ಲೆಟರ್‌ಬಾಕ್ಸ್ ಎಡವಟ್ಟು ; 'ಧುರಂಧರ್-2' ಬಡೇ ಸಾಬ್ ಯಾರೆಂಬ ರಹಸ್ಯ ಬಯಲು ? ಲಿಯಾರಿ ಮಾಸ್ಟರ್ ಮೈಂಡ್ ಇವರೇ?
ಚಿತ್ರರಂಗದಲ್ಲಿ ಕುತೂಹಲ ನಿರ್ದೇಶಕರ ಪ್ರಬಲವಾದ ಅಸ್ತ್ರ. ಕೆಲವರು ಚಿತ್ರದ ಯಾವ ರಹಸ್ಯವನ್ನು ಕೂಡ ಚಿತ್ರದ ಬಿಡುಗಡೆಗೆ ಮುನ್ನ ಹೊರ ಹಾಕುವುದಿಲ್ಲ. ಅಪ್ಪಿ.. ತಪ್ಪಿಯೂ ಬಾಯಿ ಬಿಡುವುದಿಲ್ಲ. ಕಥಾಹಂದರ.. ಕಥೆಯ ತಿರುವು.. ಎಲ್ಲದಲ್ಲಿಯೂ ಸಸ್ಪೆನ್ಸ್ ಕಾಯ್ದುಕೊಳ್ಳುತ್ತಾರೆ. ಎಲ್ಲವನ್ನೂ ಮೊದಲೇ ಹೇಳಿದರೆ ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ಸಿಗುವ ಕಿಕ್ ಸಿಗಲ್ಲ ಎನ್ನುವ ವಾದ ಇವರದ್ದು.
ಉಪೇಂದ್ರ ಅವರಿಂದ ಹಿಡಿದು ಹಲವರು ಇದೇ ತರ್ಕದಡಿ ಕೆಲಸ ಮಾಡುತ್ತಾರೆ. ಆ ಪೈಕಿ ''ಧುರಂಧರ್''ನ ಆದಿತ್ಯ ಧರ್ ಕೂಡ ಒಬ್ಬರು. ಇದಕ್ಕೆ ಕೈಗನ್ನಡಿ ಎಂಬಂತೆ ಬಿಡುಗಡೆಗೆ ಮುನ್ನ ''ಧುರಂಧರ್'' ಅಬ್ಬರ ಹೇಗಿರುತ್ತೆ ಎನ್ನುವ ಚಿಕ್ಕ ಸುಳಿವನ್ನು ಕೂಡ ಆದಿತ್ಯ ಧರ್ ಬಿಟ್ಟು ಕೊಟ್ಟಿರಲಿಲ್ಲ. ನಿಜಾ.. ಬಿಡುಗಡೆಗೆ ಮುನ್ನ ಟ್ರೇಲರ್ ಮತ್ತು ಹಾಡು ಬಿಡುಗಡೆ ಮಾಡಲಾಗಿತ್ತು.

ಆದರೆ, ''ಧುರಂಧರ್'' ಸಾಮಾನ್ಯ ಚಿತ್ರವಲ್ಲ ಬದಲಿಗೆ ಜ್ವಾಲಾಮುಖಿ ಎನ್ನುವುದನ್ನು ಯಾರು ಊಹೆ ಮಾಡಿರಲಿಲ್ಲ. ''ಧುರಂಧರ್ 2'' ವಿಚಾರದಲ್ಲಿ ಕೂಡ ಆದಿತ್ಯ ಧರ್ ಇದೇ ತಂತ್ರವನ್ನು ಅನುಸರಿಸುತ್ತಿದ್ದಾರೆ. ಆದರೆ, ಇದೇ ಸಮಯದಲ್ಲಿ ಮಜಾ ಕೊಡುವ ಫುಲ್ ಮೀಲ್ಸ್‌ನ ಕೆಲವರು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಕೈಗನ್ನಡಿಯೇ ''ಲೆಟರ್ ಬಾಕ್ಸ್'' ಮಾಡಿದ ಪ್ರಮಾದ.
