ರಣವೀರ್ ಸಿಂಗ್ ವಿರುದ್ದ ಬ್ಯಾನ್ ಅಸ್ತ್ರ ಪ್ರಯೋಗಿಸಿದ ಬಾಲಿವುಡ್ ; ಮನೋಜ್ ಬಾಜಪೇಯಿ ಪ್ರತಿಕ್ರಿಯೆ
ಕಲೆ ಮತ್ತು ಕಾಸು ಬೆರೆತ ಉದ್ಯಮ ಸಿನಿಮಾ. ಇಂತಹ ಪ್ರಪಂಚದಲ್ಲಿ ಹಲವಾರು ಜನ ತಮ್ಮ ಬದುಕು ಬದಲಾಗಬಹುದೆಂಬ ಆಶಯದಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಳ್ತಾರೆ. ಇನ್ನು ಸಿನಿಮಾ ಯಾರೊಬ್ಬರ ಪಾಲ್ಗೊಳ್ಳುವಿಕೆಯಿಂದ ಆಗುವುದಿಲ್ಲ. ಒಂದು ಚಿತ್ರದ ಹಿಂದೆ ಹತ್ತಾರು ಕಥೆಗಳಿರುತ್ತಾವೆ. ವ್ಯಥೆಗಳಿರುತ್ತಾವೆ. ನೂರಾರು ಕಾರ್ಮಿಕರ ಬೆವರಿನ ಹನಿಗಳಿಂದ, ತಂತ್ರಜ್ಞರ ರಕ್ತಗತ ಶ್ರಮದಿಂದ ಬೆಳ್ಳಿ ಪರದೆಯ ಮೇಲೆ ದೃಶ್ಯ ಕಾವ್ಯ ಸೃಷ್ಟಿಯಾಗುತ್ತದೆ.
ಸಿನಿಮಾ ಕೇವಲ ಗ್ಲಾಮರ್ ಪ್ರಪಂಚವಲ್ಲ, ಅದು ದಿನಗೂಲಿ ನಂಬಿ ಬದುಕುವ ಸಾವಿರಾರು ಕಲಾ ಕಾರ್ಮಿಕರ ಅನ್ನದ ತಟ್ಟೆ. ಆದರೆ, ಇಂತಹ ಪ್ರಪಂಚದಲ್ಲಿ ಯಾವಾಗ ವೈಯಕ್ತಿಕ ಭಿನ್ನಾಭಿಪ್ರಾಯಗಳು, ಈಗೋ ಸಮಸ್ಯೆಗಳು ಮತ್ತು ಹಣದ ವ್ಯವಹಾರ ಮುನ್ನೆಲೆಗೆ ಬರುತ್ತೋ ಆಗ ಚಿತ್ರರಂಗದ ಅಲಿಖಿತ ನಿಯಮಗಳು ದುತ್ತನೆ ಎಲ್ಲರಿಗೆ ನೆನಪಾಗುತ್ತವೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುವ ಕೆಲಸಗಳಾಗುತ್ತವೆ. ಇದಕ್ಕೆ ರಣ್ವೀರ್ ಸಿಂಗ್ ಅವರ ವಿವಾದ ಸದ್ಯದ ಉದಾಹರಣೆ.

ಹೌದು, ಈಗಾಗಲೇ ಜಗಜ್ಜಾಹೀರಾಗಿರುವಂತೆ ಫರ್ಹಾನ್ ಅಖ್ತರ್ ಮತ್ತು ರಣ್ವೀರ್ ಸಿಂಗ್ ನಡುವೆ ಡಾನ್ ಕಿಡಿ ಹೊತ್ತಿಕೊಂಡಿತ್ತು. ''ಧುರಂಧರ್'' ಚಿತ್ರದ ಪ್ರಚಂಡ ಗೆಲುವಿನ ನಂತರ ರಣ್ವೀರ್ ಸಿಂಗ್ ವರ್ತನೆಯಲ್ಲಿ ಬದಲಾವಣೆಗಳಾಗಿವೆ. ಏಕಾಏಕಿ ಹೇಳದೇ ಕೇಳದೇ ''ಡಾನ್ 3'' ಚಿತ್ರದಿಂದ ರಣ್ವೀರ್ ಹೊರ ನಡೆದಿದ್ದಾರೆ ಎನ್ನುವ ಆರೋಪವನ್ನು ಫರ್ಹಾನ್ ಅಖ್ತರ್ ಮಾಡಿದ್ದರು.
