ಮಹೇಶ್ ಭಟ್ ವಿರುದ್ಧ ಸಂಬಂಧಿಯಿಂದನೇ ಆರೋಪಗಳ ಸುರಿಮಳೆ: ಚಿತ್ರರಂಗದ 'ಡಾನ್' ಎಂದ ಲವೀನಾ
ಬಾಲಿವುಡ್ ನಿರ್ದೇಶಕ ಮತ್ತು ನಿರ್ಮಾಪಕ ಮಹೇಶ್ ಭಟ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಮಹೇಶ್ ಭಟ್ ಕಿರುಕುಳ ನೀಡುತ್ತಿರುವುದಾಗಿ ಹತ್ತಿರದ ಸಂಬಂಧಿ ಲವೀನಾ ಲೂಧ್ ಆರೋಪ ಮಾಡಿದ್ದಾರೆ.
ಸುಶಾಂತ್ ಸಿಂಗ್ ಸಾವಿನ ಬಳಿಕ ಮಹೇಶ್ ಭಟ್ ವಿರುದ್ಧ ನೆಪೋಟಿಸಂ ಆರೋಪ ಕೇಳಿ ಬಂದಿತ್ತು. ಅಲ್ಲದೆ ಸುಶಾಂತ್ ಸಾವಿಗೆ ಕಾರಣರಾದವರಲ್ಲಿ ಮಹೇಶ್ ಭಟ್ ಕೂಡ ಒಬ್ಬರು ಎನ್ನಲಾಗುತ್ತಿದೆ. ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಜೊತೆ ಮಹೇಶ್ ಉತ್ತಮ ಸ್ನೇಹ ಹೊಂದಿದ್ದಾರೆ. ಇಬ್ಬರ ಸ್ನೇಹ-ಸಂಬಂಧ ಸಾಕಷ್ಟು ದೊಡ್ಡ ಮಟ್ಟಕ್ಕೆ ಚರ್ಚೆಯಾಗಿತ್ತು. ಈಗ ಇದೆಲ್ಲಾ ತಣ್ಣಾಗಾಯಿತು ಎನ್ನುವಷ್ಟೊತ್ತಿಗೆ ಮಹೇಶ್ ಭಟ್ ವಿರುದ್ಧ ಮತ್ತೊಂದು ಆರೋಪ ಕೇಳಿಬರುತ್ತಿದೆ.
ಮಹೇಶ್ ಭಟ್ ಹತ್ತಿರದ ಸಂಬಂಧಿಯಾಗಿರುವ ಲವೀನಾ ಲೂಧ್ ತನ್ನ ಪತಿಯ ವಿರುದ್ಧ ದೂರು ದಾಖಲಿಸಿದ ಬಳಿಕ ಕುಟುಂಬದಿಂದ ತುಂಬಾ ತೊಂದರೆ ಅನುಭವಿಸುತ್ತಿರುವುದಾಗಿ ಹೇಳಿ ವಿಡಿಯೋ ಮೂಲಕ ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ...

ಡ್ರಗ್ಸ್, ಹುಡುಗಿಯರನ್ನು ಸಪ್ಲೈ ಮಾಡುತ್ತಿದ್ದ
ವಿಡಿಯೋದಲ್ಲಿ ಮಾತನಾಡಿರುವ ಲವೀನಾ ಲೂಧ್, ನಾನು ವಿಡಿಯೋವನ್ನು ತನ್ನ ಮತ್ತು ಅವಳ ಕುಟುಂಬದ ಸುರಕ್ಷತೆಗಾಗಿ ಮಾಡುತ್ತಿರುವುದಾಗಿ ಹೇಳಿದ್ದಾರೆ. ಮಹೇಶ್ ಭಟ್ ಅವರ ಸೋದರಳಿಯ ಸುಮಿತ್ ಸಭರ್ವಾಲ್ ಅವರ ಪತ್ನಿ ಎಂದು ಪರಿಚಯ ಮಾಡಿಕೊಂಡಿದ್ದಾರೆ. ಜೊತೆಗೆ ನನ್ನ ಪತಿ ಅಮೈರಾ ದಸ್ತರ್ ಮತ್ತು ಸಪ್ನಾ ಪಬ್ಬಿ ಮುಂತಾದ ನಟಿಯರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು, ಜೊತೆಗೆ ಹುಡುಗಿಯರನ್ನು ಸಪ್ಲೈ ಮಾಡುತ್ತಾರೆ ಎಂದು ಬಹಿರಂಗಪಡಿಸಿದ್ದಾರೆ.

ಮಹೇಶ್ ಭಟ್ ಸಿನಿಮಾರಂಗದ 'ಡಾನ್'
'ಪತಿ ಮಾಡುತ್ತಿರುವ ಈ ಕೆಲಸ ಮಹೇಶ್ ಅವರಿಗೂ ತಿಳಿದಿದೆ. ಮಹೇಶ್ ಭಟ್ ಚಿತ್ರರಂಗದ ದೊಡ್ಡ ಡಾನ್ ಇದ್ದಹಾಗೆ. ಸಂಪೂರ್ಣ ಚಿತ್ರರಂಗವನ್ನು ನಿಯಂತ್ರಿಸುತ್ತಿದ್ದಾರೆ. ಅವರು ಹೇಳಿದ ಹಾಗೆ ಕೇಳದಿದ್ದರೆ ಅವರ ಜೀವನ ಹಾಳು ಮಾಡುತ್ತಾರೆ. ಎಷ್ಟೋ ಜನರನ್ನು ಕೆಲಸದಿಂದ ಕಿತ್ತುಹಾಕುವ ಮೂಲಕ ಅವರ ಜೀವನವನ್ನು ಮಹೇಶ್ ಭಟ್ ಹಾಳು ಮಾಡಿದ್ದಾರೆ ಎಂದಿದ್ದಾರೆ.

ಈಗ ನನ್ನ ಹಿಂದೆ ಬಿದ್ದಾರೆ
'ಒಂದು ಫೋನ್ ಕಾಲ್ ಮೂಲಕ ಇಷ್ಟೆಲ್ಲ ಮಾಡುತ್ತಾರೆ. ಜನರಿಗೆ ಇದೆಲ್ಲ ಗೊತ್ತಾಗುವುದಿಲ್ಲ. ಅವರ ವಿರುದ್ಧ ನಾನು ದೂರು ನೀಡಿರುವುದರಿಂದ ಈಗ ನನ್ನ ಹಿಂದೆ ಬಿದ್ದಿದ್ದಾರೆ. ನನ್ನನ್ನು ಮನೆಯಿಂದ ಹೊರಹಾಕಲು ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದರೆ ಪೊಲೀಸರು ಸ್ವೀಕರಿಸುವುದಿಲ್ಲ. ಕಷ್ಟಪಟ್ಟು ದೂರು ನೀಡಿದರೂ ಕ್ರಮ ಕೈಗೊಳ್ಳುವುದಿಲ್ಲ' ಎಂದು ಆರೋಪಿಸಿದ್ದಾರೆ.
Recommended Video

ನನಗೆ ಏನೇ ಆದರು ಮಹೇಶ್ ಭಟ್ ಕುಟುಂಬ ಕಾರಣ
'ಒಂದು ವೇಳೆ, ನನ್ನ ಮತ್ತು ನನ್ನ ಕುಟುಂಬದವರಿಗೆ ಏನೇ ತೊಂದರೆ ಆದರೂ ಅದಕ್ಕೆ ಮಹೇಶ್ ಭಟ್, ಸುಮಿತ್ ಸಭರ್ವಾಲ್, ಸಾಹಿಲ್ ಸೈಗಲ್, ಮುಕೇಶ್ ಭಟ್, ಕುಂಕುಮ್ ಸೈಗಲ್ ಕಾರಣ. ಇವರು ತೆರೆಹಿಂದೆ ಏನೆಲ್ಲ ಮಾಡುತ್ತಾರೆ ಎಂಬುದು ಜನರಿಗೆ ಗೊತ್ತಾಗಲಿ' ಎಂದು ವಿಡಿಯೋ ಮೂಲಕ ಬಹಿರಂಗ ಪಡಿಸಿದ್ದಾರೆ. 1.48 ನಿಮಿಷದ ವಿಡಿಯೋ ಮಾಡಿರುವ ಲವೀನಾ ಕೊನೆಯಲ್ಲಿ ಎಲ್ಲರೂ ಬೆಂಬಲ ನೀಡುವಂತೆ ಕೇಳಿಕೊಂಡಿದ್ದಾರೆ. ಮಹೇಶ್ ಭಟ್ ಮತ್ತು ಕುಟುಂಬ ನನಗೆ ಕಿರುಕುಳ ನೀಡುತ್ತಿದೆ. ದಯವಿಟ್ಟು ಬೆಂಬಲ ನೀಡಿ ಎಂದಿದ್ದಾರೆ.


Click it and Unblock the Notifications











