ಈ ಚೆಲುವೆಯ ಸೌಂದರ್ಯಕ್ಕೆ ಮೊಹಮ್ಮದ್ ಸಿರಾಜ್ ಕ್ಲೀನ್ ಬೋಲ್ಡ್, ಅಣ್ಣಂಗೆ ಲವ್ವಾಗಿದೆ ಎಂದ ಫ್ಯಾನ್ಸ್..!
ಕ್ರಿಕೆಟ್ ಹಾಗೂ ಸಿನಿಮಾ ಎರಡಕ್ಕೂ ಮೊದಲಿಂದ ಗಂಡ-ಹೆಂಡ್ತಿಯ ಸಂಬಂಧ. ಬಿಟ್ರೂ ಬಿಡದ ಈ ಎರಡು ಮಾಯೆ, ಮಾಯಾಲೋಕದ ಸ್ವರ್ಗ ತೆರೆದಿಡುವ ಉದ್ಯಮಗಳು. ಇಲ್ಲಿ ಆಟದ ಜೊತೆ ಹಣ ಇದೆ. ಗೆಲುವಿನ ಜೊತೆ ನಾನಾ ಬಗೆಯ ನಶೆ ಇದೆ.
ಇನ್ನೂ.. ಮೊಹಮ್ಮದ್ ಅಜರುದ್ದೀನ್ ಅವರಿಂದ ಹಿಡಿದು ವಿರಾಟ್ ಕೊಹ್ಲಿಯವರೆಗೆ, ಅಜಯ್ ಜಡೇಜಾ ಅವರಿಂದ ಹಿಡಿದು ಕೆ.ಎಲ್.ರಾಹುಲ್‌ವರೆಗೆ ಅನೇಕರು ನಾಯಕಿಯರ ಬೆಡಗು-ಭಿನ್ನಾಣಕ್ಕೆ ಮನ ಸೋತಿದ್ದಾರೆ. ಕೆಲವರು ಪ್ರೀತಿಯಲ್ಲಿ ಬಿದ್ದು ಎದ್ದರೆ, ಇನ್ನೂ ಕೆಲವರು ಮದುವೆಯ ಬಂಧನಕ್ಕೊಳಗಾಗಿದ್ದಾರೆ. ಸುಖ ಸಂಸಾರವನ್ನು ನಡೆಸುತ್ತಿದ್ದಾರೆ. ಈ ಸಾಲಿಗೆ ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಭಾರತ ತಂಡದ ಮಾಜಿ ವೇಗಿ ಮೊಹಮ್ಮದ್ ಸಿರಾಜ್ ಸೇರಿಕೊಳ್ಳುವ ಎಲ್ಲ ಸಾಧ್ಯತೆಗಳಿವೆ.

ಹೌದು, ಆರ್‌ಸಿಬಿ ತೆಕ್ಕೆಯಿಂದ ಜಾರಿ ಗುಜರಾತ್ ಪಾಲಾದ ಮೊಹಮ್ಮದ್ ಸಿರಾಜ್, ಮಾಹಿರಾ ಶರ್ಮಾ ಅವರ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಇಂತಹದ್ದೊಂದು ಅನುಮಾನ ಈಗ ಎಲ್ಲರನ್ನು ಕಾಡುತ್ತಿದೆ. ಖುದ್ದು ಮೊಹಮ್ಮದ್ ಸಿರಾಜ್ ಈ ಅನುಮಾನ ಬೀಜವನ್ನು ಎಲ್ಲರಲ್ಲಿ ಬಿತ್ತಿರುವುದು ವಿಶೇಷ.
ಹೌದು, ಅಸಲಿಗೆ ಮೊನ್ನೆಯಷ್ಟೇ 27ನೇ ವಸಂತಕ್ಕೆ ಕಾಲಿಟ್ಟಿರುವ ಮಾಹಿರಾ ಶರ್ಮಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೆಲ ಸುಂದರವಾದ ಫೋಟೊ ಹಂಚಿಕೊಂಡಿದ್ದಾರೆ. ಕಪ್ಪು ಬಣ್ಣದ ಬ್ಯಾಕ್‌ಲೆಸ್ ಸೂಟ್‌ನಲ್ಲಿ ಕಂಗೊಳಿಸುತ್ತಿದ್ದಾರೆ. ಮಾಹಿರಾ ಅವರ ಈ ಫೋಟೊಗಳನ್ನು ಕಂಡು ಅನೇಕರು ಹುಬ್ಬೇರಿಸಿದ್ದಾರೆ. ತಮ್ಮ ಮನದ ಮಾತುಗಳಿಗೆ ಅಕ್ಷರಶ ರೂಪ ನೀಡಿ ಕಾಮೆಂಟ್ ಹಾಕುತ್ತಿದ್ದಾರೆ. ಇನ್ನೂ.. ಪಡ್ಡೆ ಹುಡುಗರ ಭಾವನೆಯನ್ನು ಕೆರಳಿಸುವ ಈ ಭಾವ ಚಿತ್ರಗಳನ್ನು ಇಲ್ಲಿಯವರೆಗೆ 660,138 ಜನ ಮೆಚ್ಚಿಕೊಂಡಿದ್ದಾರೆ. ಈ 660,138 ಜನರಲ್ಲಿ ಮೊಹಮ್ಮದ್ ಸಿರಾಜ್ ಕೂಡ ಒಬ್ಬರು ಅನ್ನುವುದೇ ಈ ಕ್ಷಣದ ಬ್ರೇಕಿಂಗ್ ನ್ಯೂಸ್.