ಇಷ್ಟೇ ಅಲ್ಲ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಕ್ಕೆ ಈಗಾಗಲೇ ಕೋಟ್ಯಂತರ ರೂಪಾಯಿ ಹಣವನ್ನು ನೀರಿನಂತೆ ಖರ್ಚು ಮಾಡಲಾಗಿದ್ದು, 40 ಕೋಟಿ ಪರಿಹಾರ ಕೊಡಬೇಕೆಂದು ವಾದ ಮಂಡಿಸಿದ್ದರು. ಇಂಡಿಯನ್ ಫಿಲ್ಮ್ ಅಂಡ್ ಟೆಲಿವಿಷನ್ ಡೈರೆಕ್ಟರ್ಸ್ ಅಸೋಸಿಯೇಷನ್ (IFTDA) ಸದಸ್ಯರಾಗಿರುವ ಫರ್ಹಾನ್ ಅಖ್ತರ್ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನೆ ಎಂಪ್ಲಾಯೀಸ್ (FWICE) ನಲ್ಲಿ ದೂರು ಸಲ್ಲಿಸಿದ್ದರು.
ಫರ್ಹಾನ್ ಅಖ್ತರ್ ಸಲ್ಲಿಸಿದ ದೂರನ್ನು ಗಂಭೀರವಾಗಿ ಪರಿಗಣಿಸಿದ ಇಂಡಿಯನ್ ಫಿಲ್ಮ್ ಅಂಡ್ ಟೆಲಿವಿಷನ್ ಡೈರೆಕ್ಟರ್ಸ್ ಅಸೋಸಿಯೇಷನ್ (IFTDA) ರಣ್ವೀರ್ ಸಿಂಗ್ ವಿರುದ್ಧ ಅಸಹಕಾರ ಚಳುವಳಿಯನ್ನು ಘೋಷಿಸಿದೆ. ಅಧಿಕೃತವಾಗಿ ಬ್ಯಾನ್ ಪದ ಉಪಯೋಗಿಸದೆ ರಣ್ವೀರ್ ಸಿಂಗ್ ಅವರನ್ನು ಚಿತ್ರರಂಗದಿಂದ ದೂರ ಇಡಬೇಕೆಂದು (non-cooperation directive) ಆದೇಶ ಹೊರಡಿಸಿದೆ.
ಸದ್ಯ ಫಿಲ್ಮ್ ಅಂಡ್ ಟೆಲಿವಿಷನ್ ಡೈರೆಕ್ಟರ್ಸ್ ಅಸೋಸಿಯೇಷನ್‌ನ (IFTDA) ಈ ನಿರ್ಧಾರ ಮತ್ತು ಆದೇಶದ ಕುರಿತು ಮನೋಜ್ ಬಾಜಪೇಯಿ ಪ್ರತಿಕ್ರಿಯೆ ನೀಡಿದ್ದಾರೆ.

