ಉಪಮುಖ್ಯಮಂತ್ರಿಯನ್ನು ದೇಶದ್ರೋಹಿ ಎಂದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಮ್ರಾ, ಸ್ಟುಡಿಯೋ ಧ್ವಂಸ..!
ಜನರನ್ನು ನಗಿಸುವುದು ಸುಲಭ ಅಲ್ಲ. ತುಂಬಾನೇ ಕಷ್ಟಕರವಾದ ಕೆಲಸ ಅದು. ಆದರೂ ಕೂಡ ಅನೇಕರು ನಗಿಸುವ ಪ್ರಯತ್ನ ಮಾಡುತ್ತಾರೆ. ಇಂದು ಬದಲಾದ ಕಾಲದಲ್ಲಿ ಹಾಸ್ಯ ಪ್ರವೃತ್ತಿ ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ವೇದಿಕೆಗಳಿಂದ ಹಿಡಿದು ಆನ್ ಲೈನ್‌ವರೆಗೆ ಪಸರಿಸಿದೆ.
ಮಾಧ್ಯಮ ಯಾವುದೇ ಆದರೂ ಪ್ರಚಲಿತ ಸಂಗತಿಗಳಿಗೆ ಸೀಮಿತವಾಗಿದ್ದ ಹಾಸ್ಯ ಈಗೀಗ ವ್ಯಕ್ತಿಗತವಾಗಿದೆ. ಹಾಸ್ಯ ಎನ್ನುವುದು ಈಗ ಗೆರೆ ದಾಟಿ ಅಪಹಾಸ್ಯದ ಹಂತಕ್ಕೆ ತಲುಪಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಹಾಸ್ಯದ ಹೆಸರಿನಲ್ಲಿ ಗಣ್ಯ ವ್ಯಕ್ತಿಗಳ ಕಾಲೆಳೆಯುವುದು ಕೂಡ ಅಪರಾಧ ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ. ಗಂಭೀರ ಪರಿಣಾಮಗಳಿಗೆ ಕೂಡ ಇದು ದಾರಿಯಾಗುತ್ತಿದೆ. ಉದಾಹರಣೆಗೆ ಕುನಾಲ್ ಕಾಮ್ರಾ ಸುತ್ತ ಎದ್ದಿರುವ ವಿವಾದ.

ಹೌದು, ಮೊದಲಿಂದ ಕೂಡ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಾನೇ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗುತ್ತಲೇ ಬಂದ ಸ್ಟ್ಯಾಂಡ್-ಅಪ್ ಕಾಮೆಡಿಯನ್ ಕುನಾಲ್ ಕಾಮ್ರಾ ಮೊನ್ನೆ ಮುಂಬೈನ ಹ್ಯಾಬಿಟಾಟ್ ಕಾಮಿಡಿ ಕ್ಲಬ್‌ನಲ್ಲಿ ಎಲ್ಲರನ್ನು ನಕ್ಕು ನಗಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಏಕನಾಥ್ ಶಿಂಧೆ ಮತ್ತು ಉದ್ಭವ್ ಠಾಕ್ರೆಯ ನಡುವಿನ ರಾಜಕೀಯವನ್ನು ಉಲ್ಲೇಖಿಸುತ್ತಾ ಮೊದಲು ಶಿವಸೇನಾ ಬಿಜೆಪಿಯಿಂದ ಹೊರ ಬಂತು ಆ ನಂತರ ಶಿವಸೇನಾ ಶಿವಸೇನಾದಿಂದಲೇ ಹೊರ ಬಂತು, ಎನ್‌ಸಿಪಿ ಎನ್‌ಸಿಪಿಯಿಂದ ಹೊರ ಬಂತು, ಇವರೆಲ್ಲ ಒಬ್ಬ ಮತದಾರನಿಗೆ ಒಂಬತ್ತು ಬಟನ್‌ಗಳನ್ನು ನೀಡಿದ್ದಾರೆ ಎಂದು ಹೇಳಿದ್ದರು. ಇದು ಸಾಲದೆಂಬಂತೆ ದಿಲ್ ತೋ ಪಾಗಲ್ ಹೈ ಚಿತ್ರದ ಸಾಲುಗಳಿಗೆ ರಾಜಕೀಯ ಪಕ್ಷಗಳನ್ನು ವಿಲೀನಗೊಳಿಸಿ ಹಾಡಿದ್ದರು. ಏಕನಾಥ್ ಶಿಂಧೆ ಅವರ ಹೆಸರನ್ನು ಸ್ಪಷ್ಟವಾಗಿ ಎಲ್ಲಿಯೂ ಉಲ್ಲೇಖಿಸದೆ ಥಾಣೆಯು ರಾಜಕೀಯದ ಭದ್ರಕೋಟೆಯಾಗಿದ್ದು ದೇಶ ದ್ರೋಹಿ ಆಳ್ವಿಕೆ ನಡೆಸುತ್ತಿದ್ದಾನೆ ಎಂದು ಹಾಡು ಹೇಳಿದ್ದರು. ಟೀಕೆ ಮಾಡಿದ್ದರು.
ಕುನಾಲ್ ಕಾಮ್ರಾ ಅವರ ಈ ಟೀಕೆ ಟಿಪ್ಪಣಿಗೆ ಜನ ಚಪ್ಪಾಳೆ ಹೊಡೆದು - ನಕ್ಕು ಹೋಗಿದ್ದರು. ಆದರೆ ಈಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡರಂತೆ ಎಂಬ ಮಾತಿನಂತೆ ಕುನಾಲ್ ಕಾಮ್ರಾ ಎಲ್ಲಿಯೂ ಶಿಂಧೆ ಹೆಸರು ಹೇಳದಿದ್ದರೂ ಕೂಡ ಏಕನಾಥ್ ಶಿಂಧೆ ಬಣ ಕೆರಳಿದೆ. ಕುನಾಲ್ ಕಾಮ್ರಾಗೆ ವೇದಿಕೆಯಾಗಿದ್ದ ಹ್ಯಾಬಿಟಾಟ್ ಕ್ಲಬ್‌ಗೆ ನುಗ್ಗಿ ಸಂಪೂರ್ಣ ಸ್ಟುಡಿಯೋ ಧ್ವಂಸಗೊಳಿಸಿ ತನ್ನ ಆಕ್ರೋಶವನ್ನು ಹೊರ ಹಾಕಿದೆ.
ಈ ಕುರಿತು ಮಾತನಾಡಿರುವ ಶಿವಸೇನೆ ಸಂಸದ ನರೇಶ್ ಮ್ಹಾಸ್ಕೆ,ಕುನಾಲ್ ಕಾಮ್ರಾ ಉದ್ಭವ್ ಠಾಕ್ರೆ ಅವರ ಶೀವಸೇನಾದಿಂದ ಹಣ ಪಡೆದು ಏಕನಾಥ್ ಶಿಂಧೆ ಅಅವರನ್ನು ಟೀಕಿಸುತ್ತಿದ್ದಾನೆ ಎಂದು ಕಿಡಿ ಕಾರಿದ್ದಾರೆ. ಮಹಾರಾಷ್ಟ್ರ ಮಾತ್ರವಲ್ಲ ಭಾರತದಲ್ಲಿ ಎಲ್ಲಿಯೂ ಕುನಾಲ್ ಕಾಮ್ರಾ ನೆಮ್ಮದಿಯಾಗಿ ಓಡಾಡಲು ಆಗಬಾರದು, ಶಿವ ಸೈನಿಕರು ಕುನಾಲ್ ಕಾಮ್ರಾಗೆ ಅವನ ಯೋಗ್ಯತೆಯನ್ನು ತೋರಿಸುತ್ತಾರೆ ಎಂದು ಹೇಳಿದ್ದಾರೆ.
ಇನ್ನು ಶಿವಸೇನಾ ವಕ್ತಾರ ಕೃಷ್ಣ ಹೆಗ್ಡೆ ಕೂಡ ಮಾತನಾಡಿದ್ದು ಕುನಾಲ್ ಕಾಮ್ರಾ ಹೇಳಿಕೆ ಯಾವೊಬ್ಬ ಶಿವ ಸೈನಿಕನಿಗೆ ಇಷ್ಟವಾಗಿಲ್ಲ, ಅವರಿಗೆ ನಮ್ಮದೇ ಶೈಲಿಯಲ್ಲಿ ಚಿಕಿತ್ಸೆಯನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್ ಕೂಡ ಈ ವಿಚಾರದ ಕುರಿತು ಮಾತನಾಡಿದ್ದು ಕುನಾಲ್ ಕಾಮ್ರಾ ಈ ಕೂಡಲೇ ಕುನಾಲ್ ಕಾಮ್ರಾ ತನ್ನ ಈ ತಪ್ಪಿಗೆ ಕ್ಷಮೆಯನ್ನು ಕೇಳಬೇಕು ಎಂದು ಹೇಳಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆ ಹಾಗಂಥ ಹಾಸ್ಯದ ಹೆಸರಿನಲ್ಲಿ ಅವಮಾನ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಇನ್ನು ಮುಂಬೈ ಪೊಲೀಸರು ಸದ್ಯ ಕುನಾಲ್ ಕಾಮ್ರಾ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದು ಕುನಾಲ್ ಕಾಮ್ರಾ ಅವರನ್ನು ಬಂಧಿಸಲು ಹುಡುಕಾಡುತ್ತಿದ್ದಾರೆ ಎಂದು ಗೃಹ ಸಚಿವ ಯೋಗೇಶ್ ಕದಮ್ ಹೇಳಿದ್ದಾರೆ.


Click it and Unblock the Notifications











