ಆಪ್ತ ಗೆಳತಿಯ ಅಕಾಲಿಕ ನಿಧನ ; ಅಂತ್ಯಸಂಸ್ಕಾರದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಸಲ್ಮಾನ್ ಖಾನ್, ಯಾರು ಈ ಕುಮುದ್ ರಾಣೆ ?
ಸ್ನೇಹ ಅಂದರೆ ಎರಡು ಮೂರು ದಿನಗಳ ಸಂಬಂಧ ಅಲ್ಲ. ಎಂದೆಂದೂ ಅಳಿಯದ ಸಂಬಂಧ. ನಮ್ಮ ಸುತ್ತ ಸ್ವಾರ್ಥಿಗಳೇ ತುಂಬಿ ತುಳುಕುತ್ತಿರುವ ಈ ಕಾಲದಲ್ಲಿ ರಕ್ತ ಸಂಬಂಧವನ್ನು ಮೀರಿದ ಸಂಬಂಧ ಈ ಸ್ನೇಹ. ನದಿಯ ಅಲೆಯಂತೆ.. ಕಣ್ಣಿನ ರೆಪ್ಪೆಯಂತೆ.. ಪುಸ್ತಕದ ಹಾಳೆಯಂತೆ.. ಈ ಸ್ನೇಹ. ಹೆಗಲಿಗೆ ಹೆಗಲಾಗಿ ನಿಲ್ಲುವುದು ಸ್ನೇಹ.
ಇಂತಹ ಸ್ನೇಹವನ್ನು ಪಡೆಯಲು ಕೂಡ ಯೋಗ ಬೇಕು. ಆದರೆ ಆ ಯೋಗ ಕೂಡಿ ಬಂದಾಗ ಸ್ನೇಹದ ದೋಣಿ ವಿಧಿಯ ಕ್ರೂರತೆಯಿಂದ ಮುಗುಚಿ ಹೋಗುತ್ತೆ. ಆಗ ಉಳಿಯುವುದು ಕೇವಲ ನೆನಪು ಮಾತ್ರ. ಈ ನೆನಪುಗಳೇ ಈಗ ಬಾಲಿವುಡ್‌ನ ದಬಂಗ್ ಸಲ್ಮಾನ್ ಖಾನ್ ಅವರ ಕಣ್ಣಂಚನ್ನು ಒದ್ದೆಯನ್ನಾಗಿಸಿವೆ. ಭಾವುಕರನ್ನಾಗಿಸಿವೆ.

ಹೌದು, ಸಲ್ಮಾನ್ ಖಾನ್.. ಹಲವರ ದೃಷ್ಟಿಯಲ್ಲಿ ಬಾಲಿವುಡ್‌ನ ಬ್ಯಾಡ್ ಬಾಯ್. ದುರಂಹಕಾರಿ. ಆನೆ ನಡೆದಿದ್ದೇ ದಾರಿ ಎಂಬಂತೆ ವರ್ತಿಸುವ ಒರಟು ವ್ಯಕ್ತಿತ್ವದ ನಟ. ಆದರೆ, ವಾಸ್ತವದಲ್ಲಿ ಸಲ್ಮಾನ್ ಖಾನ್ ಅವರನ್ನು ಹತ್ತಿರದಿಂದ ಬಲ್ಲವರು ಹೇಳುವಂತೆ ಸಲ್ಮಾನ್ ಖಾನ್ ತುಂಬಾನೇ ಭಾವುಕ ಜೀವಿ. ಅವರದ್ದು ಮೃದು ಸ್ವಭಾವದ ವ್ಯಕ್ತಿತ್ವ. ಇದಕ್ಕೆ ಕೈಗನ್ನಡಿಯೇ ಸ್ಮಶಾನದಲ್ಲಿಂದು ಸಲ್ಮಾನ್ ಹರಿಸಿದ ಕಣ್ಣೀರ ಧಾರೆ.
