For Quick Alerts
  ALLOW NOTIFICATIONS  
  For Daily Alerts

  KRK ವಿರುದ್ಧ ಸಿಡಿದೆದ್ದ ನಟ ಮನೋಜ್ ಬಾಜಪೇಯಿ; ಮಾನನಷ್ಟ ಮೊಕದ್ದಮೆ ದಾಖಲು

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್ ಖ್ಯಾತ ನಟ, 'ದಿ ಫ್ಯಾಮಿಲಿ ಮ್ಯಾನ್' ವೆಬ್ ಸೀರಿಸ್ ಮೂಲಕ ಅಭಿಮಾನಿಗಳ ಹೃದಯ ಗೆದ್ದಿರುವ ಮನೋಜ್ ಬಾಜಪೇಯಿ, ವಿಮರ್ಷಕ, ನಟ ಕಮಲ್ ಆರ್ ಖಾನ್ ವಿರುದ್ಧ ಸಿಡಿದೆದಿದ್ದಾರೆ. ಕಮಲ್ ಆರ್ ಖಾನ್ ವಿರುದ್ಧ ಮನೋಜ್ ಬಾಜಪೇಯಿ ಮಂಗಳವಾರ (ಆಗಸ್ಟ್ 24) ಇಂದೋರ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಈ ಮೊದಲು ನಟ ಸಲ್ಮಾನ್ ಖಾನ್, ಕಮಲ್ ಆರ್ ಖಾನ್ ವಿರುದ್ಧ ಮಾನನಷ್ಟ ದಾಖಲಿಸಿದ್ದರು.

  ಪಿಟಿಐ ವರದಿ ಪ್ರಕಾರ, ಮನೋಜ್ ಬಾಜಪೇಯಿ ಐಪಿಸಿ ಸೆಕ್ಷನ್ 500 ಅಡಿಯಲ್ಲಿ ಕೆ ಆರ್ ಕೆ ವಿರುದ್ಧ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಕ್ರಿಮಿನಲ್ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು ಎಂದು ಮನೋಜ್ ಬಾಜಪೇಯಿ ಪರ ವಕೀಲ ಪರೇಶ್ ಎಸ್ ಜೋಶಿ ತಿಳಿಸಿದ್ದಾರೆ.

  ಕೆಆರ್ ಕೆ ಜುಲೈ 26ರಂದು ಮನೋಜ್ ಬಾಜಪೇಯಿಗೆ ಸಂಬಂಧ ಪಟ್ಟ ಹಾಗೆ ಮಾನಹಾನಿಕರ ಟ್ವೀಟ್ ಮಾಡಿದ್ದರು. ಇದು ಮನೋಜ್ ಬಾಜಪೇಯಿ ಇಮೇಜ್ ಹಾಳು ಮಾಡಿದೆ ಎಂದು ನಟನ ಪರ ವಕೀಲರು ಆರೋಪಿಸಿದ್ದಾರೆ. ಈಗಾಗಲೇ ಮನೋಜ್ ಬಾಜಪೇಯಿ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆಯನ್ನು ದಾಖಲಿಸಿದ್ದಾರೆ ಎಂದು ವಕೀಲರು ಮಾಹಿತಿ ನೀಡಿದ್ದಾರೆ.

  ಕಮಲ್ ಖಾನ್ ತನ್ನ ಸರಣಿ ಟ್ವೀಟ್ ನಲ್ಲಿ ದಿ ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್ ಮತ್ತು ನಟನ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ ಎನ್ನುವ ಆರೋಪಿಸಲಾಗಿದೆ. ವೆಬ್ ಸೀರಿಸ್ ಅನ್ನು ಕೆ ಆರ್ ಕೆ ಸಾಫ್ಟ್ ಪೋರ್ನ್ ಗೆ ಹೋಲಿಸಿ ಟ್ವೀಟ್ ಮಾಡಿದ್ದರು. ಮಗಳು ಮತ್ತು ಪತ್ನಿಯ ಸಂಬಂಧ ಬಗ್ಗೆಯೂ ಮಾತನಾಡಿದ್ದರು. ಅಷ್ಟೆಯಲ್ಲ ಮನೋಜ್ ಬಾಜಪೇಯಿ ಅವರನ್ನು ಡ್ರಗ್ ಅಡಿಕ್ಟ್ ಎಂದು ಕರೆದಿದ್ದರು. ಇದರಿಂದ ಸಿಟ್ಟಿಗೆದ್ದ ಮನೋಜ್ ದೂರು ದಾಖಲಿಸಿದ್ದಾರೆ.

  ಮನೋಜ್ ಬಾಜಪೇಯಿ ದೂರಿಗೆ ಪ್ರತಿಕ್ರಿಯೆ ನೀಡಿರುವ ಕಮಲ್ ಆರ್ ಖಾನ್ "ಮುಂದಿನ ಎರಡು ವರ್ಷಗಳಲ್ಲಿ ಪ್ರತಿ ಬಾಲಿವುಡ್ ವಾಲಾ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸುತ್ತಾರೆ ಎಂದು ನೀವು ಭಾವಿಸುತ್ತೀರಾ?" ಎಂದು ಕೇಳಿದ್ದಾರೆ.