ತಮ್ಮ ಮುಂಬರುವ ''ಗವರ್ನರ್'' ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಈ ಕುರಿತು ಮಾತನಾಡಿರುವ ಮನೋಜ್ ಬಾಜಪೇಯಿ, ನಿಜಾ ಹೇಳಬೇಕು ಅಂದರೆ ರಣವೀರ್ ಸಿಂಗ್ ಮತ್ತು ಫರ್ಹಾನ್ ಅಖ್ತರ್ ಅವರ ''ಡಾನ್ 3'' ವಿವಾದಕ್ಕೆ ಸಂಬಂಧಿಸಿದಂತೆ ಚಿತ್ರರಂಗದಲ್ಲಿರುವ ನಮಗ್ಯಾರಿಗೂ ಸ್ಪಷ್ಟತೆ ಇಲ್ಲ ಎಂದು ಹೇಳಿದ್ದಾರೆ. ನಾವು ಉದ್ಯಮದ ಜನರು ಕೂಡ ನಿಮ್ಮೆಲ್ಲರಂತೆ ಸಾಮಾಜಿಕ ಜಾಲತಾಣದ ಮೂಲಕವೇ ಈ ಸುದ್ದಿಯನ್ನು ಓದುತ್ತಿದ್ದೇವೆ, ಕೇಳುತ್ತಿದ್ದೇವೆ ಎಂದು ಹೇಳಿರುವ ಮನೋಜ್ ಬಾಜಪೇಯಿ, ನಮಗೆ ಅದರ ಬಗ್ಗೆ ವಿವರವಾದ ಮಾಹಿತಿ ಇಲ್ಲ ಎಂದಿದ್ದಾರೆ.
ಮುಂದುವರೆದು ಒಬ್ಬ ಸಹೋದ್ಯೋಗಿಯಾಗಿ, ಚಿತ್ರರಂಗದ ಒಬ್ಬ ಸದಸ್ಯನಾಗಿ ಈ ಇಡೀ ವಿವಾದ ಆದಷ್ಟು ಬೇಗ ಇತ್ಯರ್ಥವಾಗುತ್ತೆ ಎನ್ನುವ ನಂಬಿಕೆ ನನಗೆ ಇದೆ ಎಂದು ಹೇಳಿರುವ ಮನೋಜ್ ಬಾಜಪೇಯಿ, ಸೌಹಾರ್ದಯುತವಾಗಿ ಈ ವಿಷಯ ಆದಷ್ಟು ಬೇಗ ಬಗೆಹರಿಯಲಿ ಎಂದು ನಾನು ಆಶಿಸುತ್ತೇನೆ ಎಂದು ಹೇಳಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ಮಾಪಕ-ನಿರ್ದೇಶಕ ಸಂಜಯ್ ಗುಪ್ತಾ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು, ಒಬ್ಬ 'ಎ-ಲಿಸ್ಟ್' ನಾಯಕ ನಟ ಚಿತ್ರೀಕರಣದಲ್ಲಿ ಭಾಗವಹಿಸಿದಾಗ, ಸೆಟ್‌ನಲ್ಲಿ 300ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಾರೆ. ಆ ನಟನ ಮೇಲೆ ನಿಷೇಧ ಹೇರುವುದರಿಂದ ಆತನನ್ನು ತಡೆಯುವುದಿಲ್ಲ, ಆದರೆ ಆ ಕಾರ್ಮಿಕರನ್ನು ಅವರ ಜೀವನೋಪಾಯದಿಂದ ವಂಚಿಸಿದಂತೆ ಆಗುತ್ತದೆ. ಇದರ ಅರ್ಥವೇನು?' ಎಂದು ಪ್ರಶ್ನಿಸಿದ್ದಾರೆ.
ಒಟ್ನಲ್ಲಿ ಸಂಜಯ್ ಗುಪ್ತಾ ಹೇಳಿದಂತೆ ಇಂತಹ ನಿಷೇಧಗಳು ಅಂತಿಮವಾಗಿ ನರಳುವುದು ದಿನಗೂಲಿ ನಂಬಿ ಬದುಕುವ ಬಡ ಕಾರ್ಮಿಕರು ಮಾತ್ರ. ಈ ವಿವಾದ ಮುಂಬರುವ ದಿನಗಳಲ್ಲಿ ಕೋರ್ಟ್ ಮೆಟ್ಟಿಲೇರುತ್ತಾ ಅಥವಾ ರಾಜಿ ಸಂಧಾನದ ಮೂಲಕ ಬಗೆಹರಿಯುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications