ಆಮಿರ್ ಖಾನ್ ಮ್ಯಾಜಿಕ್‌ಗೆ ಮನಸೋತ ಮಹೇಶ್ ಬಾಬು, ಸಿತಾರೆ ಜಮೀನ್ ಪರ್ ಬಗ್ಗೆ ಹೇಳಿದ್ದೇನು ?
ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಕೂಡ ಬದಲಾಯಿಸಿಬಿಡುತ್ತೆ. ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಇದಕ್ಕೆ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಸದ್ಯದ ಉದಾಹರಣೆ. ಹೌದು, ಒಂದ್ಕಾಲದಲ್ಲಿ ತಮ್ಮ ಚಿತ್ರಗಳಿಂದ ಅಸಂಖ್ಯಾತ.. ಅಗಣಿತ.. ಪ್ರೇಕ್ಷಕರ ಹೃದಯ ಗೆಲ್ತಿದ್ದ ಆಮಿರ್ ಖಾನ್ ಗೆ ಕಳೆದ ಏಳು ವರ್ಷಗಳಿಂದ ಅದೃಷ್ಟ ಕೈ ಕೊಟ್ಟಿತ್ತು.
ಮಾಡಿದ ಚಿತ್ರಗಳು ಕೈ ಹಿಡಿಯುವ ಬದಲು ಕೈ ಕಚ್ಚುತ್ತಿದ್ದವು. ಅದರಲ್ಲಿಯೂ ಮೂರು ವರ್ಷದ ಹಿಂದೆ ಬಂದ ಲಾಲ್ ಸಿಂಗ್ ಚಡ್ಡಾ ಚಿತ್ರದ ಸೋಲು ಆಮಿರ್ ಖಾನ್ ಗೆ ಬರೆ ಎಳೆದಿತ್ತು. ಇದರಿಂದ ಆಮಿರ್ ಖಾನ್ ಯುಗ ಮುಕ್ತಾಯವಾಯ್ತು ಎಂದೇ ಅನೇಕರು ಮಾತನಾಡಿಕೊಂಡಿದ್ದರು. ಚಿತ್ರರಂಗದಿಂದ ಆಮಿರ್ ಖಾನ್ ನಿವೃತ್ತಿಯಾಗುವುದೇ ಉತ್ತಮ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಆದರೆ ಈಗ ಆಮಿರ್ ಖಾನ್ ನಸೀಬು ಮತ್ತೆ ಖುಲಾಯಿಸಿದೆ. ಕಳೆದ ಶುಕ್ರವಾರ ತೆರೆಗೆ ಬಂದ ಸಿತಾರೆ ಜಮೀನ್ ಪರ್ ಬಾಕ್ಸಾಫೀಸ್‌ನಲ್ಲಿ ಚಿನ್ನದ ಬೆಳೆ ಬೆಳೆಯುತ್ತಿದೆ. ಭಾಷೆಯ ಭೇದ ಭಾವ ಇಲ್ಲದೇ ಎಲ್ಲ ವರ್ಗದ ಪ್ರೇಕ್ಷಕರ ಹೃದಯವನ್ನು ಕೂಡ ಗೆಲ್ಲುತ್ತಿದೆ.
ಕೇವಲ ಜನಸಾಮಾನ್ಯರು ಮಾತ್ರ ಸಿತಾರೆ ಜಮೀನ್ ಪರ್‌ಗೆ ಮನ ಸೋಲುತ್ತಿಲ್ಲ. ಚಿತ್ರರಂಗದ ಹಲವಾರು ತಾರೆಯರು ಕೂಡ ಆಮಿರ್ ಖಾನ್ ಅವರ ಈ ಮ್ಯಾಜಿಕ್‌ಗೆ ಫಿದಾ ಆಗಿದ್ದಾರೆ. ಉದಾಹರಣೆಗೆ ಮಹೇಶ್ ಬಾಬು.

ಹೌದು, ಸಿತಾರೆ ಜಮೀನ್ ಪರ್ ಚಿತ್ರಕ್ಕೆ ಮಹೇಶ್ ಬಾಬು ಮನ ಸೋತಿದ್ದಾರೆ. ಚಿತ್ರದ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ಧಾರೆ. ನಗಿಸುವ.. ಅಳಿಸುವ ಚಿತ್ರ ಸಿತಾರೆ ಜಮೀನ್ ಪರ್ ಎಂದು ಹೇಳಿರುವ ಮಹೇಶ್ ಬಾಬು ಚಪ್ಪಾಳೆ ತಟ್ಟುವಂತೆ ಕೂಡ ಈ ಚಿತ್ರ ಮಾಡುತ್ತೆ ಎಂದು ಹೇಳಿದ್ದಾರೆ. ಆಮೀರ್ ಖಾನ್ ಅವರ ಕ್ಲಾಸಿಕ್ ಚಿತ್ರಗಳಲ್ಲಿ ಇದು ಕೂಡ ಒಂದು, ಚಿತ್ರ ಮುಕ್ತಾಯವಾದ ನಂತರ ನಿಮ್ಮ ಮೊಗದಲ್ಲಿ ನಗು ಮೂಡುತ್ತೆ ಎಂದು ಸಿತಾರೆ ಜಮೀನ್ ಪರ್ ಚಿತ್ರದ ವಿಮರ್ಶೆ ಮಾಡಿದ್ಧಾರೆ.
ಮಹೇಶ್ ಬಾಬು ಅವರ ಈ ಮನದ ಮಾತು ಹಲವರ ಗಮನ ಸೆಳೆದಿದೆ. ಯಾಕೆಂದರೆ.. ಸಾಮಾನ್ಯವಾಗಿ ಮಹೇಶ್ ಬಾಬು ಹಿಂದಿ ಚಿತ್ರಗಳನ್ನು ಹೊಗಳುವುದಿಲ್ಲ. ಅಂತಹದ್ದರಲ್ಲಿ ಆಮಿರ್ ಖಾನ್ ಚಿತ್ರವನ್ನು ಮಹೇಶ್ ಬಾಬು ಮೆಚ್ಚಿ ಮಾತನಾಡಿದ್ದಾರೆ.
ಕೇವಲ ಮಹೇಶ್ ಬಾಬು ಮಾತ್ರವಲ್ಲ ಅನೇಕ ಸ್ಟಾರ್‌ಗಳು ಸಿತಾರೆ ಜಮೀನ್ ಪರ್ ಚಿತ್ರದ ಕುರಿತು ಮಾತುಗಳನ್ನಾಡುತ್ತಿದ್ದಾರೆ. ಅದರಲ್ಲಿಯೂ ಬಾಲಿವುಡ್‌ನ ದೊಡ್ಡ ದೊಡ್ಡ ಸ್ಟಾರ್‌ಗಳೆಲ್ಲ ಆಮಿರ್ ಖಾನ್‌ಗೆ ಬಹುಪರಾಕ್ ಹಾಕುತ್ತಿದ್ದಾರೆ. ಸಿತಾರೆ ಜಮೀನ್ ಪರ್ ಚಿತ್ರವನ್ನು ತಪ್ಪದೇ ನೋಡಿ ಎಂದು ತಮ್ಮ ತಮ್ಮ ಅಭಿಮಾನಿಗಳಿಗೆ ಹೇಳುತ್ತಿದ್ದಾರೆ. ತಮ್ಮೆಲ್ಲ ಅಹಂಕಾರಗಳನ್ನೆಲ್ಲ ಬದಿಗಿಟ್ಟು ಚಿತ್ರದ ಪ್ರಚಾರವನ್ನು ಮಾಡುತ್ತಿದ್ಧಾರೆ.
ಇನ್ನುಳಿದಂತೆ ಸದ್ಯ ಸಿತಾರೆ ಜಮೀನ್ ಪರ್ ಚಿತ್ರ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಮೂದಲ ದಿನಕ್ಕಿಂತ ನಿನ್ನೆ { ಜೂನ್ 22 } ಮತ್ತು ಮೊನ್ನೆ { ಜೂನ್ 21 } ಚಿತ್ರದ ಗಳಿಕೆಯಲ್ಲಿ ಏರಿಕೆ ಕಂಡು ಬಂದಿದೆ. ಹಲವರು ಈ ಚಿತ್ರ ಅನಾಯಾಸವಾಗಿ ನೂರು ಕೋಟಿಯ ಗಡಿಯನ್ನು ದಾಟುತ್ತೆ ಎನ್ನುತ್ತಿದ್ದಾರೆ. 200 ಕೋಟಿಯನ್ನು ಕೂಡ ಚಿತ್ರ ಗಳಿಸಬಹುದು ಎಂದು ಭವಿಷ್ಯವನ್ನು ಕೂಡ ಹೇಳುತ್ತಿದ್ದಾರೆ. ಒಟ್ಟಾರೆಯಾಗಿ ಸಿತಾರೆ ಜಮೀನ್ ಪರ್ ಎಷ್ಟು ಕೋಟಿಯನ್ನು ಗಳಿಸುತ್ತೆ ಎನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