  ಈ ಹಿಂದೆ ಸಲ್ಮಾನ್ ಖಾನ್ ಕೂಡ ಕೂಡ ಕೆ ಆರ್ ಕೆ ವಿರುದ್ಧ ಸಿಡಿದೆದ್ದಿದ್ದರು. ಸಲ್ಮಾನ್ ಖಾನ್ ರಾಧೆ ಸಿನಿಮಾ ಬಿಡುಗಡೆ ಬಳಿಕ ಕೆ ಆರ್ ಕೆ ಸಲ್ಮಾನ್ ಖಾನ್ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದರು. ಸಲ್ಮಾನ್ ನಟನೆಯ 'ರಾಧೆ' ಸಿನಿಮಾ ನೋಡಿದ ಬಳಿಕ ಕಮಲ್ ಆರ್ ಖಾನ್ ವಿಮರ್ಶೆ ನೀಡಿದ್ದರು. ವಿಮರ್ಶೆ ಮಾಡುವ ವೇಳೆ 'ರಾಧೆ' ಸಿನಿಮಾವು ಅತ್ಯಂತ ಕೆಟ್ಟ ಸಿನಿಮಾ ಎಂದು ಹೇಳಿದ್ದರು. ವಿಮರ್ಶೆ ಮಾಡುತ್ತಾ ಕಣ್ಣೀರು ಹಾಕಿದ್ದ ಕೆ ಆರ್ ಕೆ, "ನಾನು ಇನ್ನೂ ಅರ್ಧ ಸಿನಿಮಾ ನೋಡುವುದು ಬಾಕಿ ಇದೆ. ನನಗೆ ಈಗಲೇ ಭಯವಾಗುತ್ತಿದೆ. ಮನೆಗೆ ಹೋಗಿ ಮಾತ್ರೆಗಳನ್ನು ತೆಗೆದುಕೊಂಡು ಎರಡು ದಿನ ವಿಶ್ರಾಂತಿ ಪಡೆಯುತ್ತೇನೆ" ರಾಧೆ ಸಿನಿಮಾದ ಬಗ್ಗೆ ಮಾತನಾಡಿದ್ದರು.

  ಬಳಿಕ ಸಲ್ಮಾನ್ ಪರ ವಕೀಲರು ಮುಂಬೈ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಿ ನೋಟೀಸ್ ಕಳುಹಿಸಿದ್ದರು. ನೋಟೀಸ್ ತಲುಪಿದ ಬಳಿಕ ಟ್ವೀಟ್ ಮಾಡಿದ್ದ ಕೆ ಆರ್ ಕೆ, "ಸಲ್ಮಾನ್ ಖಾನ್ ರಾಧೆ ಸಿನಿಮಾ ವಿಮರ್ಶೆಗಾಗಿ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ" ಎಂದು ಟ್ವಿಟ್ಟರ್ ನಲ್ಲಿ ಬಹಿರಂಗ ಪಡಿಸಿದ್ದರು.

  ಕಮಲ್ ಆಗಾಗ ಬಾಲಿವುಡ್ ಕಲಾವಿದರ ಬಗ್ಗೆ ವಿವಾದಾತ್ಮಕ ಟ್ವೀಟ್ ಗಳನ್ನು ಮಾಡುತ್ತಿರುತ್ತಾರೆ. ಇತ್ತೀಚಿಗಷ್ಟೆ ಬಾಲಿವುಡ್ ನ ಕೆಲವು ಕಲಾವಿದರ ಬಗ್ಗೆ ಟ್ವೀಟ್ ಮಾಡಿ ಭವಿಷ್ಯ ನುಡಿಸಿದ್ದರು. "ನಿಕ್ ಜೋನಸ್ ಮತ್ತು ಪ್ರಿಯಾಂಕಾ ಚೋಪ್ರಾ 10 ವರ್ಷಗಳಲ್ಲಿ ವಿಚ್ಛೇದನ ನೀಡುತ್ತಾರೆ", "ಕರೀನಾ ಮತ್ತು ಸೈಫ್ ಅಲಿ ಖಾನ್ ಇಬ್ಬರ ಮಕ್ಕಳು ಅವರ ಹೆಸರಿನಿಂದ ಸಕ್ಸಸ್ ಫುಲ್ ಕಲಾವಿದರಾಗುವುದಿಲ್ಲ", "ಕಂಗನಾ ಮದುವೆಯೇ ಆಗಲ್ಲ" ಎಂದಿದ್ದರು.

  ಅಷ್ಟೆಯಲ್ಲ "ಈ ನಟನ ತಂದೆ ಸತ್ತ ಬಳಿಕ ದೊಡ್ಡ ಸ್ಟಾರ್ ಆಗಿ ಗುರುತಿಸಿಕೊಳ್ಳುತ್ತಾರೆ", ಸೋನಿಯಾ ಗಾಂಧಿ ಸತ್ತ ಬಳಿಕ ರಾಹುಲ್ ಗಾಂಧಿ ಪ್ರಧಾನಿ ಆಗುತ್ತಾರೆ" ಎಂದೆಲ್ಲ ಟ್ವೀಟ್ ಮಾಡಿ ಅಭಿಮಾನಿಗಳಿಂದ, ಬಾಲಿವುಡ್ ಮಂದಿಯಿಂದ ಛೀಮಾರಿ ಹಾಕಿಸಿಕೊಂಡಿದ್ದರು. ಆದರೂ ತನ್ನ ವಿವಾದಾತ್ಮಕ ಸರಣಿ ಟ್ವೀಟ್ ಗಳನ್ನು ಮಾಡುವುದನ್ನು ನಿಲ್ಲಿಸಿಲ್ಲ. ಇನ್ನು ಯಾವೆಲ್ಲ ಕಲಾವಿದರು ಕಮಲ್ ಆರ ಖಾನ್ ವಿರುದ್ಧ ಸಿಡಿದೇಳುತ್ತಾರೆ ಎಂದು ಕಾದುನೋಡಬೇಕು.

  English summary
  The Family Man Actor Manoj Bajpayee files defamation case against Kamaal R Khan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X