ಕುಂತಲ್ಲೇ ಪ್ರತಿ ತಿಂಗಳು 3 ಲಕ್ಷ ಗಳಿಸುವುದ್ಹೇಗೆ ಮಲೈಕಾ ಅರೋರಾ ? ಸಲ್ಮಾನ್ ಖಾನ್ ಮಾಜಿ ಅತ್ತಿಗೆಯ 1.17ಕೋಟಿ ರಹಸ್ಯ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜೀವನೋಪಾಯಕ್ಕೆ ಕಲಾವಿದರು ತಮ್ಮಲ್ಲಿನ ಕಲೆಯೊಂದನ್ನೇ ನಂಬಿಕೊಂಡಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ತಂತ್ರಜ್ಞರು ಮತ್ತು ಕಾರ್ಮಿಕರನ್ನು ಹೊರತು ಪಡಿಸಿದರೆ ಚಿತ್ರರಂಗವನ್ನಷ್ಟೇ ನೆಚ್ಚಿಕೊಂಡು ಕುಳಿತ ಸ್ಟಾರ್‌ಗಳು ಯಾರು ಇಲ್ಲ. ಎಲ್ಲರೂ ಒಂದಲ್ಲ ಒಂದು ಕಡೆ ತಮ್ಮ ದುಡ್ಡು ಹೂಡಿದ್ದಾರೆ. ಸಂಪಾದನೆಯ ಮಾರ್ಗ ಕಂಡುಕೊಂಡಿದ್ದಾರೆ.
ಕೆಲವರು ಬಟ್ಟೆ ಮಾರಿದರೆ.. ಇನ್ನು ಕೆಲವರು ಮೇಕಪ್ ಕಿಟ್ ಮಾರುತ್ತಿದ್ದಾರೆ. ಕೆಲವರು ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದರೆ ಮತ್ತೂ ಕೆಲವರು ಜನರಿಗೆಲ್ಲ ಎಣ್ಣೆ ಹೊಡೆಸಿ ದುಡ್ಡು ಮಾಡುತ್ತಿದ್ಧಾರೆ. ತಮ್ಮದೇ ವಿಸ್ಕಿ ಬ್ರ್ಯಾಂಡ್‌ಗಳನ್ನು ಶುರು ಮಾಡಿದ್ದಾರೆ. ಮತ್ತೂ ಕೆಲವರು ರಿಯಲ್ ಎಸ್ಟೇಟ್ ನಲ್ಲಿ ಹಣ ಹೂಡಿದ್ದಾರೆ. ಇನ್ನೂ ಕೆಲವರು ಹೊಟೇಲ್ ಉದ್ಯಮಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಆ ಪೈಕಿ ಮಲೈಕಾ ಅರೋರಾ ಕೂಡ ಒಬ್ಬರು.

ಹೌದು, 52ರ ಹರೆಯದಲ್ಲಿ ಸದಾ ಕಾಲ ತಮ್ಮ ಪ್ರೇಮ ಸಂಬಂಧದಿಂದ ಸುದ್ದಿಯಾಗುವ ಮಲೈಕಾ ಅರೋರಾ ಈಗಾಗಲೇ ಹಲವು ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಭಾರತದ ಪ್ರಮುಖ ಯೋಗ ಮತ್ತು ವೆಲ್‌ನೆಸ್ ಸ್ಟಾರ್ಟ್‌ಅಪ್ ಆದ ''ಸರ್ವಯೋಗ'' ಮತ್ತು ಮಹಿಳೆಯರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ''ದಿವಾ ಯೋಗ'' ಎಂಬ ಸ್ಟುಡಿಯೋ ಪ್ರಮುಖವಾದವು.
ಇವಲ್ಲದೇ ''ಗೆಟ್ ಎ ವೇ'' ಎಂಬ ಐಸ್ ಕ್ರೀಮ್ ಬ್ಯ್ರಾಂಡ್‌ನಲ್ಲಿಯೂ ಹಣ ಹೂಡಿರುವ ಮಲೈಕಾ ''ರೆಬೆಲ್ ಫುಡ್ಸ್'' ಜೊತೆ ಸೇರಿ ''ನ್ಯೂಡ್ ಬೌಲ್ಸ್'' ಎಂಬ ಕ್ಲೌಡ್ ಕಿಚನ್‌ಗೆ ಕೂಡ ಹಣ ಹೂಡಿದ್ದಾರೆ. ಇದಿಷ್ಟೇ ಅಲ್ಲ ಇದರ ಜೊತೆ ''ಮಿಂತ್ರಾ'' ಜೊತೆ ಸೇರಿ ''Maejoy'' ಎಂಬ ತಮ್ಮದೇ ಲೈಫ್‌ಸ್ಟೈಲ್ ಬ್ಯ್ರಾಂಡ್ ಕೂಡ ಮಲೈಕಾ ಶುರು ಮಾಡಿದ್ದಾರೆ.
ಇನ್ನು ಬಾಂದ್ರಾ ಮತ್ತು ಜುಹುದಲ್ಲಿ ಇವರ ಒಡೆತನದ ''ಸ್ಕಾರ್ಲೆಟ್ ಹೌಸ್'' ಎಂಬ ರೆಸ್ಟೋರೆಂಟ್ ಇದೆ. ಇದರ ಜೊತೆ ಖಾರ್ ನಲ್ಲಿನ ''ಸ್ವೀನಿ'' ಎಂಬ ರೆಸ್ಟೋರೆಂಟ್‌ನ ಒಡತಿ ಕೂಡ ಹೌದು ಮಲೈಕಾ ಅರೋರಾ.
ಹೀಗೆ ನಾನಾ ಕಡೆ ಹಣವನ್ನು ಹೂಡಿರುವ ಮಲೈಕಾ ಅರೋರಾ ಸದ್ಯ ರಿಯಲ್ ಎಸ್ಟೇಟ್ ಅಂಗಳಕ್ಕೆ ಬಂದಿದ್ಧಾರೆ. ಮುಂಬೈನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ಗಳಲ್ಲಿ ಒಂದು ಅಪಾರ್ಟ್‌ಮೆಂಟ್‌ನಲ್ಲಿನ ಫ್ಲ್ಯಾಟ್‌ನ್ನು ಬಾಡಿಗೆ ನೀಡಿದ್ದಾರೆ.

