ಸಲ್ಮಾನ್ ಖಾನ್ ಅನ್ನು ಕೊಲ್ಲಲು ಎರಡು ಪ್ಲ್ಯಾನ್: 4 ಲಕ್ಷದ ಗನ್!
ಸಲ್ಮಾನ್ ಖಾನ್ ಅನ್ನು ಕೊಲ್ಲಲು ಹಲವು ವರ್ಷಗಳಿಂದ ಭೂಗತ ಪಾತಕಿಗಳ ತಂಡವೊಂದು ಗಂಭೀರ ಪ್ರಯತ್ನ ನಡೆಸುತ್ತಲೇ ಇರುವುದು ಇತ್ತೀಚಿನ ತನಿಖೆಯಿಂದ ಬೆಳಕಿಗೆ ಬಂದಿದೆ.
ಇದೇ ತಿಂಗಳ ಮೂರನೇ ತಾರೀಖಿನಂದು ಸಲ್ಮಾನ್ ಖಾನ್ ತಂದೆ ಸಲೀಂ ಖಾನ್‌ಗೆ ಉದ್ಯಾನವೊಂದರಲ್ಲಿ ಬೆದರಿಕೆ ಪತ್ರವೊಂದು ದೊರೆತಿತ್ತು. ಸಲೀಂ ಖಾನ್ ಅನ್ನು ದಿನಗಟ್ಟಲೆ ಫಾಲೋ ಮಾಡಿ ಅವರು ಪ್ರತಿದಿನ ಭೇಟಿ ನೀಡಿ ಕುಳಿತು ವಿಶ್ರಮಿಸುವ ಉದ್ಯಾನದ ಕಲ್ಲು ಬೆಂಚಿನ ಮೇಲೆ ಬೆದರಿಕೆ ಪತ್ರ ಇಡಲಾಗಿತ್ತು. ''ಸಿಧು ಮೂಸೆವಾಲಾಗೆ ಆದ ಗತಿಯೇ ಸಲ್ಮಾನ್ ಖಾನ್‌ಗೆ ಆಗುತ್ತದೆ'' ಎಂದು ಪತ್ರದಲ್ಲಿ ಬರೆದಿದ್ದು, ಪತ್ರದಲ್ಲಿ ಎಲ್‌ಬಿ ಹಾಗೂ ಜಿಬಿ ಎಂಬ ಇನ್‌ಶಿಯಲ್‌ಗಳು ಸಹ ಇದ್ದವು.
ಎಲ್‌ಬಿ ಎಂದರೆ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಶ್ಣೋಯಿ ಎಂದು, ಜಿಬಿ ಎಂದರೆ ಗೋಲ್ಡಿ ಬ್ರಾರ್ ಎಂದು ಅರಿತುಕೊಂಡ ಪೊಲೀಸರು, ಈಗಾಗಲೇ ಬೇರೊಂದು ಪ್ರಕರಣದಲ್ಲಿ ಜೈಲಿನಲ್ಲಿರುವ ಭೂಗತ ಪಾತಕಿ ಲಾರೆನ್ಸ್ ಬಿಶ್ಣೋಯಿ ಅನ್ನು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಸಲ್ಮಾನ್ ಖಾನ್ ಹತ್ಯಾ ಪ್ರಯತ್ನದ ಕುರಿತು ಹಲವು ಆಘಾತಕಾರಿ ವಿಷಯಗಳನ್ನು ಬಹಿರಂಗಗೊಳಿಸಿದ್ದಾರೆ ಬಿಶ್ಣೋಯಿ.
ಕೃಷ್ಣ ಮೃಗ ಭೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಅನ್ನು ಕೊಲ್ಲಲು ಲಾರೆನ್ಸ್ ಬಿಶ್ಣೋಯಿ ನಿರ್ಣಯಿಸಿದ್ದು, ಈವರೆಗೆ ಹಲವು ಬಾರಿ ಸಲ್ಮಾನ್ ಖಾನ್ ಅನ್ನು ಕೊಲ್ಲಲು ಯತ್ನಿಸಿ ವಿಫಲನಾಗಿದ್ದಾನೆ. ಅದರಲ್ಲಿ ಎರಡು ಬಾರಿ ಅಂತೂ ತೀರ ಸನಿಹಕ್ಕೆ ಬಂದು ವಿಫಲನಾಗಿದ್ದಾನೆ. ವಿಶೇಷ ತನಿಖಾ ದಳದ ವಿಚಾರಣೆ ವೇಳೆ ಈ ಅಂಶಗಳನ್ನು ಲಾರೆನ್ಸ್ ಬಿಶ್ಣೋಯಿ ಬಹಿರಂಗಪಡಿಸಿದ್ದಾನೆ.

