ಪ್ರಭಾಸ್ ಹೆಸರು ಬಳಸಿ ಭಾರಿ ಮೋಸ: ವ್ಯಕ್ತಿ ಬಂಧನ
ನಟ ಪ್ರಭಾಸ್ ಹೆಸರು ಬಳಸಿಕೊಂಡು ಮೋಸ ಮಾಡುತ್ತಿರುವ ಪ್ರಕರಣಗಳು ಆಗಾಗ್ಗೆ ಬೆಳಕಿಗೆ ಬರುತ್ತಲೇ ಇವೆ. ಇದೀಗ ಪ್ರಭಾಸ್ ಹೆಸರು ಬಳಸಿ ಮೋಸ ಮಾಡಿದ್ದ ವ್ಯಕ್ತಿಯೊಬ್ಬನನ್ನು ಮುಂಬೈ ನಲ್ಲಿ ಬಂಧಿಸಲಾಗಿದೆ.
ಪ್ರಭಾಸ್ ನಟನೆಯ 'ರಾಧೆ-ಶ್ಯಾಮ್' ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿಸುತ್ತೇನೆ ಎಂದು ಹೇಳಿ ಲಕ್ಷಾಂತರ ರೂಪಾಯಿ ಹಣ ಪಡೆದು ಮೋಸ ಮಾಡಿದ್ದ ವ್ಯಕ್ತಿ ಆನಂದ್ ಸಕ್ಪಾಲ್ ಅಲಿಯಾಸ್ ಪ್ರಿತೇಶ್ ಜೈನ್ ಅನ್ನು ಪೊಲೀಸರು ಮುಂಬೈ ನಲ್ಲಿ ಬಂಧಿಸಿದ್ದಾರೆ.
'ರಾಧೆ-ಶ್ಯಾಮ್' ಸಿನಿಮಾದ ವಿವಿಧ ಪಾತ್ರಗಳಿಗಾಗಿ ಆಡಿಷನ್ ನಡೆಸುತ್ತೇನೆಂದು ಹೇಳಿ ಯುವಕ-ಯುವತಿಯರನ್ನು ಕರೆದು ಆಡಿಷನ್ ಮಾಡಿ. ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿಸುತ್ತೇನೆಂದು ಹೇಳಿ ಆನಂದ್ ಸಕ್ಪಾಲ್ ಹಣ ಪೀಕಿಸಿದ್ದ. ಈ ಬಗ್ಗೆ ಒಂದು ತಿಂಗಳ ಹಿಂದೆ ದೂರು ದಾಖಲಾಗಿತ್ತು.

24 ವರ್ಷ ವಯಸ್ಸಿನ ಆನಂದ್ ಸಕ್ಪಾಲ್ ತಾನು ಟಿ-ಸೀರೀಸ್ ಸಂಸ್ಥೆಯ ಕಾಸ್ಟಿಂಗ್ ಮ್ಯಾನೇಜರ್ ಎಂದು ಹೇಳಿ ಹಲವರ ಆಡಿಷನ್ ಮಾಡಿಸಿದ್ದ. ಟಿ-ಸೀರೀಸ್‌ನ ನಕಲಿ ಐಡಿ ಕಾರ್ಡ್ ಅನ್ನು ಸಹ ಆತ ಬಳಸಿದ್ದ.
'ನಿಮಗೆ ರಾಧೆ-ಶ್ಯಾಮ್ ಸಿನಿಮಾದಲ್ಲಿ ಪ್ರಭಾಸ್ ಸಹೋದರನ ಪಾತ್ರದಲ್ಲಿ ನಟಿಸಲು ಅವಕಾಶ ನೀಡಿದ್ದೇವೆ' ಎಂದು ಟಿ-ಸೀರೀಸ್ ನ ನಕಲಿ ಲೆಟರ್ ಹೆಡ್ ಬಳಸಿ ನಂಬಿಸಿ ಅವರಿಂದ ಹಣ ಪಡೆದು ಮೋಸ ಮಾಡಿದ್ದ. ಇದೇ ವ್ಯಕ್ತಿ ವಂಚನೆ ಪ್ರಕರಣದಲ್ಲಿ ಈ ಹಿಂದೆ ಸಹ ಬಂಧನಕ್ಕೆ ಒಳಗಾಗಿದ್ದ.
'ರಾಧೆ-ಶ್ಯಾಮ್' ಸಿನಿಮಾದ ಆಡಿಷನ್ ಕಾಲ್ ಬಗ್ಗೆ ನಕಲಿ ಜಾಹೀರಾತು ತಯಾರಿಸಿ ಇನ್‌ಸ್ಟಾಗ್ರಾಂ ನಲ್ಲಿ ಹಾಕುತ್ತಿದ್ದ ಈತ, ಜಾಹೀರಾತು ನೋಡಿ ತನ್ನನ್ನು ಸಂಪರ್ಕಿಸಿದ ಆಸಕ್ತರಿಗೆ ಕ್ಯುಆರ್ ಕೋಡ್ ಕಳಿಸಿ ಆಡಿಷನ್‌ಗಾಗಿ ಶುಲ್ಕದ ಹೆಸರಿನಲ್ಲಿ ಹಣ ಹಾಕಿಸಿಕೊಳ್ಳುತ್ತಿದ್ದ ಆ ನಂತರ ಅವರನ್ನು ಬ್ಲಾಕ್ ಮಾಡುತ್ತಿದ್ದ.
ಒಂದು ತಿಂಗಳ ಹಿಂದೆ ಈ ವ್ಯಕ್ತಿಯ ವಿರುದ್ಧ ಮುಂಬೈ ಪೊಲೀಸರ ಬಳಿ ದೂರು ದಾಖಲಾಗಿತ್ತು. ಅಂದಿನಿಂದಲೂ ತಲೆಮರೆಸಿಕೊಂಡಿದ್ದ ಈತನನ್ನು ಇಂದು ಪೊಲೀಸರು ಬಂಧಿಸಿದ್ದಾರೆ.


Click it and Unblock the Notifications











