ಮಹಾರಾಷ್ಟ್ರ ವಿಧಾನಸಭೆ ಚುನಾವಣೆ; ಬೆಳ್ಳಂಬೆಳಗ್ಗೆ ಬಾಲಿವುಡ್ ತಾರೆಯರ ಮತದಾನ
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮತದಾನ ಭರದಿಂದ ಸಾಗುತ್ತಿದೆ. 288 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ನವೆಂಬರ್ 23ರಂದು ಚುನಾವಣೆ ಫಲಿತಾಂಶ ಕೂಡ ಹೊರಬೀಳಲಿದೆ. ಈ ಬಾರಿ ಚುನಾವಣೆಯಲ್ಲಿ 4136 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇನ್ನು ಬಾಲಿವುಡ್ ತಾರೆಯರು ಕೂಡ ಬೆಳ್ಳಂ ಬೆಳಗ್ಗೆ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ನಟರಾದ ಅಕ್ಷಯ್ ಕುಮಾರ್, ರಾಜ್‌ಕುಮಾರ್ ರಾವ್, ಫರ್ಹಾನ್ ಅಖ್ತರ್, ಸೋನುಸೂದ್, ನಟಿ ತಮನ್ನಾ ಸೇರಿದಂತೆ ಹಲವರು ಮತ ಚಲಾಯಿಸಿ ಎಲ್ಲರೂ ಮತ ಚಲಾಯಿಸಿ ಎಂದು ಮನವಿ ಮಾಡಿದ್ದಾರೆ. ಅಕ್ಷಯ್ ಕುಮಾರ್ ಮಾತನಾಡಿ "ಮತ ಚಲಾಯಿಸಲು ಮತಗಟ್ಟೆಗಳಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ. ಹಿರಿಯ ನಾಗರಿಕರಿಗೂ ಒಳ್ಳೆ ಸೌಕರ್ಯ ಒದಗಿಸಿದ್ದಾರೆ. ಸ್ವಚ್ಛತೆ ಕಾಪಾಡಿಕೊಳ್ಳಲಾಗಿದೆ. ಎಲ್ಲರೂ ಮತ ಚಲಾಯಿಸಬೇಕು" ಎಂದು ಹೇಳಿದ್ದಾರೆ.

ಮುಂಬೈನಲ್ಲಿ ಮತ ಚಲಾಯಿಸಿದ ಬಳಿಕ ಮಿಲ್ಕಿ ಬ್ಯೂಟಿ ತಮನ್ನಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. "ಎಲ್ಲರೂ ಮತದಾನ ಮಾಡಲು ಉತ್ಸುಕರಾಗಿದ್ದಾರೆ. ನಾನು ಮತಗಟ್ಟೆಗೆ ಬರುತ್ತಿದ್ದಾಗ, ಅನೇಕ ಜನರು ತಮ್ಮ ಹಕ್ಕು ಚಲಾಯಿಸಲು ಮತ ಕೇಂದ್ರಗಳಿಗೆ ಹೋಗುತ್ತಿರುವುದನ್ನು ನಾನು ನೋಡಿದೆ. ಮತದಾನ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಅವರು ಹೇಳಿದ್ದಾರೆ.
ಮುಂಬೈ ಬಾಂದ್ರಾದ ಮೌಂಟ್ ಮೇರಿ ಕಾನ್ವೆಂಟ್ ಶಾಲೆಯಲ್ಲಿ ಫರ್ಹಾನ್ ಅಖ್ತರ್ ಹಾಗೂ ಸಹೋದರಿ ಜೋಯಾ ಅಖ್ತರ್ ಮತ ಚಲಾಯಿಸಿದ್ದಾರೆ. ಇನ್ನು ನಟ ಸೋನು ಸೂದ್ ಮಾತನಾಡಿ "ಮತದಾನ ಮಾಡುವುದು ಬಹಳ ಅವಶ್ಯಕ. ಎಲ್ಲರೂ ಬಂದು ಹಕ್ಕು ಚಲಾಯಿಸಿ. ಈ ದಿನವನ್ನು ರಜೆದಿನ ಎಂದು ಸುಮ್ಮನಾಗಬೇಡಿ" ಎಂದಿದ್ದಾರೆ.
ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪತ್ನಿ ಅಂಜಲಿ ಹಾಗೂ ಮಗಳು ಸಾರ ಜೊತೆ ಮುಂಬೈನಲ್ಲಿ ಹಕ್ಕು ಚಲಾಯಿಸಿದರು. ಬಳಿಕ ಮಾತನಾಡಿದ ಸಚಿನ್ "ನಾನು ಚುನಾವಣಾ ಆಯೋಗದ ಐಕಾನ್ ಆಗಿದ್ದೀನಿ. ಎಲ್ಲದರೂ ಮತದಾನ ಮಾಡಿ ಎನ್ನುವುದು ನನ್ನ ಮನವಿ. ಇದು ನಮ್ಮ ಜವಾಬ್ದಾರಿ ಕೂಡ. ಎಲ್ಲರೂ ಬಂದು ತಮ್ಮ ಹಕ್ಕು ಚಲಾಯಿಸಿ, ಮತ ಹಾಕಬೇಕು ಎನ್ನುವುದು ನನ್ನ ಮನವಿ" ಎಂದು ತಿಳಿಸಿದ್ದಾರೆ.
ಮುಂಬೈನ ಜ್ಞಾನ್ ಕೇಂದ್ರ ಸೆಕೆಂಡರಿ ಸ್ಕೂಲ್ ಮತಗಟ್ಟೆಯಲ್ಲಿ ನಟ ರಾಜ್‌ಕುಮಾರ್ ರಾವ್ ತಮ್ಮ ಹಕ್ಕು ಚಲಾಯಿಸಿದರು. "ಇದು ಸವಿಂಧಾನದಲ್ಲಿ ನಮಗಿರುವ ಅಧಿಕಾರ. ಹಾಗಾಗಿ ಎಲ್ಲರೂ ಹೊರಬಂದು ಮತ ಚಲಾಯಿಸಿ. ನಾನು ನನ್ನ ಕರ್ತವ್ಯ ನಿಭಾಯಿಸಿದ್ದೇನೆ. ಈಗ ನಿಮ್ಮ ಸರದಿ. ದಯವಿಟ್ಟು ಮತ ಚಲಾಯಿಸಿ" ಎಂದು ಹೇಳಿದ್ದಾರೆ.
ಇನ್ನು ನಟ ರಿತೇಶ್ ದೇಶ್‌ಮುಖ್ ಹಾಗೂ ನಟಿ ಜೆನಿಲಿಯಾ ದಂಪತಿ ಲಾತೂರ್‌ನಲ್ಲಿ ಮತ ಚಲಾಯಿಸಿದರು. ರಿತೇಶ್ ಮಾತನಾಡಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ ಗೆಲುವು ಸಾಧಿಸುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಇದು ನಿಮ್ಮ ರಾಜ್ಯ, ನಿಮ್ಮ ದೇಶ. ನಿಮ್ಮ ರಾಜ್ಯ, ದೇಶದ ಬಗ್ಗೆ ಪ್ರೀತಿ ಇದ್ದರೆ ಕೂಡಲೇ ಬಂದು ಮತ ಚಲಾಯಿಸಿ ಎಂದು ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ ಮನವಿ ಮಾಡಿದ್ದಾರೆ. ಕೆಲ ತಾರೆಯರು ತಮ್ಮ ಹಕ್ಕು ಚಲಾಯಿಸಿದ ಬಳಿಕ ಎಲ್ಲರೂ ಮತ ಚಲಾಯಿಸಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಮನವಿ ಮಾಡಿದ್ದಾರೆ.
ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಸಂಜೆ 6 ಗಂಟೆವರೆಗೂ ಜನ ತಮ್ಮ ಹಕ್ಕು ಚಲಾಯಿಸಲು ಅವಕಾಶವಿದೆ. ಸಿನಿಮಾ ನಿರ್ದೇಶಕರಾದ ಕಬೀರ್ ಸಿಂಗ್, ಜೋಯಾ ಅಖ್ತರ್, ಅಲಿ ಫೈಸಲ್ ಹಾಗೂ ನಟ ಜಾನ್ ಅಬ್ರಹಾಂ ಕೂಡ ಬೆಳಗ್ಗೆ ಬಂದು ಮತದಾನ ಮಾಡಿದ್ದಾರೆ.


Click it and Unblock the Notifications