ಪಿಸ್ತೂಲು ಮಾತ್ರ ಇದ್ದಿದ್ದರಿಂದ ಗುರಿ ಇಡಲಾಗಿರಲಿಲ್ಲ
ಸಲ್ಮಾನ್ ಖಾನ್ ಅನ್ನು ಕೊಲ್ಲಲು 2018 ರಾಜಸ್ಥಾನದ ಗ್ಯಾಂಗ್‌ಸ್ಟರ್ ಒಬ್ಬನ ಸಹಾಯವನ್ನು ಲಾರೆನ್ಸ್ ಕೇಳಿದ್ದ. ಆಗ ಸಂಪತ್ ನೆಹ್ರಾ ಎಂಬ ಶಾರ್ಪ್ ಶೂಟರ್ ಅನ್ನು ಸಲ್ಮಾನ್ ಖಾನ್ ಅನ್ನು ಕೊಲ್ಲಲು ನೇಮಿಸಲಾಯಿತು. ಆದರೆ ಆತನ ಬಳಿ ಕೇವಲ ಸಾಮಾನ್ಯ ಪಿಸ್ತೂಲು ಇದ್ದಿದ್ದರಿಂದ ಸಲ್ಮಾನ್ ಖಾನ್ ಗೆ ಸರಿಯಾಗಿ ಗುರಿ ಇಡಲಾಗದೆ ಪ್ರಯತ್ನ ವಿಫಲವಾಯಿತು. ಆ ಬಳಿಕ ಲಾರೆನ್ಸ್, ನಾಲ್ಕು ಲಕ್ಷ ರುಪಾಯಿ ಬೆಲೆಯ ಅತ್ಯಾಧುಕಿನ ಆರ್‌ಕೆ ಸ್ಪ್ರಿಂಗ್ ರೈಫಲ್ ಅನ್ನು ಖರೀದಿಸಿದ.

ಪೊಲೀಸರ ವಶವಾಯ್ತು ಅತ್ಯಾಧುನಿಕ ಗನ್
ಅತ್ಯಾಧುಕಿನ ಆರ್‌ಕೆ ಸ್ಪ್ರಿಂಗ್ ರೈಫಲ್ ಅನ್ನು ದಿನೇಶ್ ಫೌಜಿ ಹೆಸರಿನ ವ್ಯಕ್ತಿಯಿಂದ ಲಾರೆನ್ಸ್ ಬಿಶ್ಣೋಯಿ ಖರೀದಿ ಮಾಡಿದ್ದ. ಆತ, ಸಲ್ಮಾನ್ ಖಾನ್ ಅನ್ನು ಕೊಲ್ಲಲು ನೇಮಿಸಲಾಗಿದ್ದ ನೆಹರು ಎಂಬಾತನ ಹಳ್ಳಿಯವನೇ ಆಗಿದ್ದ. ರೈಫಲ್ ಖರೀದಿಸಿ ಅನಿಲ್ ಪಾಂಡೆ ಹಾಗೂ ಡಗರ್ ಎಂಬಾತನಿಗೆ ಹಣ ನೀಡಿದ್ದ ಲಾರೆನ್ಸ್. ಆದರೆ ಕೆಲವೇ ದಿನಗಳಲ್ಲಿ ಪೊಲೀಸ್ ರೈಡ್ ಒಂದರಲ್ಲಿ ಡಗರ್ ಎಂಬಾತನ ನಿವಾಸದಿಂದ ಆ ಆರ್ ಕೆ ಸ್ಪ್ರಿಂಗ್ ರೈಫಲ್ ಪೊಲೀಸರ ವಶ ಸೇರಿತು. ಹಾಗಾಗಿ ಸಲ್ಮಾನ್ ಖಾನ್ ಅನ್ನು ಕೊಲ್ಲುವ ಯೋಜನೆ ಮತ್ತೊಮ್ಮೆ ವಿಫಲವಾಯಿತು.

