40ರ ಹರೆಯದಲ್ಲಿ 2ನೇ ಬಾರಿ ಗರ್ಭಿಣಿಯಾದ ಸೋನಂ ಕಪೂರ್ ; ಅನಿಲ್ ಕಪೂರ್ ಮಗಳ ಅದ್ಧೂರಿ ಸೀಮಂತ ಶಾಸ್ತ್ರ
ಸಾಮಾನ್ಯವಾಗಿ ಮದುವೆಯ ನಂತರ ನಾಯಕಿಯರು ಚಿತ್ರರಂಗದಿಂದ ದೂರವಾಗುತ್ತಾರೆ. ಅದೆಷ್ಟೇ ಎತ್ತರಕ್ಕೆ ಬೆಳೆದಿದ್ದರು ಕೂಡ ಮದುವೆಯಾದ ನಂತರ ಹೊಸ ಬದುಕಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿಯೇ ಮಗ್ನರಾಗಿ ಬಿಡುತ್ತಾರೆ. ಇನ್ನು, ಬಣ್ಣದ ಲೋಕ ಕೂಡ ಅಷ್ಟೇ. ಮದುವೆಯಾದರೆ ನಾಯಕಿಯರಿಗೆ ಕೊಡುವ ಗೌರವವೇ ಬೇರೆ. ಅದರಲ್ಲಿಯೂ ಮಕ್ಕಳಾದರೆ ಮುಗೀತು ಅವಕಾಶಗಳ ಬಾಗಿಲು ಸಂಪೂರ್ಣ ಮುಚ್ಚಿ ಹೋದಂತೆಯೇ. ಚಿತ್ರರಂಗ ಸಂಪೂರ್ಣವಾಗಿ ಮರೆತೇ ಹೋಗುತ್ತೆ.
ಇದಕ್ಕೆ ಕೈಗನ್ನಡಿ ಎಂಬಂತೆ ಭಾಗ್ಯಶ್ರೀಯಿಂದ ಹಿಡಿದು ಟ್ವಿಂಕಲ್ ಖನ್ನಾವರೆಗೆ.. ಆಯೇಶ್ ಟಾಕೀಯಾ ಅವರಿಂದ ಹಿಡಿದು ಆಸಿನ್‌ವರೆಗೆ.. ಹಲವಾರು ನಾಯಕಿಯರು ಮದುವೆಯಾದ ನಂತರ ಕಣ್ಮರೆಯಾದ ಉದಾಹರಣೆಗಳಿವೆ. ಆ ಪೈಕಿ ಸೋನಂ ಕಪೂರ್ ಕೂಡ ಒಬ್ಬರು.

ಹೌದು, ಸೋನಂ ಕಪೂರ್.. ''ಪಲ್ಲವಿ ಅನುಪಲ್ಲವಿ'' ಚಿತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದ ಅನಿಲ್ ಕಪೂರ್ ಅವರ ಮುದ್ದಿನ ಮಗಳು. ಬಾಲಿವುಡ್‌ನ ಸಂಪ್ರದಾಯದಂತೆ ತನ್ನ ತಂದೆಯ ಜಾಡು ಹಿಡಿದು 2007ರಲ್ಲಿ ರಣ್‌ಬೀರ್ ಕಪೂರ್ ಜೊತೆ ಚಿತ್ರರಂಗವನ್ನು ಪ್ರವೇಶ ಮಾಡಿದ ಸೋನಂ ಕಪೂರ್ ಆ ನಂತರ ಒಂದಾದ ಮೇಲೊಂದು ಸಿನಿಮಾ ಮಾಡಿದರು. ಆ ಪೈಕಿ ''ನೀರ್ಜಾ''.. ''ಭಾಗ್ ಮಿಲ್ಕಾ ಭಾಗ್''.. ''ರಾಂಜಾನಾ''.. ಪ್ರಮುಖವಾದವು.
ಆದರೆ, ಅದೇನಾಯ್ತೋ 2017ರಲ್ಲಿ ಚಿತ್ರರಂಗದಿಂದ ಏಕಾಏಕಿ ದೂರವಾದ ಸೋನಂ ಕಪೂರ್, ತಾವು ಮನ ಮೆಚ್ಚಿದ ಹುಡುಗ ಆನಂದ್ ಅಹುಜಾ ಜೊತೆ 2018ರ ಮೇ 8ರಂದು ಮದುವೆಯ ಬಂಧನಕ್ಕೊಳಗಾದರು. ಮುಂಬೈಗೆ ಗುಡ್ ಬೈ ಹೇಳಿ ಲಂಡನ್‌ನಲ್ಲಿ ಬಿಡಾರ ಹೂಡಿದರು. ಲಂಡನ್‌ನಲ್ಲಿ ಬೋರ್ ಆದಾಗ ಆಗೊಮ್ಮೆ.. ಈಗೊಮ್ಮೆ.. ಸೋನಂ ಚಿತ್ರಗಳನ್ನು ಮಾಡುತ್ತಿರುತ್ತಾರೆ.
ಇಂಥಾ ಸೋನಂ ಕಪೂರ್ ಈಗ ತಮ್ಮ 40ನೇ ವರ್ಷದಲ್ಲಿ ಮತ್ತೊಮ್ಮೆ ಗರ್ಭಿಣಿಯಾಗಿದ್ದಾರೆ. ಸೋನಂ ಕಪೂರ್ ಅವರ ಸೀಮಂತ ಶಾಸ್ತ್ರ ನಿನ್ನೆ (ಫೆಬ್ರವರಿ 8) ನೆರವೇರಿದ್ದು ಫೋಟೊಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಸೀಮಂತ ಶಾಸ್ತ್ರದಲ್ಲಿ ನಿಂಬೆ ಹಸಿರು ಬಣ್ಣದ ಲೆಹೆಂಗಾ ಹಾಗೂ ಅದಕ್ಕೆ ಹೊಂದಿಕೆಯಾಗುವ ಬ್ಲೌಸ್ ಧರಿಸಿ ಸೋನಂ ಮಿಂಚಿದರು. ಚಿನ್ನದ ನೆಕ್ಲೇಸ್, ಭಾರದ ಕಿವಿಯೋಲೆ, ಭಾರವಾದ ಜುಮುಕಿಗಳು, ಆಕರ್ಷಕ ಕಾಕ್‌ಟೈಲ್ ರಿಂಗ್, ಚೈನ್ ರಿಂಗ್ ಹಾಗೂ ಚಿನ್ನದ ಬಳೆ ಧರಿಸಿ ಕಂಗೊಳಿಸುತ್ತಿದ್ದರು.

