'ಲಕ್ಷ್ಮಿ ಬಾಂಬ್' ಸಿನಿಮಾಕ್ಕೆ ವಿರೋಧ, ಹೆಸರು ಬದಲಾಯಿಸಿದ ಚಿತ್ರತಂಡ
ಅಕ್ಷಯ್ ಕುಮಾರ್ ನಟನೆಯ ಲಕ್ಷ್ಮಿ ಬಾಂಬ್ ಸಿನಿಮಾದ ಟ್ರೇಲರ್ ಬಿಡುಗಡೆ ಆದಾಗಿನಿಂದಲೂ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಲೇ ಇದೆ.
ಲಕ್ಷ್ಮಿ ಬಾಂಬ್ ಸಿನಿಮಾವು ಮುಂದಿನ ನವೆಂಬರ್ 9 ರಂದು ಬಿಡುಗಡೆ ಆಗಲಿದೆ. ಆದರೆ ಸಿನಿಮಾದ ನಿಷೇಧಕ್ಕೆ ಕೆಲವು ಸಂಘಟನೆಗಳು ಒತ್ತಾಯ ಮಾಡುತ್ತಿವೆ. ಹಿರಿಯ ನಟ ಮುಖೇಶ್ ಖನ್ನಾ ಸಹ ಸಿನಿಮಾದ ಹೆಸರಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಸಿನಿಮಾದ ಹೆಸರಿನ ಬಗ್ಗೆ ಕರ್ಣಿ ಸೇನಾ ಸೇರಿದಂತೆ ಕೆಲವು ಸಂಘಟನೆಗಳು ಆಕ್ಷೇಪ ಎತ್ತಿವೆ. ಸಿನಿಮಾದ ಹೆಸರು, ಹಿಂದು ದೇವತೆ ಲಕ್ಷ್ಮಿಗೆ ಅಪಮಾನ ಮಾಡುವ ಮಾದರಿಯಲ್ಲಿದೆ, ಹಾಗಾಗಿ ಸಿನಿಮಾದ ಹೆಸರು ಬದಲಾಯಿಸಬೇಕು, ಇಲ್ಲವಾದರೆ ಸಿನಿಮಾವನ್ನು ನಿಷೇಧ ಮಾಡಬೇಕು ಎಂದು ಕರಣಿ ಸೇನಾ ಒತ್ತಾಯಿಸಿ, ಚಿತ್ರತಂಡಕ್ಕೆ ಕೋರ್ಟ್ ನೊಟೀಸ್ ಕಳಿಸಿತ್ತು.
ಇದೀಗ ಸಿನಿಮಾ ತಂಡವು ಅಧಿಕೃತ ಹೇಳಿಕೆ ನೀಡಿದ್ದು, 'ಸಿನಿಮಾದ ಹೆಸರನ್ನು ಬದಲಾಯಿಸಲಾಗಿದೆ' ಎಂದು ಹೇಳಿಕೆ ನೀಡಿದೆ. ಲಕ್ಷ್ಮಿ ಬಾಂಬ್ ಎಂದಿದ್ದ ಸಿನಿಮಾ ಹೆಸರನ್ನು 'ಲಕ್ಷ್ಮಿ' ಎಂದು ಬದಲಾಯಿಸಲಾಗಿದೆ ಎಂದು ಹೇಳಿದೆ ಸಿನಿಮಾ ತಂಡ.

ಲಕ್ಷ್ಮಿ ಬಾಂಬ್ ಹೆಸರ ಬದಲಿಗೆ ಬೇರೆ ಹೆಸರು
ಸಿನಿಮಾದ ನಿರ್ದೇಶಕ ರಾಘವ ಲಾರೆನ್ಸ್ ಇಂದು ಸಿಬಿಎಫ್‌ಸಿ ಜೊತೆಗೆ ಮಾತನಾಡಿ, ಅವರಿಗೆ ಮನವಿ ಮಾಡಿ ಸಿನಿಮಾದ ಹೆಸರನ್ನು 'ಲಕ್ಷ್ಮಿ ಬಾಂಬ್' ನಿಂದ 'ಲಕ್ಷ್ಮಿ' ಎಂದು ಬದಲಾಯಿಸಿದ್ದಾರೆ ಎಂದು ಚಿತ್ರತಂಡ ಹೇಳಿದೆ. ಈ ಬದಲಾವಣೆ ಮಾಡುವ ಮುನ್ನಾ ಚಿತ್ರತಂಡ ಪರಸ್ಪರ ಚರ್ಚಿಸಿದೆ ಎಂದಿದ್ದಾರೆ ಚಿತ್ರತಂಡದ ಸದಸ್ಯೆ ಶಬೀನಾ ಖಾನ್.

