ಮೊದಲ 24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದುಕೊಂಡ ಹಾಡುಗಳ ಪಟ್ಟಿಯಲ್ಲಿ ಆದಿಪುರುಷ್ ಹಾಡಿಗೆ ಎಷ್ಟನೇ ಸ್ಥಾನ?
ಹಾಡುಗಳು ಗೆದ್ದರೆ ಚಿತ್ರದ ಅರ್ಧ ಪ್ರಚಾರದ ಕೆಲಸ ಮುಗಿದ ಹಾಗೆ ಎಂದೇ ಹೇಳಬಹುದು. ಹಾಡುಗಳು ಹೆಚ್ಚಿನ ವೀಕ್ಷಕರಿಗೆ ತಲುಪಿದರೆ ಬಿಡುಗಡೆಯಾಗದ ಆ ಚಿತ್ರದ ಬಗೆಗಿನ ಮಾಹಿತಿ ವೀಕ್ಷಕರಿಗೆ ತಲುಪಿದ ಹಾಗೆ.
ಹೀಗೆ ಹಾಡುಗಳು ಚಿತ್ರವೊಂದರ ಪ್ರಚಾರದಲ್ಲಿ ಬಹುದೊಡ್ಡ ಪಾತ್ರವನ್ನು ನಿರ್ಧರಿಸುತ್ತವೆ. ಹೀಗಾಗಿಯೇ ಚಿತ್ರತಂಡಗಳೂ ಸಹ ಹಾಡುಗಳನ್ನು ಅಚ್ಚುಕಟ್ಟಾದ ಲಿರಿಕ್ಸ್, ಮ್ಯೂಸಿಕ್, ಮೇಕಿಂಗ್ ಇರುವ ಹಾಗೆ ಬಂಡವಾಳ ಹೂಡಿ ತಯಾರಿಸುತ್ತವೆ.

ಇನ್ನು ಈಗಿನ ಡಿಜಿಟಲ್ ಯುಗದಲ್ಲಿ ಹಾಡುಗಳು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಟ್ರೆಂಡಿಂಗ್ ಪಟ್ಟಿ ಸೇರಲು ಅವಕಾಶವಿದ್ದು, ಬಿಡುಗಡೆಯಾಗುವ ಹಲವಾರು ಒಳ್ಳೆಯ ಹಾಡುಗಳು ಈ ಪಟ್ಟಿಯನ್ನು ಸೇರಿದರೂ ಅತ್ಯುತ್ತಮ ಹಾಡುಗಳು ಮಾತ್ರ ದಾಖಲೆಯನ್ನು ಬರೆಯಲು ಸಾಧ್ಯ.
ಅದರಲ್ಲಿಯೂ ಯುಟ್ಯೂಬ್ ದಾಖಲೆ ಸಹ ಈಗಿನ ಡಿಜಿಟಲ್ ಯುಗದಲ್ಲಿ ಒಂದು ರೀತಿಯ ಪ್ರತಿಷ್ಠೆಯಾಗಿಬಿಟ್ಟಿದೆ. ಹೀಗಾಗಿ ಯುಟ್ಯೂಬ್ ದಾಖಲೆಯಲ್ಲಿಯೂ ಸಹ ಅಭಿಮಾನಿಗಳ ವಾರ್ ಶುರುವಾಗಿಬಿಟ್ಟಿದೆ.
ಇನ್ನು ಮೊನ್ನೆಯಷ್ಟೇ ಪ್ರಭಾಸ್ ಅಭಿನಯದ ಮುಂದಿನ ಚಿತ್ರ ಆದಿಪುರುಷ್‌ನ ಎರಡನೇ ಹಾಡು ರಾಮ್ ಸಿಯಾ ರಾಮ್ ಬಿಡುಗಡೆಯಾಗಿತ್ತು. ಮೊದಲ ಹಾಡಾದ ಜೈ ಶ್ರೀರಾಮ್ ರೀತಿಯೇ ಈ ಹಾಡೂ ಸಹ ಯುಟ್ಯೂಬ್‌ನಲ್ಲಿ ಧೂಳ್ ಎಬ್ಬಿಸಿದೆ. ಮೇಲೆ ಹೇಳಿದಂತೆ ಹಾಡೊಂದು ಚಿತ್ರವೊಂದಕ್ಕೆ ಯಾವ ರೀತಿಯ ಪ್ರಚಾರ ಮಾಡಬಹುದೋ ಆ ಕೆಲಸಗಳನ್ನು ಈ ಎರಡು ಹಾಡುಗಳು ಮಾಡಿವೆ.
