ಬಾಲಿವುಡ್‌ನ ಹಿರಿಯ ನಟ ಭರತ್ ಕಪೂರ್ ನಿಧನ
ಭಾರತೀಯ ಚಿತ್ರರಂಗಕ್ಕೆ ತಮ್ಮದೇ ಆದ ಸೇವೆಯನ್ನು ಸಲ್ಲಿಸಿದ ಅನೇಕ ತಾರೆಯರು ಒಬ್ಬರಾದ ಮೇಲೊಬ್ಬರಂತೆ ನಮ್ಮನ್ನು ಅಗಲುತ್ತಿದ್ದಾರೆ. ಧರ್ಮೇಂದ್ರ.. ಬಿ.ಸರೋಜಾ ದೇವಿ.. ಕೋಟಾ ಶ್ರೀನಿವಾಸ್ ರಾವ್.. ಧೀರಜ್ ಕುಮಾರ್.. ಮುಖುಲ್ ದೇವ್.. ಫಿಶ್ ವೆಂಕಟ್.. ದಿನೇಶ್ ಮಂಗಳೂರು.. ಯಶವಂತ ಸರದೇಶಪಾಂಡೆ.. ರಾಜು ತಾಳಿಕೋಟೆ.. ಪಂಕಜ್ ಧೀರ್.. ಸತೀಶ್ ಶಾ.. ಗೋವರ್ಧನ್ ಅಸ್ರಾನಿ.. ಅಭಿನಯ್.. ಝರೀನ್ ಖಾನ್..ಕಾಮಿನಿ ಕೌಶಾಲ್.. ಆಶಾ ಭೋಸ್ಲೆ..
ಹೀಗೆ ಭಾರತೀಯ ಚಿತ್ರರಂಗಕ್ಕೆ ತಮ್ಮದೇ ಕೊಡುಗೆಯನ್ನು ನೀಡಿದ ತಾರೆಯರನ್ನು ಒಬ್ಬರಾದ ಮೇಲೊಬ್ಬರಂತೆ ಕಳೆದುಕೊಂಡು ಚಿತ್ರರಂಗ ದುಃಖದಲ್ಲಿದೆ. ಹೀಗಿರುವಾಗ ನಿನ್ನೆ (ಏಪ್ರಿಲ್ 27) ಹಿಂದಿ ಚಿತ್ರರಂಗಕ್ಕೆ ಮತ್ತೊಂದು ಬರ ಸಿಡಿಲು ಬಡಿದಿದ್ದು, ಬಾಲಿವುಡ್‌ನ ಖ್ಯಾತ ಪೋಷಕ ನಟ ಮತ್ತು ಖಳನಾಯಕ ಭರತ್ ಕಪೂರ್ (80) ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ.

ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಭರತ್ ಕುಮಾರ್ ಕಳೆದ ಮೂರು ದಿನಗಳಿಂದ ತೀವೃ ಅಸ್ವಸ್ಥರಾಗಿದ್ದರು. ತಮ್ಮ ಆಪ್ತ ಸ್ನೇಹಿತನ ಅಗಲಿಕೆಯ ನೋವಲ್ಲಿಯೇ ಅವರ ಜೊತೆಗಿನ ನೆನಪುಗಳನ್ನು ಸುದ್ದಿ ಸಂಸ್ಥೆ ''ಪಿಟಿಐ'' ಜೊತೆ ಹಂಚಿಕೊಂಡಿರುವ ಅವತಾರ್ ಗಿಲ್ ನಮ್ಮದು 50 ವರ್ಷಗಳ ಸ್ನೇಹ. ಹಲವು ನಾಟಕ ಮತ್ತು ಸಿನಿಮಾಗಳಲ್ಲಿ ನಾವು ಜೊತೆಯಾಗಿ ಅಭಿನಯಿಸಿದ್ದೇವು ಎಂದು ಹೇಳಿದ್ದಾರೆ.
ಎಷ್ಟೇ ದೂರ ಇದ್ದರೂ ನಾವು ಸದಾ ಸಂಪರ್ಕದಲ್ಲಿರುತ್ತಿದ್ದೆವು, ಆದರೆ ಕಳೆದೊಂದು ವಾರದಿಂದ ಮಾತನಾಡಲು ಸಾಧ್ಯವಾಗಿರಲಿಲ್ಲ ಎಂದು ಭಾವುಕರಾಗಿರುವ ಅವತಾರ್ ಗಿಲ್ ಆತ ನನ್ನ ಸ್ನೇಹಿತ ಮಾತ್ರ ಆಗಿರಲಿಲ್ಲ. ಬದಲಿಗೆ ನನ್ನ ಹಿರಿಯ ಸಹೋದರನಾಗಿದ್ದ, ಮಾರ್ಗದರ್ಶಕನಾಗಿದ್ದ ಎಂದು ಭಾವುಕರಾಗಿದ್ದಾರೆ.
ಇನ್ನೂ ನನ್ನ ತಂದೆ ಕೆಲ ದಿನಗಳಿಂದ ಆನರೋಗ್ಯಕ್ಕೀಡಾಗಿದ್ದರು. ಇಂದು (ಏಪ್ರಿಲ್ 27) ಮಧ್ಯಾಹ್ನ 3:00 ಗಂಟೆ ಸುಮಾರಿಗೆ ಮನೆಯಲ್ಲಿದ್ದಾಗ ಅವರಿಗೆ ಹೃದಯಾಘಾತ ಆಯ್ತು ಎಂದು ಭರತ್ ಕಪೂರ್ ಅವರ ಮಗ ರಾಹುಲ್ ಪ್ರತಿಕ್ರಿಯೆ ನೀಡಿದ್ದಾರೆ.