ಪ್ರೇಕ್ಷಕರ ಭಾವನೆ ಗೌರವಿಸಿ ಹೆಸರು ಬದಲಾವಣೆ
ಪ್ರೇಕ್ಷಕರ ಭಾವನೆಗಳನ್ನು ಗಮನದಲ್ಲಿರಿಸಿಕೊಂಡು ಈ ಬದಲಾವಣೆ ಮಾಡಲಾಗಿದೆ. ಪ್ರೇಕ್ಷಕರ ಭಾವನೆಗಳನ್ನು ನೋಯಿಸುವ, ಅಪಮಾನ ಮಾಡುವ ಉದ್ದೇಶ ಸಿನಿಮಾ ತಂಡಕ್ಕೆ ಇರಲಿಲ್ಲ ಎಂದೂ ಸಹ ಅವರು ಹೇಳಿದ್ದಾರೆ.

ಚಿತ್ರತಂಡಕ್ಕೆ ಕರಣಿ ಸೇನಾ ನೊಟೀಸ್
ಕರಣಿ ಸೇನಾ ಪರವಾಗಿ ವಕೀಲ ರಾಘವೇಂದ್ರ ಮೆರಹೋತ್ರಾ ಎಂಬುವರು ಚಿತ್ರತಂಡಕ್ಕೆ ಲೀಗಲ್ ನೊಟೀಸ್ ಕಳಿಸಿದ್ದರು. 'ಉದ್ದೇಶಪೂರ್ವಕವಾಗಿ, ಅವಮಾನಕರ, ಅವಹೇಳನಕಾರಿ, ಮನನೋಯಿಸುವ ಹೆಸರನ್ನು ಸಿನಿಮಾಕ್ಕೆ ಇಡಲಾಗಿದೆ. ದೇವತೆ ಲಕ್ಷ್ಮಿಗೆ ಅಪಮಾನ ಮಾಡುವ ಉದ್ದೇಶದಿಂದಲೇ ಈ ಹೆಸರು ಇಡಲಾಗಿದೆ' ಎಂದು ನೊಟೀಸ್‌ನಲ್ಲಿ ಆರೋಪಿಸಲಾಗಿತ್ತು.
Recommended Video

ತಮಿಳಿನ ಕಾಂಚನಾ ಸಿನಿಮಾದ ರೀಮೇಕ್
ಲಕ್ಷ್ಮಿ ಬಾಂಬ್ ಸಿನಿಮಾವು ತಮಿಳಿನ ಕಾಂಚನಾ ಸಿನಿಮಾದ ರೀಮೇಕ್ ಆಗಿದೆ. ಕಾಂಚನಾ ನಿರ್ದೇಶಿಸಿ ನಟಿಸಿದ್ದ ರಾಘವ ಲಾರೆನ್ಸ್ ಲಕ್ಷ್ಮಿ ಬಾಂಬ್ ಅನ್ನು ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ನಾಯಕಿಯಾಗಿ ಕಿಯಾರಾ ಅಡ್ವಾಣಿ ನಟಿಸಿದ್ದಾರೆ. ಸಿನಿಮಾದ ಕೆಲ ಹಾಡುಗಳು ಈಗಾಗಲೇ ಹಿಟ್ ಆಗಿದೆ. ನವೆಂಬರ್ 9 ರಂದು ಒಟಿಟಿಯಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.


Click it and Unblock the Notifications











