ಚಿತ್ರರಂಗಕ್ಕೆ ಮತ್ತೊಂದು ಆಘಾತ, ಮಹಾಭಾರತದ ಕರ್ಣ ನಿಧನ
ಈ ವರ್ಷ ಭಾರತೀಯ ಚಿತ್ರರಂಗಕ್ಕೆ ತಮ್ಮದೇ ಆದ ಸೇವೆಯನ್ನು ಸಲ್ಲಿಸಿದ ಅನೇಕ ತಾರೆಯರು ಒಬ್ಬರಾದ ಮೇಲೊಬ್ಬರಂತೆ ನಮ್ಮನ್ನು ಅಗಲುತ್ತಿದ್ದಾರೆ. ಬಿ.ಸರೋಜಾ ದೇವಿ.. ಕೋಟಾ ಶ್ರೀನಿವಾಸ್ ರಾವ್.. ಧೀರಜ್ ಕುಮಾರ್.. ಮುಖುಲ್ ದೇವ್.. ಫಿಶ್ ವೆಂಕಟ್.. ದಿನೇಶ್ ಮಂಗಳೂರು.. ಯಶವಂತ ಸರದೇಶಪಾಂಡೆ.. ರಾಜು ತಾಳಿಕೋಟೆ.. ಹೀಗೆ ಭಾರತೀಯ ಚಿತ್ರರಂಗಕ್ಕೆ ಸೇವೆಯನ್ನು ಸಲ್ಲಿಸಿ, ತಮ್ಮದೇ ಕೊಡುಗೆಯನ್ನು ನೀಡಿದ..
ತಾರೆಯರನ್ನು ಒಬ್ಬರಾದ ಮೇಲೊಬ್ಬರಂತೆ ಕಳೆದುಕೊಂಡು ಚಿತ್ರರಂಗ ದುಃಖದಲ್ಲಿದೆ.ಹೀಗಿರುವಾಗ ಇದೀಗ ಭಾರತೀಯ ಚಿತ್ರರಂಗಕ್ಕೆ ಮತ್ತೊಂದು ಬರ ಸಿಡಿಲು ಬಡಿದಿದ್ದು ಇಂದು (ಅಕ್ಟೋಬರ್ 15) ಪಂಕಜ್ ಧೀರ್ ಕೊನೆಯುಸಿರೆಳೆದಿದ್ದಾರೆ.

ಬಿ.ಆರ್.ಚೋಪ್ರಾ ಅವರ ಮಹಾಕಾವ್ಯ ''ಮಹಾಭಾರತ'' ಧಾರಾವಾಹಿಯಲ್ಲಿ ಕರ್ಣನ ಪಾತ್ರವನ್ನು ನಿರ್ವಹಿಸಿದ್ದ ಪಂಕಜ್ ಧೀರ್, ಈ ಮೊದಲು ಕ್ಯಾನ್ಸರ್‌ದಿಂದ ಬಳಲುತ್ತಿದ್ದರು. ಆ ನಂತರ ಚೇತರಿಸಿಕೊಂಡಿದ್ದರು. ಆದರೆ ಕೆಲ ದಿನಗಳ ಹಿಂದೆ ಕ್ಯಾನ್ಸರ್ ಮತ್ತೆ ಮರುಕಳಿಸಿತ್ತು. ಆರೋಗ್ಯ ಹದಗೆಟ್ಟಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ 68 ನೇ ವಯಸ್ಸಿನಲ್ಲಿ ಪಂಕಜ್ ಧೀರ್ ಇಹಲೋಕ ತ್ಯಜಿಸಿದ್ದಾರೆ.
ಪಂಕಜ್ ಧೀರ್ ಅವರ ನಿಧನಕ್ಕೆ ಸಿಂಟಾ (Cine & TV Artistes' Association) ಸಂತಾಪ ಸೂಚಿಸಿದ್ದು "ನಮ್ಮ ಟ್ರಸ್ಟ್‌ನ ಮಾಜಿ ಅಧ್ಯಕ್ಷರು ಮತ್ತು ಸಿಂಟಾದ ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಪಂಕಜ್ ಧೀರ್ ಅವರು ಅಕ್ಟೋಬರ್ 15, 2025 ರಂದು ನಿಧನರಾದರು ಎಂದು ತೀವ್ರ ದುಃಖದಿಂದ ತಿಳಿಸುತ್ತೇವೆ. ಅಂತ್ಯಕ್ರಿಯೆ ಇಂದು ಸಂಜೆ 4:30 ಕ್ಕೆ, ಪವನ್ ಹನ್ಸ್, ವಿಲೆ ಪಾರ್ಲೆ (ಪಶ್ಚಿಮ), ಮುಂಬೈ ಸಮೀಪ ನಡೆಯಲಿದೆ" ಎಂದು ಮಾಹಿತಿಯನ್ನು ಹಂಚಿಕೊಂಡಿದೆ.
