ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿಯನ್ನು ಸ್ವೀಕರಿಸಿ ವೇದಿಕೆಯ ಮೇಲೆ ಬಿಕ್ಕಿ ಬಿಕ್ಕಿ ಅತ್ತ ನಟಿ...!
ಜೀವನದಲ್ಲಿ ಎಂತಹದ್ದೇ ಕಷ್ಟ ಬಂದರೂ ಎದೆಗುಂದಬಾರದು. ಮೌಲ್ಯಗಳನ್ನು ಬಿಡಬಾರದು. ಸಮಸ್ಯೆಯ ಪರಿಹಾರಕ್ಕೆ ಅಡ್ಡದಾರಿಯನ್ನು ಹಿಡಿಯಬಾರದು. ಇನ್ನೂ.. ಯಾರೇ ಆಗಲಿ ಅದೃಷ್ಟವನ್ನು ಎದುರು ನೋಡುತ್ತಾ ಕುಳಿತುಕೊಳ್ಳಬಾರದು. ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಬೇಕು. ಪರಿಶ್ರಮದ ದುಡಿಮೆ ನಿಮ್ಮದಾಗಿದ್ದರೆ ಖಂಡಿತ ಅದಕ್ಕೆ ಪ್ರತಿಫಲ ಖಂಡಿತ ಸಿಕ್ಕೇ ಸಿಗುತ್ತೆ. ಇದಕ್ಕೆ ಮಾನಸಿ ಪರೇಖ್ ಅತ್ಯುತ್ತಮ ಉದಾಹರಣೆ.
ಹೌದು, ಮಾನಸಿ ಪರೇಖ್... ನಾಯಕಿ-ಗಾಯಕಿ-ನಿರ್ಮಾಪಕಿ ಮತ್ತು ಮಾಡೆಲ್. ಯಾವ ಗಾಡ್ ಫಾದರ್ ನೆರವು ಇಲ್ಲದೇ, ಕಳೆದ ಎರಡು ದಶಕಗಳಿಂದ ಕಿರುತೆರೆಯಲ್ಲಿ ಸೈಕಲ್ ಹೊಡೆದ ಮಾನಸಿ ಇಲ್ಲಿಯವರೆಗೆ ಹಲವಾರು ಧಾರಾವಾಹಿಯಲ್ಲಿ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅನೇಕ ರಿಯಾಲಿಟಿ ಶೋಗಳಲ್ಲಿ ಸ್ಫರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಸ್ಟಾರ್ ಯಾ ರಾಕ್ ಸ್ಟಾರ್ ಎಂಬ ಕಾರ್ಯಕ್ರಮದಲ್ಲಿ ಗೆದ್ದು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ಧಾರೆ.

ಇನ್ನೂ ಕೇವಲ ಕಿರುತೆರೆ ಮಾತ್ರವಲ್ಲ ಬೆಳ್ಳಿ ತೆರೆಯಲ್ಲಿ ಕೂಡ ಅದೃಷ್ಟ ಪರೀಕ್ಷೆಯನ್ನು ಮಾನಸಿ ಪರೇಖ್ ಮಾಡಿಕೊಂಡಿದ್ದಾರೆ. ಅವಕಾಶಗಳನ್ನು ಅರಸುತ್ತಾ ತಮಿಳು ಚಿತ್ರರಂಗಕ್ಕೂ ಬಂದು ಹೋಗಿದ್ದಾರೆ. ಇದಿಷ್ಟೇ ಅಲ್ಲದೇ ವಿಕ್ಕಿ ಕೌಶಲ್ ಅಭಿನಯದ ಉರಿ ಚಿತ್ರದಲ್ಲಿ ಕೂಡ ಮಾನಸಿ ಕಾಣಿಸಿಕೊಂಡಿದ್ದಾರೆ. ಆದರೆ, ಉರಿ ಚಿತ್ರ ಹೊರತು ಪಡಿಸಿದರೆ ಇವರಿಗೆ ಬೇಕಿದ್ದ ಹೆಸರು ಉಳಿದ ಚಿತ್ರಗಳಿಂದ ಅಷ್ಟಾಗಿ ಸಿಗಲಿಲ್ಲ. ಒಂದೇ ತರಹದ ಪಾತ್ರಗಳಿಗೆ ಸೀಮಿತವಾಗದೇ ಇಲ್ಲಿಯವರೆಗೆ ತಮ್ಮ ಚಿತ್ರ ಜೀವನದಲ್ಲಿ ವೈವಿಧ್ಯಮಯ ಪಾತ್ರಗಳನ್ನು ಮಾಡಿದರೂ ಕೂಡ ಚಿತ್ರರಂಗದಲ್ಲಿ ಇವರಿಗೆ ಸಿಗಬೇಕಾದ ಸ್ಥಾನ ಮತ್ತು ಮಾನ ಕೂಡ ಸಿಗಲಿಲ್ಲ. ಆದರೂ ಕುಗ್ಗದ, ಬಗ್ಗದ ಮಾನಸಿ ಪರೇಖ್ ತಾವು ಬೆವರು ಸುರಿಸಿ ದುಡಿಮೆ ಮಾಡಿದ ಹಣದಿಂದ ತಾವೇ ನಿರ್ಮಾಪಕಿಯಾದರು. ಗುಜರಾತಿ ಭಾಷೆಯಲ್ಲಿ ತಮ್ಮ ಚಿತ್ರಕ್ಕೆ ತಾವೇ ಹಣವನ್ನು ಹೂಡಲು ಶುರು ಮಾಡಿದರು. ನಾಯಕಿ ಪಾತ್ರವನ್ನು ನಿರ್ವಹಿಸಿದರು. ಆ ಪೈಕಿ ಇವರು ನಿರ್ಮಾಣ ಮಾಡಿದ ಕಚ್ ಎಕ್ಸ್‌ಪ್ರೆಸ್ ಕೂಡ ಒಂದು.