ಹೌದು, ಅಸಲಿಗೆ ''ಧುರಂಧರ್ 2'' ಚಿತ್ರದಲ್ಲಿ ''ಬಡೇ ಸಾಬ್'' ಎಂಬ ಬಹುಮುಖ್ಯವಾದ, ಪ್ರಬಲವಾದ ಮತ್ತು ಮಹತ್ವದ ಪಾತ್ರ ಇದೆ. ಅಕ್ಷಯ್ ಖನ್ನಾ ಅವರ ರೆಹಮಾನ್ ಡಕಾಯಿತ್ ಪಾತ್ರದಷ್ಟೇ ತೂಕ ಇರುವ ಪಾತ್ರ. ಕರಾಚಿಯ ಇಡೀ ಲಿಯಾರಿ ಮತ್ತು ಭಯೋತ್ಪಾದನೆಯ ಮೂಲ ಮಾಸ್ಟರ್ ಮೈಂಡ್ ಪಾತ್ರ ಇದು.
ವರದಿಗಳ ಪ್ರಕಾರ ಈ ಪಾತ್ರದ ಮೇಲೆ ದಾವೂದ್ ಇಬ್ರಾಹಿಂನ ನೆರಳಿದೆ. ಈ ಹಿನ್ನೆಲೆ ಮೊನ್ನೆವರೆಗೆ ಈ ಬಡೆ ಸಾಬ್ ಪಾತ್ರವನ್ನು ಯಾರು ಮಾಡಲಿದ್ದಾರೆ ಎನ್ನುವ ಕುತೂಹಲ ಹಲವರಲ್ಲಿತ್ತು. ಕೆಲವರು ವೈರಲ್ ಆದ ಸಲ್ಮಾನ್ ಖಾನ್ ಅವರ ಫೋಟೊ ಕಂಡು ''ಧುರಂಧರ್''ನ ಬಡೆ ಸಾಬ್ ಸಲ್ಮಾನ್ ಖಾನ್ ಎಂದು ಪುಕಾರು ಕೂಡ ಹಬ್ಬಿಸಿದ್ದರು.
ಆದರೆ ಆ ಸುದ್ದಿ ಸತ್ಯಕ್ಕೆ ದೂರವಾದದ್ದು. ನಕಲಿ ಫೋಟೊವನ್ನು ಕೆಲವರು ಆನ್ ಲೈನ್‌ನಲ್ಲಿ ತೇಲಿ ಬಿಟ್ಟಿದ್ದರು. ಹೀಗಾಗಿ ಬಡೇ ಸಾಬ್ ಪಾತ್ರ ಯಾರ ಪಾಲಾಗಲಿದೆ ಎನ್ನುವ ಪ್ರಶ್ನೆ ಹಲವರಲ್ಲಿ ಇನ್ನೂ ಜೀವಂತವಾಗಿ ಇತ್ತು. ಆದರೆ ಈಗ ಈ ಪಾತ್ರ ಇಮ್ರಾನ್ ಹಶ್ಮಿ ಮಾಡುತ್ತಿದ್ದಾರೆ ಎಂದು ಚಿತ್ರಪ್ರೇಮಿಗಳ ಪಾಲಿಗೆ ಫೇಸ್ ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತೆ ಕಾರ್ಯ ನಿರ್ವಹಿಸುವ ''ಲೆಟರ್ ಬಾಕ್ಸ್''ನಲ್ಲಿ ಉಲ್ಲೇಖ ಮಾಡಲಾಗಿದೆ.

ಸದ್ಯ ಈ ಮಾಹಿತಿ ಸೋರಿಕೆಯಾಗಿದ್ದು ಹಲವರು ತಮ್ಮ ಎಗ್ಸೈಟ್ಮೆಂಟ್‌ನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ಧಾರೆ. ಬಡೇ ಸಾಬ್ ಪಾತ್ರವನ್ನು ಇಮ್ರಾನ್ ಹಶ್ಮಿ ನಿರ್ವಹಿಸಬಹುದು ಎನ್ನುವುದನ್ನು ನಾವು ಕನಸು ಮನಸಿನಲ್ಲಿಯೂ ಯೋಚನೆ ಮಾಡಿರಲಿಲ್ಲ, ಅಬ್ಬಾ.. ಎಂದೆಲ್ಲಾ ತಮ್ಮ ಖುಷಿಯನ್ನು ಹಂಚಿಕೊಂಡು ಚರ್ಚೆ ಮಾಡುತ್ತಿದ್ದಾರೆ.