ಹೀಗಾಗಿಯೇ ಸಿರಾಜ್ ಮತ್ತು ಮಾಹಿರಾ ನಡುವೆ ಪ್ರೇಮಾಂಕುರವಾಗಿದೆ ಎಂದು ಅನೇಕರು ಮಾತನಾಡುತ್ತಿದ್ದಾರೆ. ಪಂಜಾಬ್‌ನ ಮಾಹಿರಾ ಮತ್ತು ಹೈದ್ರಾಬಾದ್‌ನ ಸಿರಾಜ್‌ಗೆ ಎಲ್ಲಿಂದ ಎಲ್ಲಿಯ ಸಂಬಂಧ, ಇಬ್ಬರ ನಡುವೆ ಲವ್ ಸ್ಟೋರಿ ಶುರುವಾಗಿದ್ದಾದರೂ ಹೇಗೆ ಎಂದು ತಲೆ ಕೆಡಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ಕುರಿತು ವ್ಯಾಪಕ ಚರ್ಚೆಯನ್ನು ಮಾಡುತ್ತಿದ್ದಾರೆ.
ಅಂದ್ಹಾಗೇ ಮಾಹಿರಾ ಶರ್ಮಾ ಕಿರುತೆರೆಯ ಖ್ಯಾತ ಹೆಸರು. ಹಿಂದಿಯಲ್ಲಿ ನಾಗಿನ್ 3, ಕುಂಡಲಿ ಭಾಗ್ಯ, ಬೇಪನಾಹ್ ಪ್ಯಾರ್ ಧಾರಾವಾಹಿಗಳ ಮೂಲಕ ಜನಪ್ರಿಯತೆಯನ್ನು ಗಳಿಸಿದವರು ಇವರು. ಇನ್ನೂ ಹಿಂದಿಯಲ್ಲಿ ಒಂದು ಪಂಜಾಬ್‌ನಲ್ಲಿ ಎರಡು ಚಿತ್ರ ಮಾಡಿರುವ ಮಾಹಿರಾ ಇಲ್ಲಿಯವರೆಗೆ ನಲವತ್ತಕ್ಕೂ ಹೆಚ್ಚಿನ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಇಷ್ಟೇ ಅಲ್ಲ ಬಿಗ್ ಬಾಸ್ ಮನೆಗೆ ಕೂಡ ಮಾಹಿರಾ ಶರ್ಮಾ ಹೋಗಿ ಬಂದಿದ್ಧಾರೆ.
ಇನ್ನೂ ಬಿಗ್ ಬಾಸ್ ಮನೆಯಲ್ಲಿದ್ದಾಗ ಪರಾಸ್ ಛಾಬ್ರಾ ಮೇಲೆ ಮಾಹಿರಾ ಶರ್ಮಾಗೆ ಪ್ರೇಮಾಂಕುರವಾಗಿತ್ತು. ಇಬ್ಬರು ಕೆಲ ಕಾಲ ಜೊತೆಯಲ್ಲಿ ಒಂದೇ ಸೂರಿನಡಿ ಬದುಕನ್ನು ದೂಡಿದರು. ಆದರೆ ಆ ನಂತರ ಅದೇನಾಯ್ತೋ ಕಳೆದ ವರ್ಷ ಇಬ್ಬರ ಪ್ರೇಮ ಸಂಬಂಧದಲ್ಲಿ ಬಿರುಕು ಮೂಡಿತು. ಅಭಿಮಾನಿಗಳ ನೆಚ್ಚಿನ ಜೋಡಿ ದೂರವಾಯಿತು. ಇಂಥಾ ಮಾಹಿರಾ ಶರ್ಮಾ ಜೊತೆ ಈಗ ಮೊಹಮ್ಮದ್ ಸಿರಾಜ್ ಹೆಸರು ಥಳುಕು ಹಾಕಿಕೊಂಡಿದೆ.
ಸದ್ಯಕ್ಕೆ ಮಾಹಿರಾ ಶರ್ಮಾ ಮತ್ತು ಸಿರಾಜ್ ಅವರ ಈ ಲವ್ ಸ್ಟೋರಿ ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ. ಆದರೂ ಕೂಡ ಮೊಹಮ್ಮದ್ ಸಿರಾಜ್ ಆಗಲಿ ಮಾಹಿರಾ ಶರ್ಮಾ ಆಗಲಿ ಇಲ್ಲಿಯವರೆಗೆ ಈ ವಿಚಾರದ ಕುರಿತು ಪ್ರತಿಕ್ರಿಯೆಯನ್ನು ನೀಡಿಲ್ಲ.


Click it and Unblock the Notifications