ನಿಮಗೆ ಗೊತ್ತಿರಲಿ, ಕೆಲ ದಿನಗಳ ಹಿಂದೆಯಷ್ಟೇ ಸಲ್ಮಾನ್ ಖಾನ್ ತಮ್ಮ 42 ವರ್ಷಗಳ ಅತ್ಯಾಪ್ತ ಗೆಳೆಯ ಸುಶೀಲ್ ಕುಮಾರ್ ಅವರನ್ನು ಕಳೆದುಕೊಂಡಿದ್ದರು. ಸ್ನೇಹಿತನ ಅಕಾಲಿಕ ನಿಧನಕ್ಕೆ ಕಂಬನಿ ಮಿಡಿದಿದ್ದರು. ಈ ನೋವಿನಿಂದ ಸಲ್ಮಾನ್ ಖಾನ್ ಇನ್ನೂ ಹೊರ ಬಂದಿಲ್ಲ. ಅಷ್ಟರಲ್ಲಿಯೇ ಸಲ್ಮಾನ್ ಖಾನ್‌ಗೆ ಮತ್ತೊಂದು ಬರ ಸಿಡಿಲು ಬಡಿದಿದ್ದು ಸಲ್ಮಾನ್ ಖಾನ್‌ಗೆ ಜೀವಜ್ಜೀವದಂತೆ ಇದ್ದ ಕುಮುದ್ ರಾಣೆ ಇಂದು (ಜೂನ್ 9) ಇಹಲೋಕ ತ್ಯಜಿಸಿದ್ದಾರೆ.
ತಮ್ಮ ಆಪ್ತ ಸ್ನೇಹಿತೆಯ ನಿಧನದಿಂದ ಸಂಪೂರ್ಣವಾಗಿ ಕುಗ್ಗಿ ಹೋದಂತೆ ಇಂದು (ಜೂನ್ 9) ಕಂಡು ಬಂದ ಸಲ್ಮಾನ್ ಖಾನ್, ಸಾಂತಾಕ್ರೂಜ್‌ನಲ್ಲಿರುವ ಹಿಂದೂ ಸ್ಮಶಾನದಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ಧಾರೆ. ಆಪ್ತ ಸ್ನೇಹಿತೆಗೆ ಭಾವುಕ ವಿದಾಯ ಹೇಳಿದ್ದಾರೆ. ಸದ್ಯ ಸಲ್ಮಾನ್ ಖಾನ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇವರ ಅಭಿಮಾನಿಗಳನ್ನು ಈ ದೃಶ್ಯಾವಳಿಗಳು ಭಾವುಕಗೊಳಿಸಿವೆ.
ಯಾರು ಈ ಕುಮುದ್ ರಾಣೆ ..?
ಕುಮುದ್ ರಾಣೆ ಯಾರು..? ಹಿನ್ನೆಲೆ ಏನು..? ಸಲ್ಮಾನ್ ಖಾನ್ ಮತ್ತು ಕುಮುದ್ ಗೆಳೆತನ ಶುರುವಾಗಿದ್ದು ಹೇಗೆ..? ಎಲ್ಲಿ..? ಈ ಪ್ರಶ್ನೆಗೆ ಸದ್ಯ ಉತ್ತರ ಸಲ್ಮಾನ್ ಖಾನ್ ಮತ್ತು ಅವರ ಕುಟುಂಬದ ಬಳಿ ಮಾತ್ರ ಇದೆ. ಯಾಕೆಂದರೆ ಕುಮುದ್ ರಾಣೆ ಯಾವುದೇ ಸಾರ್ವಜನಿಕ ವ್ಯಕ್ತಿಯಾಗಿರಲಿಲ್ಲ ಅಥವಾ ತಳುಕು ಬಳುಕಿನ ಬಾಲಿವುಡ್ ಜಗತ್ತಿಗೆ ಸೇರಿದವರೂ ಆಗಿರಲಿಲ್ಲ.