ಬಾಂದ್ರಾ ಅತ್ಯಂತ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ಗಳಲ್ಲಿ ಒಂದಾದ ''ವಿದಾ'' ಅಪಾರ್ಟ್‌ಮೆಂಟ್‌ನಲ್ಲಿ ಮಲೈಕಾ ಅವರ ಈ ಫ್ಲಾಟ್ ಇದೆ. ಮುಂಬೈನ ಅತ್ಯಂತ ದುಬಾರಿ ರಿಯಲ್ ಎಸ್ಟೇಟ್ ಪ್ರದೇಶಗಳಲ್ಲಿ ಒಂದಾದ ಕಾರ್ಟರ್ ರೋಡ್ ಸಮೀಪದಲ್ಲಿಯೇ ಈ ಫ್ಲಾಟ್ ಇದ್ದು ತಮ್ಮ ಈ ಫ್ಲಾಟ್‌ನ ಮಲೈಕಾ ಅರೋರಾ ಈಗ ಬಾಡಿಗೆಗೆ ನೀಡಿದ್ದಾರೆ. ಅದು ಹತ್ತು, ಇಪ್ಪತ್ತು, ಐವತ್ತು ಸಾವಿರ, ಒಂದು ಲಕ್ಷಕ್ಕಲ್ಲ. ಬದಲಿಗೆ ಮೂರು ಲಕ್ಷದ ಹತ್ತು ಸಾವಿರಕ್ಕೆ ಎನ್ನುವುದೇ ವಿಶೇಷ.
ಇನ್ನು ಈ ಮನೆಗೆ ಕಾಲಿಡಬೇಕಾದ ಬಾಡಿಗೆದಾರರಿಂದ ಮಲೈಕಾ ಅರೋರಾ ಬರೋಬ್ಬರಿ ₹20 ಲಕ್ಷ ಹಣವನ್ನು ಠೇವಣಿ ರೂಪದಲ್ಲಿ ಪಡೆದಿದ್ದಾರೆ ಎಂದು ''ಸ್ಕ್ವೇರ್ ಯಾರ್ಡ್ಸ್'' ಉಲ್ಲೇಖ ಮಾಡಿದೆ.
ಒಪ್ಪಂದದ ಪ್ರಕಾರ ಪ್ರತಿ ವರ್ಷ ಮಲೈಕಾ ಅರೋರಾ ಬಾಡಿಗೆಯಲ್ಲಿ 5 % ಏರಿಕೆಯನ್ನು ಕೂಡ ಮಾಡಿದ್ದು ಎರಡನೇ ವರ್ಷಕ್ಕೆ ಬಾಡಿಗೆ ₹3.25 ಲಕ್ಷ ದಾಟಿದರೆ, ಮೂರನೇ ವರ್ಷಕ್ಕೆ ಇದು ಸುಮಾರು ₹3.41 ಲಕ್ಷ ತಲುಪಲಿದೆ. ಮೂರು ವರ್ಷದ ಅವಧಿಗೆ ಬರೋಬ್ಬರಿ ₹1.17 ಕೋಟಿ ಡೀಲ್ ಕುದುರಿಸಿದ್ದಾರೆ ಮಲೈಕಾ ಅರೋರಾ. ಈ ಮೂಲಕ ಕುಂತ ಜಾಗದಲ್ಲಿಯೇ ಪ್ರತಿ ತಿಂಗಳು ಮಲೈಕಾ ಮುಂದಿನ ಮೂರು ವರ್ಷ ₹3.10 ಲಕ್ಷ ಎಣಿಸಲಿದ್ಧಾರೆ.


Click it and Unblock the Notifications