ನಿನ್ನೆ (ಏಪ್ರಿಲ್ 27) ಸಂಜೆ 6:00 ಗಂಟೆಗೆ ಸಿಯೋನ್ ಆಸ್ಪತ್ರೆ ಸಮೀಪದ ಚಿತಾಗಾರದಲ್ಲಿ ಭರತ್ ಕಪೂರ್ ಅವರ ಅಂತಿಮ ಸಂಸ್ಕಾರ ನಡೆದಿದ್ದು, ಧುರಂಧರ್ ನ ರಾಕೇಶ್ ಬೇಡಿ, ನಿರ್ದೇಶಕ ರಮೇಶ್ ತಲ್ವಾರ್ ಸೇರಿದಂತೆ ಕುಟುಂಬದವರು ಹಾಗೂ ಉದ್ಯಮದ ಆಪ್ತರು ಅವರಿಗೆ ಅಂತಿಮ ನಮನ ಸಲ್ಲಿಸಿದರು. ಏಪ್ರಿಲ್ 30ರಂದು ನಾರ್ತ್ ಬಾಂಬೆ ಅಸೋಸಿಯೇಷನ್‌ನಲ್ಲಿ ಚೌಥಾ ಸಮಾರಂಭ ಆಯೋಜಿಸಲಾಗಿದೆ.
ಭರತ್ ಕಪೂರ್ ಹಿನ್ನೆಲೆ
ಚಿತ್ರರಂಗದಲ್ಲಿ ನಾಲ್ಕು ದಶಕಕ್ಕೂ ಅಧಿಕ ಕಾಲ ಸೇವೆಯನ್ನು ಸಲ್ಲಿಸಿದವರು ಭರತ್ ಕಪೂರ್. ಖಳನಾಯಕನ ಪಾತ್ರ ಇರಲಿ.. ಪೋಷಕ ನಟನ ಪಾತ್ರ ಇರಲಿ.. ವಕೀಲನ ಪಾತ್ರ ಇರಲಿ.. ಅಥವಾ ನಂಬಿಕೆ ದ್ರೋಹ ಮಾಡುವ ಕುತಂತ್ರಿಯ ಪಾತ್ರ ಇರಲಿ.. ಯಾವ ಪಾತ್ರ ನೀಡಿದರೂ ಸೈ ಎನ್ನುತ್ತಿದ್ದ ಭರತ್ ಕಪೂರ್ ಆ ಕಾಲದಲ್ಲಿ ಹಲವು ನಿರ್ದೇಶಕರ ನೆಚ್ಚಿನ ಕಲಾವಿದರಾಗಿದ್ದರು.
ಮೆಲೊಡ್ರಾಮಾ ಮತ್ತು ಹೈ-ವೋಲ್ಟೇಜ್ ಸಾಹಸ ಪ್ರಧಾನ ಸಿನಿಮಾಗಳ ಭಾಗವಾಗಿದ್ದರು. ಬಾಬಿ ಡಿಯೋಲ್ ಅಭಿನಯದ ಚೊಚ್ಚಲ ಚಿತ್ರ ''ಬರ್ಸಾತ್''ನಲ್ಲಿನ ಇವರ ಅಭಿನಯ ಇನ್ನೂ ಹಲವು ಸಿನಿಮಾ ಪ್ರೇಮಿಗಳ ಮನದಲ್ಲಿ ಹಸಿರಾಗಿದೆ.
''ನೂರಿ''.. ''ಖುದಾ ಗವಾಹ್''.. ''ಹಿಂದೂಸ್ತಾನ್ ಕಿ ಕಸಮ್''.. ''ಬಲಿದಾನ್''.. ''ಸತ್ಯಂ ಶಿವಂ ಸುಂದರಂ''.. ''ಕುರ್ಬಾನಿ''.. ''ಆಖ್ರಿ ರಾಸ್ತಾ''.. ''ಸಾಜನ್ ಚಲೇ ಸಸುರಾಲ್''.. ''ರಾಮ್ ಬಲರಾಮ್''.. ''ಸ್ವರ್ಗ್''.. ಹೀಗೆ ಹಲವಾರು ಚಿತ್ರಗಳಲ್ಲಿ ಭಿನ್ನ-ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದ ಭರತ್ ಕಪೂರ್ ಕಿರುತೆರೆಯಲ್ಲಿ ಕೂಡ ತಮ್ಮ ಛಾಪು ಮೂಡಿಸಿದ್ದರು. ''ಅಮಾನತ್''.. ''ಭಾಗ್ಯ ವಿಧಾತಾ''.. ಅಂತಹ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಪತ್ನಿ ಲೂಪಾ, ರಾಹುಲ್ ಮತ್ತು ಸಾಗರ್ ಅವರನ್ನು ಭರತ್ ಕಪೂರ್ ಅಗಲಿದ್ದಾರೆ. ಕೆಲ ವರ್ಷಗಳ ಹಿಂದೆ ಇವರ ಮಗಳು ಕವಿತಾ ನಿಧನರಾಗಿದ್ದರು.


Click it and Unblock the Notifications