''ಮಹಾಭಾರತ''ದಲ್ಲಿ ಕರ್ಣ ಪಾತ್ರದ ಮೂಲಕ ಜನಜನಿತರಾಗಿದ್ದ ಪಂಕಜ್ ಧೀರ್ ''ಚಂದ್ರಕಾಂತಾ''.. ''ಸಸುರಾಲ್ ಸಿಮರ್ ಕಾ''.. ''ದಿ ಗ್ರೇಟ್ ಮರಾಠಾ''.. ''ಯುಗ್''.. ಅಂತಹ ಪ್ರಖ್ಯಾತ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ತಮ್ಮ ಅಭಿನಯದಿಂದ ಹಲವಾರು ಜನರ ಹೃದಯವನ್ನು ಗೆದ್ದಿದ್ದರು.
ಕೇವಲ ಕಿರುತೆರೆ ಮಾತ್ರ ಅಲ್ಲ ಬೆಳ್ಳಿತೆರೆಯಲ್ಲಿ ಕೂಡ ತಮ್ಮ ಚಾಪು ಮೂಡಿಸಿದ್ದ ಪಂಕಜ್ ಧೀರ್, ''ಸನಮ್ ಬೇವಫಾ''.. ''ಬಾದ್‌ಷಾ''.. ''ಸೋಲ್ಜರ್''.. ''ಸಡಕ್''.. ''ಅಂದಾಜ್'..''ಜಮೀನ್''..''ತುಮ್ ಕೋ ನಾ ಭೂಲ್ ಪಾಯೆಂಗೆ''.. ''ಟಾರ್ಜನ್''.. ಹೀಗೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು.

ಇಷ್ಟೇ ಅಲ್ಲ ಎಂ ಎಸ್ ಸತ್ಯು ನಿರ್ದೇಶನದ ''ಬರ'' ಚಿತ್ರದ ಮೂಲಕ ಪಂಕಜ್ ಧೀರ್ ಕನ್ನಡ ಚಿತ್ರರಂಗಕ್ಕೆ ಕೂಡ ಬಂದಿದ್ದರು. ಆ ನಂತರ ಡಾ.ವಿಷ್ಣುವರ್ಧನ್ ಮತ್ತು ಅಕ್ಷಯ್ ಕುಮಾರ್ ಅಭಿನಯದ ''ವಿಷ್ಣು ವಿಜಯ್'' ಚಿತ್ರದಲ್ಲಿ ಕೂಡ ಅಭಿನಯಿಸಿದ್ದ ಪಂಕಜ್ ಧೀರ್ ''ವಿಷ್ಣುಸೇನಾ'' ಚಿತ್ರದಲ್ಲಿ ಮತ್ತೊಮ್ಮೆ ವಿಷ್ಣುವರ್ಧನ್ ಅವರ ಜೊತೆ ತೆರೆ ಹಂಚಿಕೊಂಡಿದ್ದರು.
ಇನ್ನು ನಿರ್ದೇಶಕನಾಗಿಯೂ ಕೂಡ ಕೆಲಸ ಮಾಡಿದ್ದ ಪಂಕಜ್ ಧೀರ್, ''ಪರ್ವಾನ್'' ಮತ್ತು ''ಮೈ ಫಾದರ್ ಗಾಡ್‌ಫಾದರ್'' ಎಂಬ ಚಿತ್ರವನ್ನು ಕೂಡ ನಿರ್ದೇಶಿಸಿದ್ದರು. ಆಕ್ಟಿಂಗ್ ಅಕಾಡೆಮಿಯನ್ನು ಕೂಡ ಸ್ಥಾಪಿಸಿದ್ದರು.
ಮಹಾಭಾರತದ ''ಕರ್ಣ''ನ ಪಾತ್ರದಿಂದ ಸಿಕ್ಕ ಜನಪ್ರಿಯತೆ ಮತ್ತು ಜನರು ತಮ್ಮ ಮೇಲೆ ತೋರುವ ಪ್ರೀತಿಯ ಕುರಿತು ''ಇಂಡಿಯಾ ಫೋರಮ್ಸ್''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಪಂಕಜ್ ಧೀರ್ ಕರ್ಣನ ಪಾತ್ರ ನನಗೆ ನೀಡಿದ್ದಕ್ಕೆ ಬಿಆರ್ ಚೋಪ್ರಾ ಅವರಿಗೆ ನಾನು ಸದಾ ಆಭಾರಿ ಎಂದು ಹೇಳಿದ್ದರು.
