಚೆನ್ನಾಗಿ ಕಾಣಿಸಿತ್ತು. ಯಾಕಂದರೆ ಅದನ್ನು ಟಿವಿ ಸೆಟ್‌ಆಫ್ ಬಾಕ್ಸ್ ಹಿಂದೆ ಇಟ್ಟಿದ್ದ. ನಿಜಕ್ಕೂ ಭಯವಾಗಿತ್ತು. ಇಂತಹ ವಿಚಾರಗಳ ಬಗ್ಗೆ ಎಲ್ಲರೂ ಎಚ್ಚರದಿಂದ ಇರಬೇಕು" ಎಂದು ಕೃತಿ ಕರಬಂಧ ಹೇಳಿದ್ದಾರೆ.

ಬಾಲಿವುಡ್ ನಟಿ ದಿಯಾ ಮಿರ್ಜಾ ಕೂಡ ಈ ವಿಚಾರದ ಬಗ್ಗೆ ಈ ಹಿಂದೆ ಮಾತನಾಡಿದ್ದರು. 10 ವರ್ಷಗಳ ಹಿಂದೆ ನಟಿಯರ ಬಾತ್‌ರೂಂ ವಿಡಿಯೋಗಳು ವೈರಲ್ ಆದ ಬಳಿಕ ನಾನು ಬಹಳ ಜಾಗ್ರತೆ ವಹಿಸುತ್ತೇನೆ. ಯಾವುದೇ ಹೋಟೆಲ್ ರೂಮ್‌ನಲ್ಲಿ ಉಳಿದುಕೊಂಡರೂ ಎಲ್ಲಾದರೂ ಇಂತಹ ಕ್ಯಾಮರಾ ಇಟ್ಟಿರುತ್ತಾರಾ? ಎಂದು ಗಮನ ಹರಿಸುತ್ತೇನೆ" ಎಂದಿದ್ದರು.
ಕಳೆದ ವರ್ಷ ಆಸ್ಟ್ರೇಲಿಯಾದ ಹೋಟೆಲ್ ಕೋಣೆಯ ಕ್ರಿಕೆಟಿಗ ವಿರಾಟ್ ಕೊಹ್ಲಿ ವಿಡಿಯೋ ಲೀಕ್ ಆಗಿದ್ದಾಗ ಪತ್ನಿ ಅನುಷ್ಕಾ ಶರ್ಮಾ ಆಕ್ರೋಶ ವ್ಯಕ್ತಪಡಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದರು. "ಅಭಿಮಾನಿಗಳು ಸಹಾನುಭೂತಿ ತೋರದ ಕೆಲ ಘಟನೆಗಳನ್ನು ಹಿಂದೆಯೂ ಅನುಭವಿಸಿದ್ದೇನೆ. ಆದರೆ ಇದು ಅತ್ಯಂತ ಕೆಟ್ಟ ಬೆಳವಣಿಗೆ, ಇಲ್ಲಿ ವ್ಯಕ್ತಿಯ ಏಕಾಂತದ ಉಲ್ಲಂಘನೆಯಾಗಿದೆ. ಸೆಲೆಬ್ರೆಟಿಯಾಗಿದ್ದವರು ಇಂತಹ ಸನ್ನಿವೇಶಗಳೊಂದಿಗೆ ವ್ಯವಹರಿಸಬೇಕೆಂದು ಅಂದುಕೊಳ್ಳುವವರೂ ಸಹ ಸಮಸ್ಯೆಯ ಭಾಗವೇ ಆಗಿರುತ್ತಾರೆ. ಇದು ನಿಮ್ಮ ಮಲಗುವ ಕೊಠಡಿಯಲ್ಲಿ ನಡೆಯುತ್ತಿದೆ ಎಂದಾದರೆ ಮಿತಿ ಎಲ್ಲಿದೆ?" ಎಂದು ಪ್ರಶ್ನಿಸಿದ್ದರು.
ದೆಹಲಿಯಲ್ಲಿ ಹುಟ್ಟಿದ ಕೃತಿ ಕರಬಂಧ ಬೆಂಗಳೂರಿನಲ್ಲಿ ಓದಿ ಬೆಳೆದರು. ಬಾಲ್ಡವಿನ್ ಗರ್ಲ್ಸ್ ಸ್ಕೂಲ್, ವಿಷಬ್ ಕಾಟನ್ ಶಾಲೆಗಳಲ್ಲಿ ಓದಿದ ಕೃತಿ ಜೈನ್ ಕಾಲೇಜ್‌ನಲ್ಲಿ ಪದವಿ ಪಡೆದಿದ್ದರು. ತೆಲುಗಿನ 'ಬೋಣಿ' ಸಿನಿಮಾ ಮೂಲಕ ಆಕೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಮರುವರ್ಷವೇ ಕನ್ನಡದ 'ಚಿರು' ಚಿತ್ರದಲ್ಲಿ ಮಿಂಚಿದರು.
ಪ್ರೇಮ್ಸ್ ಅಡ್ಡ, ಗಲಾಟೆ, ಗೂಗ್ಲಿ, ತಿರುಪತಿ ಎಕ್ಸ್‌ಪ್ರೆಸ್, ಸೂಪರ್ ರಂಗ, ಬೆಳ್ಳಿ, ಮಾಸ್ತಿಗುಡಿ, ದಳಪತಿ ಹೀಗೆ ಕೆಲ ಕನ್ನಡ ಸಿನಿಮಾಗಳಲ್ಲಿ ಕೃತಿ ಕರಬಂಧ ನಟಿಸಿದ್ದಾರೆ. ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ ಜೊತೆ ಕೃತಿ ಡೇಟಿಂಗ್ ನಡೆಸುತ್ತಿದ್ದಾರೆ. 'ವೀರ್ ಕಿ ವೆಡ್ಡಿಂಗ್' ಚಿತ್ರದಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದರು. ಇದೇ ಸಮಯದಲ್ಲಿ ಶುರುವಾದ ಪರಿಚಯ ಬಳಿಕ ಪ್ರೀತಿಗೆ ತಿರುಗಿತ್ತು. ಇತ್ತೀಚಿನ ವರ್ಷಗಳಲ್ಲಿ ಆಕೆ ಯಾವುದೇ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಶೀಘ್ರದಲ್ಲೇ ಇಬ್ಬರು ಮದುವೆ ಆಗುತ್ತಾರೆ ಎನ್ನಲಾಗ್ತಿದೆ.


Click it and Unblock the Notifications











