ಸಮಂತಾ ನಟನೆಯನ್ನು ಹೊಗಳಿದ ಬಾಲಿವುಡ್ ನಟ
ನಟಿ ಸಮಂತಾ ಚಿತ್ರರಂಗ ಪ್ರವೇಶಿಸಿ 11 ವರ್ಷಗಳಾದವು. ಕೇವಲ ಬಬ್ಲಿ ಪಾತ್ರಗಳಿಗಷ್ಟೆ ತಮ್ಮನ್ನು ಸೀಮಿತಗೊಳಿಸಿಕೊಳ್ಳದು ಭಿನ್ನ ಮಾದರಿಯ ಪಾತ್ರಗಳಲ್ಲಿಯೂ ತಮ್ಮ ನಟನಾ ಪ್ರತಿಭೆ ಪ್ರದರ್ಶಿಸಿದ್ದಾರೆ ಈ ನಟಿ.
ಸದಾ ತಮಗೆ ತಾವೇ ಸವಾಲೆಸೆದುಕೊಳ್ಳುವ ನಟಿ ಸಮಂತಾ, 'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸರಣಿಯಲ್ಲಿ ಪಕ್ಕಾ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ.
ತಮ್ಮ ಸ್ಟಾರ್‌ಗಿರಿಯನ್ನು, ನಟಿಯರು ಮೆಚ್ಚುವ ಬಬ್ಲಿ ಇಮೇಜನ್ನು ಪಕ್ಕಕ್ಕೆ ಸರಿಸಿ ಪಕ್ಕಾ ರಗಡ್ ವಿಲನ್ ಆಗಿರುವ ನಟಿ ಸಮಂತಾದ ನಟನೆಗೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ನಟನೆ ಮಾತ್ರವೇ ಅಲ್ಲದೆ ಸಮಂತಾ, ವೆಬ್ ಸರಣಿಯಲ್ಲಿ ಮಾಡಿರುವ ಆಕ್ಷನ್‌ಗೆ ಸಹ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಹಲವಾರು ಸೆಲೆಬ್ರಿಟಿಗಳು ಸಮಂತಾರ ನಟನೆಯನ್ನು ಮೆಚ್ಚಿ ಕೊಂಡಾಡಿದ್ದಾರೆ.
ಸಮಂತಾ ಜೊತೆಗೆ 'ದಿ ಫ್ಯಾಮಿಲಿ ಮ್ಯಾನ್ 2' ನಲ್ಲಿ ನಟಿಸಿರುವ ಮನೋಜ್ ಬಾಜಪೇಯಿ ಸಮಂತಾ ನಟನೆಯನ್ನು ಕೊಂಡಾಡಿದ್ದಾರೆ. ಸ್ವತಃ ಅತ್ಯದ್ಭುತ ನಟರಾಗಿರುವ ಮನೋಜ್, ಸಮಂತಾರ ನಟನೆಯನ್ನು ಹೊಗಳಿರುವುದು ಸಾಮಾನ್ಯ ವಿಷಯವೇನಲ್ಲ.

ನನ್ನ ಪಾತ್ರ ಮಂಕಾಗಿರುವುದು ನನಗೆ ಖುಷಿ ಇದೆ: ಮನೋಜ್
ಸಮಂತಾ ನಟನೆಯಿಂದ ನಿಮ್ಮ ಪಾತ್ರ ಮಂಕಾಗಿದೆ ಎನಿಸುತ್ತಿದ್ದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿರುವ ಮನೋಜ್ ಬಾಜಪೇಯಿ, 'ನನ್ನ ಸಹ ನಟರ ನಟನೆಯಿಂದ ನನ್ನ ಪಾತ್ರ ಮಂಕಾಗುವುದು ನನಗೆ ಹೆಮ್ಮೆಯ ವಿಷಯ. ಸಮಂತಾ ಅದ್ಭುತವಾಗಿ ನಟಿಸಿದ್ದಾರೆ. ಆಕೆ ತನ್ನ ಮೊದಲ ವೆಬ್ ಸರಣಿಯಲ್ಲಿ ಅದ್ಭುತವಾಗಿ ನಟಿಸಿ ಒಳ್ಳೆಯ ಹೆಸರು ಸಂಪಾದಿಸಲಿ ಎಂಬುದು ನನ್ನ ಆಸೆಯಾಗಿತ್ತು' ಎಂದಿದ್ದಾರೆ ಮನೋಜ್ ಬಾಜಪೇಯಿ.