ಹೀಗೆ ಪ್ರಯತ್ನವನ್ನು ಮುಂದುವರೆಸಿಕೊಂಡು ಬಂದ ಪರಿಣಾಮದಿಂದ, ಕಚ್ ಎಕ್ಸ್‌ಪ್ರೆಸ್ ಚಿತ್ರದಲ್ಲಿನ ಅಭಿನಯಕ್ಕೆ ಮಾನಸಿ ಪರೇಖ್‌ಗೆ 70ನೇ ರಾಷ್ಟ್ರೀಯ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಈ ಕಾರಣಕ್ಕೆ ಇಂದು ಪ್ರಶಸ್ತಿ ಸ್ವೀಕರಿಸುವ ಸಮಯದಲ್ಲಿ ಭಾವುಕರಾದ ಮಾನಸಿ ಪರೇಖ್ ರಾಷ್ಟ್ರಪತಿ ದ್ರೌಪದಿ ಮುರ್ಮು ಎದುರು ಕಣ್ಣೀರು ಹಾಕಿದ್ದಾರೆ. ಬಿಕ್ಕಿ ಬಿಕ್ಕಿ ಅಳುತ್ತಾನೇ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ಉಳಿದಂತೆ ಮಾನಸಿ ಪರೇಖ್ ಗುಜರಾತಿ ಗಾಯಕ ಮತ್ತು ಸಂಗೀತಗಾರ ಪಾರ್ಥಿವ್ ಗೋಹಿಲ್ ಅವರನ್ನು ಮದುವೆಯಾಗಿದ್ದಾರೆ. ಇವರಿಬ್ಬರ ಪ್ರೀತಿಯ ಸಂಕೇತವಾಗಿ ನಿರ್ವಿ ಎಂಬ ಮುದ್ದಾದ ಮಗಳಿದ್ದಾಳೆ. ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಮಾನಸಿ ಐದು ವೆಬ್ ಸರಣಿಯಲ್ಲಿ ಕೂಡ ನಟಿಸಿದ್ದಾರೆ.ಒಂದು ಕಿರುಚಿತ್ರವನ್ನು ಕೂಡ ಮಾಡಿದ್ದಾರೆ. ಅಂದ್ಹಾಗೇ ಮಾನಸಿ ಪರೇಖ್ ಜೊತೆ ಕನ್ನಡತಿ ನಿತ್ಯಾ ಮೆನನ್ ಅವರಿಗೂ ಕೂಡ ಪ್ರಶಸ್ತಿಯನ್ನೂ ನೀಡಲಾಗಿದೆ. ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 'ತಿರುಚಿತ್ರಂಬಲಂ' ಚಿತ್ರದಲ್ಲಿನ ಅಭಿನಯಕ್ಕೆ ನಿತ್ಯಾ ಮೆನನ್ ಅವರಿಗೆ ಪ್ರಶಸ್ತಿ ಸಿಕ್ಕಿದೆ. ಇನ್ನೂ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ಕಾಂತಾರ ಮತ್ತೊಮ್ಮೆ ಹಾರಿಸಿದೆ. ಅತ್ಯುತ್ತಮ ಮನರಂಜನಾತ್ಮಕ ಚಿತ್ರ ಮತ್ತು ಅತ್ಯುತ್ತಮ ನಟ ಪ್ರಶಸ್ತಿಯನ್ನು ರಿಷಬ್ ಶೆಟ್ಟಿ ಪಡೆದಿದ್ದಾರೆ.


Click it and Unblock the Notifications











