ಇನ್ನು ಮುಂದೆ ಸಂಸತ್ತಿನಲ್ಲಿ ಕೇಳಿಸುವುದಿಲ್ಲ ಈ ಸುಂದರಿ ಸಂಸದೆ ಭಾಷಣ!
ಲೋಕಸಭೆ ಚುನಾವಣೆಯಲ್ಲಿ ಗೆದ್ದೆ ಗೆಲ್ಲುತ್ತಾರೆ ಎಂದುಕೊಂಡಿದ್ದ ಕೆಲವರು ಸೋಲಿಗೆ ಶರಣಾಗಿದ್ದಾರೆ. ಸಿನಿಮಾ ತಾರೆಯರಲ್ಲಿ ಬಹುತೇಕರು ಗೆದ್ದಿದ್ದರೆ ಕೆಲವರಿಗೆ ಮತದಾರರು ಸೋಲಿನ ರುಚಿ ತೋರಿಸಿದ್ದಾರೆ. ಅಚ್ಚರಿಯ ವಿಚಾರ ಎಂದರೆ ಈಗಾಗಲೇ ಸಂಸದೆ, ಶಾಸಕಿ ಆಗಿದ್ದವರಿಗೂ ಈ ಬಾರಿ ಸೋಲು ಎದುರಾಗಿದೆ.
ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ನಗರಿ ಕ್ಷೇತ್ರದಲ್ಲಿ ಆರ್. ಕೆ ರೋಜಾ ಈ ಬಾರಿ ಸೋಲುಂಡಿದ್ದಾರೆ. ಎರಡು ಬಾರಿ ವೈಎಸ್‌ಆರ್‌ಪಿ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಗೆದ್ದಿದ್ದ ಆಕೆ ಸಚಿವೆ ಆಗಿಯೂ ಸೇವೆ ಸಲ್ಲಿಸಿದ್ದರು. ಈ ಬಾರಿ ಹೀನಾಯವಾಗಿ ಸೋತಿದ್ದಾರೆ. ಇನ್ನು ತಮಿಳಿನ ಹಿರಿಯ ನಟಿ ರಾಧಿಕಾ ಶರತ್‌ಕುಮಾರ್ ಬಿಜೆಪಿ ಅಭ್ಯರ್ಥಿಯಾಗಿ ವಿರುಧು ನಗರ ಕ್ಷೇತ್ರದಲ್ಲಿ ಸೋಲುಂಡಿದ್ದಾರೆ. ಅತ್ತ ಮಹಾರಾಷ್ಟ್ರದ ಅಮರಾವತಿಯಲ್ಲಿ ನಟಿ ನವನೀತ್ ರಾಣಾ ಸೋಲುಂಡಿದ್ದಾರೆ.