ರಾಮ್ ಸೀಯಾ ರಾಮ್ ಬಿಡುಗಡೆಯಾದ 24 ಗಂಟೆಗಳಲ್ಲಿ ದಾಖಲೆಯ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ದೇಶದಲ್ಲಿ ಅತಿಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡ ಹಾಡುಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಇದೇ ಆದಿಪುರುಷ್ ಚಿತ್ರದ ಜೈ ಶ್ರೀರಾಮ್ ಹಾಡು ದೇಶದಲ್ಲಿ ಮೊದಲ 24 ಗಂಟೆಗಳಲ್ಲಿ ಯುಟ್ಯೂಬ್‌ನಲ್ಲಿ ಅತಿಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡ ಹಾಡು ಎನಿಸಿಕೊಂಡಿದೆ.
ಹಾಗಿದ್ದರೆ ಸದ್ಯ ಯುಟ್ಯೂಬ್‌ನಲ್ಲಿ ಮೊದಲ 24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದುಕೊಂಡ ಭಾರತದ ಟಾಪ್ 5 ಹಾಡುಗಳು ಯಾವುದು ಎಂಬ ಮಾಹಿತಿ ಈ ಕೆಳಕಂಡ ಪಟ್ಟಿಯಲ್ಲಿದೆ ನೋಡಿ...
1. ಜೈಶ್ರೀರಾಮ್ - 32.1 ಮಿಲಿಯನ್ ವೀಕ್ಷಣೆಗಳು
2. ರಾಮ್ ಸೀಯಾ ರಾಮ್ - 32M ವೀಕ್ಷಣೆಗಳು
3. ಪ್ಯಾರ್ ಹೋತಾ ಕಯಿ ಬಾರ್ ಹೈ - 30.69 ಮಿಲಿಯನ್
4. ಆಲಿಯಾ ರೈ ಐಲಾ - 29.7 ಮಿಲಿಯನ್
5. ಕ್ಯಾರೆಕ್ಟರ್ ಧೀಲಾ 2 - 27.1 ಮಿಲಿಯನ್
ಹೀಗೆ ಈ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಪ್ರಭಾಸ್ ಹಾಗೂ ನಿರ್ದೇಶಕ ಓಂ ರಾವತ್ ಕಾಂಬಿನೇಶನ್‌ನ ಆದಿಪುರುಷ್ ಚಿತ್ರವೇ ಆಕ್ರಮಿಸಿಕೊಂಡಿದ್ದು, ಈ ಹಿಂದೆ ತನ್ನ ವಿರುದ್ಧ ಹರಿದಾಡಿದ್ದ ಟ್ರೋಲ್‌ಗಳಿಗೆಲ್ಲಾ ತಕ್ಕ ಉತ್ತರ ನೀಡಿದೆ. ಹೌದು, ಈ ಹಿಂದೆ ಇದೇ ಚಿತ್ರದ ಟೀಸರ್ ಬಿಡುಗಡೆಯಾದಾಗ ವಿಎಫ್ಎಕ್ಸ್ ಸರಿ ಇಲ್ಲ, ಆನಿಮೇಟೆಡ್ ರೀತಿ ಇದೆ ಎಂದು ನಿರ್ದೇಶಕ ಓಂ ರಾವತ್ ಅವರನ್ನು ತೆಗಳಿದ್ದವರು ಇಂದು ಪ್ರಶಂಸಿಸುತ್ತಿದ್ದಾರೆ.
ಇನ್ನು ಈ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದು, ಸೀತೆ ಪಾತ್ರದಲ್ಲಿ ಕೃತಿ ಸೆನನ್ ನಟಿಸಿದ್ದಾರೆ. ಚಿತ್ರಕ್ಕೆ ಓಂ ರಾವತ್ ಆಕ್ಷನ್ ಕಟ್ ಹೇಳಿದ್ದು, ಟಿ ಸೀರಿಸ್ ಹಾಗೂ ರೆಟ್ರೊ ಫೈಲ್ಸ್ ಬ್ಯಾನರ್‌ಗಳು ಬಂಡವಾಳ ಹೂಡಿವೆ. ಚಿತ್ರ ಇದೇ ಜೂನ್ 16ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.


Click it and Unblock the Notifications