ಸಹ ನಟರ ಬಗ್ಗೆ ನನಗೆ ವಿಪರೀತ ಕಾಳಜಿ: ಮನೋಜ್
'ನನ್ನ ಸಹನಟರ ಬಗ್ಗೆ ವಿಪರೀತವಾದ ಕಾಳಜಿ ನನಗೆ. ನನ್ನ ಸಹನಟರು ಚೆನ್ನಾಗಿ ನಟಿಸಬೇಕು ಎಂದು ಸದಾ ಆಶಿಸುತ್ತಿರುತ್ತೇನೆ. ದಿ ಫ್ಯಾಮಿಲಿ ಮ್ಯಾನ್ ಸರಣಿಯಲ್ಲಿ ಈ ಮೊದಲು ನಟಿಸಿದ್ದ ಶರೀಬ್ ಹಸ್ಮನಿ ಹಾಗೂ ಇತರರಿಗೂ ನಾನು ಸದಾ ಈ ಬಗ್ಗೆ ಹೇಳುತ್ತಲೇ ಇದ್ದೆ. ಈಗ ಅವರೆಲ್ಲ ಒಂದು ಹಂತದ ಸ್ಟಾರ್‌ಗಳಾಗಿದ್ದಾರೆ' ಎಂದಿದ್ದಾರೆ ಮನೋಜ್.

ಸಮಂತಾ ಬಾಲಿವುಡ್ ಸಿನಿಮಾದಲ್ಲಿ ನಟಿಸಬೇಕು: ಮನೋಜ್
ಭಾಷೆಯ ಕಾರಣದಿಂದ ನಾನು ಹಿಂದಿ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಸಮಂತಾ ಹೇಳಿದಾಗ, 'ಸಮಂತಾ ಪ್ರತಿಭಾವಂತ ನಟಿ. ಆಕೆ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಬೇಕು' ಎಂದಿದ್ದಾರೆ ಮನೋಜ್. ಹಿಂದಿ ಭಾಷೆ ನನಗೆ ಕ್ಲಿಷ್ಟಕರ ಹಾಗಾಗಿ ನಾನು ಅವಕಾಶ ಸಿಕ್ಕರೂ ಸಹ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿಲ್ಲ ಎಂದು ಸಮಂತಾ ಹೇಳಿದ್ದರು.
Recommended Video

ಸಮಂತಾ ನಟನೆಗೆ ಹಲವರಿಂದ ಮೆಚ್ಚುಗೆ
ವೆಬ್ ಸರಣಿಯಲ್ಲಿನ ಸಮಂತಾ ನಟನೆಯನ್ನು ಮನೋಜ್ ಮಾತ್ರವೇ ಅಲ್ಲದೆ, ನಟಿ ಕಂಗನಾ ರನೌತ್, ನಟಿ ರಶ್ಮಿಕಾ ಮಂದಣ್ಣ, ಅನುಪಮಾ ಪರಮೇಶ್ವರನ್, ರಾಕುಲ್ ಪ್ರೀತ್ ಇನ್ನೂ ಹಲವರು ಹೊಗಳಿದ್ದಾರೆ.
'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸರಣಿಯಲ್ಲಿ ಸಮಂತಾ ಎಲ್‌ಟಿಟಿಇ ಹೋರಾಟಗಾರ್ತಿಯ ಪಾತ್ರದಲ್ಲಿ ನಟಿಸಿದ್ದಾರೆ. ವೆಬ್ ಸರಣಿಯು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದ್ದು ಜನ ಮೆಚ್ಚುಗೆ ಗಳಿಸಿದೆ. ವೆಬ್ ಸರಣಿಯ ನಾಯಕ ಪಾತ್ರದಲ್ಲಿ ಮನೋಜ್ ಬಾಜಪೇಯಿ ನಟಿಸಿದ್ದಾರೆ. ಪ್ರಿಯಾಮಣಿ ಸಹ ನಟಿಸಿದ್ದಾರೆ. ವೆಬ್ ಸರಣಿಯನ್ನು ರಾಜ್ ಮತ್ತು ಡಿಕೆ ನಿರ್ದೇಶನ ಮಾಡಿದ್ದಾರೆ.


Click it and Unblock the Notifications