ಸ್ಮತಿ ಇರಾನಿ, ಗೀತಾ ಶಿವರಾಜ್‌ಕುಮಾರ್ ಅವರಿಗೂ ಮತದಾರರ ಆಶೀರ್ವಾದ ಸಿಕ್ಕಿಲ್ಲ. ಗಾಂಧಿ ಕುಟುಂಬದ ಬಲಗೈ ಬಂಟ ಕಿಶೋರಿ ಲಾಲ್ ಶರ್ಮಾ ಎದುರು ಸ್ಮತಿ ಇರಾನಿ ಸೋತಿದ್ದಾರೆ. ಅಂದಹಾಗೆ ಕಿಶೋರಿ ಲಾಲ್ ಶರ್ಮಾ 389286 ಮತ ಪಡೆದಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ 1,15,128ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. ಸ್ಮೃತಿ ಇರಾನಿ 2,74,158 ಮತಗಳನ್ನು ಮಾತ್ರ ಪಡೆದಿದ್ದಾರೆ. ಬಿ, ವೈ ರಾಘವೇಂದ್ರ ವಿರುದ್ಧ ಗೀತಾ ಶಿವರಾಜ್‌ಕುಮಾರ್ ಶಿವಮೊಗ್ಗದಲ್ಲಿ ನಿರಾಸೆ ಅನುಭವಿಸಿದ್ದಾರೆ.
ಕಳೆದ ಬಾರಿ ಅಮರಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು ನವನೀತ್ ರಾಣಾ ಸಂಸದೆ ಆಗಿದ್ದರು. ಸಂಸತ್ತು ಪ್ರವೇಶಿಸಿದ್ದರು. ಆದರೆ 3 ತಿಂಗಳ ಹಿಂದೆ ಆಕೆ ಬಿಜೆಪಿ ಸೇರಿದ್ದರು. ಬಿಜೆಪಿಯಿಂದಲೇ ಈ ಬಾರಿ ಲೋಕಸಭೆ ಚುನಾವಣೆ ಎದುರಿಸಿದ್ದರು. ಆಕೆ ಗೆಲ್ಲವುದು ಬಹಳ ಸುಲಭ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಫಲಿತಾಂಶ ಬಂದ ಮೇಲೆ ನಿರೀಕ್ಷೆ ಹುಸಿಯಾಗಿದೆ.
2004ರಲ್ಲಿ ಸೀನು ವಾಸಂತಿ ಲಕ್ಷ್ಮಿ ಸಿನಿಮಾ ಮೂಲಕ ನವನೀತ್ ಕೌರ್ ಚಿತ್ರರಂಗಕ್ಕೆ ಬಂದರು. ಮರುವರ್ಷವೇ ಕನ್ನಡದ 'ದರ್ಶನ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ದರ್ಶನ್ ಜೊತೆ ತೆರೆಹಂಚಿಕೊಂಡಿದ್ದರು. ಬಳಿಕ ಶತ್ರುವು, ಜಗಪತಿ, ಗುಡ್‌ಬಾಯ್, ರೂಮ್ ಮೇಟ್ಸ್, ಮಹಾರಧಿ ಬಂಗಾರು ಕೊಂಡ, ಜಾಬಿಲಮ್ಮ, ಟೆರರ್ ಚಿತ್ರಗಳಲ್ಲಿ ನಟಿಸಿದ್ದರು. ಪಂಜಾಬಿ, ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲೂ ಕೂಡ ನಟಿಸಿದ್ದಾರೆ.

ಮಹಾರಾಷ್ಟ್ರದ ರಾಜಕಾರಣಿ ರವಿ ರಾಣಾ ಕೈ ಹಿಡಿದ ಬಳಿಕ ರಾಜಕೀಯದತ್ತ ಹೆಚ್ಚು ಒಲವು ತೋರಿದ್ದರು. ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು 3ನೇ ಬಾರಿ ರವಿ ರಾಣಾ ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2014ರಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಪರವಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. 2019ರಲ್ಲಿ ಅಮರಾವತಿಯಿಂದ ಲೋಕಸಭೆ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಸಂಸತ್ತಿಗೆ ಪ್ರವೇಶಿಸಿ ತಮ್ಮ ಭಾಷಣದ ಮೂಲಕ ಗಮನ ಸೆಳೆದರು.
ಈ ಬಾರಿ ಅಮರಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲವಂತ ಬಸವಂತ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದರು. ಇನ್ನು ಪ್ರಚಾರದ ವೇಳೆ ನವನೀತ್ ಹೇಳಿಕೆಗಳು ವೈರಲ್ ಆಗಿತ್ತು. "ಜೈ ಶ್ರೀರಾಮ್ ಎನ್ನಲು ಇಷ್ಟಪಡದವರು ಪಾಕಿಸ್ತಾನಕ್ಕೆ ಹೋಗಬಹುದು" ಎಂದಿದ್ದು ಭಾರೀ ಸುದ್ದಿ ಆಗಿತ್ತು. ನವನೀತ್ ರವಿ ರಾಣಾ ಅವರು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 19,731 ಮತಗಳ ಅಂತರದಿಂದ ಸೋತಿದ್ದಾರೆ.


Click it and Unblock the Notifications