ಸೋನಂ ತಂದೆ ಅನಿಲ್ ಕಪೂರ್, ಅರ್ಜುನ್ ಕಪೂರ್, ಅಂಶುಲಾ ಕಪೂರ್, ಖುಷಿ ಕಪೂರ್, ಮಹಿಪ್ ಕಪೂರ್, ಸೇರಿದಂತೆ ಇಡೀ ಕಪೂರ್ ಮನೆತನದ ಸದಸ್ಯರು ಸೀಮಂತ ಶಾಸ್ತ್ರದಲ್ಲಿ ಭಾಗವಹಿಸಿದ್ದರು. ಹಿರಿಯ ನಟ ಅನುಪಮ್ ಖೇರ್ ಕೂಡ ಕಾರ್ಯಕ್ರಮಕ್ಕೆ ಬಂದು ದಂಪತಿಗೆ ಆಶೀರ್ವದಿಸಿದರು. ಕರೀನಾ ಕಪೂರ್, ಭೂಮಿ ಪೆಡ್ನೇಕರ್, ಅಲೇಖಾ ಅದ್ವಾಣಿ, ಮಸಬಾ ಗುಪ್ತಾ, ಶಬಾನಾ ಅಜ್ಮಿ, ಡಿಸೈನರ್ ಸಂದೀಪ್ ಖೋಸ್ಲಾ, ಹೀಗೆ ಬಾಲಿವುಡ್‌ನ ಹಲವು ತಾರೆಯರು ಸೋನಂ ಕಪೂರ್ ಮತ್ತು ಆನಂದ್ ಅಹುಜಾ ಅವರ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಇನ್ನು ಸೋನಂ ಕಪೂರ್ ಅವರ ಆಪ್ತ ಸ್ನೇಹಿತೆಯಾಗಿರುವ ರಾಣಾ ದಗ್ಗುಬಾಟಿ ಅವರ ಪತ್ನಿ ಮಿಹೀಕಾ ಬಜಾಜ್ ಕೂಡ ಸ್ನೇಹಿತೆಯ ಈ ಸಂಭ್ರಮದಲ್ಲಿ ಭಾಗವಹಿಸಿದ್ದರು.
ಅಂದ್ಹಾಗೇ ಸೋನಂ ಕಪೂರ್ ಮದುವೆಯಾಗಿ ನಾಲ್ಕು ವರ್ಷದ ನಂತರ ಅಂದರೆ 2022ರಲ್ಲಿ ಆಗಸ್ಟ್ 20ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ತಮ್ಮ ಮುದ್ದಾದ ಮಗನಿಗೆ ''ವಾಯು'' ಎಂದು ನಾಮಕರಣವನ್ನು ಕೂಡ ಮಾಡಿದ್ದರು. ಈಗ ಸೋನಂ ಕಪೂರ್ ಮತ್ತೊಮ್ಮೆ ಗರ್ಭಿಣಿಯಾಗಿದ್ದಾರೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಸೋನಂ ಕಪೂರ್ ಮತ್ತು ಆನಂದ್ ಅಹುಜಾ ಅವರಿಗೆ ಇವರ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.


Click it and Unblock the Notifications