ಜನ ನನ್ನನ್ನೂ ಕರ್ಣ ಅಂತೆಯೇ ಗುರುತಿಸುತ್ತಾರೆ, ಕರ್ಣ ನೋಡಲು ನನ್ನಂತೆಯೇ ಇರಬಹುದು ಎಂದು ತಮ್ಮ ಮನದಲ್ಲಿ ಅಂದುಕೊಂಡಿದ್ದಾರೆ. ನನಗೆ ವಿಶೇಷವಾದ ಸ್ಥಾನವನ್ನು ನೀಡಿದ್ದಾರೆ ಎಂದು ಹೇಳಿದ್ದ ಪಂಕಜ್ ಧೀರ್ ನನ್ನ ಹೆಸರಿನಲ್ಲಿ ಪ್ರತಿಮೆಗಳನ್ನು ನಿರ್ಮಿಸಲಾಗುತ್ತಿದೆ ಮತ್ತು ದೇವಾಲಯಗಳನ್ನು ಕಟ್ಟಲಾಗುತ್ತಿದೆ ಎಂದು ಅವರು ಹೇಳಿದ್ದರು.
ಜನರು ನನ್ನನ್ನು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಶಾಲಾ ಇತಿಹಾಸ ಪುಸ್ತಕಗಳಲ್ಲಿ ಕರ್ಣನ ಉಲ್ಲೇಖವಿದ್ದಲ್ಲಿ, ಅಲ್ಲಿ ನನ್ನ ಚಿತ್ರವಿದೆ. ಈ ಪುಸ್ತಕಗಳು ಮುದ್ರಣವಾಗುವವರೆಗೂ, ನಾನು ಯಾವಾಗಲೂ ಕರ್ಣನಾಗಿ ಜೀವಂತವಾಗಿರುತ್ತೇನೆ ಎಂದು ಹೇಳಿದ್ದ ಪಂಕಜ್ ಧೀರ್ ನನ್ನ ಹೆಸರಿನಲ್ಲಿ ಎರಡು ದೇವಾಲಯಗಳಿವೆ. ಅಲ್ಲಿ ಪ್ರತಿದಿನ ಪೂಜೆ ನಡೆಯುತ್ತದೆ. ಕರ್ಣ ಮಂದಿರದಲ್ಲಿ ನನ್ನನ್ನು ಪೂಜಿಸಲಾಗುತ್ತದೆ ಎಂದು ಹೇಳಿದ್ದರು.
ಕರ್ನಾಲ್ ಮತ್ತು ಬಸ್ತರದಲ್ಲಿರುವ ಎರಡು ದೇವಾಲಯಗಳಿಗೆ ನಾನು ಭೇಟಿ ನೀಡಿದ್ದೇನೆ ಎಂದು ಹೇಳಿದ್ದ ಪಂಕಜ್ ಧೀರ್, ಅಲ್ಲಿ 8 ಅಡಿ ಎತ್ತರದ ನನ್ನ ಪ್ರತಿಮೆ ಇದೆ. ಆ ಪ್ರತಿಮೆಗೆ ಜನ ಪೂಜೆ ಮಾಡುತ್ತಾರೆ. ಇದೆಲ್ಲವೂ ನೋಡಿದಾಗ ನನ್ನ ಹೃದಯ ತುಂಬಿ ಬರುತ್ತೆ ಎಂದು ಹೇಳಿದ್ದರು. ನನ್ನ ಮೇಲೆ ಪ್ರೀತಿಸುವ ಜನರಿಗೆ ನಾನು ಸದಾ ಚಿರಋಣಿ ಎಂದು ಕೂಡ ಹೇಳಿದ್ದರು.
ಪಂಕಜ್ ಧೀರ್ ಅವರ ನಿಧನಕ್ಕೆ ಬಾಲಿವುಡ್ ಮತ್ತು ಹಿಂದಿ ಕಿರುತೆರೆ ಉದ್ಯಮ ಸಂತಾಪವನ್ನು ಸೂಚಿಸಿದ್ದು ಪತ್ನಿ ಅನಿತಾ ಧೀರ್ ಮತ್ತು ಮಗ, ನಟ ನಿಕಿತಿನ್ ಧೀರ್ ಅವರನ್ನು ಪಂಕಜ್ ಧೀರ್ ಅಗಲಿದ್ದಾರೆ.


Click it and Unblock the Notifications