ಮಾಧ್ಯಮಗಳ ಕಣ್ಣಿಂದ ಸದಾ ದೂರ ಇದ್ದವರು ಕುಮುದ್ ರಾಣೆ. ಸರಳ ಮತ್ತು ಘನತೆಯುಳ್ಳ ಮಹಿಳೆ. ಮುಂಬೈನಲ್ಲಿ ಕೇಳಿ ಬರುತ್ತಿರುವ ಸುದ್ದಿಗಳ ಪ್ರಕಾರ ಸಲ್ಮಾನ್ ಖಾನ್ ಪಾಲಿನ ಹಿತೈಷಿ ಮತ್ತು ಅಪಾರ ಗೌರವ ಹೊಂದಿದ್ದ ವ್ಯಕ್ತಿಯಾಗಿದ್ದರು.
ಇನ್ನು ಸಲ್ಮಾನ್ ಖಾನ್ ಪಾಲಿಗೆ ಕುಮುದ್ ಕೇವಲ ಸ್ನೇಹಿತೆಯಾಗಿರಲಿಲ್ಲ. ಬದಲಿಗೆ ಭಾವನಾತ್ಮಕವಾದ ಆಸರೆಯಾಗಿದ್ದರು. ಇವರಿಬ್ಬರ ನಡುವಿನ ಬಾಂಧವ್ಯ ದಶಕಗಳಷ್ಟು ಹಳೆಯದು. ಸಲ್ಮಾನ್ ಖಾನ್ ಅವರ ಏಳುಬೀಳುಗಳನ್ನು ಹತ್ತಿರದಿಂದ ಕಂಡವರು ಕುಮುದ್ ರಾಣೆ. ಪ್ರತಿ ಶುಕ್ರವಾರದ ಚಿತ್ರದ ಬಿಡುಗಡೆಯ ಜೊತೆಗೆ ಬದಲಾಗುವ ಸಂಬಂಧಗಳ ನಡುವೆ ಕುಮುದ್ ಮಾತ್ರ ಸಲ್ಮಾನ್ ಜೀವನದ ಶಾಶ್ವತ ಶಕ್ತಿಯಾಗಿ ಉಳಿದುಕೊಂಡಿದ್ದರು.

ಕುಮುದ್ ರಾಣೆಗೆ ಭಾವುಕ ವಿದಾಯ ಹೇಳಿದ ಇಡೀ ಸಲ್ಮಾನ್ ಖಾನ್ ಕುಟುಂಬ
ಕುಮುದ್ ರಾಣೆಯ ಅಗಲಿಕೆಯ ನೋವು ಎಷ್ಟು ಆಳವಾಗಿತ್ತೆಂದರೆ, ಇಡೀ ಸಲ್ಮಾನ್ ಖಾನ್ ಕುಟುಂಬ ರುದ್ರಭೂಮಿಯಲ್ಲಿ ಕಣ್ಣೀರು ಹಾಕಿದೆ. ಕುಮುದ್ ರಾಣೆಯ ಅಂತಿಮ ದರ್ಶನ ಪಡೆದು ಬಿಕ್ಕಿದೆ. ಸಲ್ಮಾನ್ ಖಾನ್ ಅವರ ತಾಯಿ ಸಲ್ಮಾ ಖಾನ್, ಸಾಕುತಾಯಿ ಹೆಲೆನ್, ಸಹೋದರರಾದ ಸೊಹೈಲ್ ಮತ್ತು ಅರ್ಬಾಜ್ ಖಾನ್, ಸಹೋದರಿ ಅರ್ಪಿತಾ ಖಾನ್ ಶರ್ಮಾ, ಅಲ್ವೀರಾ ಅಗ್ನಿಹೋತ್ರಿ, ಹೀಗೆ ಎಲ್ಲರೂ ಕುಮುದ್ ರಾಣೆಗೆ ಕಣ್ಣೀರಿನ ವಿದಾಯ ಹೇಳಿದ್ದಾರೆ.


Click it and Unblock the Notifications