ಕೊನೆ ಕ್ಷಣದಲ್ಲಿ ಯೋಜನೆ ರದ್ದಾಯಿತು
2018 ಕ್ಕೂ ಮುನ್ನಾ 'ರೆಡಿ' ಸಿನಿಮಾದ ಚಿತ್ರೀಕರಣದ ವೇಳೆ ಸಹ ಸಲ್ಮಾನ್ ಖಾನ್ ಅನ್ನು ಕೊಲ್ಲಲು ಯೋಜನೆ ಹಾಕಲಾಗಿತ್ತು. 2010 ರಲ್ಲಿ 'ರೆಡಿ' ಸಿನಿಮಾದ ಚಿತ್ರೀಕರಣ ನಡೆದಿತ್ತು, ಈ ಸಮಯದಲ್ಲಿ ಸಲ್ಮಾನ್ ಖಾನ್‌ರ ಚಿತ್ರೀಕರಣದ ಸೆಟ್ ಮೇಲೆ ದಾಳಿ ನಡೆಸಿ ಸಲ್ಮಾನ್ ಖಾನ್ ಅನ್ನು ಕೊಲ್ಲಲು ಯೋಜಿಸಲಾಗಿತ್ತು. ಆದರೆ ಕೆಲವು ಭಿನ್ನಾಭಿಪ್ರಾಯಗಳ ಕಾರಣ ಆ ಪ್ಲಾನ್ ಕೊನೆ ನಿಮಿಷದಲ್ಲಿ ರದ್ದಾಯಿತು ಎಂದು ಸ್ವತಃ ಲಾರೆನ್ಸ್ ಬಿಶ್ಣೋಯಿ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.

ಕೃಷ್ಣಮೃಗ, ಬಿಶ್ಣೋಯಿ ಸಮುದಾಯಕ್ಕೆ ಅತ್ಯಂತ ಪೂಜನೀಯ
ಕೃಷ್ಣಮೃಗ ಬಿಶ್ಣೋಯಿ ಸಮುದಾಯಕ್ಕೆ ಅತ್ಯಂತ ಪೂಜನೀಯ ಹಾಗಾಗಿ ಕೃಷ್ಣಮೃಗವನ್ನು ಭೇಟೆಯಾಡಿದ ಸಲ್ಮಾನ್ ಖಾನ್ ವಿರುದ್ಧ ಬೀಶ್ಣೋಯಿ ಸಮುದಾಯದವರು ತೀವ್ರ ಸಿಟ್ಟನ್ನು ಇಂದಿಗೂ ಇಟ್ಟುಕೊಂಡಿದ್ದಾರೆ. ಬಿಶ್ಣೋಯಿ ಸಮುದಾಯದವನೇ ಆದ ಭೂಗತ ಪಾತಕಿ ಲಾರೆನ್ಸ್ ಬಿಶ್ಣೋಯಿ, ತಾನು ಸಲ್ಮಾನ್ ಖಾನ್ ಅನ್ನು ಕೊಲ್ಲುವುದಾಗಿ ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದ, ಹಾಗೂ ಆ ಕಾರ್ಯದಲ್ಲಿ ಸತತವಾಗಿ ಮಗ್ನನಾಗಿದ್ದಾರೆ. ಇತ್ತೀಚೆಗೆ ನಡೆದ ಸಿಧು ಮೂಸೆವಾಲಾ ಹತ್ಯೆಯಲ್ಲಿಯೂ ಈತನದ್ದು ಪ್ರಮುಖ ಪಾತ್ರ.


Click it and Unblock the Notifications