ಅಂದ್ಹಾಗೇ ''ಲೆಟರ್ ಬಾಕ್ಸ್'' ವಿಶ್ವಸನೀಯ ಅಲ್ಲ. ಚಿತ್ರತಂಡಕ್ಕೆ ಸೇರಿದ ಅಧಿಕೃತ ಪೇಜ್ ಕೂಡ ಅಲ್ಲ. ಬದಲಿಗೆ ಆಗಲೇ ಹೇಳಿದಂತೆ ಇದೊಂದು ಸೋಶಿಯಲ್ ನೆಟವರ್ಕಿಂಗ್ ತಾಣ. ತಾವು ನೋಡಿದ ಚಿತ್ರಗಳ ಕುರಿತು ಹಲವು ಜನ ಇಲ್ಲಿ ಚರ್ಚೆ ಮಾಡುತ್ತಾರೆ. ವಿಮರ್ಶೆ ಬರೆಯುತ್ತಾರೆ. ತಮ್ಮ ಇಷ್ಟದ ಚಿತ್ರಗಳ ಪಟ್ಟಿಯನ್ನು ಹಂಚಿಕೊಳ್ಳುತ್ತಾರೆ.
''ವಿಕಿಪೀಡಿಯಾ''ದಂತೆ ಇಲ್ಲಿನ ಮಾಹಿತಿಯನ್ನು ಕೂಡ ಯಾರು ಬೇಕಾದರೂ ಬದಲಿಸಬಹುದು. ಹೀಗಾಗಿ ಇಮ್ರಾನ್ ಹಶ್ಮಿ ''ಧುರಂಧರ್-2''ನ ಬಡೇ ಸಾಬ್ ಎಂಬ ಸುದ್ದಿಯನ್ನು ಹಲವರು ಅಲ್ಲಗೆಳೆಯುತ್ತಿದ್ಧಾರೆ. ಆದರೆ, ''ಲೆಟರ್ ಬಾಕ್ಸ್'' ಕೂಡ ''The Movie Database'' (TMDB)ನಿಂದ ಮಾಹಿತಿಯನ್ನು ಕಲೆ ಹಾಕುತ್ತೆ. ಎಲ್ಲಕ್ಕಿಂತ ಮುಖ್ಯವಾಗಿ ಕೆಲವೊಮ್ಮೆ ಅಧಿಕೃತ ಘೋಷಣೆಗೂ ಮುನ್ನವೇ ಜನರು ತಮಗೆ ತಿಳಿದ ಮಾಹಿತಿಯನ್ನು ಇಲ್ಲಿ ಅಪ್‌ಡೇಟ್ ಮಾಡುತ್ತಾರೆ. ಅದೇ ರೀತಿ ಈಗ ಇಮ್ರಾನ್ ಹಶ್ಮಿ ಅವರ ಹೆಸರನ್ನು ಯಾರೋ ''ಬಡೇ ಸಾಬ್'' ಪಾತ್ರಕ್ಕೆ ಸೇರಿಸಿದ್ದರೂ ಸೇರಿಸಿರಬಹುದು.
ಒಟ್ನಲ್ಲಿ ಸದ್ಯ ''ಧುರಂಧರ್ 2''ನಲ್ಲಿ ಇಮ್ರಾನ್ ಹಶ್ಮಿ ಇದ್ದಾರೆ ಎನ್ನುವ ಸುದ್ದಿ ಗುಲ್ಲಾಗಿದೆ. ಆದಿತ್ಯ ಧರ್ ಅಥವಾ ಅವರ ನಿರ್ಮಾಣ ಸಂಸ್ಥೆ ಈ ಕುರಿತು ಯಾವ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ. ನಿಜಕ್ಕೂ ಇಮ್ರಾನ್ ಹಶ್ಮಿ ''ಧುರಂಧರ್ 2''ನಲ್ಲಿದ್ಧಾರಾ..? ಟ್ರೇಲರ್ ಬಿಡುಗಡೆಯ ನಂತರ ಈ ಪ್ರಶ್ನೆಗೆ ಉತ್ತರ ಸಿಗುವ ಸಾಧ್ಯತೆ ಇದೆ.


Click it and Unblock the Notifications











